December 14, 2025
1738772438685.jpg


ಹಿರಿಯೂರು:
ತಾಲ್ಲೂಕಿನ ವಾಣಿ ವಿಲಾಸ ಸಾಗರ ಜಲಾಶಯದಿಂದ ಅಚ್ಚುಕಟ್ಟು ಪ್ರದೇಶಕ್ಕೆ ಫೆಬ್ರವರಿ 7ರಿಂದ ನೀರು ಹರಿಸುವಂತೆ ನಗರದ ಪ್ರವಾಸಿ ಮಂದಿರದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾದ ಡಿ.ಸುಧಾಕರ್ ಅಧ್ಯಕ್ಷತೆಯಲ್ಲಿ ಸೋಮವಾರ ನಡೆದ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ತೀರ್ಮಾನಿಸಲಾಯಿತು.
ಫೆಬ್ರವರಿ 3ರಂದು ವಾಣಿವಿಲಾಸ ಜಲಾಶಯದ ನೀರಿನ ಮಟ್ಟ 130.05 ಅಡಿ ಇದ್ದು, ಪ್ರಸ್ತುತ ಅಚ್ಚುಕಟ್ಟು ಪ್ರದೇಶದಲ್ಲಿನ ತೋಟಗಾರಿಕಾ ಬೆಳೆಗಳಾದ ತೆಂಗು, ಅಡಿಕೆ, ಬಾಳೆ, ಕೃಷಿ ಬೆಳೆಗಳಾದ ಶೇಂಗಾ, ಸೂರ್ಯಕಾಂತಿ, ಮೆಕ್ಕೆಜೋಳ, ರಾಗಿ ಇತರ ಬೆಳೆಗಳು ಬಿಸಿಲಿಗೆ ಒಣಗುತ್ತಿವೆ.
ಜಲಾಶಯದಿಂದ ನೀರು ಹರಿಸದಿದ್ದರೆ ಬೇಳೆಗಳು ಸಂಪೂರ್ಣ ಒಣಗುವ, ಇಳುವರಿ ಪ್ರಮಾಣ ಕಡಿಮೆಯಾಗುವ ಸಾಧ್ಯತೆ ಇದೆ. ಕೃಷಿ ಮತ್ತು ತೋಟಗಾರಿಕಾ ಇಲಾಖೆಗಳ ವರದಿ ಅನ್ವಯ ನಾಲೆಗಳ ಮುಖಾಂತರ ತುರ್ತಾಗಿ ನೀರನ್ನು ಬಿಡುವಂತೆ ರೈತರು ಮನವಿ ಸಲ್ಲಿಸಿದ್ದಾರೆ ಎಂಬುದಾಗಿ ವಿಶ್ವೇಶ್ವರಯ್ಯ ನೀರಾವರಿ ನಿಗಮದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಬಾರಿಕರಚಂದ್ರಪ್ಪ ಸಚಿವರ ಗಮನಕ್ಕೆ ತಂದರು.
ಈ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾದ ಡಿ.ಸುಧಾಕರ್ ಮಾತನಾಡಿ ವಾಣಿವಿಲಾಸ ಸಾಗರ ಜಲಾಶಯದ ಎಡ ಮತ್ತು ಬಲ ನಾಲೆಗಳನ್ನು ತುರ್ತಾಗಿ ಸ್ವಚ್ಚಗೊಳಿಸಿ , ಫೆಬ್ರವರಿ 7ರಿಂದ 30 ದಿನಗಳ ಅವಧಿಗೆ ಅಚ್ಚುಕಟ್ಟು ಪ್ರದೇಶಕ್ಕೆ ಒಂದು ಹದ ನೀರನ್ನು ಬಿಡಬೇಕು. ಈ ವೇಳೆ ಎಲ್ಲಿಯೂ ನೀರು ಪೋಲಾಗದಂತೆ ಹಗಲು ರಾತ್ರಿ ನೀರಾವರಿ ನಿಗಮದ ಸಿಬ್ಬಂದಿ ಕಾವಲು ಕಾಯಬೇಕು.
ಅಲ್ಲದೆ, ನಾನು ವಾಣಿವಿಲಾಸ ಸಾಗರ ಜಲಾಶಯದ ಎಡ ಮತ್ತು ಬಲ ನಾಲೆಗಳಿಗೆ ಅನಿರೀಕ್ಷಿತವಾಗಿ ಭೇಟಿ ನೀಡಿ ಪರಿಶೀಲಿಸಲಿದ್ದು, ಅನಾವಶ್ಯಕವಾಗಿ ನೀರು ಪೋಲಾಗುತ್ತಿರುವ ಬಗ್ಗೆ ಸಾರ್ವಜನಿಕರಿಂದ ದೂರುಗಳು ಬಂದಲ್ಲಿ ಸಂಬಂಧಿಸಿದ ಎಂಜಿನಿಯರ್ ಅವರನ್ನೇ ಹೊಣೆಗಾರರನ್ನಾಗಿಸಿ ಕ್ರಮ ಜರುಗಿಸಲಾಗುವುದು ಎಂಬುದಾಗಿ ಸಚಿವರು ಎಚ್ಚರಿಸಿದರು.
ಈ ಸಭೆಯಲ್ಲಿ ಜಿಲ್ಲಾಧಿಕಾರಿ ಟಿ.ವೆಂಕಟೇಶ್, ಭದ್ರಾ ಮೇಲ್ದಂಡೆ ಯೋಜನೆ ಕಾರ್ಯನಿರ್ವಾಹಕ ಎಂಜಿನಿಯರ್ ಬಾರಿಕರಚಂದ್ರಪ್ಪ, ನೀರಾವರಿ ಸಲಹಾ ಸಮಿತಿ ಸದಸ್ಯರಾದ ಸಿ.ಎನ್.ಸುಂದರ್, ಅನಿಲ್ ಬಿದರಕೆರೆ, ಪಿ.ಕೆ.ಸುಂದರೇಶ್, ವಕೀಲ ಬಬ್ಬೂರುಸುರೇಶ್, ಆಸಿಫ್ ಆಲಿ, ವೈ.ನಾಗರಾಜ್ ಸೇರಿದಂತೆ ತೋಟಗಾರಿಕಾ ಕೃಷಿ ಇಲಾಖೆ ಅಧಿಕಾರಿಗಳು ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading