ಹಿರಿಯೂರು:
ಅತಿವೃಷ್ಟಿ, ಅನಾವೃಷ್ಟಿಯಿಂದ ಬೆಳೆ ಹಾನಿ ಆಗಿದ್ದಲ್ಲಿ ಪರಿಹಾರ ನೀಡಲು , ಬೆಳೆ ವಿಮೆ ಪಾವತಿಸಲು ಅಧಿಕಾರಿಗಳು ವಿಳಂಬ ಧೋರಣೆ ಅನುಸರಿಸುವ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರಾದ ಡಿ.ಸುಧಾಕರ್ ಅವರು ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.
ಜಿಲ್ಲೆಯ ಮೊಳಕಾಲ್ಮೂರು, ಚಿತ್ರದುರ್ಗ, ಚಳ್ಳಕೆರೆ ಹಾಗೂ ಹಿರಿಯೂರು ತಾಲ್ಲೂಕಿನ ರೈತರ ಖಾತೆಗಳಿಗೆ 2023-2024 ನೇ ಸಾಲಿನ ಬೆಳೆ ನಷ್ಟ ಪರಿಹಾರ ಮತ್ತು ಬೆಳೆ ವಿಮೆ ಹಣ ಜಮಾ ಆಗದಿರುವ ಬಗ್ಗೆ ರೈತ ಸಂಘಗಳಿಂದ ದೂರು ಬಂದ ಹಿನ್ನಲೆಯಲ್ಲಿ ನಗರದ ಪ್ರವಾಸಿ ಮಂದಿರದಲ್ಲಿ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ವಿಮಾ ಕಂಪನಿಗಳು ಬೆಳೆವಿಮೆ ಪಾವತಿಸದ ಕಾರಣ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಬೆಳೆ ವಿಮೆ ನೀತಿ ಯಾರಿಗೂ ಅರ್ಥವಾಗುತ್ತಿಲ್ಲ.ಸಂಬಂಧಿಸಿದವರು ಇದರಲ್ಲಿನ ಗೋಜಲುಗಳನ್ನು ಸರಿಪಡಿಸಬೇಕು ಎಂಬುದಾಗಿ ರೈತ ಮುಖಂಡರು ಒತ್ತಾಯಿಸಿದರು.
ತಾಂತ್ರಿಕ ದೋಷದ ಕಾರಣ ಬೆಳೆ ಪರಿಹಾರ ಪಾವತಿಯಾಗದ ಫಲಾನುಭವಿಗಳ ಪಟ್ಟಿಯನ್ನು ತಾಲ್ಲೂಕುವಾರು ತಯಾರಿಸಿ 15 ದಿನಗಳ ಒಳಗೆ ಪರಿಹಾರ ಪಾವತಿಸಲು ಕ್ರಮ ಕೈಗೊಳ್ಳಬೇಕು ಎಂಬುದಾಗಿ ಸಚಿವ ಡಿ.ಸುಧಾಕರ್ ಸೂಚಿಸಿದರು.
ತಾಲ್ಲೂಕಿನಲ್ಲಿ ಕೃಷಿಕರ ಬೆಳೆವಿಮೆಗೆ ಸಂಬಂಧಿಸಿದಂತೆ ಕೃಷಿ ಮತ್ತು ತೋಟಗಾರಿಕೆ ಇಲಾಖೆ ಅಧಿಕಾರಿಗಳು, ವಿಮಾ ಕಂಪನಿ ಹಾಗೂ ರೈತ ಸಂಘದ ಪ್ರತಿನಿಧಿಗಳೊಂದಿಗೆ ಸಭೆ ನಡೆಸಿ, ಸಮಸ್ಯೆ ಪರಿಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡಬೇಕೆಂದು ಅವರು ಸೂಚಿಸಿದರು.
ಈ ಸಭೆಯಲ್ಲಿ ಜಿಲ್ಲಾಧಿಕಾರಿಗಳಾದ ಟಿ.ವೆಂಕಟೇಶ್, ಮೊಳಕಾಲ್ಮೂರು ರೈತ ಸಂಘದ ಅಧ್ಯಕ್ಷ ರವಿ, ನಿಜಲಿಂಗಪ್ಪ, ಬಸವರೆಡ್ಡಿ, ಹಿರಿಯೂರು ರೈತ ಸಂಘದ ಅಧ್ಯಕ್ಷರಾದ ಕೆ.ಟಿ.ತಿಪ್ಪೇಸ್ವಾಮಿ, ಸಿದ್ದರಾಮಣ್ಣ, ಬಬ್ಬೂರು ಸುರೇಶ್, ಚಿತ್ರದುರ್ಗ ರೈತಸಂಘದ ಮಲ್ಲಿಕಾರ್ಜುನ ಡಿ.ಎಸ್.ಹಳ್ಳಿ, ಕೃಷಿ ಇಲಾಖೆಯ ಹಾಗೂ ತೋಟಗಾರಿಕೆ ಇಲಾಖೆಯ ಜಿಲ್ಲಾಮಟ್ಟದ ಮತ್ತು ತಾಲ್ಲೂಕುಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.



About The Author
Discover more from JANADHWANI NEWS
Subscribe to get the latest posts sent to your email.