ಚಿತ್ರದುರ್ಗ: ವಿವಿಧ ಗ್ರಾಮ ಪಂಚಾಯಿತಿಗಳಿಗೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಎಸ್. ಆಕಾಶ್ ಅವರು ಬುಧವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಹೊಳಲ್ಕೆರೆ ತಾಲ್ಲೂಕಿನ ಗಂಗಾಸಮುದ್ರ, ರಾಮಗಿರಿ ಗ್ರಾಮ ಪಂಚಾಯಿತಿಗಳು ಹಾಗೂ ಚಿತ್ರದುರ್ಗ ತಾಲ್ಲೂಕಿನ ಅನ್ನೇಹಾಳ್, ಗೊಡಬನಾಳ್ ಗ್ರಾಮ ಪಂಚಾಯಿತಿಗಳಿಗೆ ಭೇಟಿ ನೀಡಿದ ಅವರು, ಬೂದು ನೀರು ನಿರ್ವಹಣೆ ಕಾಮಗಾರಿ, ಅಂಗನವಾಡಿ ಕೇಂದ್ರಗಳು ಹಾಗೂ ಗ್ರಾಮ ಪಂಚಾಯಿತಿ ಗ್ರಂಥಾಲಯಗಳನ್ನು ಪರಿಶೀಲಿಸಿದರು.
ಗಂಗಾಸಮುದ್ರ ಹಾಗೂ ಅನ್ನೇಹಾಳ್ ಅಂಗನವಾಡಿ ಕೇಂದ್ರಗಳಲ್ಲಿ ಮಕ್ಕಳ ದಾಖಲಾತಿ ಪುಸ್ತಕಗಳನ್ನು ಪರಿಶೀಲಿಸಿ, ಮಕ್ಕಳ ಆರೋಗ್ಯ ಸ್ಥಿತಿ ಹಾಗೂ ಪೌಷ್ಟಿಕ ಆಹಾರ ವಿತರಣೆಯ ಕುರಿತು ಮಾಹಿತಿ ಪಡೆದರು. ಅಂಗನವಾಡಿಗಳಲ್ಲಿ ಮಕ್ಕಳಿಗೆ ಸಮರ್ಪಕ ಪೌಷ್ಟಿಕ ಆಹಾರ ಹಾಗೂ ಆರೋಗ್ಯ ಸೇವೆ ಒದಗಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಗ್ರಾಮ ಪಂಚಾಯಿತಿ ಗ್ರಂಥಾಲಯಗಳ ಪುಸ್ತಕಗಳನ್ನು ಸಮರ್ಪಕವಾಗಿ ನಿರ್ವಹಣೆ ಮಾಡುವಂತೆ ಗ್ರಂಥಪಾಲಕರಿಗೆ ನಿರ್ದೇಶನ ನೀಡಿದರು.
ಜಿಲ್ಲಾ ಪಂಚಾಯಿತಿ ವತಿಯಿಂದ ಆರಂಭಿಸಿರುವ ಉಚಿತ ಗ್ರಾಮಫೋನ್ ಸಹಾಯವಾಣಿ–1800-425-1978 ಕುರಿತು ಸಾರ್ವಜನಿಕರಲ್ಲಿ ಹೆಚ್ಚಿನ ಪ್ರಚುರತೆ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಗ್ರಾಮೀಣ ಜನರ ಸಮಸ್ಯೆಗಳಿಗೆ ತ್ವರಿತವಾಗಿ ಸ್ಪಂದಿಸಿ ಪರಿಹಾರ ಒದಗಿಸುವ ಉದ್ದೇಶದಿಂದ ಗ್ರಾಮಫೋನ್ ಜಾರಿಗೊಳಿಸಲಾಗಿದ್ದು, ಗ್ರಾಮೀಣ ಜನರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ತಿಳಿಸಿದರು.
ಉತ್ತಮ ಕಚೇರಿ ನಿರ್ವಹಣೆಗಾಗಿ ಏಳು ಸೂತ್ರಗಳ ಭಿತ್ತಿಚಿತ್ರಗಳನ್ನು ಸೂಚನಾ ಫಲಕದಲ್ಲಿ ಅಳವಡಿಸುವಂತೆ ಗ್ರಾಮ ಪಂಚಾಯಿತಿಗಳಿಗೆ ಸೂಚನೆ ನೀಡಿದರು.
ಇದಲ್ಲದೆ, ಹೊಳಲ್ಕೆರೆ ತಾಲ್ಲೂಕಿನ ಗಂಗಾಸಮುದ್ರ, ತಾಳಿಗಟ್ಟ ಹಾಗೂ ಚಿತ್ರದುರ್ಗ ತಾಲ್ಲೂಕಿನ ಅನ್ನೇಹಾಳ್, ಮಹದೇವನಕಟ್ಟೆ, ಗೊಡಬನಾಳ್ ಗ್ರಾಮಗಳಲ್ಲಿ ಬೂದು ನೀರು ನಿರ್ವಹಣೆ ಕಾಮಗಾರಿಗಳನ್ನು ವೀಕ್ಷಿಸಿದರು.

ಚರಂಡಿಯಲ್ಲಿ ಸಂಸ್ಕರಿಸುವ ಇನ್‍ಲೈನ್ ಟ್ರಿಟ್‍ಮೆಂಟ್ ವಿಧಾನ ಕಾಮಗಾರಿಗಳ ಪ್ರಗತಿ ಪರಿಶೀಲಿಸಿ, ಸ್ವಚ್ಛ ಸಂಕೀರ್ಣ ಘಟಕಗಳಲ್ಲಿ ಘನತ್ಯಾಜ್ಯ ನಿರ್ವಹಣೆ ಕಾರ್ಯಾಚರಣೆ ಕುರಿತು ಗ್ರಾಮ ಪಂಚಾಯಿತಿ ಅಧಿಕಾರಿಗಳಿಂದ ಮಾಹಿತಿ ಪಡೆದರು.
ಈ ಸಂದರ್ಭದಲ್ಲಿ ಗ್ರಾಮೀಣ ಕುಡಿಯುವ ನೀರು ಕಾರ್ಯಪಾಲಕ ಅಭಿಯಂತರ ಅಮರನಾಥ್ ಜೈನ್, ಸಹಾಯಕ ಕಾರ್ಯಪಾಲಕ ಅಭಿಯಂತರರಾದ ಶಿವಮೂರ್ತಿ, ವಾಸುದೇವ್, ಕಿರಿಯ ಅಭಿಯಂತರರಾದ ಜಗದೀಶ್, ರಾಕೇಶ್, ಹೊಳಲ್ಕೆರೆ ತಾಲ್ಲೂಕು ಪಂಚಾಯಿತಿ ಇಒ ಶಿವಪ್ರಕಾಶ್, ಜಿಲ್ಲಾ ಐಇಸಿ ಸಮಾಲೋಚಕ ಬಿ.ಸಿ. ನಾಗರಾಜ್, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ಗ್ರಾಮ ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಸಿಬ್ಬಂದಿ ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.



About The Author
Discover more from JANADHWANI NEWS
Subscribe to get the latest posts sent to your email.