ಹಿರಿಯೂರು:
ಊರಿಗೆ ಮದುವೆಯಾಗಿ ಬಂದ ಸೊಸೆಯಂದಿರು ಕುಣಿಯದಿದ್ದರೆ ಗ್ರಾಮದೇವತೆ ಗೊಲ್ಲಾಳಮ್ಮ ಕುಣಿಯುತ್ತಾಳೆ ಹೀಗಾಗಿ ಗೊಲ್ಲಾಳಮ್ಮನ ಅಪ್ಪಣೆಯಂತೆ ಅನಾದಿಕಾಲದಿಂದ ಸೊಸೆಯಂದಿರು ದಸರಾ ಉತ್ಸವದ ಸಂದರ್ಭದಲ್ಲಿ ಕುಣಿಯುವುದು ಈ ಊರಿನ ವಾಡಿಕೆಯಾಗಿದೆ.


ತಾಲ್ಲೂಕಿನ ಬಾಲೇನಹಳ್ಳಿಯಲ್ಲಿ ಮೈಸೂರಿನಲ್ಲಿ ಆಚರಿಸುವ ದಸರಾ ಹಬ್ಬದ ರೀತಿ ಕಾಡುಗೊಲ್ಲ ಜನಾಂಗದ ಸಾವಿರ ಒಕ್ಕಲಿನವರು ವಾರಗಟ್ಟಲೆ ವೈಭವದಿಂದ ಹಬ್ಬ ಆಚರಿಸುತ್ತಾ ಬಂದಿದ್ದಾರೆ. ಕೊನೆಯ ದಿನ ಭಂಡಾರದ ಉತ್ಸವ ನಡೆಯುತ್ತದೆ.
ಅಂದು ಸೊಸೆಯಂದಿರು ಸೀರೆಉಟ್ಟು ಕೈಯಲ್ಲಿ ಬೇವಿನಸೊಪ್ಪು ಹಿಡಿದು ಗೊಲ್ಲಾಳಮ್ಮನ ದೇವಸ್ಥಾನದಿಂದ ಹನುಮಂತನ ದೇವಸ್ಥಾನದವರೆಗೆ ಕುಣಿಯುತ್ತಾ ಸಾಗುತ್ತಾರೆ. ಮದುವೆಯಾಗಿ ಬರುವ ಸೊಸೆಯಂದಿರು ಭಂಡಾರ ಉತ್ಸವದಲ್ಲಿ ತಪ್ಪದೆ ಹೆಜ್ಜೆ ಹಾಕುತ್ತಾರೆ. ಉತ್ಸವದಲ್ಲಿ ಸೋಮನು ಸೊಸೆಯಂದಿರ ಜೊತೆ ಕುಣಿಯುವುದು ವಿಶೇಷ.
ಇಂತಹ ಒಂದು ವಿಶೇಷ ಆಚರಣೆ ಬಾಲೇನಹಳ್ಳಿಯಲ್ಲಿ ಸೋಮವಾರ ನಡೆಯಿತು. ಗ್ರಾಮದ ಎಲ್ಲಾ ಸೊಸೆಯಂದಿರು ದೇವಸ್ಥಾನದ ಹತ್ತಿರ ಕಡ್ಡಾಯವಾಗಿ ಹೋಗಲೇಬೇಕು. ಭಂಡಾರ ಹಚ್ಚಿದ ತಕ್ಷಣ ಸೊಸೆಯಂದಿರು ತಂತಾನೆ ಕುಣಿಯಲು ಆರಂಭಿಸುತ್ತಾರೆ. ಗೊಲ್ಲಾಳಮ್ಮದೇವಿ ಸಂತೃಪ್ತಳಾಗಿರಲಿ. ಗ್ರಾಮಕ್ಕೆ ಒಳಿತು ಮಾಡಲಿ ಎಂಬುದು ಇದರ ಹಿಂದಿನ ಉದ್ದೇಶ ಎಂಬುದು ಗ್ರಾಮಸ್ಥರ ನಂಬಿಕೆ.
ವಿಜಯದಶಮಿ ಅಂಬಿನೋತ್ಸವದೊಂದಿಗೆ ಆರಂಭವಾಗುವ ಈ ಜಾತ್ರೆ ಏಕಾದಶಿ ವಿಶೇಷಪೂಜೆ, ದ್ವಾದಶಿ ಹರಿಸೇವೆ, ಕುರಿ ಕರೆಯುವ ಉತ್ಸವ, ಪಲ್ಲಕ್ಕಿ ಉತ್ಸವ, ಆರತಿ, ಸಿಡಿ ಮದ್ದಿನ ಉತ್ಸವದ ಮರುದಿನ ಭಂಡಾರ ಉತ್ಸವ ನಡೆಯುತ್ತದೆ.
ಉತ್ಸವದಲ್ಲಿ ಸೊಸೆಯಂದಿರು ಸೀರೆಉಟ್ಟು ಕೈಯಲ್ಲಿ ಬೇವಿನಸೊಪ್ಪು ಹಿಡಿದು, ದೇವಿಯ ಭಂಡಾರವನ್ನು ಹಣೆಗೆ ಇಟ್ಟುಕೊಂಡು, ಉರುಮೆ ಹಾಗೂ ತಮಟೆ ವಾದ್ಯಕ್ಕೆ ಹೆಜ್ಜೆ ಹಾಕುವ ಮೂಲಕ ಹರಕೆ ತೀರಿಸಿದರು.
ಚಿತ್ತಿಮುತ್ತಿ ಕುಲದ ಕರಡಿಬುಳ್ಳಪ್ಪ ವಂಶಸ್ಥರಾದ ಕರಡಿಗೊಲ್ಲರು ಶ್ರೀದೇವಿಯ ಆರಾಧನೆ ಮಾಡುತ್ತಾರೆ. ಕರಡಿಗೊಲ್ಲರ ಬೆಡಗಿನ ಮನೆಗೆ ಸೊಸೆಯಾಗಿ ಬಂದವರು ಭಂಡಾರ ಉತ್ಸವದಲ್ಲಿ ಭಾಗಿಯಾಗಿ ಕುಣಿಯುವ ಆಚರಣೆ ಮಾಡಿಕೊಂಡು ಬರುತ್ತಿರುವುದನ್ನು ಇಲ್ಲಿ ಮಾತ್ರ ಕಾಣಬಹುದು. ಸೊಸೆಯಂದಿರು ಮುತ್ತೈದೆಯಾಗಿರುವವರೆಗೆ ಹಬ್ಬದಲ್ಲಿ ಕುಣಿಯುತ್ತಾರೆ ಎಂಬುದಾಗಿ ಹಿರಿಯರು ಹೇಳುತ್ತಾರೆ.
About The Author
Discover more from JANADHWANI NEWS
Subscribe to get the latest posts sent to your email.