ಚಿತ್ರದುರ್ಗ ಜ.07:
ರಾಜ್ಯದ ವಿವಿಧ ಜಿಲ್ಲೆಗಳ ವ್ಯಾಪ್ತಿಯಲ್ಲಿ ಹಂಚಿಕೆಯಾಗದ ಮತ್ತು ಸ್ಥಗಿತಗೊಂಡಿರುವ 569 ಮದ್ಯದಂಗಡಿ ಸನ್ನದುಗಳ ಹರಾಜು ಪ್ರಕ್ರಿಯೆಗೆ ಚಾಲನೆ ದೊರೆತಿದ್ದು, ಈ ಸನ್ನದುಗಳನ್ನು ಪಾರದರ್ಶಕ ಇ-ಹರಾಜು ಮೂಲಕ ಹಂಚಿಕೆ ಮಾಡಲಾಗುತ್ತದೆ. ಇದೇ ಜ.13 ರಿಂದ 20 ರವರೆಗೆ ಹರಾಜು ಪ್ರಕ್ರಿಯೆ ಆನ್‍ಲೈನ್‍ನಲ್ಲಿ ನಡೆಯುವುದರಿಂದ ಕುಳಿತಲ್ಲೇ ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸಲು ಅವಕಾಶವಿದೆ ಎಂದು ಹೊಸಪೇಟೆ ವಿಭಾಗದ ಅಬಕಾರಿ ಜಂಟಿ ಆಯುಕ್ತ ಬಿ.ಮಾದೇಶ್ ಹೇಳಿದರು.
ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಬುಧವಾರ ಅಬಕಾರಿ ಇಲಾಖೆ ವತಿಯಿಂದ ಅಬಕಾರಿ ಸನ್ನದುಗಳ ಇ-ಹರಾಜು ಪ್ರಕ್ರಿಯೆ ಕುರಿತು ಸಾರ್ವಜನಿಕರಿಗೆ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ಸ್ಥಗಿತಗೊಂಡಿರುವ ಅಬಕಾರಿ ಸನ್ನದುಗಳನ್ನು ಕಾರ್ಯಾರಂಭ ಮಾಡಲು ಇ-ಹರಾಜು ಪ್ರಕ್ರಿಯೆಗೆ ಕ್ರಮ ಕೈಗೊಂಡಿದ್ದು, ಹೊಸದಾಗಿ ಮೀಸಲಾತಿಯನ್ನೂ ಕಲ್ಪಿಸಿದೆ. ಇ-ಹರಾಜು ಪ್ರಕ್ರಿಯೆನ್ನು ಭಾರತ ಸರ್ಕಾರದ ಎಂಎಸ್‍ಟಿಸಿ ಲಿಮಿಟೆಡ್‍ನ ಇ-ಪೋರ್ಟಲ್‍ನಲ್ಲಿ ನಡೆಸಲಾಗುತ್ತದೆ. ಹರಾಜಿನಲ್ಲಿ ಭಾಗವಹಿಸಲು ಬಯಸುವವರು ಎಂಎಸ್‍ಟಿಸಿ ಪೋರ್ಟಲ್‍ನಲ್ಲಿ ನೋಂದಾಯಿಸಿಕೊಳ್ಳಬೇಕು. ಪ್ರತಿ ನೋಂದಣಿಗೆ ರೂ. 1,000 ಶುಲ್ಕ ನಿಗಧಿಪಡಿಸಲಾಗಿದೆ ಎಂದು ಹೇಳಿದರು.
ಚಿತ್ರದುರ್ಗ ಜಿಲ್ಲೆಯಲ್ಲಿ ಇದೇ ಜ.19ರಂದು ಬೆಳಿಗ್ಗೆ 10 ರಿಂದ 12 ರವರೆಗೆ ಅಬಕಾರಿ ಸನ್ನದುಗಳ ಹರಾಜು ಪ್ರಕ್ರಿಯೆ ನಡೆಯಲಿದೆ. ಹರಾಜು ಪ್ರಕ್ರಿಯೆಯು ಆನ್‍ಲೈನ್‍ನಲ್ಲಿ ನಡೆಯುವುದರಿಂದ ಕುಳಿತಲ್ಲಿಯೇ ರಾಜ್ಯದ ಯಾವುದೇ ಜಿಲ್ಲೆಯ ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸುವ ಅವಕಾಶ ಕಲ್ಪಿಸಲಾಗಿದೆ ಎಂದು ಹೇಳಿದರು.
ಚಿತ್ರದುರ್ಗ ಜಿಲ್ಲೆಯಲ್ಲಿ 12 ಸಿಎಲ್-2ಎ (ಚಿಲ್ಲರೆ ಮದ್ಯ ಮಾರಾಟ) ಅಬಕಾರಿ ಸನ್ನದಗಳು ಹರಾಜು ಪ್ರಕ್ರಿಯೆ ಲಭ್ಯವಿದ್ದು, ಚಿತ್ರದುರ್ಗ ತಾಲ್ಲೂಕು-2, ಹೊಳಲ್ಕೆರೆ-2, ಹೊಳಲ್ಕೆರೆ-2, ಚಳ್ಳಕೆರೆ-2, ಹಿರಿಯೂರು-2, ಮೊಳಕಾಲ್ಮುರು ತಾಲ್ಲೂಕು-2 ಸೇರಿದಂತೆ ಜಿಲ್ಲೆಯಲ್ಲಿ ಒಟ್ಟು 12 ಅಬಕಾರಿ ಸನ್ನದುಗಳು ಲಭ್ಯವಿದೆ ಎಂದು ಹೇಳಿದರು.
ಅರ್ಜಿಗೆ ರೂ.50,000 ಶುಲ್ಕ: ಒಂದು ನೋಂದಣಿ ಅಡಿಯಲ್ಲಿ ಹಲವು ಸನ್ನದುಗಳಿಗೆ ಅರ್ಜಿ ಸಲ್ಲಿಸಬಹುದು. ಆದರೆ ಪ್ರತಿ ಅರ್ಜಿಗೆ ರೂ.50,000 ಶುಲ್ಕವನ್ನು ಪ್ರತ್ಯೇಕವಾಗಿ ಪಾವತಿ ಮಾಡಬೇಕು. ಅರ್ಜಿ ಶುಲ್ಕವನ್ನು ವಾಪಸ್ ಮಾಡಲಾಗುವುದಿಲ್ಲ. ಜತೆಗೆ ಪ್ರತಿ ಸನ್ನದಿಗೆ ಸಲ್ಲಿಸುವ ಅರ್ಜಿಯ ಜತೆಗೆ ಸನ್ನದಿನ ಮೂಲ ಬೆಲೆಯ ಶೇ.2ರಷ್ಟು ಇಎಂಡಿ ಮೊತ್ತ ಭರಿಸಬೇಕಾಗುತ್ತದೆ ಎಂದು ತಿಳಿಸಿದರು.
ಅಬಕಾರಿ ಉಪ ಆಯುಕ್ತೆ ಡಾ.ಆಶಾಲತಾ ಮಾತನಾಡಿ, ಹೆಚ್ಚುವರಿ ರಾಜಸ್ವ ಸಂಗ್ರಹಣೆ ಹಾಗೂ ಇ-ಹರಾಜು ಪಾರದರ್ಶಕವಾಗಿ ನಡೆಸುವ ಉದ್ದೇಶದಿಂದ ಸಾರ್ವಜನಿಕರಿಗೆ ಅವಕಾಶ ನೀಡಲು ಇ-ಹರಾಜು ಪ್ರಕ್ರಿಯೆಯನ್ನು ರಾಜ್ಯ ಸರ್ಕಾರ ಜಾರಿಗೆ ಮಾಡಿದೆ. ಎರಡು ತರಹದ ಲೈಸೆನ್ಸ್‍ಗಳನ್ನು ನೀಡುತ್ತಿದ್ದು, ಸಿಎಲ್-2ಎ (ಚಿಲ್ಲರೆ ಮದ್ಯ ಮಾರಾಟ) ಮತ್ತು ಸಿಎಲ್-9ಎ (ರಿಫ್ರೆಶ್‍ಮೆಂಟ್ ರೂಮ್ (ಬಾರ್) ಎಂಬ ಸನ್ನದುಗಳಿವೆ. ಚಿತ್ರದುರ್ಗ ಜಿಲ್ಲೆಯಲ್ಲಿ ಪ್ರಸ್ತುತ ಸಿಎಲ್-2ಎ 12 ಸನ್ನದುಗಳ ಮಾತ್ರ ಹರಾಜಿಗೆ ಅವಕಾಶವಿದೆ ಎಂದು ಹೇಳಿದರು.
ತರಬೇತಿ ಕಾರ್ಯಕ್ರಮದಲ್ಲಿ ತಾಂತ್ರಿಕ ವಿಷಯಗಳ ಎಂಎಸ್‍ಟಿಸಿ ತಂಡದ ಸತೀಶ್ ಕುಮಾರ್ ಹಾಗೂ ರವಿಕುಮಾರ್ ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಅಬಕಾರಿ ಉಪಾಧೀಕ್ಷಕರಾದ ಸುರೇಂದ್ರಚಾರ್, ರಾಜೇಂದ್ರ ಹೂಗಾರ್, ಅಬಕಾರಿ ಅಧೀಕ್ಷಕ ಡಿ.ಜಿ.ಕಿರಣ್ ಸೇರಿದಂತೆ ಅಬಕಾರಿ ಇಲಾಖೆ ಅಧಿಕಾರಿಗಳು, ಸಾರ್ವಜನಿಕರು ಇದ್ದರು.
===========
About The Author
Discover more from JANADHWANI NEWS
Subscribe to get the latest posts sent to your email.