
ಬಳ್ಳಾರಿ,ಜು.05
ರೈತರು ತಮ್ಮ ಜಮೀನುಗಳನ್ನು ಪೌತಿ ಮಾಡಿಸಿಕೊಳ್ಳಲು ಇನ್ಮುಂದೆ ಕಂದಾಯ ಇಲಾಖೆ ಕಚೇರಿವರೆಗೂ ಅಲೆಯಬೇಕಿಲ್ಲ. ಸರಕಾರವೇ ಇ-ಪೌತಿ ಆಂದೋಲನದ ಮೂಲಕ ನಿಮ್ಮ ಮನೆ ಬಾಗಿಲಿಗೆ ಬರಲಿದೆ ಇದರ ಸದುಪಯೋಗಪಡೆಸಿಕೊಳ್ಳುವಂತೆ ಜಿಲ್ಲಾಧಿಕಾರಿ ಪ್ರಶಾಂತ್‌ಕುಮಾರ್ ಮಿಶ್ರಾ ಅವರು ಮನವಿ ಮಾಡಿದ್ದಾರೆ.
ಜಿಲ್ಲೆಯಲ್ಲಿ ಮೃತಪಟ್ಟ ಜಮೀನು ಮಾಲೀಕರ ಹೆಸರಿನಲ್ಲಿರುವ ಪಹಣಿಗಳನ್ನು ವಾರಸುದಾರರ ಹೆಸರಿಗೆ ನೋಂದಣಿ ಮಾಡಿಕೊಡಲು ಈ ಹಿಂದಿನಿಂದಲೂ ಅಭಿಯಾನಗಳು ನಡೆದಿವೆ. ಹೋಬಳಿ, ಗ್ರಾಮ ಮಟ್ಟದಲ್ಲಿ ಅಭಿಯಾನ ನಡೆದಿವೆ. ಆದರೂ ಇನ್ನು ಕೆಲವು ಪ್ರಕರಣ ಬಾಕಿ ಇದ್ದು, ಕಂದಾಯ ಇಲಾಖೆ ಸಚಿವರ ನಿರ್ದೇಶನದ ಮೇರೆಗೆ ಮನೆ ಬಾಗಿಲಿಗೆ ಕಂದಾಯ ಸೇವೆಗಳ ‘ಇ-ಪೌತಿ’ ಆಂದೋಲನ ಆರಂಭಿಸಲಾಗಿದೆ.
ಈ ಯೋಜನೆಯಡಿ ಕಂದಾಯ ನಿರೀಕ್ಷಕರು ಮತ್ತು ಗ್ರಾಮ ಅಭಿವೃದ್ಧಿ ಅಧಿಕಾರಿಗಳು ರೈತರ ಮನೆ ಬಾಗಿಲಿಗೆ ತೆರಳಿ, ವಾರಸುದಾರರಿಗೆ ಮೊಬೈಲ್ ಮೂಲಕ ಪೌತಿ ಖಾತೆಯನ್ನು ನೋಂದಾಯಿಸಲಿದ್ದಾರೆ. ಈ ಪ್ರಕ್ರಿಯೆಯಲ್ಲಿ ಆಧಾರ್ ಸೀಡಿಂಗ್‌ನ ಮೂಲಕ ಭೂಮಿ ಹಿಡುವಳಿಯ ನಿಖರ ಮಾಹಿತಿಯನ್ನು ಸಂಗ್ರಹಿಸಲಾಗುತ್ತದೆ ಎಂದು ಹೇಳಿದ್ದಾರೆ.
ಜಿಲ್ಲೆಯಲ್ಲಿ ಮೃತಪಟ್ಟ 75,000 ಜಮೀನುಗಳ ಮಾಲೀಕರ ಪಹಣಿಗಳನ್ನು ವಾರಸುದಾರರ ಹೆಸರಿಗೆ ನೋಂದಣಿ ಮಾಡಿಕೊಡಲು ಇ-ಪೌತಿ ಆಂದೋಲನವನ್ನು ಆರಂಭಿಸಿದೆ. ಆಧಾರ್ ಜೋಡಣೆಯಿಂದ ಕೃಷಿ ಭೂಮಿಯ ಪ್ರಮಾಣ, ರೈತರ ಭೂ ಹಿಡುವಳಿ, ಮತ್ತು ಸಣ್ಣ ಹಾಗೂ ಅತಿ ಸಣ್ಣ ರೈತರ ಸಂಖ್ಯೆಯ ಬಗ್ಗೆ ನಿಖರ ಅಂಕಿ-ಅಂಶಗಳು ಲಭ್ಯವಾಗಲಿವೆ ಎಂದಿದ್ದಾರೆ.
ಮರಣ ಹೊಂದಿದ ವ್ಯಕ್ತಿಯ ಹೆಸರಿನಲ್ಲಿರುವ ಆಸ್ತಿಯನ್ನು ತಮ್ಮ ಕಾನೂನು ಬದ್ದ ವಾರಸುದಾರರ ಹೆಸರಿಗೆ ಜಮೀನಿನ ಖಾತೆಯನ್ನು ವರ್ಗಾವಣೆ ಮಾಡುವುದನ್ನು ಪೌತಿ ಖಾತೆ ಎನ್ನಲಾಗುವುದು.
ಮನೆ ಬಾಗಿಲಿಗೆ ಹೋಗಿ ಪೌತಿ ಖಾತೆ ಅಭಿಯಾನ ನಡೆಸುತ್ತಿರುವುದರಿಂದ ಅರ್ಹರಿಗೆ ಸುಲಭವಾಗಿ ಪೌತಿ ಖಾತೆ ಲಭ್ಯವಾಗುತ್ತದೆ. ಜಮೀನಿನ ವಾರಸುದಾರಿಕೆಯ ಪಹಣಿ ಸಿಗುತ್ತದೆ.
ಇ-ಪೌತಿ ಆಂದೋಲನಕ್ಕಾಗಿ ಕಂದಾಯ ಇಲಾಖೆಯು ಪ್ರತ್ಯೇಕ ತಂತ್ರಾಂಶ ಅಭಿವೃದ್ಧಿಪಡಿಸಿದೆ. ಈ ತಂತ್ರಾಂಶವು ವಂಶವೃಕ್ಷದ ಆಧಾರದ ಮೇಲೆ ವಾರಸುದಾರರ ಮಾಹಿತಿಯನ್ನು ಸಂಗ್ರಹಿಸಿ, ಆಧಾರ್ ಸಂಖ್ಯೆಯ ಮೂಲಕ ಒಟಿಪಿ ಪರಿಶೀಲನೆ ನಡೆಸುತ್ತದೆ.
ಈ ಪ್ರಕ್ರಿಯೆಯು ಪೌತಿ ಖಾತೆ ನೋಂದಣಿಯಲ್ಲಿ ಸಂಭವಿಸಬಹುದಾದ ಅಕ್ರಮ ಕಡಿವಾಣ ಹಾಕಲು ಮತ್ತು ರೈತರಿಗೆ ತಮ್ಮ ಆಸ್ತಿಯ ದಾಖಲೆಗಳನ್ನು ಸರಿಪಡಿಸಿಕೊಳ್ಳಲು ಈ ಯೋಜನೆಯು ಸರಳ ಮತ್ತು ಪಾರದರ್ಶಕ ವೇದಿಕೆಯಾಗಿದೆ ಎಂದು ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಅವರು ತಿಳಿಸಿದ್ದಾರೆ.
ಸರಕಾರಿ ಸೌಲಭ್ಯ ಸಿಗಲ್ಲ:
ಮೃತಪಟ್ಟ ರೈತರ ಹೆಸರಿನಲ್ಲಿರುವ ಜಮೀನು ಇ-ಪೌತಿ ಮಾಡಿಸಿಕೊಳ್ಳದೇ ಹಾಗೆಯೇ ಬಿಟ್ಟರೇ ಆ ಕುಟುಂಬ ಸರಕಾರದ ಸೌಲಭ್ಯಗಳಿಂದ ವಂಚಿತವಾಗಲಿದೆ. ಪಿಎಂ ಕಿಸಾನ್ ಸಮ್ಮಾನ, ಫಸಲ್ ವಿಮಾ ಯೋಜನೆ ಸೇರಿ ಹಲವು ಸರಕಾರಿ ಸೌಲಭ್ಯಗಳು ಕಳೆದುಕೊಳ್ಳಬೇಕಾಗುತ್ತದೆ. ಹೀಗಾಗಿ ಸಂಬಂಧಪಟ್ಟ ಕುಟುಂಬದ ವಾರಸುದಾರರು ಇ-ಪೌತಿ ಆಂದೋಲನದಲ್ಲಿ ಭಾಗವಹಿಸಿ ತಮ್ಮ ಜಮೀನನ್ನು ವರ್ಗಾಯಿಸಿಕೊಳ್ಳಲು ಅವಕಾಶವಿದೆ. ಹೀಗಾಗಿ ರೈತರು ಯಾವುದೇ ಕಾರಣಕ್ಕೂ ಇದನ್ನು ತಪ್ಪಿಸಿಕೊಳ್ಳಬೇಡಿ ಎಂದು ಜಿಲ್ಲಾಧಿಕಾರಿಗಳು ಮನವಿ ಮಾಡಿದ್ದಾರೆ.
========
About The Author
Discover more from JANADHWANI NEWS
Subscribe to get the latest posts sent to your email.