December 14, 2025
1759930051986.jpg

ಚಿತ್ರದುರ್ಗಅ.08:
ಪ್ರತಿಯೊಬ್ಬರೂ ನಿಸರ್ಗದ ನಿಯಮಗಳ ಪರಿಪಾಲಿಸುವ ಮೂಲಕ ಭವಿಷ್ಯದ ದೃಷ್ಟಿಯಿಂದ ಪರಿಸರ, ಪ್ರಕೃತಿ, ಅರಣ್ಯ ಹಾಗೂ ವನ್ಯಜೀವಿಗಳ ಬಗ್ಗೆ ಪ್ರತಿಯೊಬ್ಬರೂ ಕಾಳಜಿ ಹೊಂದಬೇಕು ಎಂದು ಉಪವಿಭಾಗಾಧಿಕಾರಿ ಮಹೆಬೂಬ್ ಜಿಲಾನಿ ಖುರೇಷಿ ಹೇಳಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ಬುಧವಾರ ಕರ್ನಾಟಕ ಅರಣ್ಯ ಇಲಾಖೆ ಚಿತ್ರದುರ್ಗ ಜಿಲ್ಲಾ ವಿಭಾಗ, ಪರಿಸರ ಮತ್ತು ವನ್ಯಜೀವಿ ಸಂರಕ್ಷಣಾ ವೇದಿಕೆ, ವಿವಿಧ ಶಾಲಾ- ಕಾಲೇಜು ಸಹಯೋಗದೊಂದಿಗೆ 71ನೇ ವನ್ಯಜೀವಿ ಸಪ್ತಾಹ-2025 ರ ಅಂಗವಾಗಿ ವನ್ಯಜೀವಿ ಸಂರಕ್ಷಣೆ ಕುರಿತು ಜಾಗೃತಿ ಮೂಡಿಸಲು ವನ್ಯಜೀವಿಗಳೊಂದಿಗೆ ಸಹಬಾಳ್ವೆ ಎಂಬ ಧ್ಯೇಯ ವಾಕ್ಯದೊಂದಿಗೆ ಆಯೋಜಿಸಿದ್ದ ವನ್ಯಜೀವಿ ಸಂರಕ್ಷಣೆಗಾಗಿ ಕಾಲ್ನಡಿಗೆ ಜಾಗೃತಿ ಜಾಥಾ ಉದ್ಘಾಟಿಸಿ ಮಾತನಾಡಿದರು.
ಮನೆಯಲ್ಲಿ ಹಣ್ಣುಗಳನ್ನು ತಿಂದ ಮೇಲೆ ಬೀಜಗಳನ್ನು ತಿಪ್ಪೆಗೆ ಹಾಕುವ ಬದಲು ಕಾಡಿಗೆ ಹಾಕಿ ವನ್ಯಜೀವಿಗಳಿಗೆ ಆಹಾರವಾಗಲಿ ಎಂದು ತಿಳಿಸಿದ ಅವರು, ವನ್ಯಜೀವಿ ಸಪ್ತಾಹದಿಂದ ವಿದ್ಯಾರ್ಥಿಗಳಲ್ಲಿ ಜಾಗೃತಿ, ಅರಣ್ಯ ಮತ್ತು ವನ್ಯಜೀವಿಗಳ ಉಳಿವಿಗೆ ನಿರಂತರ ಪ್ರಯತ್ನ ಅಗತ್ಯ. ಈ ಕಾಲ್ನಡಿಗೆ ಜಾಥಾ ಜನರಲ್ಲಿ ಅರಣ್ಯ, ಪರಿಸರ ಹಾಗೂ ವನ್ಯಜೀವಿಗಳ ಸಂರಕ್ಷಣೆ ಬಗ್ಗೆ ಅರಿವು ಮೂಡಿಸಲು ಸಹಕಾರಿಯಾಗಿದೆ. ಅರಣ್ಯ ಇಲ್ಲದಿದ್ದರೆ ಜಾಗತಿಕ ತಾಪಮಾನ ಹೆಚ್ಚಾಗಿ ವನ್ಯಜೀವಿಗಳು ಮತ್ತು ಪಕ್ಷಿಗಳು ನಾಶವಾಗುತ್ತವೆ ಎಂದರು.
ವಲಯ ಅರಣ್ಯ ಅಧಿಕಾರಿ ವಸಂತ್ ಕುಮಾರ್ ಮಾತನಾಡಿ, ನಾವು ಅರಣ್ಯ ಮತ್ತು ವನ್ಯಜೀವಿಗಳ ಜೊತೆಯೇ ಬಾಳುವುದನ್ನು ಕಲಿಯಬೇಕು. ಆಗ ಮಾತ್ರ ಪ್ರಕೃತಿ ಮತ್ತು ಪರಿಸರ ಸಮತೋಲನದಿಂದ ಇರಲು ಸಾಧ್ಯ. ಉತ್ತಮ ಭವಿಷ್ಯಕ್ಕಾಗಿ ಅರಣ್ಯ ಮತ್ತು ವನ್ಯಜೀವಿಗಳ ಸಂರಕ್ಷಣೆಗೆ ನಾವು ಪಣತೊಡಬೇಕು ಎಂದು ವನ್ಯಜೀವಿ ಸಪ್ತಾಹ ಆಚರಣೆಯ ಉದ್ದೇಶ ತಿಳಿಸಿದರು.
ಪರಿಸರ ಮತ್ತು ವನ್ಯಜೀವಿ ಸಂರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಮಾಲತೇಶ್ ಅರಸ್ ಮಾತನಾಡಿ, ಜನರು ವನ್ಯಜೀವಿಗಳೊಂದಿಗೆ ಸಹಬಾಳ್ವೆ ನಡೆಸಿದಾಗ ಮಾತ್ರ ಪ್ರಕೃತಿ, ಪರಿಸರ ಉಳಿಯಲು ಸಾಧ್ಯ. ಇದರಿಂದ ಪರಿಸರ ಸಮತೋಲನ ಕಾಯ್ದುಕೊಳ್ಳಬಹುದು. ಅರಣ್ಯಕ್ಕೆ ನಾವು ಯಾವುದೇ ಹಾನಿ ಉಂಟು ಮಾಡದೇ ಸಸ್ಯ ಹಾಗೂ ಪ್ರಾಣಿ ಸಂಕುಲದ ಸಂರಕ್ಷಣೆ ಮೂಲಕ ವನ್ಯಜೀವಿಗಳ ಸಂರಕ್ಷಣೆಗೆ ಹೆಚ್ಚಿನ ಆದ್ಯತೆ ನೀಡಬೇಕು. ಪ್ರತಿಯೊಂದು ಪ್ರಾಣಿ-ಪಕ್ಷಿಗಳು ಪರೋಕ್ಷವಾಗಿ ಮಾನವನಿಗೆ ಉಪಕಾರವನ್ನೇ ಮಾಡುತ್ತಾ ಬಂದಿವೆ. ಯಾವುದೇ ಪ್ರಾಣಿ-ಪಕ್ಷಿಗಳು ನಶಿಸದಂತೆ ಸಂರಕ್ಷಿಸಬೇಕು. ಪ್ರತಿಯೊಬ್ಬರೂ ಅರಣ್ಯ ಇಲಾಖೆಯ ಇಂಥಹ ಜನ ಜಾಗೃತಿ ಕಾರ್ಯಕ್ರಮಕ್ಕೆ ಸಹಕರಿಸಬೇಕು ಎಂದರು.
ವನ್ಯಜೀವಿ ಸಪ್ತಾಹ ಜಾಥಾ ನಗರದ ಜಿಲ್ಲಾಧಿಕಾರಿ ಕಚೇರಿಯಿಂದ ಆರಂಭಗೊಂಡು ಅಂಬೇಡ್ಕರ್ ಸರ್ಕಲ್, ಕಿತ್ತೂರು ರಾಣಿ ಚೆನ್ನಮ್ಮ ವೃತ್ತದ ಮುಖ್ಯ ರಸ್ತೆಯ ಮೂಲಕ ಗಾಂಧಿ ವೃತ್ತ ಕ್ರಮಿಸಿ ನಂತರ ಪ್ರವಾಸಿ ಮಂದಿರದಲ್ಲಿ ಸಭೆ ನಡೆಸಿ ಸಮಾಪನಗೊಂಡಿತು. ಅರಣ್ಯ ಮತ್ತು ವನ್ಯಜೀವಿಗಳ ಸಂರಕ್ಷಣೆ ಹಾಗೂ ಪರಿಸರ ಸಂರಕಣೆಗೆ ಸಂಬಂಧಿಸಿದ ವಿವಿಧ ಘೋಷಣಾ ಫಲಕಗಳನ್ನು ಹಿಡಿದ ನೂರಾರು ವಿದ್ಯಾರ್ಥಿಗಳು ನಾಗರಿಕರಲಿ ಅರಣ್ಯ, ಮತು ವನ್ಯಜೀವಿಗಳ ಸಂರಕಣೆ ಬಗ್ಗೆ ಜಾಗೃತಿ ಮೂಡಿಸಿದರು. ಪ್ರವಾಸಿ ಮಂದಿರದಲ್ಲಿ ಸ್ನೇಕ್ ಶಿವು ಹಾವನ್ನು ಪ್ರಾತ್ಯಕ್ಷಿಕೆ ಮೂಲಕ ತೋರಿಸಿ ಜಾಗೃತಿ ಮೂಡಿಸಿದರು.
ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಮಂಜುನಾಥ್, ತಹಶೀಲ್ದಾರ್ ಗೋವಿಂದ ರಾಜ್, ತಾಪಂ ಇಒ ರವಿಕುಮಾರ್, ಬಿಇಒ ಗಿರಿಜಾ, ಉಪ ವಲಯ ಅರಣ್ಯ ಅಧಿಕಾರಿ ರಾಮದಾಸ್ ಚವ್ವಾಣ್, ದಾದಾಪೀರ್, ರಶ್ಮಿ, ಬೀಟ್ ಫಾರೆಸ್ಟರ್ ಸಂತೋಷ್ ಕುಮಾರ್, ಸಿ. ಮೇಘನಾ, ಹೆಚ್.ಟಿ. ಪ್ರಭು ಶಂಕರ್, ಚಾಂದ್ ಫಲ್ಟನ್ ಮತ್ತು ಕಣುಮಪ್ಪ, ಅರಣ್ಯ ವೀಕ್ಷಕ ಕನಕಪ್ಪ ಮತ್ತು ಅರಣ್ಯ ಸಿಬ್ಬಂದಿ ಇತರರು ಇದ್ದರು.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading