ವರದಿ: ಕೆ.ಟಿ.ಮೋಹನ್ ಕುಮಾರ್
ಮೈಸೂರು ಜಿಲ್ಲೆಯ ಸಾಲಿಗ್ರಾಮ ಪಟ್ಟಣದ ಎಸ್ ಸಿ ಎಜುಕೇಶನ್ ಲೀಗ್ ವಿದ್ಯಾ ಸಂಸ್ಥೆಯ ಸುವರ್ಣ ಮಹೋತ್ಸವ ಸಮಾರಂಭವನ್ನು ಡಿ.7ರಂದು ಪಟ್ಟಣದಲ್ಲಿ ಆಯೋಜಿಸಲಾಗಿದೆ ಎಂದು ವಿದ್ಯಾಸಂಸ್ಥೆಯ ಗೌರವ ಕಾರ್ಯದರ್ಶಿ ಎಂ.ಚನ್ನಮಲ್ಲಯ್ಯ ಹೇಳಿದರು.

ಅವರು ಪಟ್ಟಣದ ಶ್ರೀ ಚನ್ನಕೇಶವ ಸ್ವಾಮಿ ವಿದ್ಯಾಸಂಸ್ಥೆಯಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು.
ಡಿ.7ರ ಶನಿವಾರ ಸಾಲಿಗ್ರಾಮ ಪಟ್ಟಣದ ಪೊಲೀಸ್ ಸ್ಟೇಷನ್ ಹಿಂಭಾಗ ಇರುವ ಶಾಲಾ ಆವರಣದಲ್ಲಿ ಬೆಳಿಗ್ಗೆ 11ಗಂಟೆಗೆ ಸಂಸ್ಥೆಯ ಸುವರ್ಣ ಮಹೋತ್ಸವದ 50ರ ಸಂಭ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಸಂಸ್ಥೆಯ ಸಂಸ್ಥಾಪಕರಾದ ಸಿ.ಕಾಳಯ್ಯ ಅವರು ಶಿಕ್ಷಣ ಕ್ಷೇತ್ರಕ್ಕೆ ಅಪಾರ ಕೊಡುಗೆಗಳನ್ನು ನೀಡಿದ್ದಾರೆ. ಇವರು ಸಾಲಿಗ್ರಾಮ, ಹಳ್ಳಿಮೈಸೂರು, ಕೊಣನೂರು, ಅರಕಲಗೂಡು, ಗೋರೂರು, ಆಲೂರುಗಳಲ್ಲಿ ಹಲವು ವಿದ್ಯಾಸಂಸ್ಥೆಗಳನ್ನು ತೆರೆದಿದ್ದಾರೆ.
ಸಾಲಿಗ್ರಾಮ ಪಟ್ಟಣದಲ್ಲಿ ಪ್ರೌಢಶಾಲೆ, ಪದವಿಪೂರ್ವ ಕಾಲೇಜು, ಪ್ರಥಮ ದರ್ಜೆ ಕಾಲೇಜು, ಟೈಪಿಂಗ್ ಸಂಸ್ಥೆಗಳನ್ನು ತೆರೆದು ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ನೀಡಲು ಶ್ರಮಿಸಿದ್ದಾರೆ.
ಸಾಲಿಗ್ರಾಮದಲ್ಲಿ ತೆರೆದಿರುವ ಪ್ರಥಮ ದರ್ಜೆ ಕಾಲೇಜು ಮೈಸೂರು ವಿಭಾಗದ ಎಂಟು ಜಿಲ್ಲೆಗಳಲ್ಲಿ ಪರಿಶಿಷ್ಟ ಜಾತಿಯ ಏಕೈಕ ಪ್ರಥಮ ದರ್ಜೆ ಕಾಲೇಜು ಎಂಬ ಕೀರ್ತಿಗೆ ಪಾತ್ರವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ದೇವಲಾಪುರದ ಅಮ್ಮ ವಸುಂದರೇ ಕಲಾತಂಡ, ಪಟ್ಟಣದ ಸರಿಗಮಪ ಮೆಲೋಡಿಸ್, ಮೈಸೂರಿನ ತರು ಮ್ಯೂಸಿಕಲ್ ಇವೆಂಟ್ಸ್ ತಂಡಗಳಿಂದ ಗೀತ ಗಾಯನ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ ಎಂದರು.
ವಿದ್ಯಾ ಸಂಸ್ಥೆಯ ಸುವರ್ಣ ಮಹೋತ್ಸವ ಕಾರ್ಯಕ್ರಮದ ದಿವ್ಯಸಾನಿಧ್ಯವನ್ನು ಉರಿಲಿಂಗ ಪೆದ್ದೀಶ್ವರ ಶಾಖಾಮಠದ ಶ್ರೀ ಜ್ಞಾನ ಪ್ರಕಾಶ ಸ್ವಾಮೀಜಿ ಅವರು ವಹಿಸಿದರೆ ಶಾಸಕ ಡಿ.ರವಿಶಂಕರ್, ವಿಧಾನಪರಿಷತ್ ಸದಸ್ಯ
ಹೆಚ್.ವಿಶ್ವನಾಥ್, ಮಾಜಿ ಸಚಿವ ಸಾ.ರಾ.ಮಹೇಶ್, ಎಸ್ ಸಿ ಈ ಎಲ್ ವಿದ್ಯಾಸಂಸ್ಥೆಯ ಅಧ್ಯಕ್ಷೆ ನಾಗರತ್ನ ಸೇರಿದಂತೆ ಹಲವು ಗಣ್ಯರುಗಳು ಪಾಲ್ಗೊಳ್ಳಲಿದ್ದಾರೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ವಿದ್ಯಾ ಸಂಸ್ಥೆಯ ನಿರ್ದೇಶಕ
ಎಸ್.ಕೆ.ಹೊನ್ನಪ್ಪ, ವಿದ್ಯಾ ಸಂಸ್ಥೆಯ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಪಿ.ಉಮೇಶ್, ಪ್ರೌಢಶಾಲಾ ಮುಖ್ಯ ಶಿಕ್ಷಕ ಎಸ್.ಸಿ.ಗೋವಿಂದರಾಜು, ಉಪನ್ಯಾಸಕರಾದ ಮಂಜುನಾಥ್, ರಂಜಿತ, ಶಿಕ್ಷಕ ಪ್ರವೀಣ್ ಇದ್ದರು.
About The Author
Discover more from JANADHWANI NEWS
Subscribe to get the latest posts sent to your email.