ಚಿತ್ರದುರ್ಗ.ಫೆ.05:
ಜಿಲ್ಲಾಸ್ಪತ್ರೆಗೆ ಆಗಮಿಸುವ ರೋಗಿಗಳಿಗೆ ಆಯುಷ್ಮಾನ್ ಭಾರತ ಆರೋಗ್ಯ ಯೋಜನೆಯಡಿ ಸೂಕ್ತ ಚಿಕಿತ್ಸೆ ನೀಡಬೇಕು. ಆಸ್ಪತ್ರೆಯಲ್ಲಿ ಎಲ್ಲ ರೀತಿಯ ಮೂಲಭೂತ ಸೌಲಭ್ಯ ಒದಗಿಸಿ, ಸಮಸ್ಯೆಗಳ ನಿವಾರಣೆಗೆ ಆದ್ಯತೆ ವಹಿಸುವಂತೆ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮೀ ಚೌಧರಿ ಸೂಚನೆ ನೀಡಿದರು.
ಬುಧವಾರ ನಗರದ ಜಿಲ್ಲಾಸ್ಪತ್ರೆಯ ಆವರಣದಲ್ಲಿರುವ ತಾಯಿ ಮಕ್ಕಳ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಅವರು ಈ ವೇಳೆ ಸಾರ್ವಜನಿಕರ ಅಹವಾಲು ಆಲಿಸಿದರು.
ಅಪಘಾತದಲ್ಲಿ ಗಂಡ ತೀರಿಕೊಂಡಿದ್ದು ಮಕ್ಕಳಿಗೆ ಸಹಾಯ ಮಾಡುವಂತೆ ಓರ್ವ ಮಹಿಳೆ ಕಣ್ಣೀರಿಟ್ಟು ಡಾ.ನಾಗಲಕ್ಷ್ಮೀ ಚೌಧರಿ ಅವರನ್ನು ಕೋರಿದರು. ಇದಕ್ಕೆ ಸ್ಪಂದಿಸಿದ ಅವರು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೆಶಕರಿಗೆ ಪ್ರಾಯೋಜಕತ್ವ ಯೋಜನೆಯಡಿ ಅಶಕ್ತ ವಿಧವೆಯರ ಮಕ್ಕಳಿಗೆ, ಶಿಕ್ಷಣ, ವೈದ್ಯಕೀಯ, ಆಹಾರ ಸೇರಿದಂತೆ ಇತರೆ ಸೌಲಭ್ಯಗಳನ್ನು ನೀಡಲು ಪ್ರತಿ ಮಾಹೆ ರೂ.4000/- ಸಹಾಯ ಧನ ನೀಡುವ ವ್ಯವಸ್ಥೆ ಮಾಡುವಂತೆ ಸೂಚಿಸಿದರು. ನಂತರ ಪೆಲಾಂಡಿಸಿಸ್ ರೋಗದಿಂದ ಬಳಲುತ್ತಿದ್ದ, ಮಗುವಿನ ತಾಯಿಯ ಸಮಸ್ಯೆ ಆಲಿಸಿದ ಅವರು, ಆಯುಷ್ಮಾನ್ ಭಾರತ್ ಆರೋಗ್ಯ ಯೋಜನೆಯಡಿ ಜಿಲ್ಲಾಸ್ಪತ್ರೆಯಲ್ಲಿ ಮಗುವಿಗೆ ಶಸ್ತ್ರಚಿಕಿತ್ಸೆ ನಡೆಸಬೇಕು. ಬೇರೆಡೆಗೆ ಶಿಫಾರಸ್ಸು ಮಾಡಬಾರದು ಎಂದು ಜಿಲ್ಲಾ ಶಸ್ತ್ರಚಿಕಿತ್ಸಕರಿಗೆ ನಿರ್ದೇಶನ ನೀಡಿದರು. ಈ ವೇಳೆ ಜಿಲ್ಲಾಸ್ಪತ್ರೆಯಲ್ಲಿ ವೈದ್ಯರು ತ್ವರಿತವಾಗಿ ಸೂಕ್ತ ಚಿಕಿತ್ಸೆ ನೀಡುವುದಿಲ್ಲ. ಅನಗತ್ಯವಾಗಿ ಶುಲ್ಕ ವಿಧಿಸುತ್ತಾರೆ. ಅಂಗವಿಕಲ ಮಕ್ಕಳು ಹಾಗೂ ಪೋಷಕರು ವಿಕಲಚೇತನರ ವೈದ್ಯಕೀಯ ಪ್ರಮಾಣ ಪತ್ರ ಪಡೆಯಲು ಆಸ್ಪತ್ರೆಗೆ ಅಲೆಯುವಂತಾಗಿದೆ. ಸಿಜೇರಿಯನ್ ಪ್ರಮಾಣ ಹೆಚ್ಚಾಗಿದ್ದು, ಹೆರಿಗೆ ಮಾಡಿಸಲು ವೈದ್ಯರು ಹಣ ಪಡೆಯುತ್ತಾರೆ, ಆಸ್ಪತ್ರೆಯಲ್ಲಿ ಜನಿಸಿದ ಮಕ್ಕಳ ಜನನ ಪ್ರಮಾಣಪತ್ರ ನೀಡಲು ಸಹ ವಿಳಂಬ ಮಾಡುತ್ತಾರೆ. ನೂತನವಾಗಿ ನಿರ್ಮಿಸಿರುವ ತಾಯಿ ಮಕ್ಕಳ ಆಸ್ಪತ್ರೆಯಲ್ಲಿ ಲಿಫ್ಟ್ ಕಾರ್ಯಾಚರಣೆ ಮಾಡುತ್ತಿಲ್ಲ ಎಂದು ಸಾರ್ವಜನಿಕರು ಅಹವಾಲುಗಳನ್ನು ಹೇಳಿಕೊಂಡರು.
ಅಧ್ಯಕ್ಷೆ ಡಾ.ನಾಗಲಕ್ಷ್ಮೀ ಚೌಧರಿ ಅವರು ಕಟ್ಟಡದ ನಿರ್ವಹಣೆ ಹೊಣೆ ಹೊತ್ತ ಗುತ್ತಿಗೆದಾರರಿಂದ ಶೀಘ್ರವೇ ಲಿಫ್ಟ್ ದುರಸ್ತಿಪಡಿಸುವಂತೆ ಸೂಚಿಸಿದರು, ಅಲ್ಲದೆ ಸಾರ್ವಜನಿಕರು ಆಸ್ಪತ್ರೆ ವೈದ್ಯರ ಬಗ್ಗೆ ಹಾಗೂ ಸೇವೆಗಳು ಮತ್ತು ನಿರ್ವಹಣೆ ಕುರಿತಂತೆ ಸಂಬಂಧಪಟ್ಟ ಅಧಿಕಾರಿಗಳಿಂದ ಮಾಹಿತಿ ಪಡೆದು, ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದರು. ಬಳಿಕ ತಾಯಿ ಮತ್ತು ಮಕ್ಕಳ ಆಸ್ಪತೆಯ ವಿವಿಧ ವಾರ್ಡಗಳಿಗೆ ಭೇಟಿ ನೀಡಿ ಒಳರೋಗಿಗಳ ಸ್ಥಿತಿಗತಿಯನ್ನು ವೀಕ್ಷಿಸಿ ಮಾಹಿತಿ ಪಡೆದುಕೊಂಡರು.
ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ ಜಿಲ್ಲಾ ಅಧ್ಯಕ್ಷ ಶಿವಣ್ಣ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕಿ ಭಾರತಿ ಬಣಕಾರ್, ಜಿಲ್ಲಾ ಅಂಗವಿಕಲ ಕಲ್ಯಾಣಾಧಿಕಾರಿ ಜೆ.ವೈಶಾಲಿ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಸವಿತಾ, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಎಸ್.ಪಿ.ರವೀಂದ್ರ, ಜಿಲ್ಲಾ ಆರ್.ಸಿ.ಹೆಚ್ ಅಧಿಕಾರಿ ಡಾ.ಅಭಿನವ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.


About The Author
Discover more from JANADHWANI NEWS
Subscribe to get the latest posts sent to your email.