January 29, 2026
p-thippeswamy-1698753038.webp

ಚಳ್ಳಕೆರೆ ಅ.6. ವಾಲ್ಮೀಕಿ ಜಯಂತಿ ಆಚರಣೆ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದಿಂದ ನೀಡುವ 2025 ರ ರಾಜ್ಯ ಮಟ್ಟದ ವಾಲ್ಮೀಕಿ ಪ್ರಶಸ್ತಿಗೆ ಕೋಟೆನಾಡಜು ಬಯಲು ಸೀಮೆಯ ಚಳ್ಳೆಕೆರೆಯ ಪಿ. ತಿಪ್ಪೇಸ್ವಾಮಿ ಆಯ್ಕೆಯಾಗಿದ್ದಾರೆ. ರಂಗಭೂಮಿ ಕ್ಷೇತ್ರದಲ್ಲಿ ಗುರುತಿಸಿಕೊಂಡಿರುವ ಪಿ. ತಿಪ್ಪೇಸ್ವಾಮಿಗೆ ರಾಜ್ಯೋತ್ಸವ ಪ್ರಶಸ್ತಿ ಹಲವು ಪ್ರಶಸ್ತಿಗಳ ಜತೆಗೆ ವಾಲ್ಮೀಕಿ ಪ್ರಶಸ್ತಿ ಮತ್ತೊಂದು ಮುಡಿಗೇರಿಸಿಕೊಂಡಿದ್ದಾರೆ.

ರಾಜ್ಯ ಸರಕಾರದ 2025 ನೇ ಸಾಲಿನ ರಾಜ್ಯ ಮಟ್ಟದ ಶ್ರೀ ವಾಲ್ಮೀಕಿ ಪ್ರಶಸ್ತಿಗೆ ಪಿ.ತಿಪ್ಪೇಸ್ವಾಮಿ ಆಯ್ಕೆ

ದಿವಂಗತ ವೀರಣ್ಣ-ವೀರಮ್ಮನವರ ಏಕೈಕ ಪುತ್ರನಾಗಿ ಚಳ್ಳಕೆರೆಯಲ್ಲಿ 1946 ರಲ್ಲಿ ಜನಿಸಿದರು. ಬಾಲ್ಯದಿಂದಲೂ ನಾಟಕ-ಸಂಗೀತದತ್ತ ಒಲವು. ಬಿ.ಎ. ಪದವಿಯ ನಂತರ ಬಿ.ಇಡಿ. ಶಿಕ್ಷಣವನ್ನು ಪೂರೈಸಿ ಚಳ್ಳಕೆರೆಯ ಕಾಟಪ್ಪನಹಟ್ಟಿಯಲ್ಲಿನ ಕಾಟಂಲಿಂಗೇಶ್ವರ ಪ್ರೌಢಶಾಲೆಯಲ್ಲಿ ಮುಖ್ಯೋಪಾಧ್ಯಾಯರಾಗಿ 1973 ರಿಂದ 2004 ರವರೆಗೆ ಸೇವೆ ಸಲ್ಲಿಸಿ ನಿವೃತ್ತರಾದರು.ವೃತ್ತಿಯೊಂದಿಗೆ ಸಾಹಿತ್ಯ-ಸಂಗೀತಗಳ ಪ್ರವೃತ್ತಿಯೂ ಬೆಳೆಯಿತು. ನಾಟಕಗಳ ಗೀಳು ಹಾರ್ಮೋನಿಯಂ ಕಲಿಯುವಂತೆ ಮಾಡಿತು. ಅದು ಕ್ಯಾಸಿಯೋ ಕೀಬೋರ್ಡ್‌ ಹಂತದವರೆಗೂ ಬೆಳೆಸಿತು. 1975 ರಲ್ಲಿ ಕಾಟಂಲಿಂಗೇಶ್ವರ ನಾಟಕ ಸಂಘದ ಸ್ಥಾಪನೆ. ಇದು ಜಿಲ್ಲೆಯಾದ್ಯಂತ ನೂರಾರು ನಾಟಕಗಳ ಪ್ರದರ್ಶನ, ನಿರ್ದೇಶನಕ್ಕೆ ಕಾರಣವಾಯಿತು.
ಮರಡಿಹಳ್ಳಿ ಸೀತಾರಾಮರೆಡ್ಡಿ ವಿರಚಿತ ‘ರಾಜಾವೀರ ಮದಕರಿನಾಯಕ’ ನಾಟಕ ಇವರಿಗೆ ಖ್ಯಾತಿಯನ್ನು ತಂದುಕೊಟ್ಟಿದ್ದಲ್ಲದೇ, ನೂರಾರು ಪ್ರಯೋಗಗಳನ್ನು ಕಂಡಿತು. ಇದು ದೆಹಲಿಯಲ್ಲೂ ಪ್ರದರ್ಶನವಾಯಿತು. ತಮ್ಮ ಮ್ಯಾಸಬೇಡ ಬುಡಕಟ್ಟು ಸಮುದಾಯದ ಸಾಂಸ್ಕೃತಿಕ ವೀರರಾದ ಗಾದಿರಿ ಪಾಲನಾಯಕ ಮತ್ತು ಜಗಲೂರು ಪಾಪನಾಯಕ ನಾಟಕ ರಚನೆಗೆ ಅಗತ್ಯವಾದ ಮೂಲದ್ರವ್ಯವನ್ನು ಒದಗಿಸಿ ಕಾಲುವೇಹಳ್ಳಿ ಗಾದಿರಪ್ಪ ಎಂಬುವವರಿಂದ ನಾಟಕಗಳನ್ನು ಬರೆಯಿಸುವಲ್ಲಿ, ಅವುಗಳನ್ನು ರಂಗಭೂಮಿಗೆ ತರುವಲ್ಲಿ, ಬುಡಕಟ್ಟು ಸಮುದಾಯಕ್ಕೆ ಅವರ ಚರಿತ್ರೆಯನ್ನು ತಿಳಿಸುವಲ್ಲಿ ಇವರದು ಪ್ರಮುಖ ಪಾತ್ರ.ಅಲ್ಲದೆ ಇವರು ತಮ್ಮ ಸಂಗೀತ ಮತ್ತು ನಿರ್ದೇಶನದ ಮೂಲಕ ಹವ್ಯಾಸಿ ಗ್ರಾಮೀಣ ರಂಗಭೂಮಿಯನ್ನು ರೂಪಿಸಿದ ಕೀರ್ತಿಗೆ ಭಾಜನರಾಗಿದ್ದಾರೆ. ರಕ್ತರಾತ್ರಿ, ಭಕ್ತಸುಧನ್ವ, ಕುರುಕ್ಷೇತ್ರ, ದೇವಿ ಮಹಾತ್ಮ, ದಾನಶೂರ ಕರ್ಣ, ವೀರಾಭಿಮನ್ಯು ಮುಂತಾದ ಪೌರಾಣಿಕ ನಾಟಕಗಳಲ್ಲದೇ, ಇಪ್ಪತ್ತೈದಕ್ಕೂ ಹೆಚ್ಚು ಸಾಮಾಜಿಕ ನಾಟಕಗಳನ್ನು ನಿರ್ದೇಶಿಸಿ, ಸಂಗೀತ ನೀಡಿದ್ದಾರೆ. ಹಗಲೆಲ್ಲಾ ಶಾಲೆಯಲ್ಲಿ ಶಿಕ್ಷಕ, ರಾತ್ರಿಯೆಲ್ಲಾ ಹಳ್ಳಿಯ ರಂಗಭೂಮಿಗಳಲ್ಲಿ ನಿರ್ದೇಶನ ಪಾತ್ರ, ಮೂರು ದಶಕಗಳಿಗೂ ಹೆಚ್ಚು ಕಾಲ ನಿರ್ವಹಿಸಿದವರು.ಇವರ ಗ್ರಾಮೀಣ ರಂಗಭೂಮಿಯ ಸೇವೆಯನ್ನು ಗುರುತಿಸಿ ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ (2001) ನೀಡಿ ಗೌರವಿಸಿದೆ. ಹಾಗೂ ನಾಟಕ ಆಕಾಡೆಮಿಯ ಸದಸ್ಯತ್ವ (2014) ನೀಡಿ ರಂಗಕಲಾವಿದರ ಸೇವೆ ಮಾಡಲು, ಚಿತ್ರದುರ್ಗ ಜಿಲ್ಲೆಯಾದ್ಯಂತ ರಂಗಚಟುವಟಿಕೆಗಳು ಗರಿಗೆದರಲು ಅವಕಾಶ ಕಲ್ಪಿಸಿತ್ತು.
ಇಳಿವಯಸ್ಸಲ್ಲೂ ಬತ್ತದ ಅವರ ಉತ್ಸಾಹ ಜಾನಪದ ರಂಗಭೂಮಿಯ ಮುಮ್ಮೇಳಗಾರರ (ಭಾಗವತರ) ಸಂಘವನ್ನು ಕಟ್ಟಿ ಅವರಿಗೆ ನ್ಯಾಯಯುತವಾಗಿ ದಕ್ಕಬೇಕಾದ ಮಾಸಾಶನ ಹಾದಿ ಸವಲತ್ತುಗಳನ್ನು ಕೊಡಿಸಲು ಸಂಘಟಿತ ಹೋರಾಟ ನಡೆಸಿದ್ದಾರೆ. ಚಳ್ಳಕೆರೆ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಘಟಕದ ಅಧ್ಯಕ್ಷರಾಗಿ ಎರಡು ಅವಧಿಗೆ (2005-2007, 2008-2010) ಸೇವೆ. ಸಂಚಾಲಕರಗಿ ಜಿಲ್ಲಾ ಜಾನಪದ ಜಾತ್ರೆ (2005-2006), ಕಾಲೇಜು ರಂಗೋತ್ಸವ (2016-2017) ಗಳಲ್ಲಿ ಸೇವೆ.
ಒಟ್ಟಾರೆಯಾಗಿ ಜಾನಪದ ರಂಗ ಚಟುವಟಿಕೆಗಳನ್ನು ಗುರುತಿಸಿ ಜಿಲ್ಲಾ ವಾಲ್ಮೀಕಿ ಪ್ರಶಸ್ತಿ (2015-16), ಯಾದಗಿರಿ ಜಿಲ್ಲೆಯಲ್ಲಿ ನಡೆದ ಜಾನಪದೋತ್ಸವದಲ್ಲಿ ‘ಜಾನಪದ ಕಲಾಲೋಕ ಪ್ರಶಸ್ತಿ’ (2017), ‘ಸಿಜಿಕೆ ನಾಟಕೋತ್ಸವದಲ್ಲಿ ಸಿಜಿಕೆ ಪ್ರಶಸ್ತಿ’ (2018) ಗಳ ಗೌರವ ಸಂದಿವೆ. ಪ್ರಸ್ತುತ ಮಹತ್ವಾಕಾಂಕ್ಷಿಯ ಕ್ಷೇತ್ರಕಾರ್ಯಾಧಾರಿತ ಕೃತಿ ‘ಮ್ಯಾಸ ಬೇಡರ ಮೌಖಿಕ ಕಥನಗಳು’ (2019) ಪ್ರಕಟ. ಈ ಕೃತಿಗೆ 2020 ನೇ ಸಾಲಿನ ಕರ್ನಾಟಕ ಸಾಹಿತ್ಯ ಅಕಾಡೆಮಿಯವರು ಸಂಶೋಧನೆ ಪ್ರಕಾರದಲ್ಲಿ ಅತ್ಯುತ್ತಮ ಕೃತಿಯೆಂದು ಪರಿಗಣಿಸಿ, ಪುಸ್ತಕ ಬಹುಮಾನ ಪ್ರಶಸ್ತಿ ನೀಡಿದೆ.
ರಾಜ್ಯ ಸರಕಾರ 2025 ನೇ ಸಾಲಿನ ರಾಜ್ಯ ಮಟ್ಟದ ವಾಲ್ಮೀಕಿ ಪ್ರಶಸ್ತಿಗೆ ಆಯ್ಕೆ ಮಾಡಿರುವುದು ಪಿ.ತಿಪ್ಪೇಸ್ವಾಮಿಯವರ ಸೇವೆಗೆ ಲಭಿಸಿದ ಪ್ರಶಸ್ತಿ.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading