
” ನಿರ್ಲಿಪ್ತತೆಯ ಕಡೆಗೆ…..”
ಹೆಣ್ಣಿನ ತುಮುಲಗಳೇ ಹಾಗೆ…. ಎದೆಯ ಹಣತೆಯೊಳಗಿನ ಮಂದ ಬೆಳಕಿನಲ್ಲಿ ಭರವಸೆಗಳನ್ನು ಒಸೆಯಬೇಕೋ, ಹೊಸಕಿ ಹಾಕಬೇಕೋ ಎಂಬ ತೊಳಲಾಟ, ನರಳಾಟ ಕಾಡುತ್ತಲೇ ಇರುತ್ತವೆ. ಜಗತ್ತಿಗೆ ಬೇಕಾಗುವ ತರ ಬದುಕಿದ್ರೆ ಮನಸ್ಸಿಗೆ ನೋವು, ಮನಸ್ಸಿಗೆ ಬೇಕಾಗುವ ತರ ಬದುಕಿದ್ರೆ ಜಗತ್ತಿಗೆ ನೋವು…. ಏನೂ ತೋಚುತ್ತಿಲ್ಲ.
ಸಂದಿಗ್ಧತೆಯೊಳಗೆ ಅರಿವಿಲ್ಲದೆ ಆವರಿಸಿಕೊಂಡದ್ದು ಆಲಿಂಗನದ ಬೆಚ್ಚಗಿನ ಪ್ರೀತಿ. ಮೋಹವಲ್ಲದ ಪ್ರೇಮ. ಹೊಸ ಬಾಳ ಬಾಗಿಲಲ್ಲಿ ನಿಂತು, ನಿತ್ಯ ಹಸಿರ ತೋರಣಕ್ಕೆ ಕನಸಿನ ಹೆಣಿಕೆ.
ಬದುಕು ನನ್ನದೇ ಆಗಿರುವಾಗ,ಇಲ್ಲಿ ಯಾರೂ ನನ್ನವರಲ್ಲ ಎಂಬ ಅರಿವು ಬರುವುದು ಇನ್ನೊಬ್ಬರ ಪ್ರೀತಿಗಾಗಿ ಹಂಬಲಿಸಿದಾಗ ಮಾತ್ರ. ಹೃದಯ ಹೂವಾಗಿರುವವರ ಜೊತೆ, ಕಲ್ಲಾಗಿರುವವರನ್ನು ನಾವು ಸ್ಮರಿಸುತ್ತೇವೆ. ಏಕೆಂದರೆ ಮೋಹವಲ್ಲದ ಪ್ರೇಮ ನಿವೇದನೆಗೆ. ಇದಕ್ಕಾಗಿಯೇ ಹೇಳುವುದು ಗಟ್ಟಿತನವೇ ಜಗತ್ತಿನಲ್ಲಿ ಗೆಲುವುಗಳಿಗೆ ಕಾರಣ ಎಂದು.
ಮನುಷ್ಯ ನಿರಾಸೆ, ನೋವು, ದುಃಖಗಳನ್ನು ಬದುಕಿನ ಭಾಗವೆಂದು ತಿಳಿದರೆ ಸಂತೋಷದಿಂದ ಇರಬಲ್ಲ. ಆದರೆ ಮನುಷ್ಯ ಸಂಬಂಧಗಳೊಟ್ಟಿಗೆ ಇವುಗಳನ್ನೆ ನಿತ್ಯ ಕಾಣಿಕೆಯಾಗಿ ನೀಡಿದಾಗ ಬದುಕಿನ ಭಾಗವೆಂದು ಭಾವಿಸುವುದಾದರೂ ಹೇಗೆ?
ಬದುಕು ಎಷ್ಟೇ ನೋಯಿಸಿದರು ಬದುಕಬೇಕಿದೆ. ಮನಸ್ಸು ಎಷ್ಟೇ ನೊಂದಿದ್ದರು ನಗಬೇಕಿದೆ. ಅಂದುಕೊಂಡದ್ದು ಆಗದೇ ಇದ್ದಾಗ ಹೊಂದಿಕೊಂಡು ಹೋಗುವುದನ್ನು ಕಲಿಯಬೇಕಿದೆ. ಇದುವೇ ಜೀವನ.
ಸಮಾನ ಮನಸ್ಕ ಸಂಗಾತಿಯ ಜೊತೆ ಬದುಕುವುದು ಅಥವಾ ಭಾವನೆಗಳನ್ನು ಹಂಚಿಕೊಳ್ಳುವುದೇ ಈ ಪ್ರಪಂಚದ ಅತ್ಯಂತ ದೊಡ್ಡ ಸುಖ. ಅದೇ ನೆಮ್ಮದಿಯ ಉತ್ತುಂಗ ಅನ್ನುವ ಆಲೋಚನೆಗಳು ನಮ್ಮನ್ನು ಕೆಲವೊಮ್ಮೆ ದಿಢೀರನೆ ಆತ್ಮಸ್ಥೈರ್ಯ ಕುಸಿತದ ಕಠೋರ ದಿಗ್ದರ್ಶನಕ್ಕೆ ದಾರಿದೀಪವಾಗುತ್ತದೆ.
ಪ್ರೀತಿ ಎನ್ನುವುದು ಕೇವಲ ಭಾವನೆಗಳಲ್ಲ, ಅದು ಪ್ರತಿದಿನದ ಪ್ರತಿಜ್ಞೆ. ಮಾನಸಿಕವಾಗಿ ಮತ್ತು ಭಾವನಾತ್ಮಕವಾಗಿ ವಿಕಸಿ ತಗೊಂಡು ಸಮ್ಮಿಳಿತಗೊಂಡಾಗ ಮಾತ್ರ ಅದಕ್ಕೆ ಅರ್ಥ. ಬದುಕಿನೊಳಗೆ ಯಾರೇ ಬಂದು ಹೋದರು ಹಿಗ್ಗದೇ,ಕುಗ್ಗದೇ ಅಬ್ಬರಿಸಿದ ಅಲೆಗಳಿಗೆ ಮೈಯೊಡ್ಡಿ ಕುಳಿತ ಬಂಡೆಯಂತೆ ಎಲ್ಲ ಸಂಬಂಧಗಳಿಗೂ ವಿದಾಯ ಹೇಳಿ….. ಏಕಾಂತತೆಯ ಕಡೆಗೆ,ನಿರ್ಲಿಪ್ತತೆಯ ಕಡೆಗೆ ಮನಸ್ಸು ಜಾರಿತೆಂದರೆ ಮನಸ್ಸಿಗೆ ಆಗಿರುವ ನೋವುಗಳೇ ಹೊರತು ಬೇರೇನೂ ಅಲ್ಲ.
ಬೇಡವೆಂದಾದರೆ ಬರಬಾರದಿತ್ತು, ಬಿಡುಗಡೆಯ ಬಯಸುವುದಾಗಿದ್ದರೆ ಬಂಧಿಸಿಕೊಳ್ಳುವ ಅವಶ್ಯಕತೆಯಾದರೂ ಏನಿತ್ತು?
ನೋಯಿಸಿದಷ್ಟು ಗಟ್ಟಿಗೊಳಿಸಿದ್ದಕ್ಕೆ ಕೃತಜ್ಞಳಾಗಿರುವೆ.
ಬದುಕಿನ ಅವಶ್ಯಕತೆಗಳನ್ನು ಪೂರೈಸಿಕೊಳ್ಳಲು ಅಗತ್ಯತೆಗಳು ಇರಬೇಕೇ ವಿನಃ ಆಯ್ಕೆಗಳಾಗಿ ಮನಸುಗಳೊಂದಿಗೆ lಇಳಿಯಬಾರದು. ದಿನೇ ದಿನೇ ಕಳೆದುಹೋಗುವ ಬದಲು,ನಾವೇ ತ್ಯಾಗ ಮಾಡಿಬಿಡಬೇಕು.
ಇವೆಲ್ಲ ಸುಂದರ ಸುಳ್ಳುಗಳು.ಒಂದು ಸಂಬಂಧ ಸಾಯೋಕು ಮುಂಚೆ ಸಾವಿರ ಬಾರಿ ಸತ್ತಿರುತ್ತದೆ. ವಿಶ್ರಾಂತಿ ಬಯಸಿ ಕುಳಿತ ಪಕ್ಷಿಯನ್ನು ಕಂಡು– ಪ್ರೀತಿ ಎಂದು ಭಾವಿಸಿ ಮೋಸ ಹೋದ ಮರದಂತೆ ಈ ಜೀವನ.
ತೊರೆದವರ ಪ್ರೀತಿ ಸುಳ್ಳಾಗಿರಬಹುದು, ಆದರೆ ಕೊರಗಿದವರ ಪ್ರೀತಿ ಸುಳ್ಳಾಗದು. ಹತ್ಯೆಯಾದ ನನ್ನ ಭಾವನೆಗಳನ್ನು ಮರಣೋತ್ತರ ಪರೀಕ್ಷೆಯ ಮೊದಲೇ ಮಣ್ಣಾಗಿಸಿದ ಮನಸ್ಸು ನಿನ್ನದು. ಮೌನವನ್ನು ಖರೀದಿಸಲೆಂದೇ ಮಾತುಗಳನ್ನು ಮಾರಿಬಿಟ್ಟೆ. ಸಮಯ ಕಳೆದಂತೆ ಎಲ್ಲವೂ ಮರೆಯಾಗುತ್ತದೆ ಹಾಗೆ….. ನೀನು, ನಿನ್ನ ನೆನಪುಗಳು.
ಗೀತಾ ಭರಮಸಾಗರ
ಲೇಖಕರು
ಚಿತ್ರದುರ್ಗ
About The Author
Discover more from JANADHWANI NEWS
Subscribe to get the latest posts sent to your email.