ತಳಕು ಮಾ.07:
ಮೆದುಳು ಜ್ವರ ಮಾರಕ ರೋಗವಾಗಿದ್ದು, ಇದು 15 ವರ್ಷದೊಳಗಿನ ಮಕ್ಕಳನ್ನು ಹೆಚ್ಚಾಗಿ ಕಾಡುತ್ತದೆ. ಈ ಕುರಿತು ಮುನ್ನೆಚ್ಚರಿಕೆ ಅಗತ್ಯ ಎಂದು ಜಿಲ್ಲಾ ಕೀಟಶಾಸ್ತ್ರಜ್ಞೆ ನಂದಿನಿ ಕಡಿ ಹೇಳಿದರು.
ಚಳ್ಳಕೆರೆ ತಾಲ್ಲೂಕಿನ ಬೇಡರೆಡ್ಡಿಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯ ಬಂಡೆ ತಿಮ್ಮಾಪುರ ಗ್ರಾಮದಲ್ಲಿ ಶುಕ್ರವಾರ ಆರೋಗ್ಯ ಇಲಾಖೆಯ ಮೆದುಳು ಜ್ವರ ಕುರಿತು ಸಾರ್ವಜನಿಕ ಸಮರ್ಥನಾ ಸಭೆಯಲ್ಲಿ ಅವರು ಮಾತನಾಡಿದರು.
ಮೆದುಳು ಜ್ವರದ ವೈರಾಣು ಹೊಂದಿದ ಹಂದಿ ಮತ್ತು ಬೆಳ್ಳಕ್ಕಿಯನ್ನು ಕಚ್ಚಿದ ಕ್ಯೂಲೆಕ್ಸ್ ಜಾತಿ ಸೊಳ್ಳೆಗಳು ಮನುಷ್ಯರಿಗೆ ಕಚ್ಚುವುದರಿಂದ ಈ ರೋಗ ಹರಡುತ್ತದೆ. ಸೆಪ್ಟೆಂಬರ್‍ನಿಂದ ಡಿಸೆಂಬರ್ ಮಾಹೆಯವರೆಗೆ ಈ ರೋಗ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಈ ರೋಗ ತಡೆಗಟ್ಟಲು ಆರೋಗ್ಯ ಇಲಾಖೆ ಹಲವಾರು ಕ್ರಮ ಕೈಗೊಂಡಿದೆ. ಈ ಕುರಿತು ಜನರಲ್ಲಿ ಅರಿವು ಮೂಡಿಸಲು ವಿವಿಧ ಇಲಾಖೆ ಅಧಿಕಾರಿಗಳು ಕೈಜೋಡಿಸಬೇಕು ಎಂದು ಮನವಿ ಮಾಡಿದರು.
ಜ್ವರ, ತಲೆನೋವು, ಕತ್ತಿನ ಬಿಗಿತ, ತಲೆ ಸುತ್ತುವಿಕೆ, ಮೈ ನಡುಕ, ಎಚ್ಚರ ತಪ್ಪುವುದು, ಮೆದುಳು ಜ್ವರದ ಲಕ್ಷಣಗಳಾಗಿದ್ದು, ಖಾಯಿಲೆಯು ಉಲ್ಬಣಗೊಂಡಾಗ ಮೆದುಳು ಊತಗೊಂಡು ಸಾವು ಸಂಭವಿಸಬಹುದು. ಆದ್ದರಿಂದ ಮುನ್ನೆಚ್ಚರಿಕೆ ಕ್ರಮಗಳಾಗಿ ಮಕ್ಕಳಿಗೆ ಮೆದುಳು ಜ್ವರ ವಿರುದ್ಧದ ಲಸಿಕೆ ಕೊಡಿಸುವುದು, ಹಂದಿಗಳನ್ನು ಜನರ ವಾಸಸ್ಥಳದಿಂದ ಕನಿಷ್ಟ ಪಕ್ಷ 3 ಕಿ.ಮೀ ದೂರಕ್ಕೆ ಸ್ಥಳಾಂತರಿಸುವುದು, ಸಂಜೆ ವೇಳೆಯಲ್ಲಿ ಮೈ ತುಂಬಾ ಬಟ್ಟೆ ಧರಿಸಿ ಓಡಾಡುವುದು, ಹಂದಿ ಗೂಡುಗಳಿಗೆ ಸೊಳ್ಳೆ ನಿರೋಧಕ ಜಾಲರಿ ಅಳವಡಿಸುವುದು ಮತ್ತು ಕೀಟ ನಾಶಕ ಸಿಂಪಡಿಸುವುದು, ರೋಗ ಲಕ್ಷಣ ಕಂಡು ಬಂದ ತಕ್ಷಣ ಹತ್ತಿರದ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದು ಸೂಕ್ತ ಚಿಕಿತ್ಸೆ ನೀಡಬೇಕು ಎಂದು ಸಲಹೆ ನೀಡಿದರು.
ಸಭೆಯಲ್ಲಿ ಆರೋಗ್ಯ ನಿರೀಕ್ಷಣಾಧಿಕಾರಿಗಳಾದ ಲೋಕೇಶ್, ಬಸವರಾಜು, ಸಮುದಾಯ ಆರೋಗ್ಯ ಅಧಿಕಾರಿ ನಾಗರಾಜ್, ಗ್ರಾಮ ಪಂಚಾಯಿತಿ ಸದಸ್ಯರಾದ ಬೊಮ್ಮಣ್ಣ, ಪಶು ವೈದ್ಯಕೀಯ ಇಲಾಖೆಯ ಸಿಬ್ಬಂದಿಗಳು, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಇದ್ದರು.


About The Author
Discover more from JANADHWANI NEWS
Subscribe to get the latest posts sent to your email.