December 14, 2025
FB_IMG_1730981856265.jpg


ಚಿತ್ರದುರ್ಗ. ನ.07:
ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಬಾಲ್ಯ ವಿವಾಹ ನಿಯಂತ್ರಿಸುವಲ್ಲಿ ಗ್ರಾಮ ನಿಗಾವಣ ತಂಡ ಕಾವಲು ಸಮಿತಿಗಳು ಸಕ್ರಿಯವಾಗಿ ಕಾರ್ಯನಿರ್ವಹಿಸಬೇಕು ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಬಿ.ವಿ.ಗಿರೀಶ್ ಹೇಳಿದರು.
ಚಿತ್ರದುರ್ಗ ತಾಲ್ಲೂಕಿನ ಅನ್ನೇಹಾಳ್ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ಗ್ರಾಮ ಆರೋಗ್ಯ ಯೋಜನೆ ತರಬೇತಿ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.
ಬಾಲ್ಯ ವಿವಾಹದಿಂದ ವಯಸ್ಸಿಗೆ ಮೀರಿದ ಜವಾಬ್ದಾರಿ ಏರಿಸಿದಂತಾಗುತ್ತದೆ. ಅಪ್ರಾಪ್ತ ವಯಸ್ಸಿನಲ್ಲಿ ಗರ್ಭಿಣಿಯಾಗುವುದರಿಂದ ಗರ್ಭಕೋಶದ ಬೆಳವಣಿಗೆ ಪೂರ್ಣಗೊಳ್ಳದೆ ಹೆರಿಗೆ ಸಮಯದಲ್ಲಿ ಅಕಾಲಿಕ ಮರಣಕ್ಕೆ ತುತ್ತಾಗುವ ಸಾಧ್ಯತೆ ಹಾಗೂ ವಿಕಲಾಂಗ ಮಕ್ಕಳ ಜನನ ಉಂಟಾಗುತ್ತದೆ. ಮಕ್ಕಳು ಲೈಂಗಿಕ ದೌರ್ಜನ್ಯ ಹಾಗೂ ಬಲತ್ಕಾರಕ್ಕೆ ಒಳಗಾಗುತ್ತಾರೆ.ಲೈಂಗಿಕ ಖಾಯಿಲೆಗಳಿಂದ ಹೆಚ್.ಐ.ವಿ, ಏಡ್ಸ್‍ಗೆ ಗುರಿಯಾಗುವ ಸಾಧ್ಯತೆ ಇರುತ್ತದೆ. ರಕ್ತ ಹೀನತೆ ಹಾಗೂ ಕಡಿಮೆ ತೂಕದ ಮಗುವಿನ ಜನನದ ಸಾಧ್ಯತೆ, ಶಿಶು ಮರಣ ಹಾಗೂ ಮಕ್ಕಳ ಮರಣ, ದೈಹಿಕ ಬೆಳವಣಿಗೆ ಕುಂಠಿತ, ಗರ್ಭಪಾತ ಹೆಚ್ಚಾಗುತ್ತದೆ ಈ ಎಲ್ಲಾ ದುಷ್ಪರಿಣಾಮಗಳು ಭೌತಿಕ ದೈಹಿಕ ಆರೋಗ್ಯದ ಮೇಲೆ ಪರಿಣಾಮ ಉಂಟುಮಾಡುತ್ತವೆ ಹಾಗಾಗಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಕಾವಲು ಪಡೆ ಸಕ್ರಿಯವಾಗಿ ಬಾಲ್ಯ ವಿವಾಹ ತಡೆದು ಸಾಮಾಜಿಕ ಪಿಡುಗು ತೊಲಗಿಸಿ ಎಂದರು.
ತಾಲ್ಲೂಕು ಆರೋಗ್ಯ ಶಿಕ್ಷಣಾಧಿಕಾರಿ ಎನ್.ಎಸ್. ಮಂಜುನಾಥ್ ಮಾತನಾಡಿ, ಗ್ರಾಮ ಪಂಚಾಯಿತಿಯ ಅಭಿವೃದ್ಧಿಯ ಮಾನದಂಡಗಳಾದ ಸಮರ್ಪಕ ಆರೋಗ್ಯ ಸೇವೆಗಳು ತಾಯಿ ಮರಣ, ಶಿಶು ಮರಣ ನಿಯಂತ್ರಣ, ಕ್ಷಯ ರೋಗ ನಿಯಂತ್ರಣ, ಕೀಟಜನ್ಯ ರೋಗಗಳ ನಿಯಂತ್ರಣ, ಮಾನಸಿಕ ಆರೋಗ್ಯಕರ ಸೇವಾ ಸೌಲಭ್ಯಗಳು ಮತ್ತು ಸಾಮಾಜಿಕ ಪಿಡುಗುಗಳಾದ ಬಾಲ್ಯ ವಿವಾಹ ನಿಯಂತ್ರಣ ಭ್ರೂಣ ಹತ್ಯೆ ಕಾಯ್ದೆ ಅನುಷ್ಠಾನ, ತಂಬಾಕು ನಿಯಂತ್ರಣ ಕಾಯ್ದೆ ಕಾಯ್ದೆಯ ಅನುಷ್ಠಾನ, ರಕ್ತ ಹೀನತೆ, ಅಪೌಷ್ಟಿಕತೆಯ ನಿವಾರಣೆ, ಜನಸಂಖ್ಯಾ ನಿಯಂತ್ರಣ, ಸಾಂಕ್ರಾಮಿಕವಲ್ಲದ ರೋಗಗಳಾದ ರಕ್ತದೊತ್ತಡ, ಮಧುಮೇಹ, ಕ್ಯಾನ್ಸರ್, ಇತರೆ ಜೀವನ ಶೈಲಿ ರೋಗಗಳ ನಿಯಂತ್ರಣ ಪ್ರಮುಖವಾಗಿರುತ್ತದೆ. ಇವುಗಳನ್ನು ಸ್ಪಷ್ಟವಾಗಿ ಸುಸ್ಥಿರ ಅಭಿವೃದ್ಧಿ ಗುರಿಗಳಲ್ಲಿ ಪ್ರಮುಖ ಗುರಿಗಳನ್ನಾಗಿ ಪರಿಗಣಿಸಲಾಗಿದೆ. ಈ ನಿಟ್ಟಿನಲ್ಲಿ ಗ್ರಾಮ ಪಂಚಾಯಿತಿ ಟಾಸ್ಕ್ ಪೋರ್ಸ್ ಸಮಿತಿಯ ಸದಸ್ಯರು ಸಕ್ರಿಯವಾಗಿ ಪಾಲ್ಗೊಳ್ಳಬೇಕು ಎಂದರು.
ಪ್ರತಿ ಗ್ರಾಮ ವಾರ್ಡ್‍ಗಳಲ್ಲಿ ಸಮಿತಿಗಳನ್ನು ರಚನೆ ಮಾಡಿ ಪ್ರತಿ ವಾರ್ಡ್‍ಗಳಲ್ಲಿಯೂ ಗ್ರಾಮ ಪಂಚಾಯಿತಿಗೆ ನೀಡಿರುವ ಆರೋಗ್ಯ ಕಿಟ್ ಬಳಕೆ ಮಾಡಿ 30 ವರ್ಷ ಮೇಲ್ಪಟ್ಟ ಎಲ್ಲಾ ಸಾರ್ವಜನಿಕರ ಆರೋಗ್ಯ ತಪಾಸಣೆ ನಡೆಸಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಈ ಎಲ್ಲಾ ಮಾಹಿತಿಗಳ ದತ್ತಾಂಶಗಳನ್ನ ಗಣಕೀಕರಣಗೊಳಿಸಿ ಪಂಚಾಯತಿ ಮಟ್ಟದಲ್ಲಿ ಕ್ರಿಯಾಯೋಜನೆ ರೂಪಿಸಿ ಎಂದರು.
ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಬಿ ಜಾನಕಿ ಅವರು ಸಾಂಕ್ರಾಮಿಕ ರೋಗಗಳು ಸಾಂಕ್ರಾಮಿಕವಲ್ಲದ ರೋಗಗಳ ಬಗ್ಗೆ ಮಾಹಿತಿ ಒದಗಿಸಿದರು.
ತಾಲ್ಲೂಕು ಆಶಾ ಬೋಧಕಿ ತಬಿತಾ ಅವರು ಅನಿಮಿಯಾ ಮುಕ್ತ ಭಾರತ ನಿರ್ಮಾಣಕ್ಕಾಗಿ ಅಪೌಷ್ಟಿಕತೆ ತೊಲಗಿಸಲು ಸ್ಥಳೀಯವಾಗಿ ದೊರೆಯುವ ಕಬ್ಬಿನಾಂಶಭರಿತ ಪೌಷ್ಠಿಕ ಆಹಾರಗಳ ಬಗ್ಗೆ ಮಾಹಿತಿ ನೀಡಿದರು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮೇಲ್ವಿಚಾರಕಿ ರೂಪಾ, ಮಹಿಳಾ ಸಾರ್ವಭೌಮತ್ವ, ಕಿಶೋರಿಯರ ಆರೋಗ್ಯ, ಹೆಣ್ಣು ಮಕ್ಕಳ ಮುಟ್ಟಿನ ಸಂದರ್ಭದಲ್ಲಿ ಆಗುವಂತಹ ತೊಂದರೆ ಮತ್ತು ಶುಚಿತ್ವದ ಬಗ್ಗೆ ಮಾಹಿತಿ ಒದಗಿಸಿದರು.
ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತಿ ಸದಸ್ಯರಾದ ಜಂಪಣ್ಣ, ರಾಜಪ್ಪ, ಪಿಡಿಓ ಅಂಜನಪ್ಪ, ಆರೋಗ್ಯ ನಿರೀಕ್ಷಣಾಧಿಕಾರಿ ಪ್ರವೀಣ್ ಕುಮಾರ್. ಸಮುದಾಯ ಆರೋಗ್ಯ ಅಧಿಕಾರಿ ಸುಧಾಕರ್ ಕೋಟೆ, ಶಾಲಾ ಶಿಕ್ಷಕರು, ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು, ಪ್ರಾಥಮಿಕ ಆರೋಗ್ಯ ಸುರಕ್ಷತಾ ಅಧಿಕಾರಿಗಳು ಇದ್ದರು.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading