
ಹಿರಿಯೂರು:
ಕಾಡುಗೊಲ್ಲರ ದಾರಿ ತಪ್ಪಿಸುತ್ತಿರುವವರ ಬಗ್ಗೆ ಎಚ್ಚರದಿಂದ ಇರಬೇಕು. ಅಲೆಮಾರಿ ಬದುಕು ನಡೆಸುತ್ತಿರುವ ಕಾಡುಗೊಲ್ಲರಿಗೆ ಪರಿಶಿಷ್ಟ ಪಂಗಡದ ಸೌಲಭ್ಯಗಳು ಸಿಗಬೇಕೆಂದರೆ ಸಂಘಟಿತ ಹೋರಾಟ ಅನಿವಾರ್ಯ ಎಂಬುದಾಗಿ ಕಾಡುಗೊಲ್ಲರ ಸಂಘದ ರಾಜ್ಯ ಘಟಕದ ಅಧ್ಯಕ್ಷರಾದ ರಾಜಣ್ಣ ಹೇಳಿದರು.
ತಾಲ್ಲೂಕಿನ ಬಾಲದೇವರಹಟ್ಟಿ ಮ್ಯಾಕ್ಲೂರಹಳ್ಳಿಯಲ್ಲಿ ಬುಧವಾರ ಹಮ್ಮಿಕೊಳ್ಳಲಾಗಿದ್ದ ಬಾಲಕೃಷ್ಣಸ್ವಾಮಿ ದೇವತಾ ಕಾರ್ಯದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ರಾಜ್ಯದಲ್ಲಿ ಕಾಡುಗೊಲ್ಲರು ಇಂದಿಗೂ ಕುರಿ-ಮೇಕೆ ಸಾಕಣೆ ಮಾಡಿಕೊಂಡು ಅಲೆಮಾರಿಗಳಂತೆ ಬದುಕುತ್ತಿದ್ದಾರೆ. ಪಶುಪಾಲನೆ ಹಿನ್ನಲೆಯಲ್ಲಿ ತಮ್ಮದೇ ರೀತಿ-ರಿವಾಜುಗಳನ್ನು ಅನುಸರಿಸಿಕೊಂಡು ಹೋಗುತ್ತಿದ್ದು ಶಿಕ್ಷಣ, ಉದ್ಯೋಗದಿಂದ ಹಿಂದೆ ಉಳಿದಿದ್ದಾರೆ. ಜನಸಂಖ್ಯೆಗೆ ತಕ್ಕಂತೆ ರಾಜಕೀಯ ಪ್ರಾತಿನಿಧ್ಯ ದೊರೆತಿಲ್ಲ.ಎಂದರಲ್ಲದೆ,
ಕಾಡುಗೊಲ್ಲರನ್ನು ಸಮಾಜದ ಮುಖ್ಯವಾಹಿನಿಗೆ ತರಲು ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕಿದೆ. ರಾಜ್ಯ ಸರ್ಕಾರ ತುರ್ತಾಗಿ ಕೇಂದ್ರ ಸರ್ಕಾರ ಕೇಳಿರುವ ಕೆಲವು ಮಾಹಿತಿಯನ್ನು ಒದಗಿಸುವ ಮೂಲಕ ಮತ್ತೊಮ್ಮೆ ಕೇಂದ್ರಕ್ಕೆ ಶಿಫಾರಸ್ಸು ಮಾಡಬೇಕು ಎಂಬುದಾಗಿ ಅವರು ಒತ್ತಾಯಿಸಿದರು.
ಹಟ್ಟಿಗಳಲ್ಲಿ ಆಚರಿಸುವ ಮೂಢನಂಬಿಕೆಗಳಿಂದ ಜನರು ಹೊರಬರಬೇಕು.ದೈವಾರಾಧನೆ ತಪ್ಪಲ್ಲ. ಆದರೆ ಕಂದಾಚಾರ ಬೇಡ.ಮಕ್ಕಳಿಗೆ ಶಿಕ್ಷಣ ಕೊಡಿಸುವ ಬಗ್ಗೆ ಯೋಚನೆ ಮಾಡಿ ಎಂಬುದಾಗಿ ರಾಜಣ್ಣ ಸಲಹೆ ನೀಡಿದರು.
ಈ ಕಾರ್ಯಕ್ರಮದಲ್ಲಿ ನಗರಸಭೆ ಮಾಜಿ ಸದಸ್ಯ ಬಿ.ಕೆ.ಕರಿಯಪ್ಪ,ಬಬ್ಬೂರು ಗ್ರಾಮಪಂಚಾಯಿತಿ ಮಾಜಿ ಅಧ್ಯಕ್ಷ ಪಿ.ಕರಿಯಣ್ಣ, ವಕೀಲ ಬಿ.ಡಿ.ಬಸವರಾಜ್, ನಾಗಣ್ಣ, ಪೂಜಾರಿ ರಂಗಪ್ಪ, ಬೆಲ್ಟ್ ಬಸವರಾಜ್, ರಂಗಸ್ವಾಮಿ, ನಿರಂಜನ್, ಚಿತ್ತಯ್ಯ, ತಿಮ್ಮಣ್ಣ, ನಿಜಲಿಂಗಪ್ಪ, ಮಂಜುನಾಥ್ ಸೇರಿದಂತೆ ಅನೇಕ ಮುಖಂಡರುಗಳು ಉಪಸ್ಥಿತರಿದ್ದರು.




About The Author
Discover more from JANADHWANI NEWS
Subscribe to get the latest posts sent to your email.