ಹಿರಿಯೂರಿನ ಶ್ರೀ ತೇರುಮಲ್ಲೇಶ್ವರ ಸ್ವಾಮಿಯ ಜಾತ್ರೆಯ ರಥೋತ್ಸವ ನೋಡಲು ಹೋಗಿದ್ದೆ. ನಾವು ಬಾಲ್ಯದಲ್ಲಿ ನೋಡಿದ್ದ ಜಾತ್ರೆಗೂ ಇಂದಿಗೂ ಜನರ ಭಕ್ತಿ-ಭಾವಗಳಲ್ಲಿ ಅಂತಹಾ ವ್ಯತ್ಯಾಸವಿರದೇ ಹೋದರೂ ಊರಲ್ಲಿ ಎಲ್ಲಿ ನೋಡಿದರೂ ಅಂದಿನ ದಿನಗಳಲ್ಲಿ ಇರದ ರಾಜಕೀಯ ಮುಖಂಡರ- ಬೆಂಬಲಿಗರ ಫ಼್ಲೆಕ್ಸು ಗಳು, ಬ್ಯಾನರ್ ಗಳು, ಪೋಸ್ಟರ್ ಗಳೇ ಕಣ್ಣಿಗೆ ರಾಚುವಂತಿದ್ದು ಇವು ಕೇವಲ ಊರಿನ ರಸ್ತೆಗಳಲ್ಲಿ ಮಾತ್ರವಲ್ಲದೇ ತೇರುಮಲ್ಲೇಶ್ವರ ಸ್ವಾಮಿಯ ದೇವಾಲಯದ ರಥೋತ್ಸವ ನಡೆಯುವ ಬಳಿಯಲ್ಲೂ ಎದ್ದು ಕಾಣುವಂತಿದ್ದು ಧಾರ್ಮಿಕ ವಾತಾವರಣಕ್ಕಿಂತ ರಾಜಕೀಯವೇ ರಂಗೇರಿದಂತೆ ಅವಲಕ್ಷಣವೆನಿಸಿತ್ತು.!
ಜೊತೆಗೆ ಮುಕ್ತಿಬಾವುಟದ ಹರಾಜು ಪ್ರಕ್ರಿಯೆಯೆಂಬುದು ರಾಜಕೀಯ ವೈರಿಗಳ ಹಣಬಲ ಪ್ರದರ್ಶನದ ಜಿದ್ದಾಜಿದ್ದಿಗೆ ವೇದಿಕೆಯಾಗಿ ಮಾರ್ಪಟ್ಟು ಯಾರ ಬಾಯಲ್ಲಿ ನೋಡಿದರೂ ಈ ರಾಜಕೀಯ ಸ್ಪರ್ಧೆ ಕುರಿತಾದ ಮಾತುಗಳು, ಹಾಲಿ ಶಾಸಕರ ಮತ್ತು ಅವರ ಎದುರಾಳಿಗಳ ಹಾಗೂ ಮುಂದಿನ ಅಸೆಂಬ್ಲಿ ಚುನಾವಣೆಯ ಸ್ಪರ್ಧಾಕಾಂಕ್ಷಿಗಳ ಬಲಾಬಲದ ಪ್ರದರ್ಶನಗಳ ವೈಭವದಲ್ಲಿ ರಥೋತ್ಸವದ ಧಾರ್ಮಿಕ ಮಹತ್ವ ತಣ್ಣಗೆ ಮರೆಯಾಗಿದ್ದು ಸುಳ್ಳಲ್ಲ. ಅಂದಹಾಗೆ ಇತ್ತೀಚಿನ ದಿನಗಳಲ್ಲಿ ಧಾರ್ಮಿಕ ಉತ್ಸವಗಳನ್ನೂ ಬಿಡದ ಈ ರಾಜಕೀಯದವರ ಫ಼್ಲೆಕ್ಸು, ಬ್ಯಾನರ್ ಗಳ ಭರಾಟೆಯ ಅಪಸವ್ಯಗಳ ಬಗೆಗೆ ನಿಮ್ಮೊಂದಿಗೆ ಒಂದೆರಡು ನಿಮಿಷ.
ಇತ್ತೀಚೆಗೆ ರಾಜ್ಯ ರಾಜಕೀಯದಲ್ಲಿ ಬ್ಯಾನರ್ ಮತ್ತು ಫ಼್ಲೆಕ್ಸ್ ಗಳನ್ನು ಕಟ್ಟುವ ವಿಚಾರಕ್ಕೆ ಸಂಬಂಧಿಸಿದಂತೆ ಉಂಟಾದ ಎರಡು ಪ್ರಮುಖ ಕಿರಿಕ್ಕುಗಳು ದೊಡ್ಡಮಟ್ಟದಲ್ಲಿ ಸುದ್ದಿಯಾಗಿ, ಅಲ್ಲಿಂದ ಹತ್ತಿಕೊಂಡ ದ್ವೇಷದ ಬೆಂಕಿಯ ಹೊಗೆ ಇನ್ನೂ ಪೂರ್ತಿ ಆರಿಲ್ಲ…. ಆರೋದೂ ಇಲ್ಲ.
ನಿಮಗೆ ತಿಳಿದಿರುವ ಹಾಗೆ ಬಳ್ಳಾರಿಯಲ್ಲಿ ವಾಲ್ಮೀಕಿ ಮಹರ್ಷಿ ಪುತ್ಥಳಿ ಅನಾವರಣಕ್ಕೆ ಸಂಬಂಧಿಸಿದಂತೆ ಶಾಸಕ ಗಾಲಿ ಜನಾರ್ಧನ ರೆಡ್ಡಿ ಮನೆಯ ಮುಂದೆ ಮತ್ತೊಬ್ಬ ಶಾಸಕ ನಾರಾ ಭರತ್ ರೆಡ್ಡಿ ಬೆಂಬಲಿಗರು ಬ್ಯಾನರ್ ಕಟ್ಟಲು ಹೋದಾಗ ಶುರುವಾದ ರಾಜಕೀಯ ದ್ವೇಷದ ಗಲಭೆ -ವಾಗ್ವಾದ ಕೊನೆಗೆ ಬಂದೂಕಿನ ಗುಂಡುಗಳ ಹಾರಾಟಕ್ಕೆ ಕಾರಣವಾಗಿ ಒಬ್ಬನ ಸಾವಿನಲ್ಲಿ ಅಂತ್ಯವಾಗಿತ್ತು.
ಶಿಡ್ಲಘಟ್ಟದಲ್ಲಿ ” ಕಲ್ಟ್ ” ಎಂಬ ಸಿನಿಮಾಕ್ಕೆ ಸಂಬಂಧಿಸಿದಂತೆ ಜನರಿಗೆ ತೊಂದರೆಯಾಗಬಾರದೆಂಬ ಉದ್ದೇಶದಿಂದ ಪ್ರಮುಖ ರಸ್ತೆ ಬದಿಯಲ್ಲಿದ್ದ ಫ಼್ಲೆಕ್ಸ್ ತೆರವುಗೊಳಿಸಿದ್ದಕ್ಕೆ ಅಲ್ಲಿನ ಕಾಂಗ್ರೆಸ್ ಮುಖಂಡ ರಾಜೀವ್ ಗೌಡ ಎಂಬುವರು ಅಲ್ಲಿನ ನಗರಸಭೆಯ ಮಹಿಳಾ ಕಮೀಷನರ್ ರವರನ್ನು ಅವಾಚ್ಯ ಶಬ್ಧಗಳಿಂದ ನಿಂದಿಸಿ, ಧಂಕಿ ಹಾಕಿದ್ದು ಎಲ್ಲೆಡೆ ವೈರಲ್ ಆಗಿ ಆನಂತರ ಆತ ವಾರಗಟ್ಟಲೆ ಬಂಧನ ಭೀತಿಯಿಂದ ತಲೆ ಮರೆಸಿಕೊಂಡು ಕೊನೆಗೆ ಅಲ್ಲೆಲ್ಲೋ ಕೇರಳದಲ್ಲಿ ಅರೆಸ್ಟ್ ಆಗಿ ಇದೀಗ ಜಾಮೀನಿನ ಮೇಲೆ ಹೊರ ಬಂದಿದ್ದಾರೆ.
ಈ ಎರಡೂ ಕುಖ್ಯಾತ ಘಟನೆಗಳಿಗೆ ಮೂಲ ಕಾರಣ ಬ್ಯಾನರ್ರು, ಬಂಟಿಂಗು ಹಾಗೂ ಫ಼್ಲೆಕ್ಸುಗಳು.!!
ಇತ್ತೀಚಿನ ದಿನಗಳಲ್ಲಿ ಯಾವುದೇ ಊರಿನ ಎಂತಹದೇ ಸಭೆ, ಸಮಾರಂಭ, ಸಮ್ಮೇಳನ , ಉತ್ಸವ, ಜಾತ್ರೆ ಅಥವಾ ಸಾಹಿತ್ಯ, ಸಂಸ್ಕೃತಿ, ಧಾರ್ಮಿಕ, ಕ್ರೀಡೆ, ಶಿಕ್ಷಣ ಇತ್ಯಾದಿ ಯಾವುದೇ ಕ್ಷೇತ್ರಗಳಿಗೆ ಸಂಬಂಧಿಸಿದ ಕಾರ್ಯಕ್ರಮಗಳಾಗಿದ್ದಿರಬಹುದು, ಆ ಸಂದರ್ಭಗಳಲ್ಲಿ ಅಲ್ಲೆಲ್ಲಾ ಒಮ್ಮೆ ಹಾಗೇ ಸೂಕ್ಷ್ಮವಾಗಿ ಗಮನಿಸಿದಲ್ಲಿ ಈ ಬ್ಯಾನರ್ರುಗಳ ಫ಼್ಲೆಕ್ಸುಗಳ, ಕಟೌಟುಗಳ ಭರಾಟೆಯ ಸ್ವರೂಪ ಅರಿವಿಗೆ ಬಂದೀತು.ಅದರಲ್ಲೂ ರಾಜಕೀಯಕ್ಕೆ ಸಂಬಂಧಿಸಿದ ರ್‍ಯಾಲಿಗಳು, ಮೇಳಗಳು ಇದ್ದರಂತೂ ಊರಿನ ಯಾವ ಗಲ್ಲಿಯ ಯಾವ ಕಂಬವನ್ನೂ ಬಿಡದೇ ಆಯಾ ಪಕ್ಷಗಳ ಮರಿಮುಖಂಡನಿಂದ ಹಿಡಿದು ಹಿರಿಮುಖಂಡನ ಭಾವಚಿತ್ರಗಳವರೆಗೆ ಇಡೀ ನಗರವೇ ಬ್ಯಾನರ್ ಮಯವಾಗಿ ಗಬ್ಬೆದ್ದು ಹೋಗಿರುತ್ತದೆ.
ರಾಜಕೀಯ ಅಂದ್ರೇನೇ ಹಾಗಲ್ಲವೇ… ! ಅಲ್ಲೆಲ್ಲಾ ಮಂತ್ರಕ್ಕಿಂತ ಉಗುಳೇ ಜಾಸ್ತಿ ಇರಲೇ ಬೇಕು, ಕಾರ್ಯಕ್ಕಿಂತ ತೋರಿಕೆಯೇ ಇರಬೇಕು ಹಾಗೂ ಮುಖ್ಯವಾಗಿ ತಮ್ಮ ರಾಜಕೀಯ ವಿರೋಧಿಗಳಿಗಿಂತ ಹೆಚ್ಚಿಗೆ ಫ಼್ಲೆಕ್ಸುಗಳು ತಮ್ಮದಿರಬೇಕು ಎಂಬ ಸ್ವಪ್ರತಿಷ್ಠೆಯ ಖಾಯಿಲೆ ಅಲ್ಲಿ ವ್ಯಾಪಿಸಿರುವುದು ಸಹಜ.
ಅದನ್ನು ಬಿಟ್ಟಾಕಿ.
ಆದರೆ ಒಂದು ಊರಿನ ಐತಿಹಾಸಿಕ, ಪಾರಂಪರಿಕ
ಧಾರ್ಮಿಕ ಉತ್ಸವ, ಜಾತ್ರೆ, ರಥೋತ್ಸವ ಅಥವಾ ಸಾಂಸ್ಕ್ರತಿಕ ಉತ್ಸವಗಳಲ್ಲೂ ರಾಜಕೀಯವೆಂಬುದು ಬ್ಯಾನರ್ರು, ಪೋಸ್ಟರ್ರು, ಫ಼್ಲೆಕ್ಸುಗಳ ಮೂಲಕ ಅತಿಯಾಗಿ ತೂರಿ ಇಡೀ ಧಾರ್ಮಿಕ ಆಚರಣೆಯನ್ನೇ ರಾಜಕೀಯಗೊಳಿಸಿ ಉತ್ಸವದ ಮೂಲ ಉದ್ದೇಶವನ್ನೇ ಕಲುಷಿತಗೊಳಿಸಿಬಿಡುವುದಿದೆಯಲ್ಲಾ, ಅದನ್ನು ಸಹಿಸಿಕೊಳ್ಳುವುದು ಸ್ವಲ್ಪ ಕಷ್ಟ !
ಯಾವುದೇ ಪ್ರಮುಖ ನಗರಗಳಲ್ಲಿ ಅಥವಾ ಊರಿನಲ್ಲಿ ವರ್ಷಕ್ಕೊಮ್ಮೆ ನಡೆಯುವ ಜಾತ್ರ್ಯೋತ್ಸವ , ರಥೋತ್ಸವಕ್ಕೆ ಅದರದ್ದೇ ಆದ ಧಾರ್ಮಿಕ ಹಿನ್ನೆಲೆ , ಪರಂಪರೆ, ಹಾಗೂ ಇಡೀ ಊರಿನ ಅಭ್ಯುದಯವೂ ಇರುತ್ತದೆ. ಇಂತಹಾ ಜಾತ್ರೆಯನ್ನು ವರ್ಷಕ್ಕೊಮ್ಮೆ ಕಣ್ತುಂಬಿಕೊಳ್ಳಲು ರಾಜ್ಯದ ನಾನಾ ಕಡೆಗಳಿಂದ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಾರೆ. ಅಂತಹ ಉತ್ಸವಗಳಲ್ಲಿ ಕೇವಲ ದೇವರ ಆರಾಧನೆ, ಪೂಜೆ- ಪುನಸ್ಕಾರ , ರಥೋತ್ಸವದ ಧಾರ್ಮಿಕ ವಿಧಿ- ವಿಧಾನಗಳು ಹಾಗೂ ಅಲ್ಲಿನ ದೇವರ ಮಹಿಮೆ ಮತ್ತು ಆ ಸ್ಥಳದ ಚರಿತ್ರೆ ತಿಳಿಸುವ ಚಟುವಟಿಕೆಗಳೇ ಮುನ್ನೆಲೆಯಲ್ಲಿದ್ದು ಜನರಲ್ಲಿ ಭಕ್ತಿಭಾವ ಉಕ್ಕಿಸುವ ಹಾಗೂ ಜಾತ್ರಾ ವಿಶೇಷ ಹೆಚ್ಚಿಸುವ ವಾತಾವರಣವಿರಬೇಕು. ಆದರೆ ಅದಕ್ಕೆ ಬದಲು ಅಲ್ಲೆಲ್ಲಾ ವಿವಿಧ ರಾಜಕೀಯ ಪಕ್ಷಗಳ ಮುಖಂಡರ ಮತ್ತವರ ಹಿಂಬಾಲಕರ ಎತ್ತರದ ಫ಼್ಲೆಕ್ಸುಗಳು ದೊಡ್ಡ ಬ್ಯಾನರ್ ಗಳು ನೂರಾರು ಪೋಸ್ಟರ್ ಗಳು ಜಿದ್ದಿಗೆ ಬಿದ್ದವರಂತೆ ಊರಿನ ಪ್ರಮುಖ ರಸ್ತೆಗಳ ಒಂದೂ ಕಂಬವನ್ನು ಬಿಡದೇ ಆವರಿಸಿ ನಗರ ಸೌಂದರ್ಯವನ್ನೇ ಅಂದಗೆಡಿಸಿರುತ್ತವೆ.
ಅದೆಲ್ಲಾದರೂ ಹೋಗಲಿ.! ರಾಜಕೀಯದವರನ್ನು ಪ್ರಶ್ನಿಸುವವರಿಲ್ಲಾ ಎಂದೇ ಇಟ್ಟುಕೊಳ್ಳೋಣ. ಕೊನೇಪಕ್ಷ ಜಾತ್ರೆ, ತೇರು , ರಥೋತ್ಸವ ನಡೆಯುವ ದೇವಾಲಯದ ಬಳಿಯಲ್ಲಿಯೂ ದೇವರ ತೇರಿಗಿಂತಲೂ ಹೆಚ್ಚು ಎತ್ತರಕ್ಕೆ ಕಾಣುವಂತೆ ರಾಜಕೀಯ ನಾಯಕರ ಬ್ಯಾನರ್ರು ಫ಼್ಲೆಕ್ಸುಗಳನ್ನು ನಿಲ್ಲಿಸಿರುವ ದೃಶ್ಯಗಳನ್ನು ಮಾತ್ರ ಅರಗಿಸಿಕೊಳ್ಳುವುದು ಕಷ್ಟ. ದೇವಾಲಯದ ಬಳಿ ಇವುಗಳ ಅಗತ್ಯವೇನಿದೆ…?
ಇದು ಕೇವಲ ಯಾವುದೋ ಒಂದು ಊರಿನ ಜಾತ್ರೆಯ ಕಥೆ ವ್ಯಥೆ ಮಾತ್ರವಲ್ಲ….. ಇಡೀ ರಾಜ್ಯದ ಎಲ್ಲೆಡೆಯಲ್ಲೂ ರಾಜಕೀಯ ನಾಯಕರನ್ನು ಹೊತ್ತು ಮೆರೆಸುವ ಫ಼್ಲೆಕ್ಸುಗಳು ಪೋಸ್ಟರ್ ಗಳು ಎಂತಹದೇ ಸಂದರ್ಭಗಳಲ್ಲೂ ಗಲ್ಲಿ ಗಲ್ಲಿಗೂ ಕಂಬಕಂಬಕ್ಕೂ ಮೆತ್ತಿಕೊಂಡು ಅನಾರೋಗ್ಯಕರ ವಾತಾವರಣವನ್ನೇ ಸೃಷ್ಟಿ ಮಾಡುತ್ತಿವೆ. ಇದು ಇನ್ನಷ್ಟು ಬೆಳೆದು ಸಾರ್ವಜನಿಕರ ಕಿರಿಕಿರಿ ಹೆಚ್ಚು ಮಾಡುವ ಮುನ್ನ ಸರ್ಕಾರ ಈ ಬಗ್ಗೆ ಕೆಲವು ಕಠಿಣ ನಿಯಮಗಳನ್ನು ರೂಪಿಸುವುದು ಜನಹಿತದೃಷ್ಟಿಯಿಂದ ಒಳ್ಳೆಯದು. ಕೊನೇಪಕ್ಷ ರಾಜಕೀಯೇತರ ಉತ್ಸವಗಳಲ್ಲಿ ರಾಜಕೀಯ ನಾಯಕರದ್ದೇ ಕಟೌಟುಗಳು ಬ್ಯಾನರ್ ಗಳನ್ನು ನಿಯಂತ್ರಿಸದೇ ಹೋದಲ್ಲಿ ಅಂಥಾ ಎಲ್ಲಾ ವೇದಿಕೆಗಳೂ ಪೂರ್ತಿಯಾಗಿ ರಾಜಕಾರಣಿಗಳ ಧನಬಲ ಜನಬಲ ಹಾಗೂ ಕೀರ್ತಿಬಲ ತೋರಿಸಲು ಇರುವ ವೇದಿಕೆಗಳಾಗಿ ಮಾರ್ಪಟ್ಟರೆ ಅಚ್ಚರಿಯೇನಿಲ್ಲ.
ಸ್ಥಳೀಯ ಸಂಸ್ಥೆಗಳು ಫ಼್ಲೆಕ್ಸು- ಬ್ಯಾನರ್ ಗಳನ್ನು ನಗರದ ಎಲ್ಲೆಂದರಲ್ಲಿ ಹಾಕುವುದರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಇದು ಹೈ ಟೈಮ್. ಯಾರಾದರೂ ರಾಜಕೀಯದವರು ಅಧಿಕಾರಿಗಳ ಕ್ರಮದ ವಿರುದ್ಧ ಅನಗತ್ಯ ಧಂಕಿ ಹಾಕಲು ಬಂದರೆ ಅವರಿಗೆ ಶಿಡ್ಲಘಟ್ಟದ ಕೇಸು ಒಂದು ಜ್ವಲಂತ ಉದಾಹರಣೆಯಾಗಿ ನಿಲ್ಲಲಿ.
** ಮರೆಯುವ ಮುನ್ನ **
ಇದು ಕೇವಲ ಒಂದು ನಗರದ ಕಥೆಯಲ್ಲ, ರಾಜ್ಯದ ಎಲ್ಲಾ ನಗರಗಳಲ್ಲೂ ಫ಼್ಲೆಕ್ಸು-ಬ್ಯಾನರ್-ಪೋಸ್ಟರ್ ಗಳ ಭರಾಟೆಯೆಂಬುದು ಕ್ಯಾನ್ಸರ್‌ನಂತೆ ಹಬ್ಬಿ ಸಾರ್ವಜನಿಕರಲ್ಲಿ ಕಿರಿಕಿರಿಯನ್ನುಂಟು ಮಾಡುತ್ತಿದ್ದರೂ ತೆರಿಗೆ ಕಟ್ಟುವ ನಮ್ಮಜನರ ಸಹನೆಗೆ ಸಲಾಂ ಹೇಳಲೇ ಬೇಕು.
ಈ ಬಗ್ಗೆ ಸ್ಥಳೀಯ ಸಂಸ್ಥೆಗಳು ನಗರದಲ್ಲೆಡೆ ಬ್ಯಾನರ್ ಕಟ್ಟಲು ಅನುಮತಿ ಕೊಡುವ ಮುನ್ನ ಯಾವ ಮಾನದಂಡ ಅನುಸರಿಸುತ್ತಿವೆಯೋ ಗೊತ್ತಿಲ್ಲ. ಸ್ಥಳೀಯ ರಾಜಕೀಯ ಒತ್ತಡಗಳಿಗೆ ಮಣಿಯಲೇ ಬೇಕಾದ ಅನಿವಾರ್ಯ ಪರಿಸ್ಥಿತಿ ಅವರಿಗಿದ್ದರೂ ನಗರದ ಅಂದ ಕೆಡದಂತೆ, ಸಾರ್ವಜನಿಕರಿಗೆ ಕಿರಿಕಿರಿಯಾಗದಂತೆ ಎಚ್ಚರ ವಹಿಸುವುದು ಮುಖ್ಯ. ಜನರು ಕಟ್ಟುವ ತೆರಿಗೆಯ ಭಾಗದಲ್ಲಿ ನಗರದ ಸ್ವಚ್ಛತೆಗೂ ಪಾಲಿದೆ. ಆದರೆ ನಗರದ ಸೌಂದರ್ಯವನ್ನೇ ಹಾಳು ಮಾಡುವ ಈ ಬ್ಯಾನರ್ ಸಂಸ್ಕೃತಿಗೆ ಮುಲಾಜಿಲ್ಲದೇ ಕಡಿವಾಣ ಹಾಕಲೇ ಬೇಕಲ್ಲವೇ..!
ಅಲ್ಲದೇ ದೇವರ ಜಾತ್ರೆ- ಉತ್ಸವಗಳಂತಹ ಸಮಯಗಳಲ್ಲಿ ದೇವಾಲಯದ ಬಳಿ ಅಥವಾ ರಥೋತ್ಸವದ ಸನಿಹ ಯಾವುದೇ ಕಾರಣಕ್ಕೂ ರಾಜಕೀಯದವರ ಅಥವಾ ಇನ್ನಿತರೆಯವರ ಫ಼್ಲೆಕ್ಸು, ಕಟೌಟ್ ಹಾಗೂ ಬ್ಯಾನರ್ ಗಳನ್ನು ಕಟ್ಟಲು ಅವಕಾಶ ಕೊಡಲೇ ಬಾರದು. ಏಕೆಂದರೆ ಅಲ್ಲಿರಬೇಕಾದದ್ದು ಭಕ್ತಿಭಾವವೇ ಹೊರತು ರಾಜಕೀಯ ಪೈಪೋಟಿಗಳಲ್ಲ.
ಈ ಹಿನ್ನೆಲೆಯಲ್ಲಿ ಯಾವುದೇ ಒಂದು ಧಾರ್ಮಿಕ ಉತ್ಸವಗಳಲ್ಲಿ ಜನ ಬರುವುದು ಜಾತ್ರೆ ರಥೋತ್ಸವಗಳ ವೈಭವ ನೋಡಲೇ ಹೊರತು ರಾಜಕೀಯ ನಾಯಕರ ಪ್ರತಿಷ್ಠೆಯ ಮೆರವಣಿಗೆ ನೋಡಲು ಅಲ್ಲ. ದೇವಾಲಯದ ಸುತ್ತ ಮುತ್ತ ಕಾಣಬೇಕಿರುವುದು ಅಲ್ಲಿನ ದೈವ ಮಹಿಮೆ ಹಾಗೂ ಉತ್ಸವದ ಪರಂಪರೆ ಸಾರುವ ಭಿತ್ತಿಚಿತ್ರಗಳು ಬ್ಯಾನರ್ ಗಳೇ ಹೊರತು, ರಾಜಕೀಯ ಮುಖಂಡರನ್ನು ಹೊತ್ತು ಮೆರೆಸುವ ಪೋಸ್ಟರ್ ಗಳಲ್ಲ.
ಅತಿಹೆಚ್ಚು ಬ್ಯಾನರ್ಸ್ ಹಾಕಿದರೆ ತನ್ನ ಪಾಪ್ಯುಲಾರಿಟಿ ಹೆಚ್ಚಾಗಿ ತಾನು ಜನರನ್ನು ತಲುಪುತ್ತೇನೆ ಎಂಬುದು ಕೇವಲ ಭ್ರಮೆ.! ಜನರ ಪ್ರೀತಿ-ಮೆಚ್ಚುಗೆ ಗಳಿಸಲು ಅವರ ನಡುವೆ ಇದ್ದು ಕೆಲಸ ಮಾಡಿ ಜನರ ಮಧ್ಯೆಯೇ ಬೆಳೆಯಬೇಕು. ಅಂತಹ ಲೀಡರ್ ಗಳು ಮಾತ್ರ ಚಲಾವಣೆಯಲ್ಲಿರಲು, ಬಾಳಿಕೆ ಬರಲು ಸಾಧ್ಯ. ಅದನ್ನು ಬಿಟ್ಟು ಕೇವಲ ಕಟೌಟುಗಳ ಸಂಸ್ಕೃತಿಯಲ್ಲಿ, ಫ಼್ಲೆಕ್ಸುಗಳ ಒಣಪ್ರಚಾರಗಳ ಅಬ್ಬರದಲ್ಲಿ ಸೃಷ್ಟಿಯಾಗುವ ಲೀಡರ್ ಗಳ ಆಯಸ್ಸು ಕಡಿಮೆ .
ಅಸಲಿ ಮ್ಯಾಟರ್ ಏನೆಂದರೆ ಒಬ್ಬ ನಾಯಕ ತನ್ನ ಹಾಗೂ ತನ್ನ ಹಿಂಬಾಲಕರ ಹೆಚ್ಚು ಹೆಚ್ಚು ಫ಼್ಲೆಕ್ಸುಗಳನ್ನು ಊರ ತುಂಬಾ ಹಾಕಿಸಿದಷ್ಟೂ ಜನರ ಮನಸಿನಿಂದ ಅವರೆಲ್ಲಾ ಅಷ್ಟೇ ಬೇಗ ಮರೆಯಾಗಿ ಹೋಗುತ್ತಾರೆ.
ಸಂಬಂಧಿಸಿದವರಿಗೆ ಅರ್ಥವಾದರೆ ಒಳ್ಳೆಯದು.
ಪ್ರೀತಿಯಿಂದ….
ಹಿರಿಯೂರು ಪ್ರಕಾಶ್.
About The Author
Discover more from JANADHWANI NEWS
Subscribe to get the latest posts sent to your email.