ಚಿತ್ರದುರ್ಗ ಏ.7: ಜಿಲ್ಲೆಯ ಎಚ್‍ಐವಿ/ಏಡ್ಸ್ ಸೋಂಕಿತರನ್ನು ಮುಖ್ಯವಾಹಿನಿಗೆ ತಂದು ಗುಣಮಟ್ಟದ ಚಿಕಿತ್ಸೆ ಮತ್ತು ಸಕಾಲಿಕ ಆರೈಕೆ ಸಿಗುವಂತೆ ನೋಡಿಕೊಳ್ಳಲು ಅಗತ್ಯ ಕ್ರಮವಹಿಸಬೇಕು ಎಂದು ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಅವರು ಅಧಿಕಾರಿಗಳು ಹಾಗೂ ಸ್ವಯಂ ಸೇವಾ ಸಂಸ್ಥೆಗಳ ಪ್ರತಿನಿಧಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಏಡ್ಸ್ ನಿಯಂತ್ರಣ ಮತ್ತು ತಡೆ ಕಾರ್ಯಕ್ರಮದ ಪ್ರಗತಿಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ ಗುರುತಿಸಲಾದ ಎಚ್‍ಐವಿ ಸೋಂಕಿತರಲ್ಲಿ ಇನ್ನೂ ನೂರಾರು ಜನರು ಚಿಕಿತ್ಸೆಗೆ ಒಳಪಡಲು ಹಿಂದೇಟು ಹಾಕುತ್ತಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ, ಸೋಂಕಿತರ ಮನವೊಲಿಸಿ ಅವರನ್ನು ಚಿಕಿತ್ಸೆಯ ಮುಖ್ಯವಾಹಿನಿಗೆ ತರುವಲ್ಲಿ ಎನ್‍ಜಿಒಗಳು ಹೆಚ್ಚಿನ ಶ್ರಮ ವಹಿಸಬೇಕು ಎಂದು ತರಾಟೆಗೆ ತೆಗೆದುಕೊಂಡರು.
ಪ್ರತಿಯೊಬ್ಬ ಸೋಂಕಿತನ ಆರೋಗ್ಯ ಸುಧಾರಣೆಯಾಗಬೇಕು. ಅವರಿಗೆ ಬೇಕಾದ ಸರ್ಕಾರಿ ಸವಲತ್ತುಗಳು ಮತ್ತು ಆರೋಗ್ಯ ಇಲಾಖೆಯ ಸೌಲಭ್ಯಗಳನ್ನು ತಲುಪಿಸಲು ಪ್ರಾಮಾಣಿಕ ಪ್ರಯತ್ನ ಮಾಡಬೇಕು. ಸೋಂಕಿತ ಮಕ್ಕಳು ಮತ್ತು ವ್ಯಕ್ತಿಗಳ ಹಾಜರಾತಿ ಹಾಗೂ ಅವರಿಗೆ ನೀಡಲಾಗುತ್ತಿರುವ ಚಿಕಿತ್ಸೆಯ ಬಗ್ಗೆ ಕಟ್ಟುನಿಟ್ಟಿನ ಪರಾಮರ್ಶೆ ನಡೆಸಬೇಕು. ಯಾವುದೇ ಹಂತದಲ್ಲಿ ಚಿಕಿತ್ಸೆ ಸ್ಥಗಿತವಾಗದಂತೆ ಎಚ್ಚರಿಕೆ ವಹಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಆರೋಗ್ಯ ಇಲಾಖೆ ಮತ್ತು ಜಿಲ್ಲಾಡಳಿತದಿಂದ ಅಗತ್ಯವಿರುವ ಎಲ್ಲಾ ಸಹಕಾರ ಹಾಗೂ ಪರಿಕರಗಳನ್ನು ಒದಗಿಸಲು ನಾವು ಸಿದ್ಧರಿದ್ದೇವೆ. ಆದರೆ, ಗುರುತಿಸಲಾದ ಎಲ್ಲಾ ಸೋಂಕಿತರು ಕಡ್ಡಾಯವಾಗಿ ಚಿಕಿತ್ಸೆ ಪಡೆಯುವಂತೆ ನೋಡಿಕೊಳ್ಳುವ ಜವಾಬ್ದಾರಿಯನ್ನು ಎನ್‍ಜಿಒಗಳು ಸಮರ್ಪಕವಾಗಿ ನಿಭಾಯಿಸಬೇಕು ಎಂದು ತಾಕೀತು ಮಾಡಿದರು.
ಸಮನ್ವಯತೆಯಿಂದ ಏಡ್ಸ್ ಮುಕ್ತ ಸಮಾಜ ನಿರ್ಮಾಣ ಸಾಧ್ಯ: ಎಚ್‍ಐವಿ ಸೋಂಕಿತರ ಬಗ್ಗೆ ಸಮಾಜದಲ್ಲಿರುವ ತಾರತಮ್ಯ ಹೋಗಲಾಡಿಸಿ, ಅವರಿಗೆ ಸರ್ಕಾರಿ ಸೌಲಭ್ಯಗಳನ್ನು ತಲುಪಿಸುವಲ್ಲಿ ಎಲ್ಲಾ ಇಲಾಖೆಗಳು ಸಮನ್ವಯತೆಯಿಂದ ಕೆಲಸ ಮಾಡಬೇಕು ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ತಿಳಿಸಿದರು.
ಎಚ್‍ಐವಿ ಸೋಂಕಿತರನ್ನು ಸಮಾಜದಲ್ಲಿ ಕೆಟ್ಟ ದೃಷ್ಟಿಯಿಂದ ನೋಡಬಾರದು. ಅವರು ಕೂಡ ಗೌರವಯುತವಾಗಿ ಬದುಕುವ ಹಕ್ಕನ್ನು ಹೊಂದಿದ್ದಾರೆ. ಅರಿವಿಲ್ಲದೆ ಸೋಂಕಿಗೆ ಒಳಗಾದವರ ಬಗ್ಗೆ ಅನುಕಂಪಕ್ಕಿಂತ ಹೆಚ್ಚಾಗಿ ಸಮಾನತೆಯ ಭಾವನೆ ಇರಬೇಕು. ಸೋಂಕಿತರಿಗೆ ಸಿಗಬೇಕಾದ ಪಡಿತರ ಚೀಟಿ, ಮಾಶಾಸನ ಸೇರಿದಂತೆ ಸರ್ಕಾರದ ವಿವಿಧ ಸೌಲಭ್ಯಗಳನ್ನು ತಲುಪಿಸಲು ಸಂಬಂಧಪಟ್ಟ ಇಲಾಖೆಗಳು ಮತ್ತು ಎನ್‍ಜಿಒಗಳು ಜಂಟಿಯಾಗಿ ಕೆಲಸ ಮಾಡಬೇಕು.
ಸೋಂಕಿತರನ್ನು ಗುರುತಿಸುವುದು, ಅವರಿಗೆ ಸೂಕ್ತ ಚಿಕಿತ್ಸೆ ನೀಡುವುದು ಮತ್ತು ವೈರಲ್ ಲೋಡ್ ಕಡಿಮೆ ಮಾಡುವ ಮೂಲಕ ಸೋಂಕು ಹರಡದಂತೆ ತಡೆಯುವ ಗುರಿಯನ್ನು ಸಾಧಿಸಬೇಕು. ಇದರಿಂದ ಸೋಂಕಿತರ ಜೀವಿತಾವಧಿಯನ್ನು ಹೆಚ್ಚಿಸಲು ಸಾಧ್ಯವಿದೆ ಎಂದು ತಿಳಿಸಿದ ಅವರು, ಮುಂದಿನ ದಿನಗಳಲ್ಲಿ ಹೊಸದಾಗಿ ಯಾರಿಗೂ ಸೋಂಕು ತಗುಲದಂತೆ ತಡೆಯಲು ಮುನ್ನೆಚ್ಚರಿಕಾ ಕ್ರಮಗಳ ಬಗ್ಗೆ ತಳಮಟ್ಟದಲ್ಲಿ ವ್ಯಾಪಕ ಜಾಗೃತಿ ಮೂಡಿಸಬೇಕು.
ಏಡ್ಸ್ ನಿಯಂತ್ರಣ ಮತ್ತು ತಡೆ ಘಟಕದ ಜಿಲ್ಲಾ ಅಧಿಕಾರಿ ಡಾ.ಸಿ.ಓ.ಸುಧಾ ಮಾತನಾಡಿ, ಎಚ್‍ಐವಿ ಸೋಂಕಿತರನ್ನು ಪತ್ತೆ ಹಚ್ಚುವಲ್ಲಿ ಇಂಡೆಕ್ಸ್ ಟೆಸ್ಟಿಂಗ್ (ಸೋಂಕಿತರ ಸಂಪರ್ಕಿತರ ತಪಾಸಣೆ) ಪ್ರಮುಖ ಪಾತ್ರ ವಹಿಸಲಿದೆ. ನಿಯಮದಂತೆ ಒಬ್ಬ 1:5 ಅನುಪಾತದಂತೆ ಸೋಂಕಿತರಿಂದ ಸಂಪರ್ಕ ಹೊಂದಿರುವ ನಾಲ್ವರನ್ನು ಗುರುತಿಸಿ ತಪಾಸಣೆಗೆ ಒಳಪಡಿಸಬೇಕು. ಆದರೆ ಪ್ರಸ್ತುತ 1:2 ಅನುಪಾತ ಸಾಧಿಸುವುದೇ ದೊಡ್ಡ ಸವಾಲಾಗಿದೆ ಸಭೆಗೆ ಮಾಹಿತಿ ನೀಡಿದರು.
ಜಿಲ್ಲೆಯ ಮೊಳಕಾಲ್ಮುರು ಮತ್ತು ಚಳ್ಳಕೆರೆ ತಾಲ್ಲೂಕುಗಳಲ್ಲಿ ಎಚ್‍ಐವಿ ಹರಡುವಿಕೆ ಮತ್ತು ಚಿಕಿತ್ಸೆಗೆ ಅಸಹಕಾರ ತೋರುತ್ತಿರುವ ಪ್ರಕರಣಗಳು ಹೆಚ್ಚಾಗಿ ಕಂಡುಬರುತ್ತಿವೆ ಎಂದು ತಿಳಿಸಿದ ಅವರು, ಈ ಕುರಿತು ಹೆಚ್ಚಿನ ಜಾಗೃತಿ ಹಾಗೂ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ತಿಳುವಳಿಕೆ ನೀಡಲಾಗುತ್ತಿದೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಎಚ್‍ಐವಿ/ಏಡ್ಸ್ ಕುರಿತು ಜಾಗೃತಿ ಮೂಡಿಸುವ ಕರಪತ್ರಗಳನ್ನು ಬಿಡುಗಡೆಗೊಳಿಸಲಾಯಿತು.
ಕಾರ್ಯಕ್ರಮದಲ್ಲಿ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಜಿ.ಪಿ.ರೇಣುಪ್ರಸಾದ್, ತಾಲ್ಲೂಕು ಆರೋಗ್ಯಾಧಿಕಾರಿಗಳಾದ ಡಾ.ಬಿ.ವಿ.ಗಿರೀಶ್, ಡಾ.ರಾಘವೇಂದ್ರ, ಎಆರ್‍ಟಿ ವೈದ್ಯಾಧಿಕಾರಿ ಡಾ.ರೂಪಶ್ರೀ, ಏಡ್ಸ್ ನಿಯಂತ್ರಣ ಕಾರ್ಯಕ್ರಮದ ಜಿಲ್ಲಾ ಮೇಲ್ವಿಚಾರಕ ವಿ.ಅಶೋಕ, ತಾಂತ್ರಿಕ ತರಬೇತಿ ಅಧಿಕಾರಿ ಶಿವಪ್ರಸಾದ್ ಹಾಗೂ ಸುಚೇತನಾ ನೆಟ್‍ವರ್ಕ್, ಸೌಖ್ಯ ಸಮುದಾಯ ಸಂಸ್ಥೆ, ಅಭಿವೃದ್ಧಿ ಸಾಮಾಜಿಕ ಸೇವಾ ಸಂಸ್ಥೆ ಎನ್‍ಜಿಒ ಪ್ರತಿನಿಧಿಗಳು ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.
About The Author
Discover more from JANADHWANI NEWS
Subscribe to get the latest posts sent to your email.