ವರದಿ: ಕೆ.ಟಿ.ಮೋಹನ್ ಕುಮಾರ್
ಸಾಲಿಗ್ರಾಮ (ಮೈಸೂರು ಜಿಲ್ಲೆ): ಸುಪ್ರೀಂ ಕೋರ್ಟ್ ನ ಮುಖ್ಯ ನ್ಯಾಯಮೂರ್ತಿಗಳಾದ ಬಿ.ಆರ್.ಗವಾಯಿ ಅವರ ಮೇಲೆ ವಕೀಲ ರಾಕೇಶ್ ಕುಮಾರ್ ಶೂ ಎಸೆಯುವ ಪ್ರಯತ್ನ ಮಾಡಿರುವ ಅಮಾನವೀಯ ಘಟನೆಯನ್ನು ಕರ್ನಾಟಕ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದ ಸಂಘಟನೆಯು ತೀವ್ರವಾಗಿ ಖಂಡಿಸುತ್ತದೆ ಎಂದು ಸಂಘಟನೆಯ ಮೈಸೂರು ಜಿಲ್ಲಾ ಸಂಘಟನಾ ಸಂಚಾಲಕ ಕಳ್ಳಿಮುದ್ದನಹಳ್ಳಿ ಚಂದ್ರು ಹೇಳಿದರು.
ಅವರು ಈ ಕುರಿತು ಸಾಲಿಗ್ರಾಮ ತಾಲ್ಲೂಕು ತಹಸೀಲ್ದಾರ್ ರುಖಿಯಾ ಬೇಗಂ ಅವರಿಗೆ ಮನವಿ ಪತ್ರ ಸಲ್ಲಿಸಿ ಮಾತನಾಡಿದರು.
ನ್ಯಾಯಮೂರ್ತಿ ಬಿ.ಆರ್.ಗವಾಯಿ ಅವರ ಮೇಲಿನ ಶೂ ಎಸೆದ ಘಟನೆಯು ಈ ದೇಶದ ಪ್ರಜಾಪ್ರಭುತ್ವ ಮತ್ತು ಸಂವಿಧಾನದ ಉನ್ನತ ಹುದ್ದೆಯ ಮೇಲೆ ಹಾಗೂ ನ್ಯಾಯಾಂಗದ ಘನತೆ ಮತ್ತು ವ್ಯವಸ್ಥೆ, ಆಡಳಿತದ ಮೇಲಿನ ದಾಳಿಯಾಗಿದ್ದು ಇಂತಹ ದಾಳಿಗಳು ನ್ಯಾಯಾಂಗದ ಗೌರವ ಮತ್ತು ಪ್ರಜಾಸತ್ತಾತ್ಮಕ ಮೌಲ್ಯಗಳಿಗೆ ಧಕ್ಕೆ ತರಲು ಕಾರಣವಾಗುತ್ತಿವೆ ಎಂದರು.
ಭಾರತದ ಜಾತಿ ವ್ಯವಸ್ಥೆ ಎಷ್ಟು ಕ್ರೂರವಾಗಿದೆ ಎಂದರೆ ಯಾರು ಈ ದೇಶದ ಪ್ರಜಾಪ್ರಭುತ್ವ ಮತ್ತು ಸಂವಿಧಾನದಲ್ಲಿ ನಂಬಿಕೆ ಇಟ್ಟಿರುತ್ತಾರೋ ಅವರೆಲ್ಲರನ್ನು ಈ ಸನಾತನ ವಾದಿಗಳು ತಮ್ಮ ವಿರೋಧಿಗಳಂತೆ ಕಾಣುತ್ತಾರೆ. ಅವರು ರಾಷ್ಟ್ರಪತಿಗಳೇ ಆಗಿರಲಿ, ಮುಖ್ಯ ನ್ಯಾಯಮೂರ್ತಿಗಳೇ ಆಗಿರಲಿ, ಸಂವಿಧಾನ ಜಾರಿಯಾದ 75 ವರ್ಷಗಳ ನಂತರವೂ ಈ ದೇಶದ ಜಾತಿವಾದಿ ಮನಸ್ಸುಗಳು ತಮ್ಮ ಜಾತಿ ಮೂಲದ ಅಸಮಾನತೆ ಮತ್ತು ಅಸಹನೆಯನ್ನು ತಮ್ಮ ಮನಸ್ಸಿನಲ್ಲಿ ಇನ್ನೂ ಭದ್ರವಾಗಿ ಉಳಿಸಿಕೊಂಡಿದ್ದಾರೆ ಎನ್ನುವುದಕ್ಕೆ ಈ ಘಟನೆ ಜೀವಂತ ಸಾಕ್ಷಿಯಾಗಿದೆ ಎಂದರು.
ಸಂಘಟನೆಯ ಸಾಲಿಗ್ರಾಮ ತಾಲೂಕು ಪ್ರಧಾನ ಸಂಚಾಲಕ ಶೀಗವಾಳು ಸುಧಾಕರ್ ಮಾತನಾಡಿ ಇತ್ತೀಚಿನ ದಿನಮಾನಗಳಲ್ಲಿ ದೇಶ ಎದುರಿಸುತ್ತಿರುವ ಮನುವಾದಿ ಮನಸ್ಥಿತಿಯ ಜನರು ನಡೆಸುತ್ತಿರುವ ಇಂತಹ ದಾಳಿಗಳು ಮನುವಾದವನ್ನು ಬೆಂಬಲಿಸುವವರ ಪ್ರತೀಕವಾದ ದಾಳಿಯಾಗಿದೆ. ಈ ದಾಳಿಯ ಹಿಂದೆ ಬೆಂಬಲಕ್ಕೆ ನಿಂತಿರುವ ಮನಸ್ಥಿತಿಗಳ ಬಗ್ಗೆ ತನಿಖೆ ಆಗಬೇಕು ಎಂದು ಆಗ್ರಹಿಸಿದರು.
ನ್ಯಾಯಮೂರ್ತಿ ಬಿ.ಆರ್.ಗವಾಯಿ ಅವರು ಸಾಮಾಜಿಕ ಪ್ರತಿರೋಧಗಳನ್ನು ಎದುರಿಸಿ ಅರ್ಹತೆ ಮತ್ತು ಸಾಧನೆಗಳ ಮೂಲಕ ದೇಶದ ನ್ಯಾಯ ವ್ಯವಸ್ಥೆಯ ಅತ್ಯುನ್ನತ ಸ್ಥಾನವನ್ನು ಅಲಂಕರಿಸಿದ ದಲಿತ ಸಮುದಾಯದ ಎರಡನೇ ವ್ಯಕ್ತಿಯಾಗಿದ್ದಾರೆ. ಪ್ರಜಾಪ್ರಭುತ್ವ ಮತ್ತು ಸಂವಿಧಾನದ ಮೇಲೆ ನಂಬಿಕೆ ಇಟ್ಟಿರುವ ಈ ದೇಶದ ಕೋಟ್ಯಂತರ ಜಾತ್ಯತೀತ ಮನಸ್ಸುಗಳು ನಿಮ್ಮ ಬೆಂಬಲಕ್ಕೆ ನಿಂತಿದ್ದೇವೆ ಎಂದ ಅವರು ಇಂಥ ಘಟನೆಗಳು ಮತ್ತೆ ಮರುಕಳಿಸದಂತೆ ಈ ಕೃತ್ಯ ಎಸಗಿರುವ ವಕೀಲ ರಾಕೇಶ್ ಕುಮಾರ್ ಮೇಲೆ ಮೊಕದ್ದಮೆ ದಾಖಲಿಸಿ ಜೀವಾವಧಿ ಶಿಕ್ಷೆಯನ್ನು ನೀಡುವಂತೆ ಹಾಗೂ ಭಾರತೀಯ ಬಾರ್ ಕೌನ್ಸಿಲ್ ಈತನ ಪರವಾನಿಗೆಯನ್ನು ರದ್ದು ಮಾಡಿ ದೇಶದ ಯಾವುದೇ ನ್ಯಾಯಾಲಯದಲ್ಲಿ ಅಥವಾ ನ್ಯಾಯ ಮಂಡಳಿ ಮತ್ತು ಕಾನೂನು ಪ್ರಾಧಿಕಾರದಲ್ಲಿ ಅಭ್ಯಾಸ ಮಾಡದಂತೆ ಕ್ರಮ ವಹಿಸುವಂತೆ ಒತ್ತಾಯಿಸುತ್ತೇವೆ ಎಂದರು.
ಈ ಸಂದರ್ಭದಲ್ಲಿ ಶಿರಸ್ತೆದಾರ್ ಸತೀಶ್ ಕುಮಾರ್, ಸಂಘಟನೆಯ ಮೈಸೂರು ಜಿಲ್ಲಾ ಸಮಿತಿಯ ಸದಸ್ಯ ಲಕ್ಕಿಕುಪ್ಪೆ ರಮೇಶ್, ಸಾಲಿಗ್ರಾಮ ತಾಲೂಕು ಉಪ ಪ್ರಧಾನ ಸಂಚಾಲಕ ಪ್ರಭಾಕರ್, ಸಂಘಟನಾ ಸಂಚಾಲಕರಾದ ಮಹಾಂತೇಶ್, ಮಹೇಶ್, ಶಂಕರ್, ಸ್ವಾಮಿ, ಸದಸ್ಯರಾದ ಸೋಮಶೇಖರ್, ಯೋಗೇಶ್, ಮುಖಂಡರುಗಳಾದ ಪುರಿಗೋವಿಂದರಾಜು, ಪ್ರೀತಮ್ ಇದ್ದರು.
About The Author
Discover more from JANADHWANI NEWS
Subscribe to get the latest posts sent to your email.