ಚಿತ್ರದುರ್ಗ ಫೆ.06
ಜಿಲ್ಲೆಯಲ್ಲಿ ಬಾಲ್ಯವಿವಾಹ ಪ್ರಕರಣಗಳ ಸಂಖ್ಯೆ ಹೆಚ್ಚಾಗಿದ್ದು, ಬಾಲ್ಯವಿವಾಹಕ್ಕೆ ಬಡತನವೇ ಪ್ರಮುಖ ಕಾರಣ. ಹಾಗಾಗಿ ಸರ್ಕಾರದ ಯೋಜನೆ, ಸೌಲಭ್ಯಗಳನ್ನು ಜನರಿಗೆ ಸಮರ್ಪಕವಾಗಿ ತಲುಪಿಸಿದರೆ ಬಡತನ ನಿರ್ಮೂಲನೆಯ ಜೊತೆಗೆ ಬಾಲ್ಯವಿವಾಹ ಪದ್ಧತಿ ಕೂಡ ತೊಲಗಲು ಸಾಧ್ಯವಾಗಲಿದೆ ಎಂದು ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷರಾದ ಡಾ.ನಾಗಲಕ್ಷ್ಮೀ ಚೌಧರಿ ಹೇಳಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಗುರುವಾರ ಮಹಿಳಾ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಚಿತ್ರದುರ್ಗ ಜಿಲ್ಲೆಯಲ್ಲಿ ಬಾಲ್ಯ ವಿವಾಹ ಪ್ರಕರಣಗಳು ಹೆಚ್ಚಾಗಿ ಕಂಡುಬರುತ್ತಿದ್ದು, ಇದಕ್ಕೆ ಬಡತನ ಮುಖ್ಯ ಕಾರಣವೆಂಬುದು ತಿಳಿದುಬಂದಿದೆ. ಹೀಗಾಗಿ ಸರ್ಕಾರದ ಯೋಜನೆಗಳು, ಸೌಲಭ್ಯಗಳನ್ನು, ಗ್ರಾಮಾಭಿವೃದ್ಧಿ ಯೋಜನೆಗಳನ್ನು ವ್ಯವಸ್ಥಿತ ರೀತಿಯಲ್ಲಿ ಸಮಾಜದ ಎಲ್ಲ ಅರ್ಹರಿಗೆ ಸಮರ್ಪಕವಾಗಿ ತಲುಪಿಸಿದರೆ ಬಡತನ ನಿರ್ಮೂಲನೆಯಾಗಲಿದೆ. ಇದರಿಂದ ಬಾಲ್ಯವಿವಾಹವೂ ಕಡಿಮೆಯಾಗಲಿದೆ ಎಂದು ಹೇಳಿದರು.
ಮಹಿಳೆಯು ಪೊಲೀಸ್ ಠಾಣೆಗೆ ದೂರು ಕೊಡಲು ಬಂದಾಗ ತಕ್ಷಣ ಸ್ಪಂದಿಸುವುದು ಬಹಳ ಮುಖ್ಯ. ಹೆಣ್ಣು ಮಕ್ಕಳು ಪೊಲೀಸ್ ಠಾಣೆಗೆ ಬಂದಾಗ ಮಹಿಳಾ ಸ್ನೇಹಿ ವಾತಾವರಣ ಇರಬೇಕು ಎಂದು ತಿಳಿಸಿದ ಅವರು, ಮಹಿಳಾ ಸ್ನೇಹಿ ಪೊಲೀಸ್‍ಗೆ ಕರ್ನಾಟಕ ಪೊಲೀಸ್ ದೇಶದಲ್ಲಿಯೇ ನಂ.1 ಸ್ಥಾನದಲ್ಲಿದೆ ಎಂದರು.
ಸಾಮಾನ್ಯ ಜನರಿಗೆ ಅರಿವು ಮೂಡಿಸಿ: ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದವರ ಮೇಲಿನ ದೌರ್ಜನ್ಯ ತಡೆಯುವ ನಿಟ್ಟಿನಲ್ಲಿ ಸಾಮಾನ್ಯ ಜನರಿಗೆ ಹೆಚ್ಚಿನ ಅರಿವು ಮೂಡಿಸಬೇಕು ಎಂದು ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷರಾದ ಡಾ.ನಾಗಲಕ್ಷ್ಮೀ ಚೌಧರಿ ಹೇಳಿದರು.
ಪರಿಶಿಷ್ಟ ಜಾತಿ ಹಾಗೂ ಪಂಗಡದವರ ಮೇಲಿನ ದೌರ್ಜನ್ಯಕ್ಕೆ ಸಂಬಂಧಿಸಿದಂತೆ ಪ್ರತಿ ಮೂರು ತಿಂಗಳಿಗೊಮ್ಮೆ ಜಿಲ್ಲಾ ಜಾಗೃತಿ ಹಾಗೂ ಉಸ್ತುವಾರಿ ಸಮಿತಿ ಸಭೆ ನಡೆಸಲಾಗುತ್ತಿದೆ. ದೌರ್ಜನ್ಯ ಪ್ರಕರಣ ನಡೆದ ಪ್ರದೇಶಗಳನ್ನು ಗುರುತಿಸಿ, ನಿರಂತರವಾಗಿ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಟಿ.ವೆಂಕಟೇಶ್ ತಿಳಿಸಿದರು.
ಚಿಕ್ಕಪುರ ಗೊಲ್ಲರಹಟ್ಟಿ ಕಂದಾಯ ಗ್ರಾಮ ಮಾಡಿ:
ಚಿತ್ರದುರ್ಗ ತಾಲ್ಲೂಕಿನ ಚಿಕ್ಕಪುರ ಗೊಲ್ಲರಹಟ್ಟಿ ಮೂಲಸೌಲಭ್ಯಗಳಿಂದ ವಂಚಿತವಾಗಿದ್ದು, ಚಿಕ್ಕಪುರ ಗೊಲ್ಲರಹಟ್ಟಿಯನ್ನು ಕಂದಾಯ ಗ್ರಾಮವನ್ನಾಗಿ ಮಾಡಿ, ಅಗತ್ಯ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸುವಂತೆ ಮಹಿಳಾ ಆಯೋಗದ ಅಧ್ಯಕ್ಷರು ಅಧಿಕಾರಿಗಳಿಗೆ ಸೂಚಿಸಿದರು.
ಚಿಕ್ಕಪುರ ಗೊಲ್ಲರಹಟ್ಟಿ ಗ್ರಾಮ ಸೇರಿದಂತೆ ಸುತ್ತಮುತ್ತಲಿನ ನಾಲ್ಕೈದು ಗ್ರಾಮಗಳಿಗೆ ಬಸ್ ಸೌಲಭ್ಯದ ಕೊರತೆ ಇದ್ದು, ಹೆಣ್ಣು ಮಕ್ಕಳ ಹಿತದೃಷ್ಠಿಯಿಂದ ಕೂಡಲೇ ಬಸ್ ಕಾರ್ಯಾಚರಣೆಗೆ ಕ್ರಮವಹಿಸಬೇಕು. ಉದ್ಯೋಗ ಖಾತ್ರಿ ಯೋಜನೆಯಡಿ ಅರ್ಹರಿಗೆ ಕೂಲಿ ಕೆಲಸ ನೀಡಬೇಕು. ಗ್ರಾಮದಲ್ಲಿಯೇ ಪಡಿತರ ವಿತರಣೆಯಾಗಬೇಕು. ಗ್ರಾಮದಲ್ಲಿ ಒಮ್ಮೆ ವಿದ್ಯುತ್ ಹೋದರೆ, ಐದಾರು ದಿನ ವಿದ್ಯುತ್ ಸಂಪರ್ಕ ಪುನರ್ ಸ್ಥಾಪನೆ ಆಗುವುದಿಲ್ಲ, ವಿದ್ಯುತ್ ಸಮಸ್ಯೆಯಾದರೂ ಸಂಬಂಧಪಟ್ಟ ಅಧಿಕಾರಿಗಳು ಗಮನಹರಿಸುತ್ತಿಲ್ಲ, ಅಲ್ಲದೆ ದೂರವಾಣಿ ಕರೆ ಮಾಡಿದರೂ ಉತ್ತರಿಸುತ್ತಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದು, ವಿದ್ಯುತ್ ಸಮಸ್ಯೆಯಾಗದಂತೆ ಸೂಕ್ತ ಕ್ರಮವಹಿಸಬೇಕು, ಸಾರ್ವಜನಿಕರ ದೂರಿಗೆ ಸ್ಪಂದಿಸದ ಅಧಿಕಾರಿ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಸೂಚನೆ ನೀಡಿದರು.
ಗ್ರಾಮೀಣ ಅಭಿವೃದ್ಧಿಯಲ್ಲಿ ಪಂಚಾಯಿತಿ ಅಭಿವೃದ್ಧಿಗಳ ಪಾತ್ರ ಬಹಳ ಮುಖ್ಯವಾಗಿದ್ದು, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಇಚ್ಛಾಶಕ್ತಿ ಇದ್ದರೆ ಗ್ರಾಮಗಳು ಅಭಿವೃದ್ಧಿಯಾಗಲಿದೆ. ಹಾಗಾಗಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಇಚ್ಛಾಶಕ್ತಿಯಿಂದ ಕಾರ್ಯನಿರ್ವಹಿಸಬೇಕು. ಈ ನಿಟ್ಟಿನಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಪಂಚಾಯಿತಿ ಅಭಿವೃದ್ಧಿಗಳಿಗೆ ಅಗತ್ಯ ಸಲಹೆ-ಸೂಚನೆ, ಪ್ರಗತಿ ಪರಿಶೀಲನೆ ನಡೆಸುವ ಮೂಲಕ ಸರ್ಕಾರದ ಯೋಜನೆಗಳನ್ನು ಸಮರ್ಪಕವಾಗಿ ತಲುಪಿಸಬೇಕು ಎಂದು ಹೇಳಿದರು.
ಗೊಲ್ಲರಹಟ್ಟಿಗಳಲ್ಲಿ ಮೌಢ್ಯ ಪದ್ಧತಿ, ಸಂಪ್ರದಾಯಗಳು ಕಡಿಮೆಯಾಗುತ್ತಾ ಬಂದಿವೆ. ಜಿಲ್ಲೆಯಲ್ಲಿ ಸುಮಾರು 300 ಗೊಲ್ಲರಹಟ್ಟಿಗಳಿದ್ದು, ಈ ಗೊಲ್ಲರಹಟ್ಟಿಗಳನ್ನು ಕಂದಾಯ ಗ್ರಾಮಗಳನ್ನಾಗಿ ಕ್ರಮವಹಿಸಿದ್ದು, ಗ್ರಾಮಗಳ ಅಭಿವೃದ್ಧಿಗೆ ಒತ್ತು ನೀಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ಡಾ.ಸುಬ್ರಾನಾಯಕ್ ಮಾತನಾಡಿ, ಗೊಲ್ಲರಹಟ್ಟಿಗಳಿಗೆ ರಸ್ತೆ, ಚರಂಡಿ, ನಿವೇಶನ ಸೇರಿದಂತೆ ಅಗತ್ಯ ಮೂಲಸೌಲಭ್ಯಗಳ ಕಲ್ಪಿಸಲು ಈಗಾಗಲೇ ತಾಲ್ಲೂಕು ಮಟ್ಟದ ಅಧಿಕಾರಿಗಳು ಸಮೀಕ್ಷೆ ಕಾರ್ಯ ನಡೆಸುತ್ತಿದ್ದು, ಮಾಹಿತಿ ಪಡೆಯಲಾಗುತ್ತಿದೆ ಎಂದು ಸಭೆಗೆ ಮಾಹಿತಿ ನೀಡಿದರು.
ಜಿಲ್ಲಾಸ್ಪತ್ರೆ ಕಾರ್ಯವೈಖರಿಗೆ ಬೇಸರ:
**ಜಿಲ್ಲಾಸ್ಪತ್ರೆಯ ಕಾರ್ಯವೈಖರಿಗೆ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷರಾದ ಡಾ.ನಾಗಲಕ್ಷ್ಮೀ ಚೌಧರಿ ಬೇಸರ ವ್ಯಕ್ತಪಡಿಸಿದರು.
ಜಿಲ್ಲಾಸ್ಪತ್ರೆಯ ಸ್ಥಿತಿಗತಿ ಅವಲೋಕನಕ್ಕಾಗಿ ಭೇಟಿ ನೀಡಿದಾಗ ಸಾಕಷ್ಟು ದೂರುಗಳು ಗಮನಕ್ಕೆ ಬಂದಿದ್ದು, ಜಿಲ್ಲಾಸ್ಪತ್ರೆಯ ವ್ಯವಸ್ಥೆಯು ಮನಸ್ಸಿಗೆ ನೋವುಂಟು ಮಾಡಿದೆ. ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಇಲ್ಲ. ಬಿಸಿ ನೀರು ಇಲ್ಲ, ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಅಳವಡಿಸಿರುವ ಲಿಪ್ಟ್ ವರ್ಕ್ ಆಗುತ್ತಿಲ್ಲ. ಜಿಲ್ಲಾಸ್ಪತ್ರೆಯಿಂದ ನಡೆಯುತ್ತಿರುವ ನರ್ಸಿಂಗ್ ಕಾಲೇಜು ವಿದ್ಯಾರ್ಥಿಗಳಿಗೆ ಅಗತ್ಯ ಸೌಲಭ್ಯಗಳು ಕಲ್ಪಿಸದೇ ಇರುವುದಕ್ಕೆ ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಎಸ್.ಪಿ.ರವೀಂದ್ರ ಅವರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು. ನರ್ಸಿಂಗ್ ವಿದ್ಯಾರ್ಥಿಗಳನ್ನು ಸಭೆಗೆ ಕರೆಯಿಸಿದ ಆಯೋಗದ ಅಧ್ಯಕ್ಷರು, ಅವರಿಂದ ಅಹವಾಲುಗಳನ್ನು ಆಲಿಸಿದರು, ನರ್ಸಿಂಗ್ ಕಾಲೇಜಿಗೆ ಕೇವಲ 2 ಕೊಠಡಿ ಕೊಡಲಾಗಿದೆ, ಸೂಕ್ತ ಬೋಧಕರಿಂದ ಬೋಧನೆ ನಮಗೆ ದೊರೆಯುತ್ತಿಲ್ಲ, ಮೂಲಭೂತ ಸೌಕರ್ಯ ಸಿಗುತ್ತಿಲ್ಲ, ವಿದ್ಯಾರ್ಥಿಗಳಿಗೆ ಬೆದರಿಕೆ ಹಾಕಲಾಗುತ್ತಿದೆ ಎಂದು ದೂರಿದರು. ಈ ಬಗ್ಗೆ ಖುದ್ದಾಗಿ ಭೇಟಿ ನೀಡಿ, ಸಮಸ್ಯೆ ಪರಿಹರಿಸುವುದಾಗಿ ಜಿಲ್ಲಾಧಿಕಾರಿಗಳು ಇದೇ ಸಂದರ್ಭದಲ್ಲಿ ಭರವಸೆ ನೀಡಿದರು.
ಸಾಮಾಜಿಕ ಜಾಲತಾಣದ ದುಷ್ಪರಿಣಾಮಗಳ ಬಗ್ಗೆ ಎಚ್ಚರವಿರಲಿ :
** ಗ್ರಾಮೀಣ ಭಾಗದಿಂದ ನಗರ, ಪಟ್ಟಣಗಳಿಗೆ ಓದಲು ಬರುವ ಹೆಣ್ಣುಮಕ್ಕಳು ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿ, ಮೋಸದ ಬಲೆಗೆ ಬೀಳುವ ಪ್ರಕರಣಗಳು ಹೆಚ್ಚಾಗಿ ಕಂಡುಬರುತ್ತಿದ್ದು, ಹದಿಹರೆಯದ ಹೆಣ್ಣು ಮಕ್ಕಳು, ಸಾಮಾಜಿಕ ಜಾಲತಾಣದ ಬಳಕೆಯಲ್ಲಿ ಸಾಕಷ್ಟು ಎಚ್ಚರ ವಹಿಸಬೇಕು. ಆಸೆ, ಆಮಿಷಗಳಿಗೆ ಒಳಗಾಗಿ, ಮೋಸ ಹೋಗುವಂತಾಗಬಾರದು. ಹೆಣ್ಣು ಮಕ್ಕಳು ತಮ್ಮ ಪೋಷಕರು, ಪಾಲಕರೊಂದಿಗೆ ನಿರಂತರ ಸಂಪರ್ಕವನ್ನು ಇಟ್ಟುಕೊಳ್ಳಬೇಕು. ಯಾವುದೇ ಮೋಸ, ವಂಚನೆ ಅಥವಾ ಬೆದರಿಕೆಯಂತಹ ಪರಿಸ್ಥಿತಿ ಕಂಡುಬಂದಾಗ ಧೈರ್ಯವಾಗಿ ಎದುರಿಸಬೇಕು. ಪೊಲೀಸ್ ಇಲಾಖೆ ಕೂಡ ಈ ಬಗ್ಗೆ ಹೆಚ್ಚಿನ ನಿಗಾ ವಹಿಸಿ, ಹೆಣ್ಣು ಮಕ್ಕಳ ರಕ್ಷಣೆಗೆ ಮುಂದಾಗಬೇಕು ಎಂದು ಡಾ. ನಾಗಲಕ್ಷ್ಮಿ ಅವರು ಹೇಳಿದರು.
ಮಹಿಳಾ ಆಯೋಗಕ್ಕೆ 2 ಸಾವಿರ ಅರ್ಜಿ ಸ್ವೀಕಾರ:
** ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಕಳೆದ ಒಂದು ವರ್ಷದ ಅವಧಿಯಲ್ಲಿ ಸುಮಾರು 2 ಸಾವಿರ ಅರ್ಜಿಗಳು ಆಯೋಗಕ್ಕೆ ಬಂದಿವೆ. ಈ ಪೈಕಿ ಈಗಾಗಲೇ 1,700 ಕ್ಕೂ ಹೆಚ್ಚು ಅರ್ಜಿಗಳನ್ನು ಇತ್ಯರ್ಥ ಮಾಡಲಾಗಿದ್ದು, ಇನ್ನೂ 200 ಅರ್ಜಿಗಳು ಮಾತ್ರ ಬಾಕಿ ಇವೆ ಎಂದು ಹೇಳಿದರು.
ಮಕ್ಕಳ ರಕ್ಷಣೆ, ಭದ್ರತೆ, ಸ್ಥಿತಿಗತಿಗಳ ಪರಿಶೀಲನೆ ನಡೆಸಿ, ಸಂಬಂಧಪಟ್ಟ ಅಧಿಕಾರಿಗಳು ಪ್ರತಿ ತಿಂಗಳಿಗೊಮ್ಮೆ ವರದಿ ನೀಡಬೇಕು ಎಂದು ತಿಳಿಸಿದ ಅವರು, ಬಾಲ್ಯವಿವಾಹ ಹಾಗೂ ದೌರ್ಜನ್ಯ ತಡೆಗೆ ಮಕ್ಕಳ ಸಹಾಯವಾಣಿ ಸಂಖ್ಯೆ 1098 ಹಾಗೂ ಪೊಲೀಸ್ ತುರ್ತು ಸಹಾಯವಾಣಿ ಸಂಖ್ಯೆ 112 ಗೆ ಕರೆ ಮಾಡುವಂತೆ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮೀ ಚೌಧರಿ ಇದೇ ಸಂದರ್ಭದಲ್ಲಿ ಮನವಿ ಮಾಡಿದರು.
ಸಭೆಯಲ್ಲಿ ಜಿಲ್ಲಾ ಗ್ಯಾರಂಟಿ ಯೋಜನೆಗಳ ಪ್ರಾಧಿಕಾರದ ಜಿಲ್ಲಾ ಅಧ್ಯಕ್ಷ ಆರ್.ಶಿವಣ್ಣ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಸ್.ಜೆ. ಸೋಮಶೇಖರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್ ಕುಮಾರ್ ಬಂಡಾರು, ಉಪವಿಭಾಗಾಧಿಕಾರಿ ವೆಂಕಟೇಶ್ ನಾಯ್ಕ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ಭಾರತಿ ಆರ್ ಬಣಕಾರ್, ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಜಗದೀಶ್ ಹೆಬ್ಬಳ್ಳಿ ಸೇರಿದಂತೆ ವಿವಿಧ ಇಲಾಖೆ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳು ಇದ್ದರು.



About The Author
Discover more from JANADHWANI NEWS
Subscribe to get the latest posts sent to your email.