ಚಿತ್ರದುರ್ಗ ಅ.06:
ಧರ್ತಿ ಆಭಾ ಜನಜಾತೀಯ ಗ್ರಾಮ ಉತ್ಕರ್ಷ ಅಭಿಯಾನ ಯೋಜನೆಯಡಿ ಜಿಲ್ಲೆಯ 87 ಗ್ರಾಮ ಪಂಚಾಯಿತಿಗಳಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲು ಕ್ರಿಯಾ ಯೋಜನೆ ರೂಪಿಸಿ ಅನುಮೋದನೆ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಟಿ.ವೆಂಕಟೇಶ್ ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು ಕೇಂದ್ರ ಸರ್ಕಾರದ ಬುಡಕಟ್ಟು ವ್ಯವಹಾರಗಳ ಮಂತ್ರಾಲಯ ಹಾಗೂ ರಾಜ್ಯ ಸರ್ಕಾರದ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ, ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆ ನಿರ್ದೇಶನದಂತೆ ಜಿಲ್ಲೆಯ 87 ಗ್ರಾಮ ಪಂಚಾಯಿತಿಗಳನ್ನು ಧರ್ತಿ ಆಭಾ ಜನಜಾತಿಯ ಗ್ರಾಮ ಉತ್ಕರ್ಷ ಅಭಿಯಾನ ಯೋಜನೆ ಅನುಷ್ಠಾನಕ್ಕೆ ಆಯ್ಕೆ ಮಾಡಲಾಗಿದೆ. ಈ ಗ್ರಾಮಗಳಲ್ಲಿ ಆದಿ ಕರ್ಮಯೋಗಿ ಅಭಿಯಾನ ರೂಪಿಸಿ, ಅನುಷ್ಠಾನಧಿಕಾರಿ ಹಾಗೂ ಭಾಗಿಧಾರರಿಗೆ ತರಬೇತಿ ನೀಡಲಾಗಿದೆ. 17 ಇಲಾಖೆಗಳು 25 ಅಭಿವೃದ್ಧಿ ಯೋಜನೆಗಳನ್ನು ಅನುಷ್ಠಾನಗೊಳಿಸಲಿವೆ.
ಅಕ್ಟೋಬರ್ 02 ಮಹಾತ್ಮಾ ಗಾಂಧೀಜಿ ಜಯಂತಿಯಂದು ಜರುಗಿದ ವಿಶೇಷ ಗ್ರಾಮ ಸಭೆಗಳಲ್ಲಿ ಕ್ರಿಯಾ ಯೋಜನೆಗಳಲ್ಲಿ ಅನುಮೋದನೆ ನೀಡಲಾಗಿದೆ. 2047 ವರ್ಷದ ವಿಕಸಿತ ಭಾರತ ದೃಷ್ಟಿಕೋನದೊಂದಿಗೆ 2030ರ ವರೆಗಿನ 5 ವರ್ಷಗಳ ಅವಧಿಗೆ ಕ್ರಿಯಾ ಯೋಜನೆಗಳನ್ನು ರೂಪಿಸಲಾಗಿದೆ. ಈ ವಿವರಗಳನ್ನು ಕೇಂದ್ರ ಸರ್ಕಾರದ ಬುಡಕಟ್ಟು ಮಂತ್ರಾಲಯದ ಆದಿ ಪ್ರಸರಣ ಪ್ರೋರ್ಟಲ್‍ನಲ್ಲಿ ಅಪ್ಲೋಡ್ ಮಾಡಿ, ರಾಜ್ಯ ಸರ್ಕಾರದ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಗೆ ಕಳುಹಿಸಿ ಕೊಡಲು ಪಂಚಾಯಿತಿ ಅಭಿವೃದ್ಧಿ ಕ್ರಮ ವಹಿಸಿದ್ದಾರೆ.
ಯೋಜನೆಯಡಿ ಚಳ್ಳಕೆರೆ 21, ಚಿತ್ರದುರ್ಗ 11, ಮೊಳಕಾಲ್ಮೂರು 13, ಹೊಳಲ್ಕೆರೆ 6, ಹಿರಿಯೂರು 3 ಹಾಗೂ ಹೊಸದುರ್ಗ ತಾಲ್ಲೂಕಿನ 1 ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುವ ಮೂಲಕ ಬುಡಕಟ್ಟು ಸಮುದಾಯಗಳನ್ನು ಸಬಲೀಕರಣ ಗೊಳಿಸಲಾಗುವುದು ಎಂದು ಜಿಲ್ಲಾಧಿಕಾರಿ ಟಿ. ವೆಂಕಟೇಶ ತಿಳಿಸಿದ್ದಾರೆ.
About The Author
Discover more from JANADHWANI NEWS
Subscribe to get the latest posts sent to your email.