ಹಿರಿಯೂರು :
ತಾಲೂಕಿನಾದ್ಯಂತ ಕೆ ಎಸ್ ಆರ್ ಟಿ ಸಿ ಬಸ್ಸುಗಳ ಸರಿಯಾದ ಸಂಚಾರ ವ್ಯವಸ್ಥೆ ಇಲ್ಲದೆ ಶಾಲಾ ವಿದ್ಯಾರ್ಥಿಗಳು, ವಿದ್ಯಾರ್ಥಿನಿಯರು, ವಯೋವೃದ್ಧರು, ಅನಾರೋಗ್ಯ ಪೀಡಿತರು, ಕೂಲಿ ಕಾರ್ಮಿಕರು, ಸಣ್ಣಪುಟ್ಟ ವ್ಯಾಪಾರಸ್ಥರು, ತಾಲ್ಲೂಕಿನ ನಾಗರೀಕರು ಸಮಯಕ್ಕೆ ಸರಿಯಾಗಿ ಬಸ್ಸುಗಳು ಬಾರದೆ ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ ಎಂಬುದಾಗಿ ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಉಪಾಧ್ಯಕ್ಷರಾದ ಕೆ.ಸಿ.ಹೊರಕೇರಪ್ಪ ಆರೋಪಿಸಿದ್ದಾರೆ.
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಚಿತ್ರದುರ್ಗ ಜಿಲ್ಲಾ ಹಿರಿಯ ವಿಭಾಗೀಯ ನಿಯಂತ್ರಣಧಿಕಾರಿಗಳ ಕಚೇರಿಯಲ್ಲಿ ಹಿರಿಯ ವಿಭಾಗೀಯ ನಿಯಂತ್ರಣ ಅಧಿಕಾರಿಗಳಾದ ಶ್ರೀ ಸಿ.ಇ.ಶ್ರೀನಿವಾಸ್ ಮೂರ್ತಿ ರವರನ್ನು ತಾಲೂಕು ರೈತ ಸಂಘದ ಮುಖಂಡರುಗಳು ಭೇಟಿ ಮಾಡಿ ತಾಲ್ಲೂಕಿನಲ್ಲಿ ಬಸ್ಸುಗಳ ವ್ಯವಸ್ಥೆಯನ್ನು ಸರಿಪಡಿಸವಂತೆ ಮನವಿಪತ್ರ ಸಲ್ಲಿಸಿ, ಅವರು ಮಾತನಾಡಿದರು.
ನಗರದ ಹುಳಿಯಾರು ರಸ್ತೆ, ಹರಿಶ್ಚಂದ್ರ ಘಾಟ್ ಬಳಿ ನೂತನವಾಗಿ ನಿರ್ಮಿಸಿರುವ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಡಿಪೋವನ್ನು ಶೀಘ್ರ ಸಣ್ಣಪುಟ್ಟ ಕಾಮಗಾರಿಗಳನ್ನು ಪೂರೈಸಿ , ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಿಗೂ ಮತ್ತು ತಾಲೂಕಿನ ಗ್ರಾಮಾಂತರ ಪ್ರದೇಶಗಳಿಗೆ ಬಸ್ ಸಂಚಾರ ಪ್ರಾರಂಭಿಸುವಂತೆ ಸಂಬಂಧಪಟ್ಟ ಸಾರಿಗೆ ಸಚಿವರು, ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಸಂಬಂಧಪಟ್ಟ ಮೇಲಾಧಿಕಾರಿಗಳ ಜೊತೆ ಚರ್ಚಿಸಿ ಅತೀ ಜರೂರಾಗಿ ಪ್ರಾರಂಭಿಸಲು ಮನವಿ ಮಾಡಲಾಯಿತು.
ಈ ಮನವಿಗೆ ಸ್ಪಂದಿಸಿದ ಜಿಲ್ಲಾ ಹಿರಿಯ ವಿಭಾಗೀಯ ನಿಯಂತ್ರಣ ಅಧಿಕಾರಿಗಳಾದ ಶ್ರೀ ಸಿ. ಇ. ಶ್ರೀನಿವಾಸ ಮೂರ್ತಿರವರು ಮಾತನಾಡಿ, ನೂತನ ಕಚೇರಿಯಲ್ಲಿ ಪೀಠೋಪಕರಣಗಳನ್ನು ಅಳವಡಿಸಲು ಟೆಂಡರ್ ಕರೆದಿದ್ದು, ಇತ್ಯಾದಿ ಸಣ್ಣಪುಟ್ಟ ಕಾಮಗಾರಿ ಪೂರೈಸಿ ಶೀಘ್ರ ಡಿಪೋ ಪ್ರಾರಂಭಿಸುವುದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ಮಧ್ಯ ಕರ್ನಾಟಕ ವಿಭಾಗದ ರಾಜ್ಯ ಉಪಾಧ್ಯಕ್ಷರಾದ ಕೆ.ಸಿ.ಹೊರಕೇರಪ್ಪ , ಹಿರಿಯೂರು ತಾಲೂಕು ಅಧ್ಯಕ್ಷರಾದ ಬಿ.ಓ.ಶಿವಕುಮಾರ್, ಕಾರ್ಯಾಧ್ಯಕ್ಷ ದಸ್ತಗಿರಿ ಸಾಬ್ , ಜಿಲ್ಲಾ ಉಪಾಧ್ಯಕ್ಷರಾದ ಎಂ.ಲಕ್ಷ್ಮೀಕಾಂತ್, ಗೌಸ್ ಪೀರ್, ಚೇತನ್ ಯಳನಾಡು, ಮೇಟಿಕುರ್ಕೆ ತಿಪ್ಪೇಸ್ವಾಮಿ ಇತರರು ಉಪಸ್ಥಿತರಿದ್ದರು.
About The Author
Discover more from JANADHWANI NEWS
Subscribe to get the latest posts sent to your email.