December 14, 2025
1764852312767.jpg

ಚಿತ್ರದುರ್ಗ ಡಿ.04:
ಶಾಲಾ ಶಿಕ್ಷಣ ಇಲಾಖೆಯ ಕೇಂದ್ರಿಕೃತ ದಾಖಲಾತಿ ಘಟಕದಿಂದ ಚಿತ್ರದುರ್ಗ ಜಿಲ್ಲಾ ಕೇಂದ್ರದಲ್ಲಿ ಬರುವ ಡಿ.7 ರಂದು ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆ-2025 (ಟಿಇಟಿ) ನಡೆಸಲಾಗುತ್ತಿದ್ದು, ಪತ್ರಿಕೆ-1 ಹಾಗೂ ಪತ್ರಿಕೆ-2 ಸೇರಿ ಒಟ್ಟು 12,813 ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಲಿದ್ದಾರೆ. ಪರೀಕ್ಷಾ ಕೇಂದ್ರಗಳ ಮುಖ್ಯ ಅಧೀಕ್ಷಕರು ನಿಯಮಗಳನ್ನು ಕಡ್ಡಾಯವಾಗಿ ಪಾಲಿಸುವ ಮೂಲಕ ಅಭ್ಯರ್ಥಿಗಳಿಗೆ ತೊಂದರೆಯಾಗದಂತೆ ಪರೀಕ್ಷಾ ಕಾರ್ಯನಿರ್ವಹಿಸಬೇಕು ಎಂದು ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಸೂಚಿಸಿದರು.

ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಗುರುವಾರ ಈ ಕುರಿತು ಜರುಗಿದ ಪರೀಕ್ಷಾ ಪೂರ್ವ ಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಟಿ.ಇ.ಟಿ. ಪರೀಕ್ಷೆಗೆ ಸಂಬಂಧಿಸಿದಂತೆ ಡಿ. 07 ರಂದು ಪತ್ರಿಕೆ-1ರ ಪರೀಕ್ಷೆ ಬೆಳಿಗ್ಗೆ 9:30 ರಿಂದ 12 ಗಂಟೆವರೆಗೆ ಹಾಗೂ ಪತ್ರಿಕೆ-2ರ ಪರೀಕ್ಷೆ ಮಧ್ಯಾಹ್ನ 2 ರಿಂದ 4:30 ಗಂಟೆಯವರೆಗೆ ನಡೆಯಲಿದೆ. ಈ ಹಿನ್ನಲೆಯಲ್ಲಿ ಮುಂಜಾನೆ 7 ರಿಂದ 9 ಗಂಟೆಯವರೆಗೆ, ಮಧ್ಯಾಹ್ನ 12:15 ರಿಂದ 1:30 ಗಂಟೆಯವರೆಗೆ ಅಭ್ಯರ್ಥಿಗಳ ಸಮಗ್ರ ತಪಾಸಣೆ ಕಾರ್ಯ ಹಾಗೂ ಪ್ರವೇಶ ಪತ್ರದ ಮುಖ ಚಹರೆಯನ್ನು ತಾಳೆನೋಡಿ ಪರೀಕ್ಷಾ ಕೇಂದ್ರದ ಆವರಣದೊಳಗೆ ಪ್ರವೇಶ ನೀಡಲಾಗುವುದು. ಇದಕ್ಕೆ ಕೇಂದ್ರೀಕೃತ ದಾಖಲಾತಿ ಘಟಕದಿಂದ ಸಿಬ್ಬಂದಿಯನ್ನು ನೇಮಿಸಲಾಗುವುದು. ಒಂದು ವೇಳೆ ತಪಾಸಣಾ ಸಿಬ್ಬಂದಿ ಸಮಯಕ್ಕೆ ಬಾರದೆ ಹೋದರೆ, ಪರೀಕ್ಷಾ ಕೇಂದ್ರಗಳ ಮುಖ್ಯಸ್ಥರು ತಮ್ಮ ಸಿಬ್ಬಂದಿ ನಿಯೋಜಿಸಿ, ತಪಾಸಣೆ ಕೈಗೊಂಡು ಅಭ್ಯರ್ಥಿಗಳಿಗೆ ಪ್ರವೇಶ ಅವಕಾಶ ನೀಡಬೇಕು. ಈ ಹಿಂದೆ ಕೆ.ಪಿ.ಎಸ್.ಸಿ ಪರೀಕ್ಷೆ ವೇಳೆ ಕೆಲ ಕೇಂದ್ರಗಳಲ್ಲಿ ತಪಾಸಣೆಗೆ ಒಳಗಾಗಲು ನಿಂತ ಅಭ್ಯರ್ಥಿಗಳ ಉದ್ದದ ಸಾಲು, ರಸ್ತೆಯವರೆಗೂ ವ್ಯಾಪಿಸಿತ್ತು. ಈ ರೀತಿಯ ಗೊಂದಲಗಳಿಗೆ ಪರೀಕ್ಷಾ ಕೇಂದ್ರ ಮುಖ್ಯಸ್ಥರು ಅವಕಾಶ ನೀಡಬಾರದು. ಪರೀಕ್ಷೆ ಬರೆಯುವ ಅಭ್ಯರ್ಥಿಗಳು ಸಹ ಮುಂಚಿತವಾಗಿಯೇ ಪರೀಕ್ಷಾ ಕೇಂದ್ರಕ್ಕೆ ಆಗಮಿಸಬೇಕು. ಈ ಕುರಿತು ಪ್ರವೇಶ ಪತ್ರದಲ್ಲಿ ಸೂಚನೆ ನೀಡಲಾಗಿದೆ ಎಂದು ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ತಿಳಿಸಿದರು.
ಬಿಗಿ ಪೊಲೀಸ್ ಬಂದೋಬಸ್ತ್‍ಗೆ ನಿರ್ದೇಶನ:
**************
ಪತ್ರಿಕೆ-1ರ ಪರೀಕ್ಷೆ ನಗರದ 8 ಪರೀಕ್ಷಾ ಕೇಂದ್ರಗಳಲ್ಲಿ ನಡೆಯಲಿದ್ದು, ಒಟ್ಟು 2,623 ಅಭ್ಯರ್ಥಿಗಳು ಹಾಜರಾಗಲಿದ್ದಾರೆ. ಪತ್ರಿಕೆ-2 ಪರೀಕ್ಷೆ ನಗರದ 35 ಪರೀಕ್ಷಾ ಕೇಂದ್ರಗಳಲ್ಲಿ ನಡೆಯಲಿದ್ದು, ಒಟ್ಟು 10,190 ಅಭ್ಯರ್ಥಿಗಳು ಹಾಜರಾಗಲಿದ್ದಾರೆ. ಪ್ರತಿ ಪರೀಕ್ಷಾ ಕೇಂದ್ರಗಳಿಗೆ ಇಬ್ಬರಂತೆ ಪೊಲೀಸ್ ಬಂದೋಬಸ್ತ್ ಕಲ್ಪಿಸಬೇಕು. ಇದರೊಂದಿಗೆ ಜಿಲ್ಲಾ ಖಜಾನೆಯಿಂದ ಸುರಕ್ಷಿತವಾಗಿ ಪರೀಕ್ಷಾ ಕೇಂದ್ರಗಳಿಗೆ ಪ್ರಶ್ನೆ ಪತ್ರಿಕೆ ಹಾಗೂ ಓ.ಎಂ.ಆರ್ ಶೀಟ್ ಕೊಂಡೊಯ್ಯುವ ಹಾಗೂ ಮರಳಿ ತರುವ ಮಾರ್ಗಾಧಿಕಾರಿಗಳ ತಂಡಗಳಿಗೂ ಸಶಸ್ತ್ರ ಪೊಲೀಸ್ ಸಿಬ್ಬಂದಿ ನಿಯೋಜಿಸಿ ಭದ್ರತೆ ನೀಡಬೇಕು. ತ್ರಿ ಸದಸ್ಯ ಸಮಿತಿ ಅಧಿಕಾರಿಗಳು ಹಾಗೂ ಖಜಾನೆ ಸಿಬ್ಬಂದಿಗಳು ಸರಿಯಾದ ಸಮಯಕ್ಕೆ ಮಾರ್ಗಾಧಿಕಾರಿಗಳಿಗೆ ಪ್ರಶ್ನೆ ಪತ್ರಿಕೆ ಮತ್ತು ಓ.ಎಂ.ಆರ್. ಬಂಡಲ್‍ಗಳನ್ನು ನೀಡಬೇಕು. ಪರೀಕ್ಷೆ ತರುವಾಯ ಮಾರ್ಗಾಧಿಕಾರಿಗಳು ಉತ್ತರ ಪತ್ರಿಕೆಗಳ ಬಂಡಲ್‍ಗಳನ್ನು ಪೊಲೀಸರ ರಕ್ಷಣೆಯಲ್ಲಿ ಖಜಾನೆಗೆ ತಂದು ಸುರಕ್ಷಿತವಾಗಿ ಇಡಬೇಕು. ಡಿ. 08 ಸೋಮವಾರ ಈ ಉತ್ತರ ಪತ್ರಿಕೆಗಳನ್ನು ಬೆಂಗಳೂರಿನ ಕೇಂದ್ರಿಕೃತ ದಾಖಲಾತಿ ಘಟಕಕ್ಕೆ ನೋಡಲ್ ಅಧಿಕಾರಿಗಳು ಕೊಂಡೊಯ್ಯುವರು. ಈ ಸಮಯದಲ್ಲಿಯೂ ಸಹ ಪೊಲೀಸ್ ಬೆಂಗಾವಲು ಪಡೆಯನ್ನು ನಿಯೋಜಿಸಬೇಕು. ಹೆಚ್ಚಿನ ಸಂಖ್ಯೆಯ ಅಭ್ಯರ್ಥಿಗಳು ಪರೀಕ್ಷೆ ಬರೆಯುವ ಕೇಂದ್ರಗಳಿಗೆ ಹಾಗೂ ಕಾಂಪೌಡ್ ಇರದ ಕೇಂದ್ರಗಳಿಗೆ ಹೆಚ್ಚಿನ ಪೊಲೀಸರನ್ನು ನಿಯೋಜಿಸುವಂತೆ ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ನಿರ್ದೇಶನ ನೀಡಿದರು.
ನಿಷೇಧಾಜ್ಞೆ ಜಾರಿ:
***********
ಪರೀಕ್ಷೆ ಪಾವಿತ್ರ್ಯತೆ ಕಾಪಾಡುವ ಹಾಗೂ ಸುರಕ್ಷತೆಯ ದೃಷ್ಠಿಯಿಂದ ನಗರದ 35 ಪರೀಕ್ಷಾ ಕೇಂದ್ರಗಳ ಸುತ್ತಮುತ್ತಲಿನ 200 ಮೀಟರ್ ವ್ಯಾಪ್ತಿಯಲ್ಲಿ 144 ಸೆಕ್ಷನ್ ಪ್ರಕಾರ ನಿಷೇಧಾಜ್ಞೆ ಹೊರಡಿಸಲಾಗುವುದು. ಈ ಪ್ರದೇಶಗಳಲ್ಲಿ ಯಾವುದೇ ಜೆರಾಕ್ಸ್ ಹಾಗೂ ಕಂಪ್ಯೂಟರ್ ಸೆಂಟರ್‍ಗಳನ್ನು ತೆರೆಯುವಂತಿಲ್ಲ. ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳು ಯಾವುದೇ ರೀತಿಯ ಎಲೆಕ್ಟ್ರಾನಿಕ್ ಯಂತ್ರೋಪಕರಣಗಳು ಹಾಗೂ ಮೊಬೈಲ್‍ಗಳನ್ನು ಪರೀಕ್ಷಾ ಕೇಂದ್ರಗಳಿಗೆ ತರುವಂತಿಲ್ಲ. ಅಭ್ಯರ್ಥಿಗಳು ಪ್ರವೇಶ ಪತ್ರಿಕೆಯಲ್ಲಿ ನೀಡಿರುವ ಸೂಚನೆಗಳನ್ನು ತಪ್ಪದೇ ಪಾಲಿಸಬೇಕು. ಎಲ್ಲಾ ಪರೀಕ್ಷಾ ಕೇಂದ್ರಗಳಲ್ಲಿಯೂ ಪ್ರಥಮ ಚಿಕಿತ್ಸಾ ಉಪಕರಣ ಹಾಗೂ ಔಷಧಗಳೊಂದಿಗೆ ಆರೋಗ್ಯ ಸಹಾಯಕರನ್ನು ನೇಮಿಸಬೇಕು. ಪರೀಕ್ಷಾ ಅವಧಿಯಲ್ಲಿ ವಿದ್ಯುತ್ ಅಡಚಣೆ ಉಂಟಾಗದಂತೆ ಕ್ರಮವಹಿಸಬೇಕು ಎಂದು ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಸಂಬಂದಪಟ್ಟ ಅಧಿಕಾರಿಗಳಿಗೆ ತಿಳಿಸಿದರು.
ಪರೀಕ್ಷಾ ಕಾರ್ಯಕ್ಕೆ ಗೈರು: ಕಠಿಣ ಕ್ರಮದ ಎಚ್ಚರಿಕೆ
***************
ಪರೀಕ್ಷಾ ಕೊಠಡಿ ಮೇಲ್ವಿಚಾರಕರನ್ನಾಗಿ ಸರ್ಕಾರಿ ಹಾಗೂ ಅನುದಾನಿತ ಶಿಕ್ಷಕರು ಹಾಗೂ ಉಪನ್ಯಾಸಕರನ್ನು ಮಾತ್ರ ನೇಮಿಸುವಂತೆ ಪರೀಕ್ಷಾ ಮಾರ್ಗಸೂಚಿಯಲ್ಲಿ ಸ್ಪಷ್ಟವಾಗಿ ತಿಳಿಸಲಾಗಿದೆ. ಪರೀಕ್ಷಾ ಕೇಂದ್ರಗಳ ಮುಖ್ಯಸ್ಥರು ಇದನ್ನು ಗಮನದಲ್ಲಿ ಇರಿಸಿಕೊಳ್ಳಬೇಕು. ಒಂದು ವೇಳೆ ಪರೀಕ್ಷಾ ಕಾರ್ಯಕ್ಕೆ ನೇಮಿಸಿದ ಶಿಕ್ಷಕರು ಅಥವಾ ಉಪನ್ಯಾಸಕರು ಗೈರು ಹಾಜರಾದರೆ ಅವರ ವಿರುದ್ದ ಕಠಿಣ ಕ್ರಮ ಕೈಗೊಳ್ಳುವುದಾಗಿ ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಎಚ್ಚರಿಸಿದರು.
ಕೆಲ ಖಾಸಗಿ ಶಾಲಾ ಕಾಲೇಜುಗಳಲ್ಲಿ ಅನುದಾನಿತ ಶಿಕ್ಷಕರು ಲಭ್ಯವಿಲ್ಲದಿದ್ದರೆ, ಸ್ಥಳೀಯ ಸರ್ಕಾರಿ ಶಾಲೆಗಳ ಶಿಕ್ಷಕರನ್ನು ಕೊಠಡಿ ಮೇಲ್ವಿಚಾರಕರನ್ನಾಗಿ ಕ್ಷೇತ್ರ ಶಿಕ್ಷಣಾಧಿಕಾರಿಗಳು ನೇಮಿಸಬೇಕು. ರೈಲ್ವೇ ಗೇಟ್ ದಾಟಿ ನಗರದ ಹೊರ ವಲಯದಲ್ಲಿರುವ ಪರೀಕ್ಷಾ ಕೇಂದ್ರಗಳಿಗೆ ಮುಂಚಿತವಾಗಿ ಪ್ರಶ್ನೆ ಪತ್ರಿಕೆ ಓಎಂಆರ್ ಬಂಡಲ್ ರವಾನಿಸಲು ಮಾರ್ಗಾಧಿಕಾರಿಗಳು ಕ್ರಮ ವಹಿಸಬೇಕು. ಪರೀಕ್ಷಾ ಅಕ್ರಮಗಳಲ್ಲಿ ತೊಡಗುವ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಸರ್ಕಾರ ಪ್ರತ್ಯೇಕ ಕಾಯ್ದೆ ರೂಪಿಸಿದೆ. ಪರೀಕ್ಷೆ ಕಾರ್ಯಕ್ಕೆ ನಿಯೋಜನೆಗೊಂಡ ಎಲ್ಲಾ ಸಿಬ್ಬಂದಿಗಳು ಎಚ್ಚರಿಕೆಯಿಂದ ಕಾರ್ಯನಿರ್ವಹಿಸಬೇಕು ಎಂದು ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಹೇಳಿದರು.
ಪರೀಕ್ಷೆ ವೆಬ್ ಕಾಸ್ಟಿಂಗ್:
************
ನಗರದ ಜಿಲ್ಲಾ ಪಂಚಾಯಿತಿ ಕಚೇರಿಯಲ್ಲಿ ಶಿಕ್ಷಕರ ಅರ್ಹತಾ ಪರೀಕ್ಷೆ-2025 ವೆಬ್ ಕಾಸ್ಟಿಂಗ್ ಮಾಡಲು ಸಿದ್ದತೆಗಳನ್ನು ನಡೆಸಲಾಗಿದೆ. ಈ ಸಂಬಂದ ಎಲ್ಲಾ ಪರೀಕ್ಷಾ ಕೇಂದ್ರಗಳ ಮುಖ್ಯಸ್ಥರಿಂದ ಅಗತ್ಯ ತಾಂತ್ರಿಕ ವಿವರಗಳನ್ನು ಪಡೆಯಲಾಗಿದೆ. ಸಿ.ಸಿ. ಟಿ.ವಿ ಕ್ಯಾಮರಾ ಸೌಲಭ್ಯ ಇರುವ ಕೊಠಡಿಗಳನ್ನು ಪರೀಕ್ಷೆ ಆಯ್ದುಕೊಳ್ಳಲಾಗಿದೆ. ಒಂದು ವೇಳೆ ಕೊಠಡಿಗಳಲ್ಲಿ ಸಿ.ಸಿ. ಟಿ.ವಿ ಇರದಿದ್ದರೆ ತಾತ್ಕಾಲಿಕವಾಗಿ ಸಿ.ಸಿ.ಟಿ.ವಿ ಕ್ಯಾಮರಾ ಅಳವಡಿಸಲು ಕ್ರಮ ಕೈಗೊಳ್ಳಲಾಗಿದೆ. ಪರೀಕ್ಷಾ ಕಾರ್ಯಕ್ಕೆ ಮಾರ್ಗಾಧಿಕಾರಿಗಳು, ನೋಡಲ್ ಅಧಿಕಾರಿಗಳು, ಸ್ಥಾನಿಕ ಜಾಗೃತ ದಳದ ಅಧಿಕಾರಿಗಳನ್ನು ನೇಮಿಸಲಾಗಿದೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಉಪನಿರ್ದೇಶಕ ಮಂಜುನಾಥ ಸಭೆಯಲ್ಲಿ ಮಾಹಿತಿ ನೀಡಿದರು.
ಸಭೆಯಲ್ಲಿ ಡಯಟ್ ಉಪನಿರ್ದೇಶಕ ಎಂ.ನಾಸಿರುದ್ದೀನ್, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಉಪನಿರ್ದೇಶಕರ ಕಚೇರಿ ನೋಡಲ್ ಅಧಿಕಾರಿ ಮಹಮದ್ ಇನಾಯತ್ ಉಲ್ಲಾ, ಜಿಲ್ಲಾ ಖಜನಾಧಿಕಾರಿ ಅಶೋಕ್.ಹೆಚ್.ಟಿ ಸೇರಿದಂತೆ ಪರೀಕ್ಷಾ ಕೇಂದ್ರಗಳ ಮುಖ್ಯಸ್ಥರು, ಬೆಸ್ಕಾಂ, ಪೊಲೀಸ್, ಜಿಲ್ಲಾ ಪಂಚಾಯಿತಿ ಅಧಿಕಾರಿಗಳು ಉಪಸ್ಥಿತರಿದ್ದರು.

===============

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading