September 15, 2025
1746618999954.jpg


ಚಿತ್ರದುರ್ಗಮೇ.07:
ಹಿರಿಯ ನಾಗರೀಕರಿಗೆ ಆರೋಗ್ಯ ತಪಾಸಣೆ, ಸ್ವಚ್ಛತೆ, ಮೂಲಸೌಲಭ್ಯಗಳು ಕಲ್ಲಿಸುವುದು ಅತ್ಯಗತ್ಯವಾಗಿದೆ. ಈ ನಿಟ್ಟಿನಲ್ಲಿ ಸರ್ಕಾರದ ಅನುದಾನ ಪಡೆದು ಕಾರ್ಯನಿರ್ವಹಿಸುತ್ತಿರುವ ಸ್ವಯಂ ಸೇವಾ ಸಂಸ್ಥೆಗಳು (ಎನ್‍ಜಿಓ)ಗಳು ಜವಾಬ್ದಾರಿಯಿಂದ ಕಾರ್ಯನಿರ್ವಹಿಸಬೇಕು. ವೃದ್ಧಾಶ್ರಮಗಳು ನಾಮಕಾವಸ್ಥೆ ಆಗಬಾರದು ಎಂದು ಎಂದು ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಅವರು ಎನ್‍ಜಿಓಗಳಿಗೆ ಸೂಚನೆ ನೀಡಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಬುಧವಾರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಯೋಜನೆಗಳ ಜಿಲ್ಲಾಮಟ್ಟದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಹಿರಿಯ ನಾಗರೀಕರಿಗೆ ಕಾಲಕಾಲಕ್ಕೆ ವೈದ್ಯಕೀಯ ತಪಾಸಣೆ, ಕೌನ್ಸಿಲಿಂಗ್, ವೈಯಕ್ತಿಕ ಸ್ವಚ್ಛತೆ, ಕೊಠಡಿಗಳ ಸ್ವಚ್ಛತೆ, ಅಗತ್ಯ ಸಿಬ್ಬಂದಿಗಳು ಸೇರಿದಂತೆ ದಾಖಲಾತಿಗಳ ನಿರ್ವಹಣೆ ಸಮರ್ಪಕವಾಗಿ ನಿರ್ವಹಿಸಬೇಕು ತಿಳಿಸಿದ ಅವರು, ನಿಯಮ ಪಾಲಿಸದ ವೃದ್ಧಾಶ್ರಮಗಳ ರದ್ಧತಿಗೆ ಶಿಫಾರಸ್ಸು ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.
ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಯೋಜನೆಯಡಿ ಜಿಲ್ಲೆಯಲ್ಲಿ ಅನುಷ್ಠಾನಗೊಂಡ ಯೋಜನೆಗಳಾದ ಹಿರಿಯ ನಾಗರಿಕರ ವಿಶ್ರಾಂತಿ ಗೃಹ (ವೃದ್ದಾಶ್ರಮ), ನಿಗದಿತ ಪ್ರದೇಶಗಳಲ್ಲಿನ ಪ್ರೌಢಶಾಲೆಗಳ ವಿದ್ಯಾರ್ಥಿಳಿಗೆ ವಸತಿ ಶಾಲೆ ಯೋಜನೆ, ಪಿಎಂಎಜೆವೈ ಯೋಜನೆ, ಮದ್ಯ ಮತ್ತು ಮಾದಕ ವಸ್ತು ವ್ಯಸನಿಗಳ ಪುನರ್ ವಸತಿ ಕೇಂದ್ರ, ಬಾಬು ಜಗಜೀವನ್ ರಾಮ್ ಛಾತ್ರ ಆವಾಸ್ ಯೋಜನೆಗಳನ್ನು ಸಾಮಾಜಿಕ ಲೆಕ್ಕ ಪರಿಶೋಧನಾ ತಂಡ ಪರಿಶೀಲನೆ ನಡೆಸಿ, ಧನಾತ್ಮಕ ಹಾಗೂ ಋಣಾತ್ಮಕ ಅಂಶಗಳನ್ನು ಹಾಗೂ ಸಲಹೆಗಳನ್ನು ನೀಡಿದೆ. ಇದರ ಜೊತೆಗೆ ಸಂಬಂಧಪಟ್ಟ ಅಧಿಕಾರಿಗಳು ನಿರಂತರವಾಗಿ ಪರಿಶೀಲನೆ ನಡೆಸಬೇಕು. ಉತ್ತಮ ಗುಣಮಟ್ಟದ ಸೇವೆ, ಸ್ವಚ್ಛತೆ ಸೇರಿದಂತೆ ವ್ಯವಸ್ಥಿತವಾಗಿ ಕಾರ್ಯನಿರ್ವಹಿಸುವಂತೆ ಅಧಿಕಾರಿಗಳು ಕ್ರಮವಹಿಸಬೇಕು ಎಂದು ಸೂಚನೆ ನೀಡಿದರು.
ಸರ್ಕಾರೇತರ ಸಂಘ ಸಂಸ್ಥೆಗಳು ಸ್ವಯಂಪ್ರೇರಿತವಾಗಿ, ಸ್ವ ಆಸಕ್ತಿಯಿಂದ ಸಂಘ-ಸಂಸ್ಥೆಗಳನ್ನು ನಡೆಸುತ್ತಿದ್ದು, ಅವಕಾಶ ಇದ್ದಲ್ಲಿ ಮಾತ್ರ ಕಾಲಕಾಲಕ್ಕೆ ಸರ್ಕಾರ ಅನುದಾನ ನೀಡುತ್ತದೆ ಎಂದು ತಿಳಿಸಿದ ಅವರು, ಜಿಲ್ಲಾ ಅಂಗವಿಕಲರ ಕಲ್ಯಾಣ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಹಾಗೂ ಶಿಕ್ಷಣ ಇಲಾಖೆ ಅಧಿಕಾರಿಗಳು ಸರ್ಕಾರದ ಅನುದಾನ ಪಡೆಯುತ್ತಿರುವ ಸ್ವಯಂ ಸೇವಾ ಸಂಸ್ಥೆಗಳಿಗೆ ಭೇಟಿ ನೀಡಿ, ಪರಿಶೀಲನೆ ನಡೆಸಿ, ಸ್ವಯಂ ಸೇವಾ ಸಂಸ್ಥೆಗಳ ಪ್ರಸ್ತುತ ಸ್ಥಿತಿಗತಿ, ಧನಾತ್ಮಕ ಹಾಗೂ ಋಣಾತ್ಮಕ ಅಂಶಗಳ ವರದಿಯನ್ನು ಮೂರು ದಿನದೊಳಗೆ ಸಲ್ಲಿಸುವಂತೆ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಸಾಮಾಜಿಕ ಪರಿಶೋಧನಾ ನಿರ್ದೇಶನಾಲಯ ರಾಜ್ಯ ಕಾರ್ಯಕ್ರಮ ವ್ಯವಸ್ಥಾಪಕ ಕೇಶವಮೂರ್ತಿ ಮಾತನಾಡಿ, ಜಿಲ್ಲೆಯ 5 ತಾಲ್ಲೂಕುಗಳಲ್ಲಿ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯದಡಿ 12 ಗ್ರಾಮ ಪಂಚಾಯಿತಿಗಳು ಮತ್ತು 4 ನಗರ ಪ್ರದೇಶಗಳ, 16 ಹಳ್ಳಿಗಳಲ್ಲಿ ಸಮಾಜ ಕಲ್ಯಾಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಸ್ತುವಾರಿಯಲ್ಲಿ ವಿವಿಧ ಏಜೆನ್ಸಿಗಳ ಮೂಲಕ 2018-19 ರಿಂದ 2023-24ನೇ ಸಾಲಿನಲ್ಲಿ ಅನುಷ್ಠಾನಗೊಂಡ ಕಾಮಗಾರಿ ಮತ್ತು ಚಟುವಟಿಕೆಗಳ ಸಾಮಾಜಿಕ ಪರಿಶೋಧನೆಯನ್ನು 2024ರ ಜನವರಿ 03 ರಿಂದ ಜೂನ್ 12 ರವರೆಗೆ ಪ್ರಕ್ರಿಯೆಯನ್ನು ನಡೆಸಲಾಗಿದ್ದು, ಈ ಪ್ರಕ್ರಿಯೆಯು ಪೂರ್ಣಗೊಂಡಿರುತ್ತದೆ ಎಂದು ತಿಳಿಸಿದರು.
ರಾಜಯೋಗಿ ಸಿದ್ಧಾರ್ಥ ಎಜುಕೇಷನ್ ಸೊಸೈಟಿಯ ಹಿರಿಯ ನಾಗರೀಕರ ವಿಶ್ರಾಂತಿ ಗೃಹ, ಚಿತ್ರದುರ್ಗದ ಶ್ರೀ ಸದ್ಗುರು ಕಬೀರಾನಂದಸ್ವಾಮಿ ವೃದ್ಧಾಶ್ರಮ, ಹಿರಿಯೂರು ತಾಲ್ಲೂಕು ಧರ್ಮಪುರ ಸ್ವಾಭಿಮಾನ್ ಎಜುಕೇಷನ್ ಟ್ರಸ್ಟ್, ಚಿತ್ರದುರ್ಗದ ಡೇಟ್ ಚಾರಿಟೇಬಲ್ ಸೊಸೈಟಿ, ಹೊಸದುರ್ಗ, ಭರಮಸಾಗರ, ಬಾಬು ಜಗಜೀವನ್ ರಾಂ ಹಾಸ್ಟೆಲ್, ಚಳ್ಳಕೆರೆ ಪಿಎಂಎಜೆಎವೈ ಆದರ್ಶ ಗ್ರಾಮ ಹರಿಶ್ಚಂದ್ರ ನಾಯಕನಹಳ್ಳಿ, ಸೇವಾಲಾಲ್ ನಗರ, ಓಬಣ್ಣನಹಳ್ಳಿ, ಕಾಪರಹಳ್ಳಿ, ಹೊಸದುರ್ಗದ ನಾಗನಾಯಕನಕಟ್ಟೆ, ದೇವಿಗೆರೆ, ಅರೇಹಳ್ಳಿ, ಶ್ರೀರಾಮನಗರ, ಪಾಪೇನಹಳ್ಳಿಯ ಪಿಎಂಎಜೆಎವೈ ಯೋಜನೆಗಳನ್ನು ಸಾಮಾಜಿಕ ಪರಿಶೋಧನೆಗೆ ಒಳಪಡಿಸಲಾಗಿದ್ದು, ಧನಾತ್ಮಕ, ಋಣಾತ್ಮಕ ಅಂಶಗಳು ಹಾಗೂ ನೀಡಲಾದ ಸಲಹೆಗಳ ಕುರಿತು ಸಾಮಾಜಿಕ ಪರಿಶೋಧನೆ ಕಾರ್ಯಕ್ರಮ ಜಿಲ್ಲಾ ವ್ಯವಸ್ಥಾಪಕ ಡಾ.ನಾಗರಾಜ್ ಮಾಹಿತಿ ನೀಡಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಸ್.ಜೆ.ಸೋಮಶೇಖರ್, ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಜಗದೀಶ್ ಹೆಬ್ಬಳ್ಳಿ, ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಎಂ.ಆರ್.ಮಂಜುನಾಥ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಅಧಿಕಾರಿ ಪವಿತ್ರ, ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಜೆ.ವೈಶಾಲಿ, ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷೆ ಪಿ.ಶೀಲಾ, ಸದಸ್ಯ ಅನಿಲ್ ಕುಮಾರ್ ಸೇರಿದಂತೆ ಸರ್ಕಾರೇತರ ಸಂಘ ಸಂಸ್ಥೆಗಳ ಪ್ರತಿನಿಧಿಗಳು ಇದ್ದರು.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading