
ಹಿರಿಯೂರು :
ತಾಲ್ಲೂಕಿನ ಆಲೂರು ಗ್ರಾಮದಲ್ಲಿ ಇತ್ತೀಚೆಗೆ ಪತ್ತೆಯಾಗಿದ್ದ ಪ್ರಾಚ್ಯ ಸ್ಮಾರಕಗಳನ್ನು ಇಲ್ಲಿನ ಸರ್ಕಾರಿ ಶಾಲೆಯ ಜಿ.ಪಿ.ಟಿ.ಶಿಕ್ಷಕರಾದ ಮಂಜುನಾಥ ಟಿ. ಚಿಕ್ಕೇರಹಳ್ಳಿ ಅವರು ಸಂರಕ್ಷಣೆ ಮಾಡಿದ್ದಾರೆ.
ಶಿಕ್ಷಕರು ಹಾಗೂ ಇತಿಹಾಸ ಸಂಶೋಧನಾ ವಿದ್ಯಾರ್ಥಿಯೂ ಆಗಿರುವ ಟಿ.ಮಂಜುನಾಥ್ ಅವರು ಕುರಿಗಾಹಿ ರಾಮಣ್ಣರು ನೀಡಿದ ಮಾಹಿತಿಯನ್ನು ಆಧರಿಸಿ, ಗ್ರಾಮದ ರವೀಂದ್ರಪ್ಪ ಎಂಬುವರ ತೋಟದ ಮಣ್ಣಲ್ಲಿ ಹುದುಗಿದ್ದ ಸುಮಾರು ಏಳೆಂಟು ಸ್ಮಾರಕ ಶಿಲ್ಪಗಳನ್ನು ಪತ್ತೆ ಮಾಡಿದ್ದಾರೆ.
ಇದುವರೆಗೂ ಯಾರ ಕಣ್ಣಿಗೂ ಗೋಚರಿಸದೆ, ಮಣ್ಣಲ್ಲಿ ಮರೆಯಾಗಿ ಹುದುಗಿದ್ದ ಸುಮಾರು ೧೦ ನೇ ಶತಮಾನದ ಕಾಲಾವಧಿಗೆ ಸೇರಿದ್ದ ಅಪ್ರಕಟಿತ ಶಾಸನ, ಕಾಲನ ಗರ್ಭಕ್ಕೆ ಸಿಲುಕಿ ತನ್ನ ಸೌಂದರ್ಯವನ್ನು ಕಳೆದುಕೊಂಡಿರುವ ನಂದಿಯಶಿಲ್ಪ, ನಾಗರಶಿಲ್ಪಗಳು, ಸೂರ್ಯದೇವನ ಶಿಲ್ಪ ಸೇರಿದಂತೆ,
ಮಹಿಷಾಸುರ ಮರ್ಧಿನಿ ಶಿಲ್ಪ ಹಾಗೂ ಬಹುಶಃ ವಿಜಯನಗರೋತ್ತರ ಕಾಲಕ್ಕೆ ಸೇರಿದ್ದ ತುರುಕಾಳಗದ ವೀರಗಲ್ಲು ಎಂಬ ಸ್ಮಾರಕಗಳನ್ನು ಪ್ರಮುಖವಾಗಿ ಮಂಜುನಾಥ ಶಿಕ್ಷಕರು ಶೋಧನೆ ಮಾಡಿ ಅವುಗಳ ಕುರಿತು ಹೆಚ್ಚಿನ ಅಧ್ಯಯನ ಕೈಗೊಂಡು ಸಂಶೋಧನಾ ಲೇಖನವನ್ನು ಮಂಡಿಸಲಿದ್ದಾರೆ.
ಚರಿತ್ರೆ ಪುನರ್ರಚನೆಯ ಮೂಲ ಆಕರಗಳಾದ ಈ ಕಲಾಸ್ಮಾರಕಗಳ ಹಿಂದೆ ಅಡಗಿರುವ ಇತಿಹಾಸವು, ಸ್ಥಳೀಯ ಇತಿಹಾಸ ರಚನೆಗೆ ಪೂರಕವಾದುದಾಗಿದೆ. ಪ್ರಾಚ್ಯ, ಐತಿಹಾಸಿಕ ಸ್ಮಾರಕಗಳ ಸಂರಕ್ಷಣೆ ದೇಶದ ಪ್ರತಿಯೊಬ್ಬ ಭಾರತೀಯನ ಮೂಲಭೂತ ಕರ್ತವ್ಯವಾಗಿದೆ,
ಅಲ್ಲದೆ ಸ್ಮಾರಕಗಳ ರಕ್ಷಣೆಯು ನಾಡಿನ ಇತಿಹಾಸ ಲೋಕಕ್ಕೆ ಹಾಗೂ ಮನುಕುಲಕ್ಕೆ ನಾವುಗಳು ಕೊಡುವ ಬಹುದೊಡ್ಡ ಕೊಡುಗೆ ಎಂದು ಸಮುದಾಯದಲ್ಲಿ ಜಾಗೃತಿಯನ್ನು ಮೂಡಿಸುವುದರ ಮೂಲಕ ಟಿ.ಮಂಜುನಾಥ್ ರವರು ಸ್ಥಳೀಯರ ಸಹಕಾರದೊಂದಿಗೆ ಸ್ಮಾರಕಗಳನ್ನು ಸಂರಕ್ಷಣೆ ಮಾಡಿದ್ದಾರೆ.
ಪ್ರಾಚ್ಯ ಸ್ಮಾರಕಗಳ ಶೋಧನೆ, ರಕ್ಷಣೆಯಂತಹ ಮಹತ್ವಪೂರ್ಣ ಕಾರ್ಯಕ್ಕೆ ಸಹಕರಿಸಿ, ಬೆಂಬಲಿಸಿದ ತಾಲೂಕಿನ ಶಿಕ್ಷಣಾಧಿಕಾರಿಗಳಾದ ಸಿ.ಎಂ.ತಿಪ್ಪೇಸ್ವಾಮಿ, ಶಾಲಾ ಶಿಕ್ಷಕವೃಂದ , ಎಸ್.ಡಿ.ಎಂ.ಸಿ ಸ್ಥಳೀಯ ಕುರಿಗಾಹಿ ರಾಮಣ್ಣ, ತೋಟದ ಮಾಲೀಕ ರವೀಂದ್ರಪ್ಪ, ನರಸಿಂಹಣ್ಣ (ಶಿಲ್ಪಿ) ದಿಲೀಪ್, ನಾಗಜ್ಜ, ಕರೀಮ್ ಹಾಗೂ ಊರಿನ ಇತರ ಆಸಕ್ತರು ನೀಡಿದ ಪ್ರೋತ್ಸಾಹ, ಸಹಕಾರವನ್ನು ಮರೆಯಲಾಗದು.
ಚರಿತ್ರೆಯನ್ನು ಸಾರುವ ಇಂತಹ ನೂರಾರು ಸ್ಮಾರಕಗಳು ತಾಲೂಕಿನ ಉದ್ದಗಲಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ವ್ಯಾಪಿಸಿದ್ದು, ಅವುಗಳು ಸಂರಕ್ಷಣೆ ಇಲ್ಲದೇ ಜನರ ನಿರ್ಲಕ್ಷ್ಯತನದಿಂದ ಅಜ್ಞಾತವಾಗಿ ಬಿದ್ದಿವೆ. ಸ್ಥಳೀಯರು ಅನುಮತಿ ನೀಡಿದ್ದಲ್ಲಿ ಅವುಗಳನ್ನು ತಂದು ಆಲೂರಿನ ಶಾಲಾವರಣದಲ್ಲಿ ಸಂರಕ್ಷಣೆ ಮಾಡುವ ಕನಸನ್ನು ಮಂಜುನಾಥ್ ಶಿಕ್ಷಕರು ಹೊಂದಿದ್ದಾರೆಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿರುತ್ತಾರೆ

About The Author
Discover more from JANADHWANI NEWS
Subscribe to get the latest posts sent to your email.