ಹಿರಿಯೂರು:
ತಾಲ್ಲೂಕಿನ ಜೆ.ಜಿ.ಹಳ್ಳಿ ಹೋಬಳಿಯ ಕೆರೆಗಳಿಗೆ ವಾಣಿವಿಲಾಸ ಸಾಗರ ಜಲಾಶಯದಿಂದ ನೀರು ಹರಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ನೇತೃತ್ವದಲ್ಲಿ ಕಳೆದ ಮೂರು ದಿನಗಳಿಂದ ತಾಲ್ಲೂಕು ಕಛೇರಿ ಮುಂಭಾಗದಲ್ಲಿಅಮರಣಾಂತ ಉಪವಾಸ ಸತ್ಯಾಗ್ರಹ ನಡೆಯುತ್ತಿದ್ದು, ಈ ಸತ್ಯಾಗ್ರಹದಲ್ಲಿ ಇದೀಗ ಅಸ್ವಸ್ಥರಾಗುತ್ತಿರುವ ಸಂಖ್ಯೆ ಹೆಚ್ಚಾಗುತ್ತಿದೆ.
ನಿನ್ನೆ ಸಂಜೆ ವೇಳೆ ಧರಣಿ ನಡೆಸುತಿದ್ದ ಜೆ.ಜಿ. ಗ್ರಾಮದ ಹಿರಿಯ ರೈತ ಮುಖಂಡರಾದ ಸುಮಾರು 70 ವರ್ಷದ ಎಂ.ಆರ್.ಈರಣ್ಣ ಅಸ್ವಸ್ಥರಾಗಿದ್ದರು. ಇಂದು ರೈತ ಸಂಘದ ಅಧ್ಯಕ್ಷರಾದ ಕೆ.ಟಿ.ತಿಪ್ಪೇಸ್ವಾಮಿ ಮತ್ತು ತಿಮ್ಮಣ್ಣ ಅಸ್ವಸ್ಥರಾಗಿದ್ದು ಈ ಮೂಲಕ ಅಸ್ವಸ್ಥರಾದ ರೈತರ ಸಂಖ್ಯೆಯು ಇಂದು ಮೂರು ಜನಕ್ಕೇರಿದೆ. ಅವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಯಿತು.
ರೈತರನ್ನು ಮನವೊಲಿಸಲು ನಿನ್ನೆ ಸ್ಥಳಕ್ಕೆ ವಿಶ್ವೇಶ್ವರಯ್ಯ ಜಲ ನಿಗಮ ವ್ಯವಸ್ಥಾಪಕ ನಿರ್ದೇಶಕರಾದ ಸಣ್ಣಚಿತ್ತಯ್ಯರವರು ಭೇಟಿ ರೈತರ ಮನವೊಲಿಸುವ ಪ್ರಯತ್ನ ಮಾಡಿದರು. ಆದರೆ ರೈತರು ತಮ್ಮ ಪಟ್ಟನ್ನು ಸಡಿಲಿಸದೆ ಸಣ್ಣ ನೀರಾವರಿ ಸಚಿವರಾದ ಎನ್.ಎಸ್. ಭೋಸರಾಜು ಅವರು ಸ್ಥಳಕ್ಕೆ ಆಗಮಿಸಬೇಕೆಂದು ಬಿಗಿ ಪಟ್ಟು ಹಿಡಿದಿದ್ದಾರೆ ಎಂಬುದಾಗಿ ತಿಳಿದು ಬಂದಿದೆ.

About The Author
Discover more from JANADHWANI NEWS
Subscribe to get the latest posts sent to your email.