December 14, 2025
1764934420898.jpg

ಚಿತ್ರದುರ್ಗ ಡಿ.05:
ದೀರ್ಘಕಾಲದವರೆಗೆ ಹಕ್ಕು ಪಡೆಯದೆ ಉಳಿದಿರುವ ಬ್ಯಾಂಕ್ ಠೇವಣಿಗಳು, ವಿಮಾ ಕಂತುಗಳು ಮತ್ತು ಷೇರುಗಳನ್ನು ಅವುಗಳ ಮಾಲೀಕರು ಅಥವಾ ಕಾನೂನುಬದ್ಧ ವಾರಸುದಾರರಿಗೆ ಹಸ್ತಾಂತರಿಸುವ ನಿಟ್ಟಿನಲ್ಲಿ ಬ್ಯಾಂಕ್ ಅಧಿಕಾರಿಗಳು, ಜಿಲ್ಲೆಯಲ್ಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಮಹಿಳಾ ಸ್ವ-ಸಹಾಯ ಗುಂಪುಗಳ ನೆರವು ಪಡೆಯುವಂತೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಎಸ್.ಆಕಾಶ್ ಅವರು ಬ್ಯಾಂಕ್ ಅಧಿಕಾರಿಗಳಿಗೆ ಸೂಚನೆ ನೀಡಿದರು.
ನಗರದ ಜಿಲ್ಲಾ ಪಂಚಾಯಿತಿಯ ಮಿನಿ ಸಭಾಂಗಣದಲ್ಲಿ ಶುಕ್ರವಾರ ಹಕ್ಕು ಪಡೆಯದ ಬ್ಯಾಂಕ್ ಠೇವಣಿಗಳ ಇತ್ಯರ್ಥಕ್ಕಾಗಿ ಹಮ್ಮಿಕೊಂಡಿದ್ದ ವಿಶೇಷ ಶಿಬಿರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ತಾಲ್ಲೂಕುವಾರು ಬ್ಯಾಂಕಿನ ಪ್ರತಿ ಶಾಖೆಯಲ್ಲಿ ಧೀರ್ಘ ಕಾಲದವರೆಗೆ ಹಕ್ಕು ಪಡೆಯದೇ ಉಳಿದಿರುವ ಬ್ಯಾಂಕ್ ಠೇವಣಿಗಳ ವಾರಸುದಾರರ ಮಾಹಿತಿಯೊಂದಿಗೆ ಬ್ಯಾಂಕ್ ಅಧಿಕಾರಿಗಳು ಗ್ರಾಮ ಪಂಚಾಯಿತಿ, ಸ್ವ-ಸಹಾಯ ಗುಂಪುಗಳ ಸದಸ್ಯರ ಸಹಕಾರ ಪಡೆದು, ಸಂಬಂಧಪಟ್ಟ ವಾರಸುದಾರರನ್ನು ಗುರುತಿಸಿ, ಠೇವಣಿ ಮೊತ್ತವನ್ನು ಸಂಬಂಧಪಟ್ಟವರಿಗೆ ತಲುಪಿಸಬೇಕು. ಈ ಸಂಬಂಧ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಜವಾಬ್ದಾರಿ ನೀಡಲಾಗುವುದು ಎಂದು ಹೇಳಿದರು.
ಜಿಲ್ಲೆಯಲ್ಲಿ ಸರ್ಕಾರಿ ಇಲಾಖೆಗಳೂ ಸೇರಿದಂತೆ 3.08 ಲಕ್ಷಕ್ಕೂ ಹೆಚ್ಚು ಹಕ್ಕು ಪಡೆಯದ ಠೇವಣಿ, ನಿಷ್ಕ್ರಿಯ ಖಾತೆಗಳಿಂದ ರೂ.67 ಕೋಟಿ ಹಣ ಸಂಗ್ರಹವಿದೆ. ಕರ್ನಾಟಕ ಗ್ರಾಮೀಣ ಬ್ಯಾಂಕ್ ಒಂದರಲ್ಲಿಯೇ ಸುಮಾರು 1.40 ಲಕ್ಷಕ್ಕೂ ಹೆಚ್ಚು ನಿಷ್ಕ್ರಿಯವಾಗಿರುವ ಬ್ಯಾಂಕ್ ಖಾತೆಗಳಿಂದ ರೂ.23 ಕೋಟಿ ಹಣವಿದೆ ಎಂದು ತಿಳಿಸಿದ ಅವರು, ಸಂಬಂಧಪಟ್ಟ ಶಾಖೆಯ ವ್ಯವಸ್ಥಾಪಕರ ಪ್ರಗತಿ ಪರಿಶೀಲನೆ ನಡೆಸಿ, ಬ್ಯಾಂಕ್ ಖಾತೆಯನ್ನು ಮುಕ್ತಾಯಗೊಳಿಸಬೇಕು ಅಥವಾ ಸಕ್ರಿಯಗೊಳಿಸಬೇಕು. ಇದರ ಜೊತೆಗೆ ಸಾಮಾಜಿಕ ಭದ್ರತಾ ಯೋಜನೆಗಳಾದ ಪಿಎಂಜೆಜೆವೈ ಹಾಗೂ ಪಿಎಂಎಸ್‍ಬಿವೈ ಯೋಜನೆಗಳಿಗೆ ಹೆಚ್ಚಿನ ನಾಗರೀಕರು ನೊಂದಣಿಗೆ ಕ್ರಮವಹಿಸಬೇಕು ಎಂದು ತಿಳಿಸಿದರು.
ಆರ್‍ಬಿಐನ ಮುಖ್ಯ ಪ್ರಬಂಧಕರಾದ ಮೀನಾಕ್ಷಿ ಗುಂಜು ಮಾತನಾಡಿ, ಬ್ಯಾಂಕಿನಲ್ಲಿ ಹೊಸ ಖಾತೆಗಳನ್ನು ತೆರೆಯುವಾಗ ಹೊಸ ನಾಮಿನೇಷನ್ ನಿಯಮಾವಳಿಗಳ ಪ್ರಕಾರ ಪ್ರಕ್ರಿಯೆ ಪೂರ್ಣಗೊಳಿಸಬೇಕು ಎಂದು ಹೇಳಿದರು.
ಜಿಲ್ಲಾ ಮಾರ್ಗದರ್ಶಿ ಬ್ಯಾಂಕ್ ವ್ಯವಸ್ಥಾಪಕ ಎಂ.ರಾಘವೇಂದ್ರ ಮಾತನಾಡಿ, ದೀರ್ಘಕಾಲದವರೆಗೆ ಹಕ್ಕು ಪಡೆಯದೆ ಉಳಿದಿರುವ ಬ್ಯಾಂಕ್ ಠೇವಣಿಗಳು, ವಿಮಾ ಕಂತುಗಳು ಮತ್ತು ಷೇರುಗಳನ್ನು ಅವುಗಳ ಮಾಲೀಕರು ಅಥವಾ ಕಾನೂನುಬದ್ಧ ವಾರಸುದಾರರಿಗೆ ಹಸ್ತಾಂತರಿಸುವ ಸಲುವಾಗಿ ವಿಶೇಷ ಶಿಬಿರ ಆಯೋಜಿಸಲಾಗಿದ್ದು, ಭಾರತದ ಹಣಕಾಸು ಸಚಿವಾಲಯದ ಮಾರ್ಗಸೂಚಿಗಳ ಪ್ರಕಾರ ಎಲ್ಲಾ ಬ್ಯಾಂಕಿಂಗ್, ವಿಮೆ ಮತ್ತು ಇತರ ವಲಯಕ್ಕೆ ಸಂಬಂಧಿಸಿದ ಕಚೇರಿ ಶಾಖೆಗಳಲ್ಲಿ ಡಿಸೆಂಬರ್ 31 ರವರೆಗೆ ಮುಂದುವರೆಯುತ್ತದೆ ಎಂದರು.
ಖಾತೆದಾರರು ಅಥವಾ ಕಾನೂನುಬದ್ಧ ವಾರಸುದಾರರು ಬ್ಯಾಂಕಿನಲ್ಲಿ ಸತತ 10 ವರ್ಷಗಳಿಗೂ ಹೆಚ್ಚು ಕಾಲ ನಿಷ್ಕ್ರಿಯವಾಗಿರುವ ಖಾತೆಗಳಲ್ಲಿನ ಹಣ ಮತ್ತು ಕ್ಲೈಮ್ ಮಾಡದ ಠೇವಣಿಗಳನ್ನು ಕ್ಲೈಮ್ ಮಾಡಬಹುದು ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ನಿಷ್ಕ್ರಿಯಗೊಂಡಿದ್ದ ಬ್ಯಾಂಕ್ ಖಾತೆದಾರರಿಗೆ ಖಾತೆ ಸಕ್ರಿಯಗೊಳಿಸಿರುವ ಕುರಿತ ಪತ್ರಗಳನ್ನು ವಿತರಿಸಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿ ಯೋಜನಾ ನಿರ್ದೇಶಕಿ ಜಯಲಕ್ಷ್ಮೀ, ಕರ್ನಾಟಕ ಗ್ರಾಮೀಣ ಬ್ಯಾಂಕಿನ ಪ್ರಾದೇಶಿಕ ವ್ಯವಸ್ಥಾಪಕ ಜಗನ್ನಾಥ, ಕೆನರಾ ಬ್ಯಾಂಕ್ ವಿಭಾಗೀಯ ವ್ಯವಸ್ಥಾಪಕರಾದ ಅನಿತಾ ಸೇರಿದಂತೆ ವಿವಿಧ ಬ್ಯಾಂಕ್‍ಗಳು ಅಧಿಕಾರಿಗಳು ಇದ್ದರು
============

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading