ನಾಯಕನಹಟ್ಟಿ : ಬುಡಕಟ್ಟು ಸಮುದಾಯದ ಆರಾದ್ಯ ದೇವತೆಯಾದ ಹಿರೇಕೆರೆ ಕಾವಲು ಚೌಡೇಶ್ವರಿ ದೇವಿಯ ಜಾತ್ರೆಯು ಸೋಮವಾರದಿಂದ ಬುಧವಾರದವರೆಗೂ ಅದ್ದೂರಿಯಾಗಿ ನಡೆಯಲಿದ್ದು, ರಥೋತ್ಸವಕ್ಕೆ ಸಕಲ ಸಿದ್ಧತೆಯನ್ನು ಮಾಡಿಕೊಳ್ಳಲಾಗುತ್ತಿದೆ.
ಪ್ರತಿವರ್ಷವೂ ಮಾಘಮಾಸ ಎರಡನೇ ಮಂಗಳವಾರದAದು ಜಾತ್ರೆಯು ಆರಂಭವಾಗುತ್ತದೆ. ಅದರಂತೆ 10ರ ಸೋಮವಾರದಂದು ಮದ್ಯಾಹ್ನ ೩ಗಂಟೆಗೆ ಚೌಡೇಶ್ವರಿ ದೇವಿಯ ರಥಕ್ಕೆ ಕಳಸ ಸ್ಥಾಪನೆ ಮಾಡಲಾಗುವುದು. ನಂತರ ದೇವಿಗೆ ಗಂಗಾಪೂಜೆಯನ್ನು ನೆರವೇರಿಸಿ ಸ್ವಸ್ತಿವಾಹನ, ಕಂಕಣಧಾರಣೆ, ಮಂಟಪಪೂಜೆ, ನವಗ್ರಹ ಆರಾಧನೆ ಕೈಗೊಳ್ಳಲಾಗುವುದು.
ದಿ.11ರಂದು ದೇವಾಯಲದ ಗುಡಿಕಟ್ಟಿನವರು ದೇವಿಗೆ ಹುಡಿಹಕ್ಕಿ ತುಂಬುವುದು, ಕಾಸುಮೀಸಲು ಹರಕೆ ಒಪ್ಪಿಸಿ ಮದ್ಯಾಹ್ನ 3ಗಂಟೆಗೆ ಚೌಡೇಶ್ವರಿ ದೇವಿಯನ್ನು ಸುಂದರವಾಗಿ ಅಲಂಕೃತಗೊಂಡ 50ಅಡಿ ಎತ್ತರದ ರಥೋತ್ಸವದಲ್ಲಿ ಪ್ರತಿಷ್ಠಾಪಿಸಿ ಜಾತ್ರೆಗೆ ಚಾಲನೆ ನೀಡಿಲಾಗುವುದು. ನಂತರ ರಥವು ಪಾದಗಟ್ಟೆಗೆ ಹೋಗಿಬಂದು ಸ್ವಸ್ಥಾನ ಸೇರುತ್ತದೆ.
ದಿ.12ರಂದು ವೀರ ಪೋತುರಾಜರಿಂದ ಪೂಜಾ ವಿಧಿವಿಧಾನಗಳ ಕಾರ್ಯಕ್ರಮ, ಸಂಜೆ ೪ಗಂಟೆಗೆ ಭಕ್ತರಿಂದ ಹೂವು, ಕುಂಕುಮ, ಭಂಢಾರ ಸಿಂಪಡಣೆ ಕಾರ್ಯಕ್ರಮ ನಡೆದ ನಂತರ ದೇವಿಯ ಕಂಕಣ ವಿಸರ್ಜನೆ ಕಾರ್ಯಕ್ರಮ ಹಮ್ಮಿಕೊಂಡಾಗ ಸದರಿ ವರ್ಷದ ಜಾತ್ರಾ ಮಹೋತ್ಸವಕ್ಕೆ ತೆರೆ ಬೀಳಲಿದೆ.
ಚೌಡೇಶ್ವರಿ ದೇವಿಯ ಐತಿಹ್ಯ

ಸುಮಾರು 4000ವರ್ಷಗಳ ಹಿಂದೆ ಸಿಂಗದೂರಿನಿಂದ ಬಂದ ಚೌಡೇಶ್ವರಿ ದೇವಿಯು ನಾಯಕನಹಟ್ಟಿ ದೊಡ್ಡಕೆರೆಯ ಸಮೀಪದಲ್ಲಿರುವ ಬೃಹತ್ ಈಚಲು ಅರಣ್ಯದಲ್ಲಿ ನೆಲೆನಿಂತು ಹುತ್ತಗಳಲ್ಲಿ ವಾಸ ಮಾಡುತ್ತಿರುತ್ತಾಳೆ. ಇದೇವೇಳೆ ಸಮೀಪದ ಗ್ರಾಮದ ಈಡಿಗ ಸಮುದಾಯದವರು ಈಚಲು ವನದಲ್ಲಿ ಶೇಂಧಿಗಾಗಿ ಈಚಲು ಮರಗಳಿಗೆ ಮಡಿಕೆಗಳನ್ನು ಕಟ್ಟುತ್ತಿರುತ್ತಾರೆ. ಹೀಗೆ ಒಂದುದಿನ ಅರಣ್ಯದ ತುಂಬೆಲ್ಲಾ ಹುತ್ತಗಳು ಬೆಳೆದು ನಿಂತಾಗ ಸಿಟ್ಟಿಗೆದ್ದ ಅವರು ಹುತ್ತಗಳನ್ನು ನಾಶ ಮಾಡಿ, ಈಚಲು ಮರಗಳಿಗೆ ಮಡಿಕೆಗಳನ್ನು ಕಟ್ಟಿ ಬರುತ್ತಾರೆ. ಮರುದಿನ ಬಂದು ಮಡಿಕೆಗಳನ್ನು ನೋಡಿದರೆ ಒಂದು ಮಡಿಕೆಯಲ್ಲೂ ಹನಿ ಶೇಂಧಿಯು ಸಂಗ್ರಹವಾಗಿರುವುದಿಲ್ಲವAತೆ. ಇದರಿಂದ ಭಯಗೊಂಡ ಅವರು ಚಿಂತೆಯಲ್ಲಿದ್ದಾಗ ಯಾರೋ ಒಬ್ಬ ಸಾಧು ಇದು ದೇವಿಯ ಮಹಿಮೆಯಾಗಿದೆ. ಮೊದಲು ಕ್ಷೆಮೆ ಬೇಡಿಕೊಳ್ಳಿ ಎಂದರಂತೆ. ಅದರಂತೆ ಕ್ಷೇಮೆಯಾಚಿಸಿ ಅಂದೇ ಒಂದು ಪುಟ್ಟ ಕಲ್ಲಿನ ಗುಡಿಯನ್ನು ನಿರ್ಮಿಸಿದರಂತೆ. ಇದರಿಂದ ದೇವಿಯು ಸಂತೋಷಗೊAಡು ಮರುದಿವಸ ಈಚಲು ಮರಕ್ಕೆ ಕಟ್ಟಿದ ಎಲ್ಲಾ ಮಡಿಕೆಗಳಿಂದ ಶೇಂಧಿಯು ತುಂಬಿ ಹರಿಯುತಿತ್ತು. ಅಂದಿನಿಂದ ಪ್ರತಿವರ್ಷವೂ ಜಾತ್ರೆ, ಪೂಜೆ ಪುನಸ್ಕಾರಗಳು ನಡೆದುಕೊಂಡು ಬರುತ್ತಿವೆ. ಆದರೆ 2002ರಿಂದ ಈಚಗೆ ನೂತನ ದೇವಾಲಯವನ್ನು ನಿರ್ಮಾಣಮಾಡಿ ವಿಜೃಂಭಣೆಯಿಂದ ಜಾತ್ರೆ, ಉತ್ಸವಗಳನ್ನು ಹಮ್ಮಿಕೊಂಡು ಬರಲಾಗುತ್ತಿದೆ ಎಂದು ದೇವಾಲಯ ಅಭಿವೃದ್ಧಿ ಸಮಿತಿ ಅಧ್ಯಕ್ಷ ಪಟೇಲ್ ಜಿ.ಎಂ.ತಿಪ್ಪೇಸ್ವಾಮಿ(ಎತ್ತಿನಹಟ್ಟಿಗೌಡ್ರು), ಕಾರ್ಯದರ್ಶಿ ಎಂ.ವೈ.ಟಿ.ಸ್ವಾಮಿ ಹೇಳುತ್ತಾರೆ.
ಪಶುಪಾಲನೆಗೆ ದೇವಿಯ ರಕ್ಷೆ
ಕೃಷಿಮೂಲ ಪರಂಪರೆಯ ಹಿನ್ನೆಲೆಯಲ್ಲಿ ರೈತರ ಜಾನುವಾರುಗಳಿಗೆ ಯಾವುದೇ ರೋಗಗಳು ಬಂದರೂ ದೇವಿಯ ದೇಗುಲ ಪ್ರದಕ್ಷಿಣೆ ಮಾಡಿಸಿದರೆ ಸಾಕು ಪರಿಹಾರ ದೊರೆಯುತ್ತದೆ ಎನ್ನುವ ಬಲವಾದ ನಂಬಿಕೆ ಈ ಭಾಗದ ರೈತರಲ್ಲಿದೆ. ಹಾಗಾಗಿ ಇಂದಿಗೂ ಜಾತ್ರೆ ದಿನ ಸಂಜೆ ರೈತರು ತಮ್ಮ ಜಾನುವಾರುಗಳನ್ನು ದೇವಾಲಯಕ್ಕೆ ಪ್ರದಕ್ಷಣೆ ಹಾಕಿಸಿ ಆ ರಾತ್ರಿ ಅಲ್ಲಿಯೇ ತಂಗಿಸಿ ಮರುದಿನ ತಮ್ಮ ಗ್ರಾಮಗಳಿಗೆ ಕರೆದುಕೊಂಡು ಹೋಗುವ ಪ್ರತೀತಿ ಇದೆ.
ಒಟ್ಟಾರೆಯಾಗಿ ನಾಯಕನಹಟ್ಟಿ ಹೋಬಳಿಯ ನೆಲಗೇತನಹಟ್ಟಿ, ಎತ್ತಿನಹಟ್ಟಿ, ಉಪ್ಪಾರಹಟ್ಟಿ, ಗೌಡಗೆರೆ, ದೇವರಹಟ್ಟಿ ಸೇರಿದಂತೆ ತಳುಕು, ಮೊಳಕಾಲ್ಮುರು, ಜಗಳೂರು, ಕೊಟ್ಟೂರು, ಕೂಡ್ಲಿಗಿ, ದಾವಣಗೆರೆ ಜಿಲ್ಲೆ ಸೇರಿದಂತೆ ನೆರೆಯ ಆಂದ್ರ ಪ್ರದೇಶದಿಂದಲೂ ಸಾವಿರಾರು ಸಂಖ್ಯೆಯಲ್ಲಿ ಎಲ್ಲಾ ಜನಾಂಗದ ಭಕ್ತರು ಆಗಮಿಸಿ ತಮ್ಮ ಭಕ್ತಿಯನ್ನು ಸಮರ್ಪಿಸುತ್ತಾರೆ.

About The Author
Discover more from JANADHWANI NEWS
Subscribe to get the latest posts sent to your email.