ಹಿರಿಯೂರು :
ಗ್ರಾಮೀಣ ಸಾರಿಗೆ ಡಿಪೋ ಪ್ರಾರಂಭಿಸಬೇಕು ಎಂದು ಹಲವು ಬಾರಿ ಹೋರಾಟ ಹಾಗೂ ಚಳುವಳಿ ಮಾಡಿ ಮನವಿ ಮಾಡಲಾಗಿದ್ದು, ಅಧಿಕಾರಿಗಳಿಗೆ ಕೊಟ್ಟಂತ ಗಡುಗು ಮುಗಿದು ಒಂದು ತಿಂಗಳಾದರೂ ಡಿಪೋ ಪ್ರಾರಂಭಿಸುತ್ತಿಲ್ಲ, ಆದ್ದರಿಂದ ಬರುವ 11ನೇ ತಾರೀಕು ಬುಧವಾರದಿಂದ ಕೆಎಸ್ಆರ್.ಟಿ.ಸಿ ಡಿಪೋ ಮುಂಭಾಗದಲ್ಲಿ ರೈತಸಂಘದ ನೇತೃತ್ವದಲ್ಲಿ ಅಹೋರಾತ್ರಿ ಧರಣಿ ಸತ್ಯಾಗ್ರಹ ಮಾಡಲಾಗುವುದು ಎಂಬುದಾಗಿ ರೈತಸಂಘದ ತಾಲ್ಲೂಕು ಅಧ್ಯಕ್ಷರಾದ ಕೆ.ಟಿ.ತಿಪ್ಪೇಸ್ವಾಮಿ ಸಭೆಗೆ ತಿಳಿಸಿದರು.
ನಗರದ ರೈತ ಸಂಘದ ಕಚೇರಿಯಲ್ಲಿ ಕರೆಯಲಾಗಿದ್ದ ಮಾಸಿಕ ಸಭೆಯನ್ನು ಉದ್ದೇಶಿಸಿ, ಅವರು ಮಾತನಾಡಿದರು.
ಈ ಧರಣಿ ಸತ್ಯಾಗ್ರಹಕ್ಕೆ ಎಲ್ಲಾ ಸದಸ್ಯರು ಬೆಂಬಲ ಸೂಚಿಸಿ, ಮುಂದಿನ ಬುಧವಾರದಿಂದ ಧರಣಿ ಸತ್ಯಾಗ್ರಹವನ್ನು ಕೈಗೊಳ್ಳಲು ತೀರ್ಮಾನಿಸಲಾಯಿತು. ಬರುವ 9ನೇ ತಾರೀಕು ಜೆಜೆಹಳ್ಳಿ ಭಾಗದ ಎಲ್ಲಾ ಕೆರೆಗಳಿಗೂ ಮತ್ತು ಕಸಬಾ ಹಾಗೂ ಐಮಂಗಳ ಭಾಗದ ಕೆರೆಗಳಿಗೂ ನೀರು ತುಂಬಿಸುವಂತೆ ಹಿರಿಯೂರು ಬಂದ್ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲು ತೀರ್ಮಾನಿಸಲಾಗಿತ್ತು
ಆದರೆ ಹಿರಿಯೂರು ತಾಲೂಕಿಗೆ ವಿವಿಧ ಕಾರ್ಯಕ್ರಮಗಳ ಉದ್ಘಾಟನೆಗೆ ಮುಖ್ಯಮಂತ್ರಿಗಳು ಆಗಮಿಸುವ ಸೂಚನೆಯನ್ನು ಜಿಲ್ಲಾ ಉಸ್ತುವಾರಿ ಮಂತ್ರಿಗಳು ನೀಡಿರುತ್ತಾರೆ ಹಾಗಾಗಿ ಮುಖ್ಯಮಂತ್ರಿಗಳು ಬರುವುದರೊಳಗಾಗಿ ನಾವು ಒತ್ತಾಯಿಸಿರುವ ಎಲ್ಲಾ ಕೆರೆಗಳಿಗೂ ನೀರು ತುಂಬಿಸುವ ಆದೇಶ ಬಾರದೆ ಇದ್ದಲ್ಲಿ ಮುಖ್ಯಮಂತ್ರಿಗಳ ಕಾರ್ಯಕ್ರಮದಲ್ಲಿ ಕಪ್ಪು ಬಾವುಟ ಪ್ರದರ್ಶಿಸಿ ಘೇರಾವು ಹಾಕುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲು ಸಭೆಯಲ್ಲಿ ತೀರ್ಮಾನಿಸಿರುವುದರಿಂದ ಹಿರಿಯೂರು ಬಂದ್ ಕಾರ್ಯಕ್ರಮವನ್ನು ತಾತ್ಕಾಲಿಕವಾಗಿ ಮುಂದೂಡಲಾಗಿದೆ ಎಂಬುದಾಗಿ ಸಭೆಗೆ ತಿಳಿಸಿದರು.
ಮುಖ್ಯಮಂತ್ರಿಗಳ ಕಾರ್ಯಕ್ರಮಕ್ಕೆ ಸುಮಾರು ಐದರಿಂದ ಆರು ಸಾವಿರ ರೈತರು ಆಗಮಿಸಬೇಕು, ದೊಡ್ಡಮಟ್ಟದ ಚಳುವಳಿಯನ್ನು ರೂಪಿಸಬೇಕು ಎಂದು ಸಭೆಯಲ್ಲಿ ತೀರ್ಮಾನಿಸಲಾಯಿತು. ತಾಲೂಕಿನ ಅನೇಕ ಇಲಾಖೆಯಲ್ಲಿ ಭ್ರಷ್ಟಾಚಾರ ತುಂಬಿದೆ ಎಂದು ಧರಣಿ ನಡೆಸಿದ ಸಂದರ್ಭದಲ್ಲಿ ಉಪ ವಿಭಾಗ ಅಧಿಕಾರಿಗಳು ಕೊಟ್ಟ ಭರವಸೆಯಂತೆ ಬರುವ 12ನೇ ತಾರೀಕು ಎಲ್ಲಾ ಅಧಿಕಾರಿಗಳು ಮತ್ತು ರೈತ ಮುಖಂಡರೊಂದಿಗೆ ಸಭೆ ನಡೆಸಲು ದಿನಾಂಕ ನಿಗದಿಯಾಗಿದೆ ಎಂದು ಸಭೆಗೆ ತಿಳಿಸಿದರು.
ಈ ಸಭೆಯಲ್ಲಿ ರೈತಮುಖಂಡರುಗಳಾದ ಆಲೂರು ಸಿದ್ದರಾಮಣ್ಣ, ಅರಳೀಕೆರೆ ತಿಪ್ಪೇಸ್ವಾಮಿ, ಮಾಜಿ ಎಪಿಎಂಸಿ ಸದಸ್ಯರಾದ ಎಂ.ಆರ್.ಈರಣ್ಣ, ರಾಮಣ್ಣ, ತಿಮ್ಮಾರೆಡ್ಡಿ, ರಂಗಸ್ವಾಮಿ, ಜಗನ್ನಾಥ್, ಶಿವಣ್ಣ, ಜಯಣ್ಣ, ಹೊಸ್ಕೆರೆ ನಾರಾಯಣಪ್ಪ, ರಾಜಪ್ಪ, ರಮೇಶ್, ನಾಗರಾಜಪ್ಪ, ವಿರುಪಾಕ್ಷ, ಬಾಲರಾಜ್, ದೊರೆಸ್ವಾಮಿ, ಆರ್.ಕೆ.ಗೌಡ ಸೇರಿದಂತೆ ಅನೇಕ ರೈತಮುಖಂಡರು ಉಪಸ್ಥಿತರಿದ್ದರು.
About The Author
Discover more from JANADHWANI NEWS
Subscribe to get the latest posts sent to your email.