September 15, 2025
1744197582250.jpg


ಚಿತ್ರದುರ್ಗಏ.09:
ವೃತ್ತಿಪರ ಕೋರ್ಸ್‍ಗಳ ಪ್ರವೇಶಕ್ಕಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ವತಿಯಿಂದ ಇದೇ ಏಪ್ರಿಲ್ 16 ಮತ್ತು 17ರಂದು ಸಾಮಾನ್ಯ ಪ್ರವೇಶ ಪರೀಕ್ಷೆ ನಡೆಯಲಿದೆ. ಚಿತ್ರದುರ್ಗ ನಗರದ 16 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ಜರುಗಲಿದ್ದು, ಜಿಲ್ಲೆಯಲ್ಲಿ ಒಟ್ಟು 6741 ವಿದ್ಯಾರ್ಥಿಗಳು ಪರೀಕ್ಷೆಗೆ ನೊಂದಾಯಿಸಿಕೊಂಡಿದ್ದು, ಸಿಇಟಿ ಪರೀಕ್ಷೆಯನ್ನು ಸುಗಮವಾಗಿ ನಡೆಸುವಂತೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಸ್.ಜೆ.ಸೋಮಶೇಖರ್ ಅಧಿಕಾರಿಗಳಿಗೆ ಸೂಚನೆ ನೀಡಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಬುಧವಾರ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಸಿಇಟಿ ಪರೀಕ್ಷೆಗಳ ಪೂರ್ವ ಸಿದ್ದತೆ ಕುರಿತು ಹಮ್ಮಿಕೊಂಡಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ ಯಾವುದೇ ಪರೀಕ್ಷಾ ಅವ್ಯವಹಾರ ನಡೆಯದಂತೆ ಸೂಕ್ಷ್ಮವಾಗಿ, ಪಾರದರ್ಶಕವಾಗಿ ಪರೀಕ್ಷೆ ನಡೆಸಬೇಕು. ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ಸುಗಮ ಪರೀಕ್ಷೆ ನಡೆಸಿ, ಯಶಸ್ವಿಗೊಳಿಸಬೇಕು ಎಂದು ಹೇಳಿದರು.
ಪದವಿಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಪುಟ್ಟಸ್ವಾಮಿ ಮಾತನಾಡಿ, ಇದೇ ಏಪ್ರಿಲ್ 16 ಮತ್ತು 17ರಂದು ಸಿಇಟಿ ಪರೀಕ್ಷೆ ನಡೆಯಲಿದ್ದು, ಚಿತ್ರದುರ್ಗ ನಗರದ ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜು, ಬಾಲಕರ ಸರ್ಕಾರಿ ಪದವಿಪೂರ್ವ ಕಾಲೇಜು, ಹೊಳಲ್ಕೆರೆ ರಸ್ತೆಯ ಎಸ್‍ಜೆಎಂ ಪದವಿಪೂರ್ವ ಕಾಲೇಜು, ಚೈತನ್ಯ ಪಿಯು ಕಾಲೇಜು, ಮಹಾರಾಣಿ ಪಿಯು ಕಾಲೇಜು, ಕಂಪಳರಂಗ ಪಿಯು ಕಾಲೇಜು, ಬೃಹನ್ಮಠ ಪಿಯು ಕಾಲೇಜು, ಪಿ.ಕೆ.ಹಳ್ಳಿಯ ಕೆಎಂಎಸ್ ಪಿಯು ಕಾಲೇಜು, ಡಾನ್‍ಬಾಸ್ಕೋ ಪಿಯು ಕಾಲೇಜು, ಎಸ್‍ಆರ್‍ಎಸ್ ಪಿಯು ಕಾಲೇಜು, ವೆಸ್ಟರ್ನ್ ಹಿಲ್ಸ್ ಪಿಯು ಕಾಲೇಜು, ಎಂ.ಕೆ.ಹಟ್ಟಿ ಎಸ್‍ಜೆಎಂ ಪಿಯು ಕಾಲೇಜು, ಎಸ್‍ಜೆಎಂಐಟಿ, ಸರ್ಕಾರಿ ವಿಜ್ಞಾನ ಕಾಲೇಜು, ಸರ್ಕಾರಿ ಕಲಾ ಕಾಲೇಜು ಹಾಗೂ ನಮ್ಮ ಎಕ್ಸ್‍ಪರ್ಟ್ ಪಿಯು ಕಾಲೇಜು ಸೇರಿದಂತೆ ಒಟ್ಟು 16 ಪರೀಕ್ಷೆ ಕೇಂದ್ರಗಳಿಂದ ಒಟ್ಟು 6741 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ ಎಂದರು.
ಏಪ್ರಿಲ್ 16ರಂದು ಬೆಳಿಗ್ಗೆ 10.30 ರಿಂದ 11.50 ರವರೆಗೆ ಭೌತಶಾಸ್ತ್ರ, ಮಧ್ಯಾಹ್ನ 2.30 ರಿಂದ 3.50 ರವರೆಗೆ ರಸಾಯನಶಾಸ್ತ್ರ ಹಾಗೂ ಏಪ್ರಿಲ್ 17ರಂದು ಬೆಳಿಗ್ಗೆ 10.30 ರಿಂದ ಮಧ್ಯಾಹ್ನ 11.50 ರವರೆಗೆ ಗಣಿತಶಾಸ್ತ್ರ, ಮಧ್ಯಾಹ್ನ 2.30 ರಿಂದ 3.50 ರವರೆಗೆ ಜೀವಶಾಸ್ತ್ರ ವಿಷಯದ ಪರೀಕ್ಷೆ ನಡೆಯಲಿದೆ. ಜಿಲ್ಲೆಯಲ್ಲಿ ಯಾವುದೇ ಸೂಕ್ಷ್ಮ ಮತ್ತು ಅತೀ ಸೂಕ್ಷ್ಮ ಕೇಂದ್ರಗಳು ಇರುವುದಿಲ್ಲ. ಪರೀಕ್ಷಾ ಕೇಂದ್ರಗಳಿಗೆ ಪರೀಕ್ಷಾ ಪ್ರಾರಂಭವಾಗುವುದಕ್ಕಿಂತ ಒಂದು ಗಂಟೆ ಮೊದಲು ಹಾಗೂ ಪರೀಕ್ಷಾ ನಂತರ 30 ನಿಮಿಷಗಳು ಪೊಲೀಸ್ ಬಂದೋಬಸ್ತಿನ ಅವಶ್ಯಕತೆ ಇರುತ್ತದೆ. ಪರೀಕ್ಷಾ ಕೇಂದ್ರಗಳಿಗೆ ಜಿಲ್ಲಾ ಖಜಾನೆಯಿಂದ ಪ್ರಶ್ನೆ ಪತ್ರಿಕೆಗಳನ್ನು ಕೊಂಡ್ಯೊಯುವ ಮತ್ತು ವಿತರಣೆ ಮಾಡುವ ಸಮಯಕ್ಕೆ ಪ್ರತಿ ತಾಲ್ಲೂಕಿನ ಮಾರ್ಗಾಧಿಕಾರಿಗಳ ಜೊತೆಗೆ ಪೊಲೀಸ್ ರಕ್ಷಣೆ ಬೇಕಾಗಿರುತ್ತದೆ. ಪರೀಕ್ಷಾ ಕೇಂದ್ರದ ಸುತ್ತಮುತ್ತಲಿರುವ ಜೆರಾಕ್ಸ್ ಅಂಗಡಿಗಳನ್ನು ಮುಚ್ಚಿಸುವುದು ಮತ್ತು ಪರೀಕ್ಷಾ ಕೇಂದ್ರದ ಸುತ್ತಲೂ 200 ಮೀಟರ್ ಪ್ರದೇಶವನ್ನು ನಿಷೇಧಿತ ಪ್ರದೇಶ ಎಂದು ಜಿಲ್ಲಾಧಿಕಾರಿಗಳಿಂದ ಘೋಷಿಸುವುದು. ವಿಜ್ಞಾನ ವಿಷಯವನ್ನು ಬೋಧಿಸುವ ಉಪನ್ಯಾಸಕರು, ಶಿಕ್ಷಕರು ಹಾಗೂ ಸಂಬಂಧಿಕರ, ಸ್ವಂತ ಮಕ್ಕಳು ಈ ಪರೀಕ್ಷೆಗೆ ಹಾಜರಾಗುತ್ತಿದ್ದರೆ ಅಂತಹ ಉಪನ್ಯಾಸಕರು, ಶಿಕ್ಷಕರನ್ನು ಪರೀಕ್ಷಾ ಕಾರ್ಯಕ್ಕೆ ನಿಯೋಜಿಸುವಂತೆ ಇಲ್ಲ. ಪರೀಕ್ಷಾ ಕೇಂದ್ರಗಳಿಗೆ ವಿದ್ಯಾರ್ಥಿಗಳು ಮೊಬೈಲ್ ಫೋನುಗಳನ್ನು ತರುವುದು ಹಾಗೂ ಕೈ ಗಡಿಯಾರವನ್ನು ಧರಿಸುವುದನ್ನು ಕಡ್ಡಾಯವಾಗಿ ನಿಷೇಧಿಸಿದೆ. ಪರೀಕ್ಷಾ ಕೇಂದ್ರಗಳಲ್ಲಿ ಉಪನ್ಯಾಸಕರು, ಕಚೇರಿ ಸಿಬ್ಬಂದಿಯವರು ಪರೀಕ್ಷೆ ನಡೆಯುವ ಅವಧಿಯಲ್ಲಿ ಮೊಬೈಲ್ ಫೋನುಗಳನ್ನು ತರುವುದುನ್ನು ಹಾಗೂ ಕೈ ಗಡಿಯಾರ ಧರಿಸುವುದನ್ನು ಕಡ್ಡಾಯವಾಗಿ ನಿಷೇಧಿಸಿದೆ. ಮುಖ್ಯ ಅಧೀಕ್ಷಕರು ಬೇಸಿಕ್ ಸೆಟ್ ಉಪಯೋಗಿಸಲು ಅವಕಾಶ ನೀಡಿದೆ. ಪರೀಕ್ಷಾ ಕೇಂದ್ರಗಳಲ್ಲಿ ಪ್ರಶ್ನೆ ಪತ್ರಿಕೆ ತೆರೆಯುವಾಗ ಹಾಗೂ ಉತ್ತರ ಪತ್ರಿಕೆಗಳನ್ನು ಬಂಡಲ್ ಮಾಡುವಾಗ ಸಿಸಿಟಿವಿ ವೀಕ್ಷಣೆಯಡಿಯಲ್ಲಿ ಕಾರ್ಯನಿರ್ವಹಿಸುವುದು ಮತ್ತು ಎಲ್ಲ ಕೊಠಡಿಗಳಿಗೆ ಸಿಸಿಟಿವಿ ಅಳವಡಿಸಬೇಕು ಎಂದು ತಿಳಿಸಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ, ಗಣಿ ಮತ್ತು ಭೂವಿಜ್ಞಾನ ಇಲಾಖೆ ಉಪನಿರ್ದೇಶಕ ಡಾ.ಮಹೇಶ್, ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಎಂ.ಆರ್.ಮಂಜುನಾಥ್, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ದಿವಾಕರ್ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು, ಸಿಇಟಿ ಪರೀಕ್ಷಾ ಕೇಂದ್ರಗಳ ಮುಖ್ಯ ಅಧೀಕ್ಷಕರು ಇದ್ದರು.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading