
ಚಿತ್ರದುರ್ಗಆಗಸ್ಟ್07:
ತಾಯಿಯ ಎದೆಹಾಲು ಅಮೃತಕ್ಕೆ ಸಮ. ಮಗುವಿನ ಉತ್ತಮ ಆರೋಗ್ಯಕ್ಕೆ ಎದೆಹಾಲು ಸಹಕಾರಿ ಎಂದು ಜಿಲ್ಲಾ ಆರ್‍ಸಿಹೆಚ್ ಅಧಿಕಾರಿ ಡಾ.ಡಿ.ಎಂ.ಅಭಿನವ್ ಹೇಳಿದರು.
ನಗರದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಬುದ್ದನಗರ ವ್ಯಾಪ್ತಿಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಗುರುವಾರ ಆಯೋಜಿಸಲಾದ ವಿಶ್ವ ಸ್ತನ್ಯಪಾನ ಸಪ್ತಾಹ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
“ತಾಯಿಯ ಹಾಲು ನೀಡುವುದರಲ್ಲಿ ಹೂಡಿಕೆ ಮಾಡಿದರೆ, ಮಕ್ಕಳ ಆರೋಗ್ಯಕರ ಭವಿಷ್ಯಕ್ಕಾಗಿ ಹೂಡಿಕೆ ಮಾಡಿದಂತೆ” ಎಂಬುದು ಈ ಬಾರಿಯ ವಿಶ್ವ ಸ್ತನ್ಯಪಾನ ಸಪ್ತಾಹದ ಘೋಷ ವಾಕ್ಯವಾಗಿದೆ. ಮಗುವಿನ ಉತ್ತಮ ಆರೋಗ್ಯಕ್ಕೆ ತಾಯಿಯ ಎದೆಹಾಲು ಮೊದಲ ಆರು ತಿಂಗಳು ಪ್ರಮುಖ ಪಾತ್ರ ವಹಿಸುತ್ತದೆ ಎಂದು ಹೇಳಿದರು.
ಸಾಮಾನ್ಯವಾಗಿ ಭಾರತ ದೇಶದಲ್ಲಿ ಒಂದು ಕುಟುಂಬ ಮಕ್ಕಳ ಆರೋಗ್ಯಕ್ಕೆ ವಾರ್ಷಿಕವಾಗಿ ರೂ.15 ಸಾವಿರದಿಂದ ರೂ.25 ಸಾವಿರದವರೆಗೂ ಖರ್ಚು ಮಾಡುತ್ತಿದ್ದಾರೆ. ಈ ಖರ್ಚನ್ನು ತಪ್ಪಿಸಲು ಮಗು ಜನಿಸಿದ ಒಂದು ಘಂಟೆಯ ಒಳಗೆ ತಾಯಿ ಎದೆ ಹಾಲನ್ನು ಕುಡಿಸುವುದು ಪ್ರಮುಖ ಮತ್ತು ಆರು ತಿಂಗಳ ತನಕ ಮಗುವಿಗೆ ಏನನ್ನು ನೀಡದೆ ತಾಯಿ ಎದೆ ಹಾಲನ್ನು ನೀಡುವುದು ಸೂಕ್ತ. ತಾಯಿ ಎದೆ ಹಾಲಿನಲ್ಲಿ ಮಗುವಿನ ಬೆಳವಣಿಗೆಗೆ ಬೇಕಾದ ಎಲ್ಲಾ ಅಂಶಗಳು ಇರುತ್ತದೆ ಎಂದು ಹೇಳಿದರು.
ಆರು ತಿಂಗಳ ತನಕ ತಾಯಿ ಎದೆಹಾಲನ್ನು ನೀಡುತ್ತಾ, ಇದನ್ನು ಎರಡು ವರ್ಷಗಳವರೆಗೂ ವಿಸ್ತರಿಸಿ ಮಗುವಿಗೆ ಹಾಲನ್ನು ನೀಡಬೇಕು. ಎರಡು ವರ್ಷಗಳ ನಂತರ ಎದೆಹಾಲಿನ ಜತೆಗೆ ಪೂರಕ ಆಹಾರವಾದ ಕಿಚಡಿ, ರಾಗಿಸರಿ, ಹಣ್ಣು ಮುಂತಾದವುಗಳನ್ನು ಹಂತ-ಹಂತವಾಗಿ ನೀಡುತ್ತಾ ಸಾಗಬೇಕು ಎಂದು ಹೇಳಿದರು.
ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ಎಸ್.ಪಿ.ರವೀಂದ್ರ ಮಾತನಾಡಿ, ಮಗುವಿಗೆ ತಾಯಿ ಎದೆ ಹಾಲು ಪ್ರಮುಖ ಪಾತ್ರ ವಹಿಸುತ್ತದೆ ಎಂದು ತಿಳಿಸಿದ ಅವರು, ತಾಯಂದಿರು ಮಕ್ಕಳಿಗೆ ಎದೆ ಹಾಲು ನಿಗದಿತ ಅವಧಿವರೆಗೆ ನೀಡುವುದರಿಂದ ಹಲವು ಸೋಂಕುಗಳಿಂದ ರಕ್ಷಿಸಬಹುದು ಎಂದರು.
ತಾಲ್ಲೂಕು ಆರೋಗ್ಯಾಧಿಕಾರಿ ಬಿ.ವಿ.ಗಿರೀಶ್ ಮಾತನಾಡಿ, ತಾಯಿ ಎದೆಹಾಲು ಅಮೃತ, ಇದರಲ್ಲಿ ಎಲ್ಲಾ ಪೋಷಕಾಂಶ ಆಹಾರ ಅಡಗಿರುತ್ತವೆ. ಹಾಗಾಗಿ ತಪ್ಪದೆ ತಮ್ಮ ಮಕ್ಕಳಿಗೆ 6 ತಿಂಗಳವರೆಗೂ ಬೇರೆ ಆಹಾರ ನೀಡದೇ ಬರೀ ತಾಯಿ ಎದೆಹಾಲನ್ನು ಮಾತ್ರ ನೀಡುವುದು ಸೂಕ್ತ ಎಂದು ಹೇಳಿದರು.
ಮಗು ಜನಿಸಿದ 48 ಗಂಟೆಗಳ ತನಕ ಸ್ನಾನ ಮಾಡಿಸಬಾರದು. ಮಗುವಿನ ಹೊಕ್ಕಳ ಬಳ್ಳಿಗೆ ಯಾವುದೇ ತರಹ ಔಷಧಿಗಳನ್ನು ಹಚ್ಚುವುದು ತಪ್ಪಿಸಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಟಿ. ಕೃಷ್ಣನಾಯ್ಕ್, ತಾಲ್ಲೂಕು ಆರೋಗ್ಯ ಶಿಕ್ಷಣಾಧಿಕಾರಿ ಬಿ. ಮೂಗಪ್ಪ, ಜಿಲ್ಲಾ ಆರೋಗ್ಯ ಉಪ ಶಿಕ್ಷಣಾಧಿಕಾರಿ ಗೌರಮ್ಮ, ಬುದ್ಧ ನಗರದ ವೈದ್ಯಾಧಿಕಾರಿ ಡಾ. ಸುರೇಂದ್ರ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ವೀಣಾ, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಬಿ.ಜಾನಕಿ, ಕಾರ್ಯಕ್ರಮ ನಿರೂಪಣಾಧಿಕಾರಿ ಮಂಜುನಾಥ ಸೇರಿದಂತೆ ಮತ್ತಿತರರು ಇದ್ದರು.



About The Author
Discover more from JANADHWANI NEWS
Subscribe to get the latest posts sent to your email.