ಹಿರಿಯೂರು:
ಗ್ರಾಮೀಣ ಜನರ ಜೀವನಾಡಿ ಕೆರೆಗಳ ಪುನಶ್ಚೇತನಕ್ಕೆ ವಿಶೇಷ ಅನುದಾನವನ್ನು ಮೀಸಲಿಡಲಾಗಿದೆ ಎಂಬುದಾಗಿ ಜಿಲ್ಲಾ ಉಸ್ತುವಾರಿ ಸಚಿವರಾದ ಡಿ.ಸುಧಾಕರ್ ಅವರು ಹೇಳಿದರು.
ತಾಲ್ಲೂಕಿನ ಭರಮಗಿರಿ ಗ್ರಾಮದಲ್ಲಿ ಭಾನುವಾರ 1.50 ಕೋಟಿ ರೂ. ವೆಚ್ಚದಲ್ಲಿ ಕೆರೆ ಅಭಿವೃದ್ಧಿ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.
ಭರಮಗಿರಿಕೆರೆ ಸೇರಿದಂತೆ ವಿವಿಪುರ ವ್ಯಾಪ್ತಿಯ ಎಲ್ಲಾ ಕೆರೆಗಳಿಗೆ ಶಾಶ್ವತ ನೀರಾವರಿ ಸೌಲಭ್ಯ ಕಲ್ಪಿಸುವ ಯೋಜನೆ ರೂಪಿಸಲಾಗಿದ್ದು, ಶೀಘ್ರದಲ್ಲಿಯೇ ಎಲ್ಲಾ ಕೆರೆಗಳಿಗೆ ಶಾಶ್ವತ ನೀರು ಹರಿಸಲು ಕ್ರಮಕೈಗೊಳ್ಳಲಾಗುವುದು ಎಂಬುದಾಗಿ ಅವರು ಹೇಳಿದರು.
ಅಂತರ್ಜಲ ಕುಸಿತದಿಂದ ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿರುವ ಜೆ.ಜೆ.ಹೋಬಳಿಗೆ ವಾಣಿವಿಲಾಸ ಸಾಗರ ಜಲಾಶಯ ಹಾಗೂ ಗಾಯಿತ್ರಿ ಜಲಾಶಯದಿಂದ ಕೆರೆಗಳಿಗೆ ನೀರು ತುಂಬಿಸಲು ಪ್ರಸ್ತಾವನೆ ಸಲ್ಲಿಸಲಾಗಿದೆ. ಕಾಲ ಮಿತಿಯಲ್ಲಿ ಕಾರ್ಯಗತಗೊಳಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂಬುದಾಗಿ ಅವರು ಹೇಳಿದರು.
ಜಿಲ್ಲಾ ಪಂಚಾಯತ್ ಸದಸ್ಯ ಆರ್.ರಾಘವೇಂದ್ರ ಮಾತನಾಡಿ, ಜಿಲ್ಲಾ ಸಚಿವರ ಇಚ್ಚಾಶಕ್ತಿ ಫಲವಾಗಿ ಹಿರಿಯೂರು ಸೇರಿದಂತೆ ಗ್ರಾಮೀಣ ಭಾಗದ ಜನರಿಗೆ ವಾಣಿವಿಲಾಸ ಸಾಗರ ಜಲಾಶಯದಿಂದ ಪೈಪ್ ಲೈನ್ ಮೂಲಕ ಶಾಶ್ವತ ಕುಡಿಯುವ ನೀರಿನ ಸೌಲಭ್ಯ ಸಿಕ್ಕಿದೆ. ಜಲಾಶಯದ ಬಳಿ ಮೂಲ ಸೌಕರ್ಯ ಅಭಿವೃದ್ಧಿಗೆ ಸಚಿವರು ಆದ್ಯತೆ ನೀಡಬೇಕು ಎಂಬುದಾಗಿ ಅವರು ಮನವಿ ಮಾಡಿದರು.
ಕಾಂಗ್ರೆಸ್ ಮುಖಂಡ ಜಿ.ಪ್ರೇಮ್ ಕುಮಾರ್ ಮಾತನಾಡಿ, ನಮ್ಮ ಪೂರ್ವಜರು ಕಟ್ಟಿಸಿದ ಕೆರೆ, ಕಟ್ಟಡ, ಹಳ್ಳ, ಕೊಳ್ಳ, ಇತರ ಜಲಮೂಲಗಳ ಸಂರಕ್ಷಣೆ ಮಾಡಿದರೆ ಮಾತ್ರ ಭವಿಷ್ಯದಲ್ಲಿ ಕುಡಿಯುವ ನೀರಿನ ಸಮಸ್ಯೆ ದೂರವಾಗಲಿದೆ. ವಾಣಿವಿಲಾಸ ಸಾಗರ ಜಲಾಶಯ ಭರ್ತಿಯಾಗಿದ್ದು, ಕೋಡಿ ಬೀಳಲು ಕ್ಷಣಗಣನೆ ಶುರುವಾಗಿದೆ ಎಂಬುದಾಗಿ ಅವರು ಹೇಳಿದರು.
ಕೋಡಿ ಬೀಳುವ ಮೂಲಕ ವ್ಯರ್ಥವಾಗಿ ಹರಿಯುವ 10-15ಟಿ.ಎಂ.ಸಿ ಅಡಿ ನೀರನ್ನು ನದಿ ಪಾತ್ರದಲ್ಲಿ ಸಂರಕ್ಷಣೆ ಮಾಡಿದರೆ ಅಂತರ್ಜಲ ವೃದ್ಧಿಯಾಗಿ ಕೃಷಿ ಚಟುವಟಿಕೆಗಳಿಗೆ ಹಾಗೂ ಕುಡಿಯುವ ನೀರಿಗೆ ವರದಾನವಾಗಲಿದೆ ಎಂಬುದಾಗಿ ಅವರು ಹೇಳಿದರು.
ಈ ಸಂರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಖಾದಿ ರಮೇಶ್, ಮುಖಂಡರಾದ ಈರಲಿಂಗೇಗೌಡ, ಕೃಷ್ಣಮೂರ್ತಿ, ಶಿವಕುಮಾರ್, ಕಲ್ಲಹಟ್ಟಿಹರೀಶ್, ಭಾನುಪ್ರಕಾಶ್, ಮುನ್ನಾ, ಅತಾವುಲ್ಲಾ, ಮಹೇಶ್, ಜಯರಾಮ್, ರಘು, ಉಮೇಶ್, ಕುಮಾರ್, ಗೋವಿಂದಪ್ಪ, ನವೀದ್, ಜ್ಞಾನೇಶ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
About The Author
Discover more from JANADHWANI NEWS
Subscribe to get the latest posts sent to your email.