
ಹಿರಿಯೂರು:
ಗ್ರಾಮೀಣ ಸೊಗಡಿನ ಜಾನಪದ ಹಾಡುಗಾರ್ತಿ ಹಾಗೂ ಅಪ್ಪಟ ಗ್ರಾಮೀಣ ಪ್ರತಿಭೆಯಾಗಿ ಜಾನಪದ ಹಾಡುಗಳನ್ನು ಸುಶ್ರಾವ್ಯವಾಗಿ, ಇಂಪಾಗಿ, ಸೊಂಪಾಗಿ ಹಾಡುವ ಮೂಲಕ ಗ್ರಾಮೀಣ ಜನರ ಜನಮೆಚ್ಚಿದ ಜನಪ್ರಿಯ ಕಲಾವಿದೆಯಾದ ವಡ್ಡಗೆರೆಕದರಮ್ಮರವರು 2023-2024ನೇ ವರ್ಷದ ಕರ್ನಾಟಕ ಜಾನಪದ ಅಕಾಡೆಮಿ ಪ್ರಶಸ್ತಿ ಹಾಗೂ ಗೌರವವನ್ನು ಮುಡಿಗೇರಿಸಿಕೊಂಡಿದ್ದಾರೆ.
ಶ್ರೀಮತಿ ವಡ್ಡಗೆರೆಕದರಮ್ಮರವರು ಖ್ಯಾತ ಸಾಹಿತಿ ಹಾಗೂ ಬರಹಗಾರರು, ಸಾಮಾಜಿಕ ಹೋರಾಟಗಾರರು, ಆದಂತಹ ಪ್ರೋ. ವಡ್ಡಗೆರೆ ನಾಗರಾಜಯ್ಯನವರ ತಾಯಿಯವರಾಗಿದ್ದು, ಗ್ರಾಮೀಣ ಪರಿಸರದಲ್ಲೇ ಬೆಳೆದರೂ ಅಲ್ಲಿನ ಕಷ್ಟಕಾರ್ಪಣ್ಯಗಳನ್ನು ಮೈಗೂಡಿಕೊಂಡು ಬದುಕಿಬಾಳಿ ಸಮಾಜಕ್ಕೆ ಪ್ರೋ. ವಡ್ಡಗೆರೆ ನಾಗರಾಜಯ್ಯನವರಂತಹ ಮಹಾನ್ ವ್ಯಕ್ತಿಯಾದ ಮಗನನ್ನು ಕೊಡುಗೆಯಾಗಿ ನೀಡಿದ್ದಾರೆ.
ಅಲ್ಲದೆ ಅಕ್ಷರ ಕಲಿಯದೆಯೂ ಕರ್ನಾಟಕದ ಪ್ರಮುಖ ಎರಡು ವಿಶ್ವವಿದ್ಯಾಲಯಗಳಾದ ಶಿವಮೊಗ್ಗದ ಕುವೆಂಪುವಿಶ್ವವಿದ್ಯಾಲಯ ಮತ್ತು ತುಮಕೂರು ವಿಶ್ವವಿದ್ಯಾಲಯ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ವಡ್ಡಗೆರೆಕದರಮ್ಮ ಹಾಡಿರುವ ವಡ್ಡಗೆರೆ ನಾಗಮ್ಮಮಹಾಸತಿ ಕಾವ್ಯ ಪಠ್ಯ ಪುಸ್ತಕವಾಗಿರುತ್ತದೆ. ಇದೊಂದು ಜೀವಮಾನದ ಮಹತ್ತರ ಸಾಧನೆಯಾಗಿರುತ್ತದೆ.
ಮಾನವ ಕುಲಶಾಸ್ತ್ರೀಯ ಅಧ್ಯಯನಕಾರರು, ಜನಾಂಗೀಯ ಅಧ್ಯಯನಾಕಾರರು, ಸಮುದಾಯದ ಅಧ್ಯಯನಾಕಾರರು, ಸಾಮಾಜಿಕ ಕಾರ್ಯಕರ್ತರು ಮುಂತಾದವರು ವಡ್ಡಗೆರೆಕದರಮ್ಮ ಮತ್ತು ಅವರ ಗೆಳತಿಯರಿಂದ ಜಾನಪದ ಕಾವ್ಯ ಪದಪುರಾಣಗಳನ್ನು ಹಾಡಿಸುವುದು ಹಾಗೂ ಮಾಹಿತಿಗಳನ್ನು ಸಂಗ್ರಹಿಸಿಕೊಳ್ಳುವುದು ಸಾಮಾನ್ಯ ಸಂಗತಿಯಾಗಿದೆ.
ವಡ್ಡಗೆರೆಕದರಮ್ಮ ಅವರು ರಿಯಲ್ ಚಾಲೆಂಜರ್ಸ್ ಟೀಮ್ಗಾಗಿ ಈಶ್ವರ್ ಗುಬ್ಬಿ ನಿರ್ದೇಶಿಸಿ, ಶ್ರೀ ರಾಘವ ನಿರ್ಮಿಸಿರುವ “ಮುಗ್ದ” ಸಾಕ್ಷಾತ್ ಚಿತ್ರದಲ್ಲಿ ಮುಗ್ದ ಯುವಕ ನೊಬ್ಬನ ತಾಯಿಯ ಪಾತ್ರದಲ್ಲಿ ಸಹ ಅಭಿನಯಿಸುವ ಮೂಲಕ ಕನ್ನಡ ಚಲನಚಿತ್ರರಂಗದಲ್ಲೂ ತಮ್ಮನ್ನು ಗುರುತಿಸಿಕೊಂಡಿದ್ದಾರೆ. ಇದು ನಿಜಕ್ಕೂ ಗ್ರಾಮೀಣ ಪ್ರತಿಭೆಗಳಿಗೆ ಹೆಮ್ಮೆಯ ಸಂಗತಿಯಾಗಿದೆ.
ವಡ್ಡಗೆರೆನಾಗಮ್ಮನ ಪದಗಳು, ಗಂಗೆ- ಗೌರಿ ಕಾವ್ಯ, ಬಿಲ್ಲಾಳರಾಯ- ಗೊಲ್ಲಾಳ ರಾಯಣ್ಣ ಪದ, ಬೆಟ್ಟದ ಮದ್ದೆಮ್ಮನ ಪದ, ಗುಣಸಾಗರಿ ಕಾವ್ಯ, ಕರಿಭಂಟನ ಪದ, ಜಾಂಬವರಪದ, ತತ್ವಪದ, ಆಂಜನೇಯ ಪದ, ಚಂದ್ರಮನ ಪದ, ಮಾರತಮ್ಮನ ಪದ, ಕರಿಯಮ್ಮ ಪದಗಳು, ಒಸಗೆಪದ, ಸೋಬಾನೆ, ಸಂಪ್ರದಾಯ ಪದಗಳು, ಸುಗ್ಗಿಪದ, ಲಾಲಿ ಹಾಡುಗಳು ಮುಂತಾದ ಅನೇಕ ಜನಪದ ಹಾಡುಗಳು ಕಲಿಸಿಕೊಡುತ್ತಿದ್ದಾರೆ.
ಶ್ರೀಮತಿ ವಡ್ಡಗೆರೆಕದರಮ್ಮನವರಿಗೆ ಈಗಾಗಲೇ 2015ರಲ್ಲಿ ಜಾನಪದ ಲೋಕೋತ್ಸವ ಪ್ರಶಸ್ತಿ, 2018ರಲ್ಲಿ ಜನಪದ ತಜ್ಞ-ನಾಡೋಜ ಎಚ್.ಎಲ್. ನಾಗೇಗೌಡ ಜನ್ಮ ಶತಮಾನೋತ್ಸವ ಜನಪದ ಲೋಕ ಪ್ರಶಸ್ತಿ, 2015ರಲ್ಲಿ ಅಂತರಾಷ್ಟ್ರೀಯ ಮಹಿಳಾ ಪ್ರಶಸ್ತಿ, ತುಮಕೂರು ವಿಶ್ವವಿದ್ಯಾಲಯದಿಂದ 2017ರಲ್ಲಿ ವೀಚಿ ಸಾಹಿತ್ಯ ಪ್ರಶಸ್ತಿ2018ರಲ್ಲಿ ಬೆಂಗಳೂರು ಸೃಷ್ಟಿಕಲಾಮಂದಿರದ ಸೃಷ್ಟಿಕಲಾ ಗೌರವ ಪುರಸ್ಕಾರ, 2021ರಲ್ಲಿ ಭೀಮ ಪುತ್ರಿ ಬ್ರಿಗೇಡ್ ಅಕ್ಷರದವ್ವ ಸಾವಿತ್ರಿಬಾಫುಲೇ ಪ್ರಶಸ್ತಿ , 2023ರಲ್ಲಿ ಕನ್ನಡ ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿನ ತಾಯಮ್ಮ ಎಸ್. ಸಿ. ಮಲ್ಲಯ್ಯ ಜನಪದ ದತ್ತಿ ಪ್ರಶಸ್ತಿ, 2024ನೇ ಸಾಲಿನಲ್ಲಿ ತುಮಕೂರು ಜಿಲ್ಲೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ,ಇನ್ನೂ ಹಲವಾರು ಪ್ರಶಸ್ತಿ- ಗೌರವಗಳನ್ನು ಪಡೆದಿದ್ದಾರೆ.
About The Author
Discover more from JANADHWANI NEWS
Subscribe to get the latest posts sent to your email.