March 5, 2026
IMG-20260305-WA0111.jpg

ಚಳ್ಳಕೆರೆ: ಇತ್ತೀಚಿನ ದಿನಗಳಲ್ಲಿ ಯುವ ಸಮುದಾಯ ಅತಿಯಾದ ಮೊಬೈಲ್ ಬಳಕೆಯಿಂದ ಮಾನಸಿಕವಾಗಿ ಕುಗ್ಗುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದ್ದು, ಅದರಿಂದ ಹೊರಬಂದು ದೈಹಿಕ ಹಾಗೂ ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳಲು ಕ್ರೀಡೆಗಳು ಅತ್ಯಂತ ಸಹಕಾರಿಯಾಗುತ್ತವೆ ಎಂದು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವಿಜಯ್ ಕೆ ಹೇಳಿದರು.

ತಾಲೂಕಿನ ಸಾಣಿಕೆರೆ ಗ್ರಾಮದಲ್ಲಿ ಯುವಕರ ಸಂಘದ ವತಿಯಿಂದ ಆಯೋಜಿಸಿದ್ದ ಟೆನಿಸ್ ಬಾಲ್ ಕ್ರಿಕೆಟ್ ಟೂರ್ನಿಮೆಂಟ್‌ಗೆ ಚಾಲನೆ ನೀಡಿ ಅವರು ಮಾತನಾಡಿದರು. ಇಂದಿನ ಯುವಕರು ಹೆಚ್ಚಿನ ಸಮಯವನ್ನು ಮೊಬೈಲ್ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಕಳೆಯುತ್ತಿರುವುದರಿಂದ ದೈಹಿಕ ಚಟುವಟಿಕೆಗಳು ಕಡಿಮೆಯಾಗುತ್ತಿವೆ. ಇದರ ಪರಿಣಾಮವಾಗಿ ಮಾನಸಿಕ ಒತ್ತಡ, ಖಿನ್ನತೆ ಹಾಗೂ ಆರೋಗ್ಯ ಸಮಸ್ಯೆಗಳು ಹೆಚ್ಚಾಗುತ್ತಿವೆ ಎಂದು ಆತಂಕ ವ್ಯಕ್ತಪಡಿಸಿದರು. ಜೊತೆಗೆ

ಕ್ರೀಡೆಗಳು ಕೇವಲ ಮನರಂಜನೆಗೆ ಮಾತ್ರ ಸೀಮಿತವಾಗಿಲ್ಲ. ಅವು ವ್ಯಕ್ತಿಯ ದೈಹಿಕ ಸಾಮರ್ಥ್ಯವನ್ನು ಹೆಚ್ಚಿಸುವುದರ ಜೊತೆಗೆ ಮನೋಬಲ, ಶಿಸ್ತು, ತಂಡಭಾವನೆ ಮತ್ತು ಸ್ಪರ್ಧಾತ್ಮಕ ಮನೋಭಾವವನ್ನು ಬೆಳೆಸುತ್ತವೆ. ವಿಶೇಷವಾಗಿ ಕ್ರಿಕೆಟ್ ಸೇರಿದಂತೆ ವಿವಿಧ ಕ್ರೀಡೆಗಳಲ್ಲಿ ಭಾಗವಹಿಸುವುದರಿಂದ ಯುವಕರಲ್ಲಿ ಚೈತನ್ಯ ಹೆಚ್ಚಾಗಿ ಬುದ್ಧಿಶಕ್ತಿ ಚುರುಕಾಗುತ್ತದೆ ಎಂದರು.

ಯುವ ಮುಖಂಡ ದರ್ಶನ್ ಮಾತನಾಡಿ ಗ್ರಾಮೀಣ ಪ್ರದೇಶಗಳಲ್ಲಿ ಯುವಕರು ಕ್ರೀಡಾಕ್ಷೇತ್ರದ ಕಡೆ ಹೆಚ್ಚು ಗಮನ ಹರಿಸಿದರೆ ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ಸಹಕಾರಿಯಾಗುತ್ತದೆ. ಕ್ರೀಡೆಗಳು ಯುವಕರನ್ನು ಕೆಟ್ಟ ಅಭ್ಯಾಸಗಳಿಂದ ದೂರವಿಟ್ಟು ಸಕಾರಾತ್ಮಕ ಚಟುವಟಿಕೆಗಳತ್ತ ಕರೆದೊಯ್ಯುತ್ತವೆ. ಆದ್ದರಿಂದ ಯುವಕರು ಮೊಬೈಲ್ ಬಳಕೆಯನ್ನು ನಿಯಂತ್ರಿಸಿಕೊಂಡು ಹೆಚ್ಚು ಸಮಯವನ್ನು ಕ್ರೀಡಾಂಗಣಗಳಲ್ಲಿ ಕಳೆಯಬೇಕು. ಇಂತಹ ಕಾರ್ಯಕ್ರಮಗಳು ಗ್ರಾಮದಲ್ಲಿ ಸ್ನೇಹ, ಸಹಕಾರ ಮತ್ತು ಏಕತೆ ಹೆಚ್ಚಿಸಲು ಸಹಕಾರಿಯಾಗುತ್ತವೆ. ಗ್ರಾಮೀಣ ಯುವಕರು ತಮ್ಮ ಪ್ರತಿಭೆಯನ್ನು ಹೊರಹಾಕಲು ಕ್ರೀಡಾಕೂಟಗಳು ಉತ್ತಮ ವೇದಿಕೆಯಾಗಿ ಕಾರ್ಯನಿರ್ವಹಿಸುತ್ತವೆ ಎಂದು ಸಲಹೆ ನೀಡಿದರು.

ಈ ಟೂರ್ನಿಯಲ್ಲಿ ನಾಲ್ಕು ತಂಡಗಳ ವಿವಿಧ ಆಟಗಾರರು ಭಾಗವಹಿಸಿ ಉತ್ತಮ ಕ್ರೀಡಾಸ್ಫೂರ್ತಿಯೊಂದಿಗೆ ಸ್ಪರ್ಧೆಯಲ್ಲಿ ಪಾಲ್ಗೊಂಡು ಪ್ರೇಕ್ಷಕರ ಮನರಂಜನೆಗೆ ಕಾರಣರಾದರು.

ಈ ಸಂದರ್ಭದಲ್ಲಿ ರವಿಕುಮಾರ್, ರವೀಶ್, ಶಿವಪ್ಪ ನಾಯಕ, ಜಗನ್ನಾಥ ಹಾಗೂ ಗ್ರಾಮದ ಮುಖಂಡರು, ಯುವಕರ ಸಂಘದ ಪದಾಧಿಕಾರಿಗಳು, ಕ್ರೀಡಾಪಟುಗಳು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading