September 14, 2025
1746810471114.jpg


ಹಿರಿಯೂರು :
ತಾಲ್ಲೂಕಿನ ಖಾಸಗಿ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿಗಳು ಕಳೆದ ವರ್ಷದ ಖರ್ಚು-ವೆಚ್ಚಗಳ ಆಡಿಟ್ ರಿಪೋರ್ಟ್ ಗೆ ಅನುಗುಣವಾಗಿ ನಿಮ್ಮ ಶಾಲಾ ಶುಲ್ಕವನ್ನು ನಿಗದಿಪಡಿಸಿಕೊಂಡು, ಅದರ ಪ್ರತಿಯನ್ನು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಗೆ ಈ ಕೂಡಲೇ ಕಳುಹಿಸಿಕೊಡಬೇಕು ಎಂಬುದಾಗಿ ಖಾಸಗಿ ಶಾಲೆಗಳ ಆಡಳಿತ ಮಂಡಳಿಗಳ ಮುಖ್ಯಸ್ಥರು ಹಾಗೂ ಮುಖ್ಯಶಿಕ್ಷಕರಿಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಸಿ.ಎಂ.ತಿಪ್ಪೇಸ್ವಾಮಿ ಸಭೆಯಲ್ಲಿ ಸೂಚನೆ ನೀಡಿದರು.
ನಗರದ ಬಿ.ರ್.ಸಿ.ಕಚೇರಿ ಸಭಾಂಗಣದಲ್ಲಿ ಖಾಸಗಿ ಅನುದಾನ ರಹಿತ ಶಾಲೆಗಳಲ್ಲಿ 2025-26ನೇ ಸಾಲಿನ “ಶಾಲಾ ಶುಲ್ಕದ ನಿರ್ಧರಣೆ” ಕುರಿತಂತೆ ಖಾಸಗಿ ಶಾಲಾ ಆಡಳಿತ ಮಂಡಳಿ ಮುಖ್ಯಸ್ಥರು ಹಾಗೂ ಖಾಸಗಿ ಶಾಲೆಗಳ ಮುಖ್ಯಶಿಕ್ಷಕರುಗಳಿಗೆ ಕರೆಯಲಾಗಿದ್ದ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.
ನಿಮ್ಮ ಶಾಲೆಯ ಪ್ರತಿ ತರಗತಿಗಳಿಗೆ ನಿಗದಿಪಡಿಸಿದ ಶಾಲಾ ಶುಲ್ಕ ಹಾಗೂ ಪ್ರತಿ ತರಗತಿಗೆ ಲಭ್ಯವಿರುವ ಸೀಟ್ ಗಳ ಸಂಖ್ಯೆಯ ವಿವರಣೆಯನ್ನು ಶಾಲಾ ಆವರಣದಲ್ಲಿ ಫ್ಲಕ್ಸ್ ಅಥವಾ ಶಾಲೆಯ ನೋಟೀಸ್ ಬೋರ್ಡ್ ನಲ್ಲಿ ಪ್ರಕಟಿಸಬೇಕು,ಅಲ್ಲದೆ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ಆರ್.ಟಿ.ಇ ವಿದ್ಯಾರ್ಥಿಗಳಿಗೂ ಹಾಗೂ ಶುಲ್ಕ ಪಾವತಿಸುವ ವಿದ್ಯಾರ್ಥಿಗಳಿಗೂ ಯಾವುದೇ ರೀತಿಯ ತಾರತಮ್ಯ ಮಾಡಬಾರದು ಎಂದರು.
ಕರ್ನಾಟಕ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆಯ ಅಧಿಸೂಚನೆ ಹೊರಡಿಸಿರುವಂತೆ ಅನುದಾನ ರಹಿತ ಖಾಸಗಿ ಶಿಕ್ಷಣ ಸಂಸ್ಥೆಗಳು ತಮ್ಮ ಶಾಲಾ ಶಿಕ್ಷಕರ ನೇಮಕಾತಿಗೆ ಸಂಬಂಧಿಸಿದಂತೆ ಸೂಕ್ತದಾಖಲೆಗಳನ್ನು ಇಟ್ಟುಕೊಂಡಿರಬೇಕು, ಹಾಗೂ ಎಪ್ರಿಲ್-ಮೇ ತಿಂಗಳ ಒಳಗಾಗಿ ಶಿಕ್ಷಣ ಸಂಸ್ಥೆಗಳ ಆಯವ್ಯಯದ ಆಡಿಟ್ ಮಾಡಿಸಬೇಕು, ಮತ್ತು ಈ ಸಾಲಿನ ಶಾಲಾ ಮಾನ್ಯತೆ ನವೀಕರಣ ಮಾಡಿಸಿಕೊಳ್ಳಬೇಕು ಹೇಳಿದರು.
ಖಾಸಗಿ ಅನುದಾನ ರಹಿತ ಶಾಲೆಗಳಲ್ಲಿ ಮಕ್ಕಳಿಗೆ ಬೋಧನೆ ಮಾಡಲು ಎನ್.ಟಿ.ಸಿ, ಡಿ.ಇಡಿ ಹಾಗೂ ಬಿ.ಇಡಿ ತರಬೇತಿಯನ್ನು ಪಡೆದುಕೊಂಡಂತಹ ಶಿಕ್ಷಕ-ಶಿಕ್ಷಕಿಯರುಗಳಿಗೆ ಮಾತ್ರ ತರಗತಿಯಲ್ಲಿ ಅವಕಾಶ ಕೊಡಬೇಕು, ಈ ಶಿಕ್ಷಕ-ಶಿಕ್ಷಕಿಯರುಗಳು ಕಡ್ಡಾಯವಾಗಿ ಸರ್ಕಾರ ನಡೆಸುವ ಟಿ.ಇ.ಟಿ ಪರೀಕ್ಷೆಯನ್ನು ಪಾಸಾಗಿರಬೇಕು, ಎಂಬುದಾಗಿ ಹೇಳಿದರು.
ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಶಿಕ್ಷಕರ ಹೆಸರು, ಆ ಶಿಕ್ಷಕರುಗಳು ತೆಗೆದುಕೊಳ್ಳುವ ವಿಷಯ ಹಾಗೂ ಅವರು ಹೊಂದಿರುವ ವಿದ್ಯಾರ್ಹತೆಯ ಪಟ್ಟಿಯನ್ನು ಖಾಸಗಿ ಅನುದಾನ ರಹಿತ ಶಿಕ್ಷಣ ಸಂಸ್ಥೆಗಳ ಮುಖ್ಯಶಿಕ್ಷಕರು ಈ ಕೂಡಲೇ ತಯಾರಿಸಿ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಗೆ ತಲುಪಿಸುವ ಕೆಲಸವನ್ನು ಮಾಡಬೇಕು ಎಂದರು.
ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಎಲ್.ಕೆ.ಜಿ ಹಾಗೂ ಯುಕೆಜಿ ತರಗತಿಗಳಿಗೆ ಬೋಧನೆ ಮಾಡುವ ಶಿಕ್ಷಕರು ಎನ್.ಟಿ.ಸಿ ತರಬೇತಿ ಪಡೆದಿರಬೇಕು, 1 ರಿಂದ 5 ನೇ ತರಗತಿ ಬೋಧನೆ ಮಾಡುವ ಶಿಕ್ಷಕರು ಡಿ.ಇಡಿ ತರಬೇತಿ ಪಡೆದಿರಬೇಕು, 6 ರಿಂದ 10 ನೇ ತರಗತಿ ಬೋಧನೆ ಮಾಡುವ ಶಿಕ್ಷಕರು ಬಿ.ಇಡಿ ತರಬೇತಿ ಪಡೆಯುವುದು ಕಡ್ಡಾಯವಾಗಿದೆ ಎಂದರಲ್ಲದೆ,
ಖಾಸಗಿ ಶಿಕ್ಷಣ ಸಂಸ್ಥೆಗಳು ಶಾಲೆಗೆ ವಿದ್ಯಾರ್ಥಿಗಳನ್ನು ದಾಖಲಿಸಿಕೊಳ್ಳುವಾಗ ಯಾವುದೇ ರೀತಿಯ ಲಿಖಿತ ಪರೀಕ್ಷೆಗಳನ್ನು ನಡೆಸುವಂತಿಲ್ಲ, ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಶಾಲೆಗಳಲ್ಲಿ ಶೌಚಾಲಯಗಳ ವ್ಯವಸ್ಥೆ ಇರಬೇಕು, ಬಾಲಕರು ಹಾಗೂ ಬಾಲಕಿಯರುಗಳಿಗೆ ಪ್ರತ್ಯೇಕ ಶೌಚಾಲಯ ವ್ಯವಸ್ಥೆ ಕಲ್ಪಿಸಬೇಕು ಎಂಬುದಾಗಿ ಅವರು ಈ ಸಂದರ್ಭದಲ್ಲಿ ಹೇಳಿದರು.
ಈ ಸಭೆಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಸಿ.ಎಂ.ತಿಪ್ಪೇಸ್ವಾಮಿ, ಕ್ಷೇತ್ರ ಸಂಪನ್ಮೂಲ ಅಧಿಕಾರಿಗಳಾದ ತಿಪ್ಪೇರುದ್ರಪ್ಪ, ಶಿಕ್ಷಣ ಸಂಯೋಜಕರುಗಳಾದ ಸೈಯದ್ ಜಾಫರ್, ಪುಟ್ಟಸ್ವಾಮಿ, ವೆಂಕಟೇಶ್, ಶಿವಾನಂದ್, ಕ್ಷೇತ್ರ ಸಂಪನ್ಮೂಲ ವ್ಯಕ್ತಿಗಳಾದ ಚಿದಾನಂದ್, ನಿಜಗುಣಮೂರ್ತಿ, ಪ್ರಸನ್ನಕುಮಾರ್, ನಾಗರಾಜ್, ಸೇರಿದಂತೆ ವಿವಿಧ ಖಾಸಗಿ ಶಾಲಾ ಆಡಳಿತ ಮಂಡಳಿಗಳ ಮುಖ್ಯಸ್ಥರು ಹಾಗೂ ಮುಖ್ಯಶಿಕ್ಷಕರುಗಳು ಪಾಲ್ಗೊಂಡಿದ್ದರು.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading