December 14, 2025
FB_IMG_1733403202455.jpg



ಚಿತ್ರದುರ್ಗ ಡಿ.05:
ಚಿತ್ರದುರ್ಗ ನಗರದ ಅಭಿವೃದ್ಧಿಗೆ ರೂ.50 ಕೋಟಿ ಅನುದಾನ ನೀಡುವಂತೆ ಪೌರಾಡಳಿತ ಸಚಿವ ರಹೀಂ ಖಾನ್ ಅವರಿಗೆ ಪತ್ರ ಬರೆದಿರುವುದಾಗಿ ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ಹೇಳಿದರು.
ಗುರುವಾರ ನಗರಸಭೆ ಸಭಾಂಗಣದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದ ವಿದ್ಯಾರ್ಥಿಗಳಿಗೆ ಲ್ಯಾಪ್‍ಟಾಪ್ ವಿತರಿಸಿ ಅವರು ಮಾತನಾಡಿದರು.
ಪೌರಾಡಳಿತ ಸಚಿವರು ನಗರದ ಅಭಿವೃದ್ಧಿಗೆ ಹೆಚ್ಚಿನ ನೆರವು ನೀಡುತ್ತಿದ್ದಾರೆ. 15ನೇ ಹಣಕಾಸು ಹಾಗೂ ಸ್ವಚ್ಚಭಾರತ್ ಮಿಷನ್ ಯೋಜನೆಯಡಿ ನಗರದ ಕಸ ವಿಲೇವಾರಿಗಾಗಿ ರೂ.95.50 ಲಕ್ಷ ವೆಚ್ಚದಲ್ಲಿ 9 ವಾಹನಗಳನ್ನು ಸಚಿವರು ಮಂಜೂರು ಮಾಡಿದ್ದು, ಇವುಗಳಿಗೆ ಚಾಲನೆ ನೀಡಲಾಗಿದೆ. ಇದರೊಂದಿಗೆ 12 ಹೊಸ ಕಸ ವಿಲೇವಾರಿ ವಾಹನಗಳನ್ನು ನೀಡುವ ಭರವಸೆ ನೀಡಿದ್ದಾರೆ ಎಂದು ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ತಿಳಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯನವರು ಚಿತ್ರದುರ್ಗ ವಿಧಾನ ಸಭಾ ಕ್ಷೇತ್ರದ ಅಭಿವೃದ್ಧಿಗೆ ರೂ.25 ಕೋಟಿ ಅನುದಾನ ನೀಡಿದ್ದರು. ಇದರಲ್ಲಿ ರೂ.7.19 ಕೋಟಿಯನ್ನು ನಗರದ ಅಭಿವೃದ್ಧಿಗಾಗಿ ಮೀಸಲು ಇರಿಸಲಾಗಿದೆ. ಯಾವುದೇ ತಾರತಮ್ಯ ಮಾಡದೆ ನಗರ ವ್ಯಾಪ್ತಿಯ ಪ್ರತಿ ವಾರ್ಡ್‍ಗಳಿಗೂ ರೂ.30.95 ಲಕ್ಷ ಅನುದಾನ ನೀಡಲಾಗಿದೆ. ಇದರಲ್ಲಿ ಸಿಸಿ ರಸ್ತೆ, ಒಳಚರಂಡಿ, ಹೈಮಾಸ್ಟ್ ದೀಪ, ಉದ್ಯಾನವನ ಸೇರಿದಂತೆ ಅಗತ್ಯ ಮೂಲಭೂತ ಸೌಕರ್ಯ ಅಭಿವೃದ್ಧಿ ಪಡಿಸಲಾಗುವುದು. ಈ ಕಾಮಗಾರಿಗಳ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದ್ದು, ಗುದ್ದಲಿ ಪೂಜೆ ನೆರವೇರಿಸಿ ಕಾಮಗಾರಿಗೆ ನಿರ್ಮಾಣಕ್ಕೆ ಚಾಲನೆ ನೀಡಲಾಗುತ್ತಿದೆ ಎಂದು ತಿಳಿಸಿದರು.
ಎಂ.ಬಿ.ಬಿ.ಎಸ್ ಹಾಗೂ ಬಿ.ಇ ಓದುತ್ತಿರುವ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ರಾಜ್ಯ ಹಣಕಾಸು ಆಯೋಗ ಹಾಗೂ ನಗರಸಭೆಯ ಅನುದಾನದಲ್ಲಿ ಲ್ಯಾಪ್ ಟಾಪ್ ವಿತರಿಸಲಾಗುತ್ತಿದೆ. ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕು. ಎಂ.ಬಿ.ಬಿ.ಎಸ್ ವಿದ್ಯಾರ್ಥಿಗಳು ವಿದ್ಯಾಭ್ಯಾಸ ತರುವಾಯ ವೈದ್ಯ ವೃತ್ತಿಯಲ್ಲಿ ಬಡವರ ಸೇವೆ ಮಾಡಬೇಕು ಎಂದು ಕಿವಿಮಾತು ಹೇಳಿದರು.
ಕೊಳಚೆ ನಿರ್ಮೂಲನಾ ಮಂಡಳಿಯಿಂದ ನೀಡಿರುವ ಹಕ್ಕುಪತ್ರಗಳಿಗೆ ನಗರಸಭೆಯಿಂದ ಇ-ಸ್ವತ್ತು ನೀಡಿದ್ದು, ಮುಂದೆ ಯಾರು ಕೂಡ ಇ-ಸ್ವತ್ತು ಪಡೆಯಲು ನಗರಸಭೆಗೆ ಸುತ್ತಾಡುವ ಅಗತ್ಯವಿಲ್ಲ. ತಮ್ಮ ಕೈಗೆ ಇ-ಸ್ವತ್ತುಗಳನ್ನು ತಲುಪಿಸಲಾಗುವುದು. ನಗರದಲ್ಲಿ 1001 ವಸತಿ ನಿರ್ಮಾಣಗಳ ಕಾರ್ಯ ನಡೆಯುತ್ತಿದೆ. ಇದರಲ್ಲಿ ಎಲ್ಲೂ ಫಲಾನುಭವಿಗಳ ಪುನಾರವರ್ತನೆ ಆಗದಂತೆ ಅರ್ಹ ಫಲಾನುಭವಿಗಳಿಗೆ ಮನೆಗಳನ್ನು ಮಂಜೂರು ಮಾಡಲಾಗುವುದು ಎಂದು ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ತಿಳಿಸಿದರು.
ರಸ್ತೆ ನಿರ್ಮಾಣಕ್ಕೆ ಭೂಮಿ ಪೂಜೆ:
** ಕಾರ್ಯಕ್ರಮಕ್ಕೂ ಮುನ್ನ ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ, ಸರ್ಕಾರಿ ಬಾಲಕಿಯರ ಜ್ಯೂನಿಯರ್ ಕಾಲೇಜು ಹಿಂಭಾಗದ ರಸ್ತೆಯ, ನಗರಸಭೆ ಕ್ರಾಸ್‍ನಿಂದ ರಂಗಯ್ಯನ ಬಾಗಿಲು ಹತ್ತಿರದ ಗಣೇಶ ದೇವಸ್ಥಾನದ ಮುಂಭಾಗದವರೆಗೆ, ರೂ.57 ಲಕ್ಷಗಳ ವೆಚ್ಚದಲ್ಲಿ ನಿರ್ಮಿಸುತ್ತಿರುವ ಸಿಸಿ ರಸ್ತೆ ಹಾಗೂ ಚರಂಡಿ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದರು.
ಕಸ ವಿಲೇವಾರಿ ವಾಹನಗಳಿಗೆ ಚಾಲನೆ:
15ನೇ ಹಣಕಾಸು ಹಾಗೂ ಸ್ವಚ್ಚಭಾರತ್ ಮಿಷನ್ ಯೋಜನೆಯಡಿ ನಗರದ ಕಸ ವಿಲೇವಾರಿಗಾಗಿ ರೂ.95.50 ಲಕ್ಷ ವೆಚ್ಚದಲ್ಲಿ ಖರೀದಿಸಿ 9 ವಾಹನಗಳಿಗೆ ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ಚಾಲನೆ ನೀಡಿದರು.
ಲ್ಯಾಪ್‍ಟಾಪ್ ವಿತರಣೆ:
*ರಾಜ್ಯ ಹಣಕಾಸು ಆಯೋಗ ಹಾಗೂ ನಗರ ಸಭೆಯ ನಿಧಿಯಡಿ 26 ಪರಿಶಿಷ್ಟ ಜಾತಿ ಹಾಗೂ 10 ಪರಿಶಿಷ್ಟ ವರ್ಗ ವಿದ್ಯಾರ್ಥಿಗಳಿಗೆ ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ಲ್ಯಾಪ್‍ಟಾಪ್ ವಿತರಿಸಿದರು.
ಹಕ್ಕು ಪತ್ರ ವಿತರಣೆ : ಕೊಳಚೆ ನಿರ್ಮೂಲನಾ ಮಂಡಳಿಯಿಂದ ನೀಡಿರುವ ಹಕ್ಕುಪತ್ರಗಳ ಇ-ಸ್ವತ್ತನ್ನು ಸಾಂಕೇತಿಕವಾಗಿ 10 ಫಲಾನುಭವಿಗಳಿಗೆ ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ನೀಡಿದರು.
ಈ ಸಂದರ್ಭದಲ್ಲಿ ನಗರ ಸಭೆ ಅಧ್ಯಕ್ಷೆ ಸುಮಿತಾ ಬಿ.ಎಸ್., ಉಪಾಧ್ಯಕ್ಷೆ ಶ್ರೀದೇವಿ ಜಿ.ಎಸ್., ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಸೈಯದ್ ನಸರುಲ್ಲಾ, ಪೌರಾಯುಕ್ತೆ ಎಂ.ರೇಣುಕಾ ಸೇರಿದಂತೆ ನಗರಸಭೆ ಸದಸ್ಯರು, ಗಣ್ಯರು ಉಪಸ್ಥಿತರಿದ್ದರು.

===========

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading