ಹಿರಿಯೂರು:
ತಾಲ್ಲೂಕಿನಲ್ಲಿ ಎರಡು ತಿಂಗಳಿಂದ ಮಳೆ ಬಾರದೇ ಇರುವುದರಿಂದ ವಾಣಿವಿಲಾಸ ಅಚ್ಚುಕಟ್ಟು ಪ್ರದೇಶದಲ್ಲಿ ಅಡಿಕೆ, ದಾಳಿಂಬೆ, ಮಾವು, ತೆಂಗು, ಬಾಳೆ, ಹತ್ತಿ, ರಾಗಿ ಮುಂತಾದ ತರಕಾರಿ ಬೆಳೆಗಳಿಗೆ ನೀರಿಲ್ಲದೆ ಒಣಗುತ್ತಿದ್ದು, ಈ ಕೂಡಲೇ ವಾಣಿವಿಲಾಸ ಜಲಾಶಯದಿಂದ ಅಚ್ಚುಕಟ್ಟು ಪ್ರದೇಶಕ್ಕೆ ನೀರು ಹರಿಸಬೇಕು ಎಂಬುದಾಗಿ ರೈತ ಸಂಘದ ಜಿಲ್ಲಾಧ್ಯಕ್ಷರಾದ ಕೆ.ಟಿ.ತಿಪ್ಪೇಸ್ವಾಮಿ ಒತ್ತಾಯಿಸಿದರು.
ನಗರದ ಸಹಾಯಕ ಕಾರ್ಯಪಾಲಕ ಅಭಿಯಂತರರ ಕಚೇರಿ ಆವರಣದಲ್ಲಿ ವಾಣಿವಿಲಾಸ ಜಲಾಶಯದಿಂದ ಅಚ್ಚುಕಟ್ಟು ಪ್ರದೇಶಕ್ಕೆ ನೀರು ಹರಿಸಬೇಕೆಂದು ಒತ್ತಾಯಿಸಿ ಭದ್ರಾ ಮೇಲ್ದಂಡೆ ಉಪವಿಭಾಗದ ಸಹಾಯಕ ಕಾರ್ಯಪಲಕ ಅಭಿಯಂತರ ಮುಖಾಂತರ ಮಾನ್ಯ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ರವರಿಗೆ ಮನವಿಪತ್ರ ಸಲ್ಲಿಸಿ, ನಂತರ ಅವರು ಮಾತನಾಡಿದರು.
ಈಗಾಗಲೇ ವಾಣಿವಿಲಾಸ ಸಾಗರ ಜಲಾಶಯದಲ್ಲಿ ಸುಮಾರು 129 ಅಡಿನೀರು ಸಂಗ್ರಹವಾಗಿದೆ, ಭದ್ರಾ ಜಲಾಶಯದಿಂದ ವಾಣಿವಿಲಾಸ ಜಲಾಶಯಕ್ಕೆ ಜನವರಿ ತಿಂಗಳವರೆಗೂ ನೀರು ಹರಿಸುವ ಅವಕಾಶವಿದ್ದು, ಜಲಾಶಯ ಕೊಡಿ ಬೀಳುವುದಕ್ಕೆ ಇನ್ನೂ ಒಂದು ಅಡಿ ಮಾತ್ರ ಬಾಕಿ ಉಳಿದಿದೆ. ಎಂದರಲ್ಲದೆ,
ಇಂಥ ಸಂದರ್ಭದಲ್ಲಿ ಅಚ್ಚುಕಟ್ಟು ಭಾಗದ ರೈತರಿಗೆ ನೀರು ಹರಿಸಿದರೆ ಬೆಳೆಗಳು ಉಳಿಯುತ್ತವೆ ಮತ್ತು ಧರ್ಮಪುರ ಭಾಗದ ಕೆರೆಗಳಿಗೂ ನೀರು ಹರಿಸಬಹುದು ಮತ್ತು ನದಿಪಾತ್ರದ ಜಾನುವಾರುಗಳಿಗೆ ಕುಡಿಯುವ ನೀರು ಒದಗಿಸುವ ಜೊತೆಗೆ ಅಂತರ್ಜಲ ಅಭಿವೃದ್ಧಿಯಾಗುತ್ತದೆ ಎಂಬುದಾಗಿ ಅವರು ಹೇಳಿದರು.
ವಾಣಿವಿಲಾಸ ಸಾಗರ ಜಲಾಶಯದಲ್ಲಿ ಕೋಡಿ ಹರಿದು ಪೋಲಾಗಿ ಸಮುದ್ರಕ್ಕೆ ಬಿಡುವ ಬದಲು ರೈತರಿಗೆ ಉಪಯೋಗವಾಗುವ ರೀತಿಯಲ್ಲಿ ತುರ್ತಾಗಿ ತಾವುಗಳು ರೈತರ ಜಮೀನುಗಳಿಗೆ ನೀರು ಹಾಯಿಸಲು ವಾಣಿವಿಲಾಸ ಜಲಾಶಯದಿಂದ ತೂಬು ಎತ್ತಬೇಕು ಎಂಬುದಾಗಿ ಅವರು ಮನವಿ ಮಾಡಿದರು.
ಈ ಸಂರ್ಭದಲ್ಲಿ ರೈತಸಂಘದ ತಾಲ್ಲೂಕು ಅಧ್ಯಕ್ಷರಾದ ಆಲೂರು ಸಿದ್ದರಾಮಣ್ಣ, ರೈತಮುಖಂಡರುಗಳಾದ ರಂಗಸ್ವಾಮಿ, ಸಣ್ಣತಿಮ್ಮಣ್ಣ, ವಿರೂಪಾಕ್ಷಪ್ಪ, ಗಿರೀಶ್, ವೆಂಕಟೇಶ್, ರಾಮಣ್ಣ, ತಿಪ್ಪೇಸ್ವಾಮಿ, ಗೌಡಪ್ಪ, ಜಗನ್ನಾಥ್, ಜಯಣ್ಣ, ನಾರಾಯಣಪ್ಪ, ಜಗದೀಶ್, ಶಿವಣ್ಣ, ಕನ್ಯಪ್ಪ, ಈರಣ್ಣ, ಚಂದ್ರಣ್ಣ, ಗೋವಿಂದಪ್ಪ ಸೇರಿದಂತೆ ಅನೇಕ ರೈತಮುಖಂಡರುಗಳು ಉಪಸ್ಥಿತರಿದ್ದರು
About The Author
Discover more from JANADHWANI NEWS
Subscribe to get the latest posts sent to your email.