January 29, 2026
1738767066491.jpg



ಚಿತ್ರದುರ್ಗಫೆ.05:
ಚಿತ್ರದುರ್ಗ ತಾಲ್ಲೂಕಿನ ಚಿಕ್ಕಪುರ ಗೊಲ್ಲರಹಟ್ಟಿ ಗ್ರಾಮದಲ್ಲಿ ಮೌಢ್ಯ ಪದ್ಧತಿ ನಿರ್ಮೂಲನೆ ಕುರಿತು ಬುಧವಾರ ಕರ್ನಾಟಕ ಮಹಿಳಾ ಆಯೋಗದ ಅಧ್ಯಕ್ಷರಾದ ಡಾ.ನಾಗಲಕ್ಷ್ಮೀ ಚೌಧರಿ ಅವರು ಅರಿವು ಮೂಡಿಸಿದರು.
ರಾಜ್ಯ ಮಹಿಳಾ ಆಯೋಗ, ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಹಾಗೂ ಲಕ್ಷ್ಮೀ ಸಾಗರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಚಿಕ್ಕಪುರ ಗೊಲ್ಲರಹಟ್ಟಿ ಗ್ರಾಮದಲ್ಲಿ ಮೌಢ್ಯ ಪದ್ಧತಿ ನಿರ್ಮೂಲನೆ ಕುರಿತು ಅರಿವು ಮೂಡಿಸುವ ಕಾರ್ಯಕ್ರಮ ಉದ್ಘಾಟಿಸಿ, ಗ್ರಾಮಸ್ಥರೊಂದಿಗೆ ಸಂವಾದ ನಡೆಸುವ ಮೂಲಕ ಜನರ ಸಮಸ್ಯೆ ಆಲಿಸಿದರು.
ಸರ್ಕಾರದ ವಿವಿಧ ಯೋಜನೆಗಳು, ಸೌಲಭ್ಯಗಳ ಕುರಿತು ಹಾಗೂ ಗ್ರಾಮದ ಮೂಲಭೂತ ಸೌಕರ್ಯಗಳ ಕುರಿತು ಗ್ರಾಮದ ಮಹಿಳೆಯರಿಂದ ಮಾಹಿತಿ ಪಡೆದರು.
“ಭರಮಸಾಗರ ಶಿಶು ಅಭಿವೃದ್ಧಿ ಯೋಜನೆ ವ್ಯಾಪ್ತಿಯಲ್ಲಿ ಕಳೆದ ಹಲವು ತಿಂಗಳಿಂದ ಗರ್ಭಿಣಿ ಹಾಗೂ ಬಾಣಂತಿಯರಿಗೆ ಮೊಟ್ಟೆ ವಿತರಣೆ ಮಾಡಿಲ್ಲ’ ಎಂದು ಗ್ರಾಮದ ಮಹಿಳೆಯರು ಆರೋಪಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಅಧ್ಯಕ್ಷರು, ಗರ್ಭಿಣಿಯರಿಗೆ ಪ್ರತಿ ತಿಂಗಳು 25 ಮೊಟ್ಟೆ ವಿತರಣೆ ಮಾಡಬೇಕು. ಗರ್ಭಿಣಿ, ಬಾಣಂತಿಯರಿಗೆ ಆದ್ಯತೆ ಕೊಡುತ್ತಿಲ್ಲವೇ ಎಂದು ಭರಮಸಾಗರ ಸಿಡಿಪಿಒ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶರಿಗೆ ಪ್ರಶ್ನಿಸಿದ ಅವರು, ಬಡಜನರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಸರ್ಕಾರ ಜನಪರ ಕಾರ್ಯಕ್ರಮಗಳನ್ನು ರೂಪಿಸಿ, ಕೋಟ್ಯಾಂತರ ರೂಪಾಯಿಗಳ ಅನುದಾನ ನೀಡಿ, ಅರ್ಹರಿಗೆ ಸೌಲಭ್ಯ ಕಲ್ಪಿಸುತ್ತಿದೆ ಎಂದು ತಿಳಿಸಿದ ಅವರು, ಈ ಕುರಿತು ಸಂಪೂರ್ಣ ವರದಿ ನೀಡುವಂತೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಗ್ರಾಮದಲ್ಲಿ ಶುದ್ಧ ಕುಡಿಯುವ ನೀರು ಪೂರೈಕೆ ಆಗುತ್ತಿಲ್ಲ, ಕುಡಿಯುವ ನೀರಿಗಾಗಿ ಅಕ್ಕ-ಪಕ್ಕದ ಊರುಗಳಿಗೆ ಹೋಗಿ ನೀರು ತರಬೇಕಿದೆ ಎಂದು ಮಹಿಳೆಯರು ಅಳಲು ತೋಡಿಕೊಂಡರು. “ಗ್ರಾಮದ ಸಮಸ್ಯೆಗಳ ಕುರಿತು ಗ್ರಾಮಸಭೆ ನಡೆಸಿದ್ದೀರಾ, ಶುದ್ಧ ಕುಡಿಯುವ ನೀರು ಪೂರೈಕೆ ಇಲ್ಲ, ಆರ್.ಓ. ಘಟಕ ಇಲ್ಲ. ಕುಡಿಯುವ ನೀರಿಗೆ ಅನುದಾನ ಇಲ್ಲವೇ? ಎಂದು ಪಿಡಿಒ ಜಯಶೀಲಾ ಅವರನ್ನು ಪ್ರಶ್ನಿಸಿದ ಅಧ್ಯಕ್ಷರು ಈ ಕುರಿತು ಗ್ರಾಮಸ್ಥರಿಗೆ ಶುದ್ಧ ನೀರು ಪೂರೈಸುವ ನಿಟ್ಟಿನಲ್ಲಿ ಅಗತ್ಯ ಕ್ರಮವಹಿಸಬೇಕು ಎಂದು ಹೇಳಿದರು.
ಗ್ರಾಮದ ಅಂಬೇಡ್ಕರ್ ಭವನ ಬಳಕೆ ಆಗುತ್ತಿಲ್ಲ. ಈ ಭವನವನ್ನು ಕೌಶಲ್ಯ ತರಬೇತಿ ನೀಡಲು ಭವನ ಬಳಕೆಗೆ ಅವಕಾಶ ನೀಡಬೇಕು ಎಂದು ಗ್ರಾಮದ ಮಹಿಳೆಯರು ಸಲಹೆ ನೀಡಿದರು. ಎನ್‍ಆರ್‍ಎಲ್‍ಎಂ ತಂಡವನ್ನು ಗ್ರಾಮಕ್ಕೆ ಕಳುಹಿಸಿ, ಸ್ತ್ರೀಶಕ್ತಿ ಸಂಘಗಳ ಸಭೆ ನಡೆಸಿ, ಕೌಶಲ್ಯ ತರಬೇತಿ ನೀಡಲು ಅಗತ್ಯ ಕ್ರಮ ವಹಿಸಲಾಗುವುದು ಎಂದು ತಾ.ಪಂ. ಇಒ ರವಿಕುಮಾರ್ ತಿಳಿಸಿದರು.
ಜಿಲ್ಲಾ ಗ್ಯಾರಂಟಿ ಯೋಜನೆ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಶಿವಣ್ಣ ಮಾತನಾಡಿ, ಗೊಲ್ಲರಹಟ್ಟಿಗಳನ್ನು ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಸರ್ಕಾರ ಅಗತ್ಯ ಕ್ರಮವಹಿಸಿದೆ. ರಾಜ್ಯದ ಮುಖ್ಯಮಂತ್ರಿಗಳು ಹಾಗೂ ಉಪಮುಖ್ಯಮಂತ್ರಿಗಳು ಹೆಚ್ಚಿನ ಕಾಳಜಿ ವಹಿಸಿದ್ದು, ಗೊಲ್ಲರಹಟ್ಟಿ ಅಭಿವೃದ್ಧಿಗೆ ಸರ್ಕಾರ ಬದ್ಧವಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ತಹಶೀಲ್ದಾರ್ ಡಾ.ನಾಗವೇಣಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ಭಾರತಿ ಆರ್ ಬಣಕಾರ್, ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಜಗದೀಶ್ ಹೆಬ್ಬಳ್ಳಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ಸುಬ್ರಾನಾಯಕ್, ಜಿಲ್ಲಾ ಆರ್‍ಸಿಹೆಚ್ ಅಧಿಕಾರಿ ಡಾ.ಅಭಿನವ್, ತಾಲ್ಲೂಕು ಪಂಚಾಯಿತಿ ಇಒ ರವಿಕುಮಾರ್, ಭರಮಸಾಗರ ಸಿಡಿಪಿಒ ಸುಧಾ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು, ಗ್ರಾ.ಪಂ. ಸದಸ್ಯರುಗಳು, ಗ್ರಾಮಸ್ಥರು ಇದ್ದರು.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading