December 14, 2025
FB_IMG_1736422882283.jpg

ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಮಾಹಿತಿ
ಜ.22 ರಿಂದ 24ವರೆಗೆ ಉಪಲೋಕಾಯುಕ್ತ
ನ್ಯಾಯಮೂರ್ತಿ ಕೆ.ಎನ್.ಫಣೀಂದ್ರ ಜಿಲ್ಲೆಗೆ ಭೇಟಿ
ಜಿಲ್ಲೆಯ 73 ಪ್ರಕರಣಗಳ ಕುರಿತು ವಿಚಾರಣೆ


ಚಿತ್ರದುರ್ಗಜ.09:
ಇದೇ ಜ.22 ರಿಂದ 24 ರವರೆಗೆ ಚಿತ್ರದುರ್ಗ ಜಿಲ್ಲೆಗೆ ಉಪಲೋಕಾಯುಕ್ತ ನ್ಯಾಯಮೂರ್ತಿ ಕೆ.ಎನ್.ಫಣೀಂದ್ರ ಅವರು ಭೇಟಿ ನೀಡಲಿದ್ದಾರೆ. ಜಿಲ್ಲೆಗೆ ಸಂಬಂಧಿಸಿದಂತೆ ಲೋಕಾಯುಕ್ತದಲ್ಲಿ ದಾಖಲಾದ 73 ಪ್ರಕರಣಗಳ ಕುರಿತು ಜ.23 ರಂದು ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಉಪಲೋಕಾಯುಕ್ತರು ವಿಚಾರಣೆ ನಡೆಸಲಿದ್ದು, ಸಂಬಂಧಪಟ್ಟ ಅಧಿಕಾರಿಗಳು ಅಗತ್ಯ ದಾಖಲೆ ಹಾಗೂ ಮಾಹಿತಿಯೊಂದಿಗೆ ಹಾಜರಾಗುವಂತೆ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಸೂಚಿಸಿದರು.
ಈ ಕುರಿತು ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆ ನಡೆಸಿ ಅವರು ಮಾತನಾಡಿದರು.
ಜ.23 ರಂದು ಬೆಳಿಗ್ಗೆ 11 ರಿಂದ 1.30 ವರೆಗೆ ಮತ್ತು ಮಧ್ಯಾಹ್ನ 2.30 ರಿಂದ 5 ಗಂಟೆ ವರೆಗೆ ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ, ಚಿತ್ರದುರ್ಗ ಜಿಲ್ಲೆಗೆ ಸಂಬಂಧಪಟ್ಟಂತೆ ಲೋಕಾಯುಕ್ತ ಸಂಸ್ಥೆಯಲ್ಲಿ ದಾಖಲಾಗಿರುವ ತನಿಖೆ ಹಾಗೂ ವಿಚಾರಣೆಗೆ ಬಾಕಿ ಇರುವ 73 ಪ್ರಕರಣಗಳಿಗೆ ಸಂಬಂಧಿಸಿದಂತೆ ದೂರುದಾರರು ಹಾಗೂ ಎದುರುದಾರರ ಸಮ್ಮುಖದಲ್ಲಿ ಉಪಲೋಕಾಯುಕ್ತರ ವಿಚಾರಣೆ ನಡೆಸುವರು. ಸಂಬಂದಪಟ್ಟ ಇಲಾಖೆ ಮುಖ್ಯಸ್ಥರು ದೂರುದಾರಿಗೆ ಈ ಕುರಿತು ಮಾಹಿತಿ ನೀಡಿ, ವಿಚಾರಣೆಗೆ ಹಾಜರಾಗುವಂತೆ ತಿಳಿಸಬೇಕು. ಕೆಲವೊಂದು ದೂರುಗಳು ವೈಯಕ್ತಿಕ ಹೆಸರಿನೊಂದಿಗೆ ದಾಖಲಾಗಿವೆ. ಆದರೆ ಅಂತಹ ಅಧಿಕಾರಿಗಳು ಸದ್ಯ ಬೇರೆಡೆ ವರ್ಗಾವಣೆಯಾಗಿದ್ದರೆ, ಅವರ ಸ್ಥಾನದಲ್ಲಿರುವ ಅಧಿಕಾರಿಗಳು ಪ್ರಕರಣದ ಮಾಹಿತಿ ಹಾಗೂ ಸ್ಥಿತಿಗತಿಯನ್ನು ವಿಚಾರಣೆ ವೇಳೆ ಉಪಲೋಕಾಯುಕ್ತರಿಗೆ ತಿಳಿಸಬೇಕು ಎಂದು ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಹೇಳಿದರು.
ಜ.22 ರಂದು ಸಾರ್ವಜನಿಕ ಅಹವಾಲು ಸ್ವೀಕಾರ: ಜ.22 ರಂದು ನಗರದ ಚಳ್ಳಕೆರೆ ರಸ್ತೆಯಲ್ಲಿನ ಎಸ್.ಜಿ.ಕಲ್ಯಾಣ ಮಂಟಪದಲ್ಲಿ ಉಪಲೋಕಾಯುಕ್ತರು ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 1.30 ವರೆಗೆ ಹಾಗೂ ಮಧ್ಯಾಹ್ನ 2.30 ರಿಂದ 5 ಗಂಟೆಗೆವರೆಗೆ ಸಾರ್ವಜನಿಕರ ಕುಂದುಕೊರತೆಗಳ ಅಹವಾಲು ಸ್ವೀಕಾರ ಮಾಡುವರು. ಸರ್ಕಾರಿ ಅಧಿಕಾರಿ ಅಥವಾ ನೌಕರರಿಂದ ಕಾನೂನು ರಿತ್ಯ ಆಗಬೇಕಾದ ಕೆಲಸದಲ್ಲಿ ವಿಳಂಬವೇನಾದರೂ ಆಗಿದ್ದಲ್ಲಿ, ನ್ಯಾಯಯುತವಾಗಿ ಮಾಡಿಕೊಡಬೇಕಾದ ಕೆಲಸಗಳಲ್ಲಿ ವೃಥಾ ತೊಂದರೆ ಕೊಡುವುದು ಅಥವಾ ಇನ್ಯಾವುದೇ ತರಹದ ದುರಾಡಳಿತದಲ್ಲಿ ತೊಡಗಿದ್ದರೆ, ಅದರಿಂದ ತೊಂದರೆಗೆ ಒಳಗಾಗದ ಸಾರ್ವಜನಿಕರು ನಿಗದಿತ ಅರ್ಜಿ ನಮೂನೆ-1 ಮತ್ತು ನಮೂನೆ-2 ರಲ್ಲಿ ಲಿಖಿತ ರೂಪದಲ್ಲಿ ದಾಖಲೆ, ಸಾಕ್ಷ್ಯಾಧಾರಗಳೊಂದಿಗೆ ದೂರು ಸಲ್ಲಿಸಬಹುದು. ಈ ವೇಳೆ ಎಲ್ಲ ಜಿಲ್ಲಾ ಮಟ್ಟದ ಅಧಿಕಾರಿಗಳು ಸ್ಥಳದಲ್ಲಿ ಉಪಸ್ಥಿತರಿರಬೇಕು ಎಂದು ಜಿಲ್ಲಾಧಿಕಾರಿ ಟಿ.ವೆಂಕಟೇಶ್ ತಿಳಿಸಿದರು.
ಕೇಂದ್ರ ಸ್ಥಾನದಲ್ಲಿರಲು ತಾಕೀತು: ಉಪಲೋಕಾಯುಕ್ತ ಭೇಟಿ ಹಿನ್ನಲೆಯಲ್ಲಿ ಎಲ್ಲಾ ಇಲಾಖೆಗಳ ಅಧಿಕಾರಿಗಳು ತಪ್ಪದೇ ಕೇಂದ್ರ ಸ್ಥಾನದಲ್ಲಿದ್ದು ಕರ್ತವ್ಯ ನಿರ್ವಹಿಸಬೇಕು. ಅಗತ್ಯ ವೈದ್ಯಕೀಯ ಕಾರಣ ಹೊರತು ಪಡಿಸಿ, ಅಧಿಕಾರಿಗಳು ಉಪಲೋಕಾಯುಕ್ತ ಭೇಟಿ ವೇಳೆ ಗೈರು ಹಾಜರಾಗಿರುವುದು ಕಂಡುಬಂದರೆ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುವುದು. ಜ.24 ರಂದು ಲೋಕಾಯುಕ್ತರು ಜಿಲ್ಲೆಯ ಹಾಸ್ಟೆಲ್, ಕಚೇರಿಗಳು, ಆಸ್ಪತ್ರೆಗಳಿಗೆ ಅನಿರೀಕ್ಷಿತ ಭೇಟಿ ಪರಿಶೀಲನೆ ನಡೆಸುವರು. ಎಲ್ಲಾ ಅಧಿಕಾರಿಗಳು ತಮ್ಮ ಕಚೇರಿ ಸೇರಿದಂತೆ ಕಚೇರಿ ಆವರಣಗಳನ್ನು ಸಹ ಸ್ವಚ್ಛವಾಗಿರಿಸಿಕೊಳ್ಳಬೇಕು. ಕಚೇರಿ ಹಾಜರಾತಿ, ಕ್ಯಾಶ್ ರಿಜಿಸ್ಟರ್, ಚಲನವಲನ ವಹಿ ಸೇರಿದಂತೆ ಎಲ್ಲ ಅಗತ್ಯ ಕಡತಗಳನ್ನು ನಿರ್ವಹಿಸಬೇಕು. ಟಪಾಲು ಶಾಖೆಯಲ್ಲಿ ಯಾವುದೇ ವಿಷಯಕ್ಕೆ ಸಂಬಂಧಿಸಿದಂತೆ ಬಹು ದಿನಗಳ ಕಾಲ ಕಡತಗಳು ವಿಳಂಬವಾಗದಂತೆ ವಿಲೇ ಮಾಡಲು ಅಧಿಕಾರಿಗಳು ಗಮನ ಹರಿಸಬೇಕು. ಸಾರ್ವಜನಿಕರು ನೀಡಿರುವ ದೂರು, ಅದಕ್ಕೆ ನೀಡಿರುವ ಪ್ರತ್ಯುತ್ತರ ಬಗ್ಗೆ ಮಾಹಿತಿ ಸಿದ್ದವಿರಿಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಟಿ.ವೆಂಕಟೇಶ್ ತಾಕೀತು ಮಾಡಿದರು.
ಸಭೆಯಲ್ಲಿ ಜಿ.ಪಂ.ಸಿಇಓ ಎಸ್.ಜೆ.ಸೋಮಶೇಖರ್, ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ, ಉಪವಿಭಾಗಾಧಿಕಾರಿ ಎಂ.ಕಾರ್ತಿಕ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಎಸ್.ಜೆ.ಕುಮಾರಸ್ವಾಮಿ ಸೇರಿದಂತೆ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading