ಹಿರಿಯೂರು:
ಭೂಮಿಯ ಮೇಲಿನ ಶೇ.70ರಷ್ಟು ನೀರಿನಲ್ಲಿ ಬಳಕೆಗೆ ಸಿಗುವುದು ಶೇ.2ರಷ್ಟು ಮಾತ್ರ. ನೀರಿನ ಮಿತ ಬಳಕೆಗೆ ಒತ್ತು ನೀಡದೆ ಹೋದರೆ ಆಪತ್ತು ಖಚಿತ ಎಂಬುದಾಗಿ ಜಿಲ್ಲಾ ಕೃಷಿ ತರಬೇತಿ ಕೇಂದ್ರದ ಸಹಾಯಕ ಕೃಷಿ ನಿರ್ದೇಶಕರಾದ ಆರ್.ರಜನಿಕಾಂತ್ ಅವರು ಎಚ್ಚರಿಸಿದರು.
ತಾಲ್ಲೂಕಿನ ಬಬ್ಬೂರುಫಾರಂನ ಜಿಲ್ಲಾ ಕೃಷಿ ತರಬೇತಿ ಕೇಂದ್ರದಲ್ಲಿ ಗುರುವಾರ ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿ ದಾಳಿಂಬೆ, ಬಾಳೆ ಹಾಗೂ ಮಾವು ಬೆಳೆಗಳಲ್ಲಿ ಸೂಕ್ಷ್ಮ ನೀರಾವರಿ ತಾಂತ್ರಿಕತೆಗಳ ಅಳವಡಿಕೆ ಮತ್ತು ನಿರ್ವಹಣೆ ಕುರಿತು ಹಮ್ಮಿಕೊಳ್ಳಲಾಗಿದ್ದ ತರಬೇತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ತುಂತುರು ನೀರಾವರಿ ಮತ್ತು ಹನಿನೀರಾವರಿ ಅಳವಡಿಕೆಯಿಂದ ಕೃಷಿಯಲ್ಲಿ ಶೇ.30-40ರಷ್ಟು ನೀರಿನ ಉಳಿತಾಯ, ಕೂಲಿ, ಸಮಯ, ಉಳಿತಾಯದ ಜೊತೆಗೆ ಕಳೆ ನಿರ್ವಹಣೆ, ರೋಗಗಳ ಹರಡುವಿಕೆ ತಡೆಯುವುದು ಸುಲಭವಾಗುತ್ತದೆ. ರಸಗೊಬ್ಬರದ ಸಮರ್ಪಕ ಬಳಕೆಯಿಂದ ಕೃಷಿ ಖರ್ಚು ಕಡಿಮೆಯಾಗಿ ಶೇ.20-30ರಷ್ಟು ಇಳುವರಿ ಹೆಚ್ಚು ಪಡೆಯಬಹುದು .ಎಂದರಲ್ಲದೆ,
ಮಳೆಯಾಶ್ರಿತ ಪ್ರದೇಶದಲ್ಲಿ ರೈತರು ಮಳೆಯ ನೀರನ್ನು ಕಂದಕ, ಬದು, ಕೃಷಿ ಹೊಂಡಗಳನ್ನು ನಿರ್ಮಿಸಿಕೊಳ್ಳುವ ಮೂಲಕ ಹಿಡಿದಿಡುವ ಪ್ರಯತ್ನ ಮಾಡಬೇಕು. ಕೃಷಿ ಇಲಾಖೆಯಲ್ಲಿ ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿ ಎಲ್ಲಾ ವರ್ಗದ ರೈತರಿಗೆ ಶೇ.90ರಷ್ಟು ಸಹಾಯಧನದಲ್ಲಿ ದೊರೆಯುವ ಸ್ಪಿಂಕ್ಲರ್ ಸೆಟ್ ಗಳನ್ನು ಪಡೆದುಕೊಳ್ಳಬೇಕು ಎಂಬುದಾಗಿ ಅವರು ಸಲಹೆ ನೀಡಿದರು.
ದಾಳಿಂಬೆ ಬೆಳೆಯಲ್ಲಿ ಅನುಸರಿಸಬೇಕಾದ ಸುಧಾರಿತ ಬೇಸಾಯ ಕ್ರಮಗಳ ಬಗ್ಗೆ ಬಬ್ಬೂರಿನ ತೋಟಗಾರಿಕೆ ಕಾಲೇಜಿನ ಸಹಾಯಕ ಪ್ರಾಧ್ಯಪಕ ಶ್ರೀಧರ್ ಮಾಹಿತಿ ನೀಡಿದರು. ಬೆಳೆಯಲ್ಲಿ ಕೀಟ ನಿರ್ವಹಣೆ ಕುರಿತು ತಾರಣಿ ವಿಷಯ ಮಂಡಿಸಿದರು.
ಮುನಿರಾಬಾದ್ ನ ತೋಟಗಾರಿಕೆ ಕಾಲೇಜಿನ ರೋಗ ತಜ್ಞ ರಾಘವೇಂದ್ರಆಚಾರಿ, ದಾಳಿಂಬೆ ಬೆಳೆಯಲ್ಲಿ ಕಾಣಿಸಿಕೊಳ್ಳುವ ರೋಗಗಳ ಬಗ್ಗೆ ಸಮಗ್ರ ಮಾಹಿತಿ ನೀಡಿದರು.ಬೆಂಗಳೂರಿನ ಜೈನ್ ಇರಿಗೇಶನ್ ಕಂಪನಿಯ ಕೆ.ದೇವರಾಜ್ ನೀರಿನ ಸಮರ್ಥ ಬಳಕೆ ಬಗ್ಗೆ ಉಪನ್ಯಾಸ ನೀಡಿದರು.

About The Author
Discover more from JANADHWANI NEWS
Subscribe to get the latest posts sent to your email.