ಚಿತ್ರದುರ್ಗಜ.06:
ಕ್ಷಯರೋಗಿಗಳಿಗೆ ತ್ವರಿತ ಮತ್ತು ಸೂಕ್ತ ಚಿಕಿತ್ಸೆ ನೀಡಿ, ಮರಣ ಪ್ರಮಾಣ ಕಡಿಮೆಗೊಳಿಸಲು ಅಗತ್ಯ ಕ್ರಮವಹಿಸಬೇಕು ಎಂದು ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಅಧಿಕಾರಿಗಳಿಗೆ ಸೂಚನೆ ನೀಡಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸೋಮವಾರ ಕ್ಷಯರೋಗ ನಿರ್ಮೂಲನೆ ಅಭಿಯಾನ 100 ದಿನಗಳ ತೀವ್ರ ಪ್ರಚಾರ ಕಾರ್ಯಕ್ರಮದ ಕುರಿತ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ ಕ್ಷಯರೋಗವನ್ನು ವ್ಯವಸ್ಥಿತವಾಗಿ ನಿರ್ಮೂಲನೆ ಮಾಡಬೇಕು. ಕ್ಷಯರೋಗದಿಂದ ಒಬ್ಬ ರೋಗಿಯು ಕೂಡ ಸಾವನ್ನಪ್ಪಬಾರದು. ಈ ನಿಟ್ಟಿನಲ್ಲಿ ಕ್ಷಯರೋಗದ ಅಪಾಯ ಇರುವವರನ್ನು ಹೆಚ್ಚಿನ ಜಾಗರೂಕತೆಯಿಂದ ಆರೈಕೆ ಮಾಡಬೇಕು, ಅವರಿಗೆ ನಿರಂತರ ಚಿಕಿತ್ಸೆ ಹಾಗೂ ಔಷಧಿ ವಿತರಣೆ ಮೂಲಕ ಗುಣಮುಖರಾಗಲು ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.
ಕ್ಷಯ ಸರ್ವೆ ವ್ಯವಸ್ಥಿತವಾಗಿರಲಿ: ಕ್ಷಯರೋಗ ನಿರ್ಮೂಲನೆ ಅಂಗವಾಗಿ 100 ದಿನಗಳ ತೀವ್ರ ಪ್ರಚಾರ ಆಂದೋಲನದ ಅಂಗವಾಗಿ ಆಶಾ ಕಾರ್ಯಕರ್ತೆಯರು ಕಡ್ಡಾಯವಾಗಿ ಮನೆ ಮನೆ ಭೇಟಿ ನೀಡಿ, ಕ್ಷಯ ರೋಗದ ಬಗ್ಗೆ ಜಾಗೃತಿ ಮೂಡಿಸಬೇಕು. ಶಾಲಾ ಮಕ್ಕಳಲ್ಲಿಯೂ ಸಹ ಕ್ಷಯರೋಗ ಲಕ್ಷಣಗಳ ಕುರಿತು ಅರಿವು ಮೂಡಿಸಬೇಕು ಎಂದು ತಿಳಿಸಿದರು.
ಕ್ಷಯ ರೋಗ ನಿಯಂತ್ರಣದಲ್ಲಿ ಸರ್ಕಾರೇತರ ಸಂಘ ಸಂಸ್ಥೆಗಳು, ಸಾರ್ವಜನಿಕರು ಹೆಚ್ಚಿನ ಕಾಳಜಿ ವಹಿಸಿ, ಕ್ಷಯರೋಗ ನಿರ್ಮೂಲನೆಗೆ ಅಗತ್ಯ ಸಹಕಾರ ನೀಡಬೇಕು. ಕ್ಷಯರೋಗಿಳಿಗೆ ಪೌಷ್ಠಿಕಾಂಶಯುಕ್ತ ಆಹಾರ ಅತ್ಯಗತ್ಯವಾಗಿದೆ. ರೋಗ ಗುಣಮುಖಕ್ಕೆ ಚಿಕಿತ್ಸೆಯಷ್ಟೇ, ಪೌಷ್ಠಿಕ ಆಹಾರ ಸೇವನೆಯೂ ಮುಖ್ಯ. “ನಿಕ್ಷಯ್ ಮಿತ್ರ” ಕುರಿತು ಹೆಚ್ಚಿನ ಪ್ರಚಾರ ನೀಡಿ, ದಾನಿಗಳಿಂದ, ಸಂಘ ಸಂಸ್ಥೆಗಳಿಂದ ಪೌಷ್ಠಿಕಾಂಶಯುಕ್ತ ಆಹಾರ ಕಿಟ್‍ಗಳ ವಿತರಣೆಗೆ ಕ್ರಮ ವಹಿಸಿ ಎಂದು ಹೇಳಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಧಿಕಾರಿ ಡಾ. ಜಿ.ಪಿ.ರೇಣುಪ್ರಸಾದ್ ಮಾತನಾಡಿ, ರಾಷ್ಟ್ರೀಯ ಟಿವಿ ನಿರ್ಮೂಲನೆ ಕಾರ್ಯಕ್ರಮದಡಿ ಆಯೋಜಿಸಲಾಗಿರುವ ಅಭಿಯಾನದಲ್ಲಿ ಕ್ಷಯ ರೋಗ ಸಂಬಂಧಿತ ಮರಣವನ್ನು ಗಣನೀಯವಾಗಿ ಕಡಿಮೆ ಮಾಡುವ ಗುರಿ ಹೊಂದಲಾಗಿದೆ. 2025ರ ವೇಳೆ “ಟಿಬಿ-ಮುಕ್ತ ಭಾರತ”ವನ್ನಾಗಿಲು ರಾಷ್ಟ್ರವ್ಯಾಪ್ತಿ ಅಭಿಯಾನ ಹಮ್ಮಿಕೊಳ್ಳಲಾಗಿದ್ದು, ಕ್ಷಯಮುಕ್ತ ನೂರು ದಿನಗಳ ಅಭಿಯಾನ ಈಗಾಗಲೇ ಕಳೆದ 2024ರ ಡಿ.07 ರಿಂದ ಪ್ರಾರಂಭವಾಗಿದ್ದು, 2025ರ ಮಾರ್ಚ್ 24 ರವರೆಗೆ ಸಮೀಕ್ಷೆ ನಡೆಸಲಾಗುವುದು ಎಂದು ಹೇಳಿದರು.
