December 14, 2025
1765012032893.jpg

ಹಿರಿಯೂರು ಡಿ.05:
ಹಿರಿಯೂರು ತಾಲ್ಲೂಕಿನಲ್ಲಿ ಹಾದು ಹೋಗಿರುವ ರಾಷ್ಟ್ರೀಯ ರಾಷ್ಟ್ರೀಯ ಹೆದ್ದಾರಿ 150-ಎ ಕಾಮಗಾರಿಯು ಬಹುತೇಕ ಪೂರ್ಣಗೊಂಡಿದೆ. ಕಳೆದ ಒಂದು ವರ್ಷದಿಂದ ವಾಹನಗಳ ಓಡಾಟ ಪ್ರಾರಂಭವಾಗಿರುತ್ತದೆ. ಆದರೆ ಹಿರಿಯೂರು ತಾಲ್ಲೂಕಿನ ಯರಬಳ್ಳಿ ಗ್ರಾಮದ ಬಳಿ ಹೆದ್ದಾರಿ ಕಾಮಗಾರಿ ನಿಧಾನಗತಿಯಲ್ಲಿ ನಡೆಯುತ್ತಿರುವುದರಿಂದ ಈ ಗ್ರಾಮಗಳ ಜನರು ರಸ್ತೆ ದಾಟುವಾಗ ಅಪಘಾತಗಳು ಹೆಚ್ಚಾಗುತ್ತಿವೆ. ತ್ವರಿತವಾಗಿ ರಾಷ್ಟ್ರೀಯ ಹೆದ್ದಾರಿ ಸೇತುವೆ ಕಾಮಗಾರಿ ಪೂರ್ಣಗೊಳಿಸುವಂತೆ ಎಂದು ಯೋಜನೆ ಮತ್ತು ಸಾಂಖ್ಯಿಕ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಬೆಂಗಳೂರಿನ ವಿಕಾಸಸೌಧದಲ್ಲಿ ಕಚೇರಿಯಲ್ಲಿ ಗುರುವಾರ ಜರುಗಿದ ಹಿರಿಯೂರು ಮತ್ತು ಚಳ್ಳಕೆರೆ ತಾಲ್ಲೂಕುಗಳಲ್ಲಿ ಹಾದುಹೋಗಿರುವ ಬೀದರ್-ಶ್ರೀರಂಗಪಟ್ಟಣ ರಾಷ್ಟ್ರೀಯ ಹೆದ್ದಾರಿ 150-ಎ ಕಾಮಗಾರಿಗೆ ಸಂಬಂಧಿಸಿದಂತೆ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಹಿರಿಯೂರು ನಗರದ ಬೈಪಾಸ್‍ನಲ್ಲಿ ರಾ.ಹೆ.48 ರಲ್ಲಿ ಈ ಹೊಸ ರಾ.ಹೆ.150-ಎ ಹಾದು ಹೋಗಿದ್ದು, ಹುಳಿಯಾರು ಕಡೆಯಿಂದ ಬರುವ ವಾಹನಳಿಗೆ ರಾ.ಹೆ.48 ರಲ್ಲಿ ಬೆಂಗಳೂರು ಕಡೆಗೆ ಹೋಗಲು ಮಾರ್ಗವೇ ಗೊತ್ತಾಗದೇ ಅನೇಕ ಬಾರಿ ದಾರಿ ತಪ್ಪುತ್ತಿರುವ ಬಗ್ಗೆ ದೂರುಗಳು ಕೇಳಿ ಬರುತ್ತಿವೆ. ಚಳ್ಳಕೆರೆ ಕಡೆಯಿಂದ ಬೆಂಗಳೂರಿಗೆ ರಾ.ಹೆ.48 ಕ್ಕೆ ಸೇರಲು ಸರ್ವೀಸ್ ರಸ್ತೆಯು ಸಹ ಬಹಳ ಚಿಕ್ಕದಾಗಿದ್ದು, ವಾಹನ ದಟ್ಟಣೆ ಉಂಟಾಗುತ್ತದೆ. ಬೆಂಗಳೂರು ಕಡೆಯಿಂದ ರಾ.ಹೆ.48 ರಿಂದ ಚಳ್ಳಕೆರೆ ರಾ.ಹೆ.150-ಎ ಗೆ ಸೇರಲು ಸರಿಯಾದ ಮಾರ್ಗ ನಿರ್ಮಾಣ ಮಾಡದೇ ಇರುವುದರಿಂದ ವಾಹನ ಸವಾರರಿಗೆ ತುಂಬಾ ತೊಂದರೆಯುಂಟಾಗುತ್ತಿದೆ. ಬೆಂಗಳೂರು ಕಡೆಯಿಂದ ಹಿರಿಯೂರು ನಗರದ ಒಳಗೆ ಹೋಗುವ ರಸ್ತೆಯ ಭಾಗದಲ್ಲಿ ಕಿ.ಮೀ.ಗಟ್ಟಲೇ ಲಾರಿಗಳು ನಿಂತಿರುತ್ತವೆ. ನಗರದ ಒಳಗೆ ಹೋಗುವ ದಾರಿಯೇ ಕಾಣುವುದಿಲ್ಲ, ಅದರಲ್ಲೂ ರಾತ್ರಿ ವೇಳೆ ಅಪಘಾತಗಳು ಸಂಭವಿಸುತ್ತಿದ್ದು ಈ ವರ್ಷದಲ್ಲಿ ಈ ಸ್ಥಳಗಳಲ್ಲಿ 8 ಜನ ಸಾವಿಗೀಡಾಗಿರುತ್ತಾರೆ ಇದಕ್ಕೆಲ್ಲಾ ಹೆದ್ದಾರಿ ಪ್ರಾಧಿಕಾರದ ಅವೈಜ್ಞಾನಿಕ ಹೆದ್ದಾರಿ ನಿರ್ಮಾಣ ಕಾಮಗಾರಿಯೇ ಕಾರಣ ಎಂದು ಸಚಿವ ಡಿ.ಸುಧಾಕರ್ ಅಸಮಾಧಾನ ವ್ಯಕ್ತಪಡಿಸಿದರು.
ಹಿರಿಯೂರು ತಾಲ್ಲೂಕು ಕೆ.ಆರ್.ಹಳ್ಳಿ ಮತ್ತು ಗೊರ್ಲಡಕು ಬಳಿ ಸೇತುವೆ ನಿರ್ಮಾಣ ಕಾಮಗಾರಿ ನಿಧಾನಗತಿಯಲ್ಲಿ ನಡೆಯುತ್ತಿದೆ. ಈ ಭಾಗದಲ್ಲಿ ಎರಡು ಬದಿಯ ಸರ್ವೀಸ್ ರಸ್ತೆಗಳು ತುಂಬಾ ಹಾಳಾಗಿದ್ದು ವಾಹನ ಸಂಚಾರಕ್ಕೆ ತುಂಬಾ ಅಡಚಣೆಯಾಗುತ್ತಿದೆ. ರಾತ್ರಿ ವೇಳೆ ವಾರದ ಕೊನೆಯಲ್ಲಿ ಕಿ.ಮೀ.ಗಟ್ಟಲೇ ಟ್ರಾಫಿಕ್ ಸಮಸ್ಯೆ ಉಂಟಾಗುತ್ತಿದ್ದು ವಾಹನ ಸವಾರರಿಗೆ ತುಂಬಾ ತೊಂದರೆಯಾಗುತ್ತಿದ್ದು ಕೂಡಲೇ ಸದರಿ ಸ್ಥಳಗಳ ಸೇತುವೆ ನಿರ್ಮಾಣ ಕಾಮಗಾರಿ ಚುರುಕುಗೊಳಿಸಿ ತುರ್ತಾಗಿ ಪೂರ್ಣಗೊಳಿಸಲು ಸೂಚಿಸಿದ ಸಚಿವ ಡಿ.ಸುಧಾಕರ್, ಸರ್ವೀಸ್ ರಸ್ತೆಗಳನ್ನು ಮರುಡಾಂಬರೀಕರಣ ಮಾಡಲು ತುರ್ತು ಕ್ರಮ ಕೈಗೊಳ್ಳುವಂತೆ ನಿರ್ದೇಶಿಸಿದರು.
ರಾ.ಹೆ.48 ರ ಗುಯಿಲಾಳು ಟೋಲ್ ಬಳಿ ಇರುವ ಗಿಡ್ಡೋಬನಹಳ್ಳಿ ಗ್ರಾಮದ ಬಳಿ ಹೊಸದಾಗಿ ಅಂಡರ್ ಪಾಸ್ ನಿರ್ಮಾಣ, ಹುಲುಗಲಕುಂಟೆಯಿಂದ ಸೋಮೇರಹಳ್ಳಿಗೆ ಹೋಗುವ ರಾ.ಹೆ.150-ಎ ರಲ್ಲಿ ಹೊಸದಾಗಿ ಅಂಡರ್ ಪಾಸ್ ನಿರ್ಮಾಣ ಮತ್ತು ರಾ.ಹೆ.48ರ ಬಬ್ಬೂರು ಗ್ರಾಮದ ಎ.ಪಿ.ಎಂ.ಸಿ. ಹತ್ತಿರ ಹೊಸದಾಗಿ ಅಂಡರ್ ಪಾಸ್ ನಿರ್ಮಾಣ ಅವಶ್ಯಕತೆಯಿದೆ. ಈ ಕುರಿತು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು, ಜಿಲ್ಲಾಧಿಕಾರಿಗಳು, ಹಾಗೂ ಲೋಕೋಪಯೋಗಿ ಇಲಾಖೆ ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು ಹಾಗೂ ಪ್ರಾದೇಶಿಕ ಆಯುಕ್ತರು ಜಂಟಿಯಾಗಿ ಈ ಸಭೆಯಲ್ಲಿ ಚರ್ಚಿಸಲಾಗಿರುವ ಸ್ಥಳಗಳ ಪರಿಶೀಲನೆ ನಡೆಸಬೇಕು. ಈ ವೇಳೆ ಚಳ್ಳಕೆರೆ ವಿಧಾನಸಭಾ ಕ್ಷೇತ್ರದ ಶಾಸಕರ ಜೊತೆಗೆ ತಾವು ಸ್ವತಃ ಹಾಜರಿರುವುದಾಗಿ ಸಚಿವ ಡಿ.ಸುಧಾಕರ್ ತಿಳಿಸಿದರು.
ಲೋಕೋಪಯೋಗಿ ಇಲಾಖೆ ಸರ್ಕಾರದ ಪ್ರಧಾನ ಕಾರ್ಯದರ್ಶಿ ಹಾಗೂ ಪ್ರಾದೇಶಿಕ ಆಯುಕ್ತ ಆಮ್ಲಾನ್ ಆದಿತ್ಯ ಬಿಸ್ವಾಸ್ ಮಾತನಾಡಿ, ಬೆಂಗಳೂರಿನಿಂದ ಬರುವಾಗ ತಮಗೆ ಬಳ್ಳಾರಿ ಕಡೆಗೆ ಹೋಗಲು ದಾರಿ ಗೊತ್ತಾಗದೇ ಪರದಾಟುವಂತಾಗಿದೆ. ಈ ಸ್ಥಳದಲ್ಲಿ ಹೈವೆಯಲ್ಲಿ ಲಾರಿಗಳಿಂದ ಟ್ರಾಫಿಕ್ ಜಾಮ್ ಉಂಟಾಗುತ್ತದೆ. ರಾ.ಹೆ.48 ಹಾಗೂ 150ಗಳು ಸಂಧಿಸುವ ಸ್ಥಳದಲ್ಲಿ ಎರಡು ಡಯೋಗ್ನಲ್ ಸೆಮಿ ಕ್ಲೋವರ್‍ಗಳನ್ನು ನಿರ್ಮಾಣ ಮಾಡುವ ಅವಶ್ಯಕತೆಯಿದೆ. ಇದಕ್ಕೆ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಯೋಜನಾ ವರದಿ ತಯಾರಿಸುವಂತೆ ಹಾಗೂ ಯೋಜನೆ ಅಗತ್ಯವಿರುವ ಭೂಸ್ವಾಧೀನ ಪ್ರಕ್ರಿಯೆ ಕ್ರಮ ಕೈಗೊಳ್ಳುವಂತೆ ನಿರ್ದೇಶಿಸಿದರು.
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಪ್ರಾದೇಶಿಕ ಅಧಿಕಾರಿ ವಿಲಾಸ್.ಪಿ.ಬ್ರಹ್ಮಾಂಕರ್ ಮಾತನಾಡಿ, ಹಿರಿಯೂರಿನ ರಾ.ಹೆ.150-ಎ ಕಾಮಗಾರಿ ಭೂಸ್ವಾಧೀನ ಸಂಬಂಧ ಪ್ರಕ್ರಿಯೆ ವಿಳಂಬದಿಂದಾಗಿ ತಡವಾಗಿ ಪ್ರಾರಂಭವಾಗಿದೆ. ಸದ್ಯ ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಂಡಿದ್ದು, ಸೇತುವೆ ಕಾಮಗಾರಿ ಪ್ರಗತಿಯಲ್ಲಿದೆ. ಅದರೊಂದಿಗೆ ರಸ್ತೆ ಕಾಮಗಾರಿ ಸಹ ಪ್ರಾರಂಭಗೊಳಸಿ ಶೀಘ್ರದಲ್ಲಿಯೇ ಪೂರ್ಣಗೊಸಿಲಾಗುವುದು. ಈ ಭಾಗದಲ್ಲಿ ನಾಲ್ಕು ಕ್ಲೋವರ್ ನಿರ್ಮಾಣ ಕಾಮಗಾರಿಯ ಅಂದಾಜು ತಯಾರಿಸಿ ಭೂಸ್ವಾಧೀನ ಪ್ರದೇಶಗಳ ಪ್ರಾಥಮಿಕ ಅಧಿಸೂಚನೆ ಹೊರಡಿಸಲಾಗಿದೆ. ಸದ್ಯ ಎರಡು ಡಯೋಗ್ನಲ್ ಸೆಮಿ ಕ್ಲೋವರ್‍ಗಳನ್ನು ನಿರ್ಮಾಣ ಮಾಡಲು ಪರಿಷ್ಕøತ ಅಂದಾಜು ಮತ್ತು ಪರಿಷ್ಕøತ ಭೂಸ್ವಾಧೀನ ಪ್ರಕ್ರಿಯೆ ಮಾಡಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು. ಸರ್ವಿಸ್ ರಸ್ತೆ ಮರುಡಾಂಬರೀಕರಣ ಮಾಡಲು ಅನುಮೋದನೆ ದೊರಕಿದ್ದು ಕೂಡಲೇ ಕಾಮಗಾರಿ ಪ್ರಾರಂಭಿಸಲಾಗುವುದು. ಕೆ.ಆರ್.ಹಳ್ಳಿ ಮತ್ತು ಗೊರ್ಲಡಕು ಸೇತುವೆ ಕಾಮಗಾರಿ ಗುತ್ತಿಗೆದಾರರು ಕಾಮಗಾರಿ ಸ್ಥಗಿತಗೊಳಿಸಿದ್ದು, ಸದರಿ ಟೆಂಡರ್ ರದ್ದುಗೊಳಿಸಿ, ಹೊಸ ಗುತ್ತಿಗೆದಾರರಿಗೆ ಕಾಮಗಾರಿ ನಿರ್ವಹಣೆ ಮಾಡಲು ಸೂಚಿಸಲಾಗುವುದು ಎಂದು ಉತ್ತರಿಸಿದರು.
ಲೋಕೋಪಯೋಗಿ ಇಲಾಖೆ ಸರ್ಕಾರದ ಪ್ರಧಾನ ಕಾರ್ಯದರ್ಶಿ ಹಾಗೂ ಪ್ರಾದೇಶಿಕ ಆಯುಕ್ತ ಆಮ್ಲಾನ್ ಆದಿತ್ಯ ಬಿಸ್ವಾಸ್ ಚಳಿಗಾಲದ ಅಧಿವೇಶನದ ಬಳಿಕ ರಾ.ಹೆ.48 ರ ಗುಯಿಲಾಳು ಟೋಲ್ ಬಳಿ ಇರುವ ಗಿಡ್ಡೋಬನಹಳ್ಳಿ ಗ್ರಾಮದ ಬಳಿ, ರಾ.ಹೆ.150-ಎರ ಹುಲುಗಲಕುಂಟೆಯಿಂದ ಸೋಮೇರಹಳ್ಳಿ ಬಳಿ ಹಾಗೂ ಬಬ್ಬೂರು ಗ್ರಾಮದ ಎ.ಪಿ.ಎಂ.ಸಿ. ಹತ್ತಿರ ಹೊಸದಾಗಿ ಅಂಡರ್ ಪಾಸ್ ನಿರ್ಮಾಣದ ಸ್ಥಳ ಪರಿಶೀಲನೆ ನಡೆಸಲು ದಿನಾಂಕ ನಿಗದಿ ಪಡಿಸುವುದಾಗಿ ತಿಳಿಸಿದರು.
ಸಭೆಯಲ್ಲಿ ಚಳ್ಳಕೆರೆ ಶಾಸಕ .ಟಿ.ರಘುಮೂರ್ತಿ, ಜಿಲ್ಲಾಧಿಕಾರಿ ಟಿ.ವೆಂಕಟೇಶ್, ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕ ಶಿರಿಶ್ ಗಂಗಾಧರ್, ಭೂಸ್ವಾಧೀನಾಧಿಕಾರಿ ವೆಂಕಟೇಶ್‍ನಾಯ್ಕ್, ಡಿ.ವೈ.ಎಸ್.ಪಿ ಶಿವಕುಮಾರ್, ಹಿರಿಯೂರು ನಗರಸಭೆ ಪೌರಾಯುಕ್ತ ವಾಸೀಂ ಸೇರಿದಂತೆ ಇತರ ಅಧಿಕಾರಿಗಳು ಹಾಜರಿದ್ದರು.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading