ಚಿತ್ರದುರ್ಗಜ.08:
ತುರ್ತು ಚಿಕಿತ್ಸೆಗಾಗಿ ರೋಗಿಗಳು ಜಿಲ್ಲಾಸ್ಪತ್ರೆಗೆ ಆಗಮಿಸಿದಾಗ ಅವರನ್ನು ಬೇರೆಡೆಗೆ ಶಿಫಾರಸ್ಸು ಮಾಡುವುದು ನಿಲ್ಲಬೇಕು. ತುರ್ತು ಸಂದರ್ಭದಲ್ಲಿ ಅಗತ್ಯ ತಜ್ಞ ವೈದರು ಜಿಲ್ಲಾಸ್ಪತ್ರೆಯಲ್ಲಿ ತಕ್ಷಣಕ್ಕೆ ಲಭ್ಯವಿಲ್ಲದಿದ್ದರೆ, ಕೂಡಲೇ ಜಿಲ್ಲಾ ಕೇಂದ್ರದಲ್ಲಿರುವ ಖಾಸಗಿ ಆಸ್ಪತ್ರೆಗಳ ತಜ್ಞ ವೈದ್ಯರ ಎರವಲು ಸೇವೆ ಪಡೆದು, ಚಿಕಿತ್ಸೆ ನೀಡಿ ಜೀವ ಉಳಿಸುವ ಕೆಲಸವಾಗಬೇಕು ಎಂದು ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಹೇಳಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಗುರುವಾರ ಜಿಲ್ಲಾಸ್ಪತ್ರೆಯ ಆರೋಗ್ಯ ರಕ್ಷಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಿಲ್ಲಾಸ್ಪತ್ರೆಗೆ ಆಗಮಿಸುವ ರೋಗಿಗಳನ್ನು ಅನಗತ್ಯವಾಗಿ ದಾವಣಗೆರೆ ಜಿಲ್ಲಾಸ್ಪತ್ರೆಗೆ ಶಿಫಾರಸ್ಸು ಮಾಡುತ್ತಿರುವುದಾಗಿ ಅಲ್ಲಿನ ಜಿಲ್ಲಾಧಿಕಾರಿ ತಿಳಿಸಿದ್ದಾರೆ. ಈ ವ್ಯವಸ್ಥೆ ಬದಲಾಗಬೇಕು, ಸದ್ಯ ಜಿಲ್ಲಾಸ್ಪತ್ರೆ ವೈದ್ಯಕೀಯ ಕಾಲೇಜಿನೊಂದಿಗೆ ಸಂಯೋಜನೆಗೊಂಡಿದೆ. ಎರಡೂ ಕಡೆ ಅಗತ್ಯ ಇರುವ ತಜ್ಞ ವೈದ್ಯರು ಹಾಗೂ ಬೋಧಕರನ್ನು ನೇಮಿಸಿಕೊಳ್ಳಲಾಗಿದೆ. ಆದಾಗ್ಯೂ ಖಾಸಗಿ ಆಸ್ಪತ್ರೆ, ಬೆಂಗಳೂರು ಹಾಗೂ ದಾವಣಗೆರೆಗೆ ರೋಗಿಗಳನ್ನು ಶಿಫಾರಸ್ಸು ಮಾಡುವುದು ನಿಂತಿಲ್ಲ ಎಂದು ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಬೇಸರ ವ್ಯಕ್ತಪಡಿಸಿದರು.
ಹೆರಿಗೆ ವಿವರಗಳ ಸಂಪೂರ್ಣ ಮಾಹಿತಿ ನೀಡಲು ಸೂಚನೆ:
ಜಿಲ್ಲಾಸ್ಪತ್ರೆಯಲ್ಲಿ ಸಿಜೇರಿಯನ್ ಹೆರಿಗೆಗಳು ಹೆಚ್ಚಾಗುತ್ತಿರುವುದರ ಕುರಿತು ಕಳೆದ ಆರೋಗ್ಯ ರಕ್ಷಾ ಸಮಿತಿ, ಕೆಡಿಪಿ ಸಭೆಗಳಲ್ಲಿ ಕಳವಳ ವ್ಯಕ್ತವಾಗಿತ್ತು. ಈ ಹಿನ್ನಲೆಯಲ್ಲಿ ಸಹಜ ಹೆರಿಗೆಗಳನ್ನು ಕೈಗೊಳ್ಳುವಂತೆ ನಿರ್ದೇಶನ ನೀಡಲಾಗಿತ್ತು. ಆದರೂ ಸಹಜ ಹೆರಿಗೆಗಳಿಗೆ ಹೋಲಿಸಿದರೆ, ಸಿಜೇರಿಯನ್ ಹೆರಿಗೆಗಳ ಸಂಖ್ಯೆ ಹೆಚ್ಚಾಗಿದೆ. ಈ ಬಗ್ಗೆ ಜಿಲ್ಲಾಶಸ್ತ್ರಚಿಕಿತ್ಸಕರು ಸೂಕ್ತ ವಿವರಣೆಗಳನ್ನು ಮಾಹಿತಿ ಪುಸ್ತಕದಲ್ಲಿ ನೀಡಿಲ್ಲ ಎಂದು ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಆಕ್ಷೇಪ ವ್ಯಕ್ತಪಿಸಿದರು.
ಕೆಳದ ವರ್ಷ ಹಾಗೂ ಪ್ರಸಕ್ತ ವರ್ಷದಲ್ಲಿ ಜಿಲ್ಲಾಸ್ಪತ್ರೆಯಲ್ಲಿ ಹೆರಿಗೆಯಾದವರ ಸಂಪೂರ್ಣ ಮಾಹಿತಿಯನ್ನು ಸಿದ್ದಪಡಿಸಬೇಕು. ಇದರೊಂದಿಗೆ ಪ್ರಥಮ ಬಾರಿಗೆ ಸಿಜೆರಿಯನ್ ಹೆರಿಗೆಯಾದವರು ಹಾಗೂ ಎರಡನೇ ಬಾರಿಗೆ ಸಿಜೇರಿಯನ್ ಹೆರಿಗೆಯಾದವರ ವಿವರನ್ನು ಪ್ರತ್ಯೇಕವಾಗಿ ನೀಡಬೇಕು. ಇವುಗಳನ್ನು ತುಲನಾತ್ಮವಾಗಿ ವಿಶ್ಲೇಷಿಸಿದಾಗ ಮಾತ್ರವೇ ಹೆರಿಗೆ ವಿಚಾರದಲ್ಲಿ ಜಿಲ್ಲಾಸ್ಪತ್ರೆ ಸುಧಾರಿಸದಯೇ ಅಥವಾ ಇಲ್ಲವೇ ಎಂಬುದು ತಿಳಿದು ಬರುತ್ತದೆ. ಮುಂದಿನ ಕೆ.ಡಿ.ಪಿ ಸಭೆಯ ಹೊತ್ತಿಗೆ ಸಂಪೂರ್ಣ ಮಾಹಿತಿಯನ್ನು ಸಿದ್ದಪಡಿಸಿ ನೀಡುವಂತೆ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಸೂಚಿಸಿದರು.
ಮೂಲಭೂತ ಸೌಕರ್ಯ ಒದಗಿಸಲು ನಿರ್ದೇಶನ:
ಜಿಲ್ಲಾಸ್ಪತ್ರೆಗೆ ಬಣ್ಣ ಹಚ್ಚುವುದರಿಂದ ಮೂಲಭೂತ ಸೌಕರ್ಯಗಳು ಸುಧಾರಿಸುವುದಿಲ್ಲ. ಕುಡಿಯುವ ನೀರು, ಶೌಚಾಲಯ ಹಾಗೂ ವೈದ್ಯಕೀಯ ತ್ಯಾಜ್ಯ ನಿರ್ವಹಣೆಗೆ ಹೆಚ್ಚಿನ ಗಮನಹರಿಸುವಂತೆ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ನಿರ್ದೇಶನ ನೀಡಿದರು.
ಹೊರಗುತ್ತಿಗೆ ಆಧಾರದಲ್ಲಿ ನೇಮಿಸಿಕೊಂಡಿರುವ ಸಿಬ್ಬಂದಿ ಕೆಲಸದ ಸಮಯದಲ್ಲಿ ಅನಧಿಕೃತವಾಗಿ ಗೈರು ಹಾಜರಾಗುತ್ತಿರುವ ಕುರಿತು ದೂರು ಕೇಳಿಬಂದಿದೆ. ಸುಮಾರು 100 ಜನ ಗ್ರೂಪ್ ಡಿ ಸಿಬ್ಬಂದಿ ಜಿಲ್ಲಾಸ್ಪತ್ರೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದರೂ, ಎಲ್ಲಿಯೂ ಸ್ವಚ್ಛತೆ ಕಂಡು ಬರುವುದಿಲ್ಲ. ಎಲ್ಲಾ ವೈದ್ಯಕೀಯ, ಅರೆ ವೈದ್ಯಕೀಯ, ಕ್ಲರಿಕಲ್, ನರ್ಸ್, ಸೆಕ್ಯುರಿಟಿ, ಗ್ರೂಪ್ ಡಿ ನೌಕರರಿಗೆ ಬಯೋಮೆಟ್ರಿಕ್ ಹಾಜರಾತಿಯನ್ನು ಕಡ್ಡಾಯಗೊಳಿಸಬೇಕು. ದಿನಕ್ಕೆ ನಾಲ್ಕು ಬಾರಿ ಬಯೋಮೆಟ್ರಿಕ್ ಹಾಜರಾತಿ ಪಡೆಯಬೇಕು ಎಂದು ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಹೇಳಿದರು.
ಟೆಂಡರ್ ಪ್ರಕ್ರಿಯೆ ಪೂರ್ಣಗೊಳಿಸಲು ತಾಕೀತು:
ಜಿಲ್ಲಾಸ್ಪತ್ರೆಗೆ ಅಗತ್ಯವಿರುವ ಔಷಧೋಪಕರಣಗಳ ಟೆಂಡರ್ ಪ್ರಕ್ರಿಯೆಗಳನ್ನು ಕೂಡಲೇ ಪೂರ್ಣಗೊಳಿಸಬೇಕು. ಜಿಲ್ಲಾ ಶಸ್ತ್ರಚಿಕಿತ್ಸಕರಯ ಆರ್ಥಿಕ ವೆಚ್ಚದ ಅಧಿಕಾರದಡಿ ಖರ್ಚು ಮಾಡಿದ ವೆಚ್ಚದ ಮಾಹಿತಿಯನ್ನು ಜಿಲ್ಲಾಸ್ಪತ್ರೆ ಅಧೀಕ್ಷಕರು ಆದೇಶಗಳ ಸಹಿತ ವರದಿ ನೀಡಬೇಕು. ರಾಜ್ಯ ಔಷದೋಗ್ರಾಣದಿಂದ ಸರಬರಾಜು ಆಗುವ ಔಷಧ ಹಾಗೂ ವೈದ್ಯಕೀಯ ಉಪಕರಣಗಳ ಹೊರತು ಪಡಿಸಿ, ಬೇರೆ ಔಷಧಗಳ ಖರೀದಿಗೆ ಮಾತ್ರ ಟೆಂಡರ್ ಕರೆಯಬೇಕು. ಔಷಧೋಗ್ರಾಣದಿಂದ ಸರಬರಾಜು ಮಾಡಿದ ಔಷಧ ಹಾಗೂ ಉಪಕರಣಗಳು ರೋಗಿಗಳ ಬಳಕೆ ಯೋಗ್ಯವಾಗಿಲ್ಲ ಎಂದು ಎನಿಸಿದರೇ, ಕೂಡಲೇ ವರದಿ ನೀಡಿ. ಈ ಕುರಿತು ಸರ್ಕಾರದ ಪ್ರಧಾನ ಕಾರ್ಯದರ್ಶಿಗಳಿಗೆ ಪತ್ರ ಬರೆದು ಗಮನಸೆಳೆಯಲಾಗುವುದು. ಒಂದು ವೇಳೆ ಸರಬರಾಜು ಆದ ಔಷಧಗಳಿಗೆ ಮತ್ತೊಮ್ಮೆ ಟೆಂಡರ್ ಕರೆದು ಔಷಧಗಳನ್ನು ಪಡೆದಿರುವುದು ಗಮನಕ್ಕೆ ಬಂದರೆ, ಸಂಬಂದಪಟ್ಟವರ ವಿರುದ್ದ ಕ್ರಿಮಿನಲ್ ಮೊಕದ್ದಮೆ ದಾಖಲಿಸುವುದಾಗಿ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಎಚ್ಚರಿಕೆ ನೀಡಿದರು. ಇದೇ ವೇಳೆ ಎ.ಬಿ.ಆರ್.ಕೆ ಅನುದಾನದಲ್ಲಿ ವೈದ್ಯರಿಗೆ ನೀಡಿಬೇಕಾದ ಭತ್ಯೆಯನ್ನು ಕೂಡಲೇ ಪಾವತಿಸಲು ಕ್ರಮ ಕೈಗೊಳ್ಳುವಂತೆ ಜಿಲ್ಲಾಸ್ತ್ರಚಿಕಿತ್ಸಕರಿಗೆ ಸೂಚಿಸಿದರು
ತಿಂಗಳಿಗೊಮ್ಮೆ ಆರೋಗ್ಯ ರಕ್ಷಾ ಸಮಿತಿ ಸಭೆ:
ಆರೋಗ್ಯ ರಕ್ಷಾ ಸಮಿತಿ ಸದಸ್ಯರೊಂದಿಗೆ ಜಿಲ್ಲಾಶಸ್ತ್ರಚಿಕಿತ್ಸಕ ನೇತೃತ್ವದಲ್ಲಿ ಪ್ರತಿ ತಿಂಗಳು ಸಭೆ ನಡೆಸಬೇಕು. ಜಿಲ್ಲಾಸ್ಪತ್ರೆಯ ಕಾರ್ಯವೈಖರಿಯಲ್ಲಿ ಬದಲಾವಣೆ ತರಬೇಕು. ನಿಗದಿತ ಮಾರ್ಗಸೂಚಿಗಳನ್ನು ಆಧರಿಸಿ ಚಿಕಿತ್ಸೆ ನೀಡಬೇಕು. ವಾರ್ಡ್‍ಗಳಲ್ಲಿ ಅನಗತ್ಯವಾಗಿ ರೋಗಿಗಳ ಸಂಬಂಧಿಕರು ಆಗಮಿಸದಂತೆ ಕಟ್ಟುನಿಟ್ಟಾಗಿ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಹೇಳಿದರು.
ಹಾಕರ್ ಜೋನ್ ನಿರ್ಮಾಣ:
ಜೋಗಿಮಟ್ಟಿ ಸರ್ಕಲ್ ಸಂಪರ್ಕಿಸುವ ಜಿಲ್ಲಾಸ್ಪತ್ರೆಯ ಮುಂದಿನ ರಸ್ತೆಯನ್ನು ಹಾಕರ್ ಜೋನ್ ಆಗಿ ಪರಿವರ್ತನೆ ಮಾಡಿ, ನಗರಸಭೆಯಿಂದ ಬೀದಿಬದಿ ವ್ಯಾಪಾರಿಗಳಿಗೆ ನೀಡಬೇಕು. ಇದರೊಂದಿಗೆ ಖಾಸಗಿ ವಾಹನಗಳಿಗೆ ಪಾರ್ಕಿಂಗ್ ವ್ಯವಸ್ಥೆಯನ್ನು ಕಲ್ಪಿಸಬೇಕು. ಇದಕ್ಕಾಗಿ ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿಯಿಂದ ಅನುಮೋದನೆ ಪಡೆದು ತಕ್ಷಣ ಕಾರ್ಯಪ್ರವೃತ್ತವಾಗುವಂತೆ ನಗರಸಭೆ ಆಯುಕ್ತರಿಗೆ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಸೂಚಿಸಿದರು.
ಜಿಲ್ಲಾಸ್ಪತ್ರೆಯಲ್ಲಿ ಏಪ್ರಿಲ್-2025 ರಿಂದ ಡಿಸೆಂಬರ್-2025 ವರೆಗೆ ಒಟ್ಟು 4,948 ಹೆರಿಗೆಗಳು ಸಂಭವಿಸಿವೆ. ಈ ಪೈಕಿ 1,449 ಸಹಜ, 3,499 ಸಿಜೇರಿಯನ್ ಹೆರಿಗೆಗಳಾಗಿವೆ. ಒಟ್ಟು 3,27,453 ಹೊರ ರೋಗಿಗಳು ಹಾಗೂ 40,477 ಒಳರೋಗಿಗಳಿಗೆ ಚಿಕಿತ್ಸೆ ನೀಡಲಾಗಿದೆ. 952 ಮೇಜರ್,242 ಮೈನರ್, 16 ಎಲ್.ಟಿ.ಓ, 29 ತುರ್ತು ಶಸ್ತ್ರಚಿಕಿತ್ಸೆ ಸೇರಿಸಿ 1,274 ಶಸ್ತ್ರಚಿಕಿತ್ಸೆ ನಡೆಸಲಾಗಿದೆ. 796 ಟ್ರಾಮಾ, 642 ಕಣ್ಣಿನ ಶಸ್ತ್ರಚಿಕಿತ್ಸೆ ಕೈಗೊಳ್ಳಲಾಗಿದೆ. 5,710 ಸಿ.ಟಿ.ಸ್ಕ್ಯಾನ್, 9,750 ಎಂ.ಆರ್.ಐ ಸ್ಕಾನ್ ಮಾಡಲಾಗಿದೆ. 888 ರೋಗಿಗಳು 8,693 ಸೈಕಲ್‍ಗಳಷ್ಟು ಡಯಾಲಿಸಿಸ್ ನಡೆಸಲಾಗಿದೆ ಎಂದು ಜಿಲ್ಲಾಶಸ್ತ್ರಚಿಕಿತ್ಸಕ ಡಾ.ಎಸ್.ಪಿ.ರವೀಂದ್ರ ಮಾಹಿತಿ ನೀಡಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರೇಣುಪ್ರಸಾದ್, ನಗರಸಭೆ ಆಯುಕ್ತೆ ಲಕ್ಷ್ಮಿ, ನಿವಾಸಿ ವೈದ್ಯಾಧಿಕಾರಿ ಆನಂದ್ ಪ್ರಕಾಶ್, ಆರೋಗ್ಯ ರಕ್ಷಾ ಸಮಿತಿ ಸದಸ್ಯರಾದ ಡಾ.ಶೀತಲ್ ಪ್ರಶಾಂತ, ಕೋಟೆಶ್, ಟಿ.ಆರ್.ಕಿರಣ್‍ಶಂಕರ್, ಗೋವಿಂದರಾಯ, ಆರ್.ಹಬೀಬುಲ್ಲಾ, ಸಕ್ಕರೆ ನಾಗರಾಜ, ಎಂ.ಆರ್.ಸಿ. ಮೂರ್ತಿ ಉಪಸ್ಥಿತರಿದ್ದರು.
About The Author
Discover more from JANADHWANI NEWS
Subscribe to get the latest posts sent to your email.