August 10, 2025
1754494361121.jpg


ಚಿತ್ರದುರ್ಗಆಗಸ್ಟ್06:
ಭಾರತ ಕೃಷಿ ಪ್ರಧಾನವಾದ ದೇಶವಾಗಿದ್ದು, ಭಾರತದಿಂದ ವಿದೇಶಗಳಿಗೆ ವಾರ್ಷಿಕವಾಗಿ 48 ಲಕ್ಷ ಕೋಟಿ ಕೃಷಿ ಉತ್ಪನ್ನಗಳು ಹಾಗೂ 7.5 ಲಕ್ಷ ಕೋಟಿ ಸಂಸ್ಕರಿಸಿದ ಆಹಾರ ಉತ್ಪನ್ನಗಳು ರಫ್ತಾಗುತ್ತಿವೆ ಎಂದು ವಿಧಾನ ಪರಿಷತ್ ಶಾಸಕ ಕೆ.ಎಸ್.ನವೀನ್ ತಿಳಿಸಿದರು.
ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಬುಧವಾರ ಕರ್ನಾಟಕ ರಾಜ್ಯ ಕೃಷಿ ಉತ್ಪನ್ನಗಳ ಸಂಸ್ಕರಣೆ ಹಾಗೂ ರಪ್ತು ನಿಗಮ ನಿಯಮಿತ, ಜಿಲ್ಲಾ ಪಂಚಾಯತ್, ಜಿಲ್ಲಾಡಳಿತ ಹಾಗೂ ಕೃಷಿ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ರಾಷ್ಟ್ರೀಯ ಖಾದ್ಯ ತೈಲ ಅಭಿಯಾನ-ಎಣ್ಣೆಕಾಳು ಯೋಜನೆ ಮೌಲ್ಯ ಸರಪಳಿ ಗುಚ್ಚ, ಮೌಲ್ಯ ಸರಪಳಿ ಪಾಲುದಾರರ ಬಗ್ಗೆ ಹಾಗೂ ಪ್ರಧಾನಮಂತ್ರಿಗಳ ಕಿರು ಆಹಾರ ಸಂಸ್ಕರಣಾ ಉದ್ದಿಮೆಗಳ ನಿಯಮಬದ್ಧಗೊಳಿಸುವಿಕೆ ಯೋಜನೆಯ ಅರಿವು ಮೂಡಿಸುವ ಕಾರ್ಯಕ್ರಮವನ್ನು ಸಿರಿಧಾನ್ಯದಿಂದ ತಯಾರಿಸಿದ ಕೇಕ್ ಕತ್ತರಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
ಕೃಷಿ ಹಾಗೂ ಸಂಸ್ಕರಿಸಿದ ಆಹಾರ ಉತ್ಪನ್ನಗಳ ಮೌಲ್ಯವರ್ಧನೆಯಲ್ಲಿ ಶುದ್ಧತೆ ಬಹಳ ಮುಖ್ಯ ಹಾಗೂ ವಸ್ತುವಿನ ಗುಣಮಟ್ಟದ ವಿಚಾರದಲ್ಲಿ ಯಾವುದೇ ಕಾರಣಕ್ಕೂ ರಾಜಿ ಆಗಬಾರದು. ಮಾರುಕಟ್ಟೆಯ ಬೇಡಿಕೆಗೆ ಅನುಗುಣವಾಗಿ ಪೂರೈಕೆಗೆ ಕ್ರಮವಹಿಸಬೇಕು ಎಂದು ಸಲಹೆ ನೀಡಿದರು.
ಕೃಷಿ ಉತ್ಪನ್ನ ಬ್ರ್ಯಾಂಡಿಂಗ್, ಪ್ಯಾಕೇಜ್ ಬಹಳ ಮುಖ್ಯ ಪಾತ್ರವಹಿಸಲಿದ್ದು, ಬ್ರ್ಯಾಂಡಿಂಗ್ ಉತ್ಪನ್ನಗಳು ಮೌಲ್ಯವನ್ನು ಹೆಚ್ಚಿಸುತ್ತದೆ. ಇದರಿಂದ ರೈತರು ತಮ್ಮ ಉತ್ಪನ್ನಗಳಿಗೆ ಹೆಚ್ಚಿನ ಬೆಲೆ ಹಾಗೂ ಗ್ರಾಹಕರ ನಂಬಿಕೆ, ವಿಶ್ವಾಸವನ್ನು ಹೆಚ್ಚಿಸುತ್ತದೆ. ಗ್ರಾಹಕರು ಅದೇ ಉತ್ಪನ್ನವನ್ನು ಪದೇ ಪದೇ ಖರೀದಿಸಲು ಪ್ರೋತ್ಸಾಹಿಸುತ್ತದೆ ಎಂದು ತಿಳಿಸಿದ ಅವರು, ಉದ್ದಿಮೆಯಲ್ಲಿ ವ್ಯವಹಾರಿಕ ಹಾಗೂ ಆರ್ಥಿಕ ಶಿಸ್ತು ಮೈಗೂಡಿಸಿಕೊಳ್ಳಬೇಕು. ಆಹಾರ ಸಂಸ್ಕರಣಾ ವಿಭಾಗದಲ್ಲಿ ಚಿತ್ರದುರ್ಗ ಜಿಲ್ಲೆಯು ರಾಜ್ಯದಲ್ಲಿಯೇ ಉತ್ತಮ ಹೆಸರುಗಳಿಸುವ ಕಾರ್ಯವಾಗಬೇಕು ಎಂದು ಆಶಯವ್ಯಕ್ತಪಡಿಸಿದರು.
ಆರ್ಥಿಕವಾಗಿ ನಾವೆಲ್ಲರೂ ಸದೃಢರಾಗಬೇಕು. ನಮ್ಮಲ್ಲಿ ಸಿಗುವಂತಹ, ಬೆಳೆಯುವ ವಸ್ತು, ಪದಾರ್ಥಗಳನ್ನು ಮೌಲ್ಯವರ್ಧನೆ ಮಾಡಬೇಕು ಮತ್ತು ಪರಿಷ್ಕರಣೆ ಮಾಡಿರುವ ಪದಾರ್ಥಗಳನ್ನು ಆಹಾರದ ಪದಾರ್ಥಗಳನ್ನು ಗ್ರಾಹಕರು ಖರೀದಿ ಮಾಡುವ ರೀತಿಯಲ್ಲಿ ನಾನಾ ಸ್ವರೂಪ ಕೊಟ್ಟು, ಆರೋಗ್ಯಕರ ಆಹಾರ ಪದಾರ್ಥವನ್ನು ಜನಸಾಮಾನ್ಯರೆಲ್ಲರೂ ಸಹ ಉಪಯೋಗಿಸಬೇಕು ಎಂಬ ಮಹತ್ತರವಾದ ಉದ್ದೇಶದಿಂದ ಆತ್ಮನಿರ್ಭರ ಭಾರತ ಪ್ರಧಾನಮಂತ್ರಿಗಳ ಕಿರು ಆಹಾರ ಸಂಸ್ಕರಣಾ ಉದ್ದಿಮೆಗಳ ನಿಯಮಬದ್ಧಗೊಳಿಸುವಿಕೆ ಯೋಜನೆಯಡಿಯಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರ ಜೊತೆಗೂಡಿ ವಿಶೇಷ ಸೌಲಭ್ಯ ಕಲ್ಪಿಸುವ ಜತೆಗೆ ತರಬೇತಿ, ಹಣಕಾಸಿನ ವ್ಯವಸ್ಥೆ, ಸಹಾಯಧನ ನೀಡುವ ಜತೆಗೆ ಗೃಹಣಿಯಾಗಿದ್ದವರನ್ನೂ ಉದ್ಯಮಿಯನ್ನಾಗಿ ಮಾಡುವ ಮಹತ್ತರವಾದ ಕೆಲಸ ನಡೆಯುತ್ತಿದೆ ಎಂದು ಹೇಳಿದರು.
ಬೃಹತ್ ಸ್ವದೇಶಿ ಮೇಳ:
*ಮುಂಬರುವ ನವೆಂಬರ್ 12 ರಿಂದ 16 ರವರೆಗೆ 5 ದಿನಗಳ ಕಾಲ ಚಿತ್ರದುರ್ಗದಲ್ಲಿ ಬೃಹತ್ ಸ್ವದೇಶಿ ಮೇಳ ನಡೆಯಲಿದೆ ಎಂದು ವಿಧಾನ ಪರಿಷತ್ ಶಾಸಕ ಕೆ.ಎಸ್.ನವೀನ್ ತಿಳಿಸಿದರು.
ಕೇಂದ್ರ ಸರ್ಕಾರ ಎಂಎಸ್‍ಎಂಇ ಸಹಭಾಗಿತ್ವದಲ್ಲಿ ಸ್ವದೇಶಿ ವಸ್ತುಗಳ ಬಗ್ಗೆ ಐದು ದಿನಗಳ ಕಾಲ ಸ್ವದೇಶಿ ಮೇಳ ಆಯೋಜಿಸಲಾಗಿದ್ದು, 200ಕ್ಕೂ ಹೆಚ್ಚು ಸ್ವದೇಶಿ ವಸ್ತುಗಳ ಮಳಿಗೆ ಸ್ಥಾಪನೆ ಮಾಡಲಾಗುವುದು. ಇದರ ಸದುಪಯೋಗವನ್ನು ಜಿಲ್ಲೆಯ ಜನರು ಪಡೆಯಬೇಕು ಎಂದು ಹೇಳಿದರು.
ಜಂಟಿ ಕೃಷಿ ನಿರ್ದೇಶಕ ಬಿ.ಮಂಜುನಾಥ ಮಾತನಾಡಿ, ಸಂಪ್ರಾದಾಯಿಕವಾಗಿ ಮಾಡಿದ ಕಿರುಉದ್ದಿಮೆಗಳನ್ನು ಮುನ್ನೆಲೆಗೆ ತರಬೇಕು ಎಂಬ ಉದ್ದೇಶದಿಂದ 2010ರಲ್ಲಿ ಆತ್ಮನಿರ್ಭರ ಯೋಜನೆಯ ಮೂಲಕ ಪ್ರಧಾನಮಂತ್ರಿಗಳ ಕಿರು ಆಹಾರ ಸಂಸ್ಕರಣಾ ಉದ್ದಿಮೆಗಳ ನಿಯಮಬದ್ಧಗೊಳಿಸುವಿಕೆ ಯೋಜನೆಯನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಲಾಯಿತು. ಈ ಯೋಜನೆಯಡಿ ರೂ.10 ಲಕ್ಷ ಸಹಾಯಧನ ಕೊಡುವ ಮೂಲಕ ಗ್ರಾಮೀಣ ಮಟ್ಟದಲ್ಲಿ ಉದ್ಯಮದಲ್ಲಿ ತೊಡಗಿರುವ ಮಹಿಳೆಯರಿಗೆ ಬಲತುಂಬುವ ನಿಟ್ಟಿನಲ್ಲಿ ಕ್ರಮವಹಿಸಿದೆ. ಇದಕ್ಕಾಗಿ ಕೇಂದ್ರ ಸರ್ಕಾರ ರೂ.10 ಸಾವಿರ ಕೋಟಿ ವಿನಿಯೋಗ ಮಾಡಿದೆ. ಇದರ ಜೊತೆಗೆ ರಾಜ್ಯ ಸರ್ಕಾರವು ಶೇ.50ರಷ್ಟು ರಿಯಾಯಿತಿದರಲ್ಲಿ ರೂ.18 ಲಕ್ಷ ಸಹಾಯಧನ ನೀಡಿ, ಆಹಾರ ಸಂಸ್ಕರಣಾ ಉದ್ದಿಮೆಗಳನ್ನು ಬಲಪಡಿಸುವ ಕೆಲಸ ಮಾಡಿದೆ ಎಂದು ತಿಳಿಸಿದರು.
ಪ್ರಧಾನಮಂತ್ರಿಗಳ ಕಿರು ಆಹಾರ ಸಂಸ್ಕರಣಾ ಉದ್ದಿಮೆಗಳ ನಿಯಮಬದ್ಧಗೊಳಿಸುವಿಕೆ ಯೋಜನೆಯಡಿ ರಾಜ್ಯದಲ್ಲಿ 6700ಕ್ಕೂ ಹೆಚ್ಚು ಫಲಾನುಭವಿಗಳು ಈ ಯೋಜನೆಯ ಪ್ರಯೋಜನ ಪಡೆದಿದ್ದಾರೆ. ಜಿಲ್ಲೆಯಲ್ಲಿ ಒಟ್ಟು 132 ಫಲಾನುಭವಿಗಳಿದ್ದು, 2.41 ಕೋಟಿ ಕೇಂದ್ರ ಸರ್ಕಾರದ ಸಹಾಯಧನ ಹಾಗೂ 3.56 ಕೋಟಿ ರಾಜ್ಯ ಸರ್ಕಾರ ಸಹಾಯಧನ ನೀಡಿದೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ರಾಷ್ಟ್ರೀಯ ಖಾದ್ಯ ತೈಲ ಅಭಿಯಾನ-ಎಣ್ಣೆಕಾಳು ಯೋಜನೆ, ಆತ್ಮನಿರ್ಭರ ಭಾರತ ಅಭಿಯಾನ ಪ್ರಧಾನ ಮಂತ್ರಿಗಳ ಕಿರು ಆಹಾರ ಸಂಸ್ಕರಣಾ ಉದ್ದಿಮೆಗಳ ನಿಯಮಬದ್ಧಗೊಳಿಸುವಿಕೆ ಯೋಜನೆ, ಮಾದಕ ವಸ್ತು ಕರ್ನಾಟಕ ಅಭಿಯಾನದ ಪೋಸ್ಟರ್‍ಗಳನ್ನು ಬಿಡುಗಡೆಗೊಳಿಸಲಾಯಿತು. ಪ್ರಧಾನ ಮಂತ್ರಿಗಳ ಕಿರು ಆಹಾರ ಸಂಸ್ಕರಣಾ ಉದ್ದಿಮೆಗಳ ನಿಯಮಬದ್ಧಗೊಳಿಸುವಿಕೆ ಯೋಜನೆಯ ವಸ್ತು ಪ್ರದರ್ಶನ ಮಳಿಗೆಯನ್ನು ಚಿತ್ರದುರ್ಗ ನಗರಸಭೆ ಅಧ್ಯಕ್ಷೆ ಬಿ.ಎನ್.ಸುಮಿತಾ ರಾಘವೇಂದ್ರ ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಎಂ.ಕೆ.ತಾಜ್‍ಪೀರ್, ನಗರಸಭೆ ಅಧ್ಯಕ್ಷೆ ಸುಮಿತಾ ಬಿ.ಎನ್.ರಾಘವೇಂದ್ರ, ಜಿಲ್ಲಾ ಗ್ಯಾರಂಟಿ ಯೋಜನಾ ಪ್ರಾಧಿಕಾರ ಅಧ್ಯಕ್ಷ ಆರ್.ಶಿವಣ್ಣ, ಉಪಾಧ್ಯಕ್ಷ ಡಿ.ಎನ್.ಮೈಲಾರಪ್ಪ, ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ಎನ್.ಆರ್.ಮಹೇಶ್ವರಪ್ಪ, ಉಪಾಧ್ಯಕ್ಷ ಧರಣೇಶ್, ತಾಲ್ಲೂಕು ಕೃಷಿಕ ಸಮಾಜದ ರಾಗಿ ಶಿವಮೂರ್ತಪ್ಪ, ಮಹಾದೇವಯ್ಯ, ಚಳ್ಳಕೆರೆ ಉಪ ಕೃಷಿ ನಿರ್ದೇಶಕ ಡಿ.ಉಮೇಶ್, ರಾಜ್ಯ ಕೃಷಿ ಉತ್ಪನ್ನಗಳ ಸಂಸ್ಕರಣೆ ಹಾಗೂ ರಫ್ತು ನಿಗಮದ ಪ್ರತಿನಿಧಿ ಚಂದ್ರಕುಮಾರ್, ನಬಾರ್ಡ್ ಪ್ರತಿನಿಧಿ ವಿನಂತ್, ಲೀಡ್ ಬ್ಯಾಂಕ್ ಜಿಲ್ಲಾ ವ್ಯವಸ್ಥಾಪಕ ಎಂ.ರಾಘವೇಂದ್ರ, ಸಹಾಯಕ ಕೃಷಿ ನಿರ್ದೇಶಕರು ಸೇರಿದಂತೆ ಮತ್ತಿತರರು ಇದ್ದರು.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading