December 14, 2025
1738767481516.jpg


ಹಿರಿಯೂರು:
ನಗರದ ರಿಸನಂ 120/1 ರ ಸರ್ಕಾರಿ ಹುಲ್ಲುಬನ್ನಿ ಖರಾಬು ಜಮೀನನ್ನು ಅಕ್ರಮವಾಗಿ ಕನಕ ನೌಕರರ ಕ್ಷೇಮಾಭಿವೃದ್ಧಿ ಸಂಘದಿಂದ ಒತ್ತುವರಿ ಮಾಡಿಕೊಂಡು 20 ಇಂಟು 60 ಅಡಿ ಜಾಗದಲ್ಲಿ ವಾಣಿಜ್ಯ ಉದ್ದೇಶಕ್ಕಾಗಿ ಅನಧಿಕೃತ ಕಟ್ಟಡ ನಿರ್ಮಾಣ ಮಾಡಿರುವುದರ ವಿರುದ್ಧ ಕರ್ನಾಟಕ ಭೂ ಕಬಳಕೆ ನಿಷೇಧ ವಿಶೇಷ ನ್ಯಾಯಾಲಯಕ್ಕೆ ದೂರು ದಾಖಲಿಸಲಾಗಿದೆ ಎಂಬುದಾಗಿ ದೂರುದಾರ ಮುಖಂಡರಾದ ಕೆ.ಪಿ.ಶ್ರೀನಿವಾಸಮೂರ್ತಿ ಅವರು ಹೇಳಿದರು.
ನಗರದ ಪ್ರವಾಸಿ ಮಂದಿರದಲ್ಲಿ ಮಂಗಳವಾರ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಅವರು ಮಾತನಾಡಿದರು.

ಸರ್ಕಾರಿ ಜಾಗವನ್ನು ಈ ಹಿಂದಿನ ಪೌರಾಯುಕ್ತರೊಬ್ಬರು ಖಾತೆ ಮಾಡಿದ್ದು, ಅಕ್ರಮ ಖಾತೆ ಮತ್ತು ಕಟ್ಟಡದ ಬಗ್ಗೆ ದಲಿತ, ರೈತ ಮತ್ತು ಪ್ರಗತಿಪರ ಸಂಘಟನೆಗಳ ಒಕ್ಕೂಟದಿಂದ ಪ್ರಶ್ನಿಸಲಾಗಿತ್ತು. ಆಗ ಎಚ್ಚೆತ್ತುಕೊಂಡ ನಗರಸಭೆ ಅಧಿಕಾರಿಗಳು ಕನಕ ನೌಕರರ ಕ್ಷೇಮಾಭಿವೃದ್ಧಿ ಸಂಘದ ಹೆಸರಿಗೆ ನೀಡಿದ್ದ ನಿವೇಶನದ ಖಾತೆಯನ್ನು ರದ್ದು ಮಾಡಿದ್ದರು.
ಕಂದಾಯ ಭೂಮಿಯನ್ನು ನಗರಸಭೆಯವರು ಖಾತೆ ಮಾಡಲು ಬರುವುದಿಲ್ಲ ಎಂಬ ಸಾಮಾನ್ಯ ಜ್ಞಾನದ ಅರಿವು ಇಲ್ಲದೆ ನಕಲಿ ಖಾತೆ ಸೃಷ್ಠಿಸಿದ ಆಗಿನ ಪೌರಾಯುಕ್ತರನ್ನು ತನಿಖೆಗೊಳಪಡಿಸಬೇಕು. ಕನಕ ನೌಕರರ ಕ್ಷೇಮಾಭಿವೃದ್ಧಿ ಸಂಘದಅಧ್ಯಕ್ಷ , ಪೌರಾಯುಕ್ತರು, ತಹಶೀಲ್ದಾರ್ ರವರ ಮೇಲೆ ದೂರು ದಾಖಲು ಮಾಡಲಾಗಿದೆ.
ಚಿಕ್ಕಸಿದ್ಧವ್ವನಹಳ್ಳಿನ 6 ಎಕರೆ ಪ್ರದೇಶದಲ್ಲಿ 4.5 ಗುಂಟೆ ಸ್ಮಶಾನ ಭೂಮಿ ಒತ್ತುವರಿಯಾಗಿದೆ.ಎಂಬುದಾಗಿ ಮನವಿ ಮಾಡಿದ್ದರು ಸಹ ತಹಶೀಲ್ದಾರ್ ರವರು ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ. ಮನವಿ ಪಡೆದ ಮೇಲೆ ಆ ಮನವಿ ಬಗ್ಗೆ ನಿರ್ಲಕ್ಷ್ಯ ಧೋರಣೆ ತಾಳುವ ತಹಶೀಲ್ದಾರ್ ರವರ ಮೇಲೂ ದೂರು ದಾಖಲಿಸಲಾಗಿದೆ.
ಜೊತೆಗೆ ಜಿಲ್ಲಾ ಉಸ್ತುವಾರಿ ಸಚಿವರು, ಕನಕ ಕ್ಷೇಮಾಭಿವೃದ್ಧಿ ಸಂಘದ ಕಟ್ಟಡದ ಬಗ್ಗೆ ಯಥಾ ಸ್ಥಿತಿ ಕಾಪಾಡುವಂತೆ ಪತ್ರ ಬರೆದಿದ್ದು ಅಕ್ರಮ ಕಟ್ಟಡದ ಉಳಿವಿಗೆ ಸಚಿವರು ಸಹ ಬೆಂಬಲವಾಗಿ ನಿಂತಿದ್ದಾರೆ ಎಂಬ ಅನುಮಾನ ಮೂಡುತ್ತಿದೆ ಎಂಬುದಾಗಿ ಅವರು ಆಕ್ರೋಶ ವ್ಯಕ್ತಪಡಿಸಿದರು.
ರೈತ ಸಂಘದ ಅಧ್ಯಕ್ಷ ಕೆ.ಟಿ.ತಿಪ್ಪೇಸ್ವಾಮಿ ಮಾತನಾಡಿ ರಿಸನಂ 49,68,70,115ರ ಸರ್ಕಾರಿ ಜಮೀನುಗಳಿಗೆ ನಕಲಿ ದಾಖಲೆ ಸೃಷ್ಠಿಸಿ ಲೇಔಟ್ ಗಳನ್ನು ಮಾಡಲಾಗಿದೆ. ಈಗಾಗಲೇ ತಾಲ್ಲೂಕಿನಲ್ಲಿ ಒತ್ತುವರಿ ಮೇಳವೇ ಶುರುವಾದಂತಿದ್ದು ಸರ್ಕಾರಿ ಭೂಮಿ, ಅರಣ್ಯ ಭೂಮಿ ಒತ್ತುವರಿ ಸಾಕಷ್ಟು ಹೆಚ್ಚಿದೆ ಎಂದರಲ್ಲದೆ,

ಆಜೂರ್ ಪವರ್ ಲಿ, ಕಿರ್ಲೊಸ್ಕರ್ ಕಂಪನಿ ಮುಂತಾದವು ಸರ್ಕಾರಿ ಭೂಮಿ ಒತ್ತುವರಿ ಮಾಡಿಕೊಂಡಿದ್ದರು ಸಹ ಅಧಿಕಾರಿಗಳು ಮೌನ ವಹಿಸಿದ್ದಾರೆ. ಒತ್ತುವರಿ ತೆರವು ಮಾಡುವ ಸಾಕಷ್ಟು ಅಧಿಕಾರ ತಹಶೀಲ್ದಾರ್ ರವರಿಗೆ ಇದ್ದರೂ ಸಹಅವರು ಯಾವುದೇ ರೀತಿಯ ಕ್ರಮ ಕೈಗೊಳ್ಳದೆ, ಕಂಪನಿಗಳ ಜೊತೆ ಶಾಮೀಲಾಗಿ ಸರ್ಕಾರದ ಬೊಕ್ಕಸಕ್ಕೆ ಕೋಟಿಗಟ್ಟಲೆ ವಂಚನೆ ಮಾಡಲಾಗುತ್ತಿದೆ ಎಂಬುದಾಗಿ ಆರೋಪಿಸಿದರಲ್ಲದೆ,
ಅರಣ್ಯ ಇಲಾಖೆಯ ಅಧೀನದ ಸುಮಾರು 300 ಎಕರೆಗೂ ಹೆಚ್ಚು ಭೂಮಿ ಒತ್ತುವರಿಯಾಗಿದೆ ಎಂದರೆ ಇಲ್ಲಿ ಹೇಳುವವರು, ಕೇಳುವವರು ಯಾರು ಇಲ್ಲವಾ ಎಂಬ ಪ್ರಶ್ನೆ ಮೂಡುತ್ತಿದೆ ಎಂಬುದಾಗಿ ಅವರು ಹೇಳಿದರು.
ಈ ಸುದ್ಧಿಗೋಷ್ಠಿಯಲ್ಲಿ ಮುಖಂಡರುಗಳಾದ ಬ್ಯಾಡರಹಳ್ಳಿಹನುಮಂತರಾಯ, ಡಿ.ಎಸ್.ಎಸ್.ತಿಮ್ಮರಾಜ್, ಉಪ್ಪಳಗೆರೆಮಹಲಿಂಗಪ್ಪ, ರಾಘವೇಂದ್ರಪ್ಪ, ಕದುರಪ್ಪ, ಕೂನಿಕೆರೆ ಮಾರುತಿ, ಓಂಕಾರ್ ಮಟ್ಟಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading