September 16, 2025
FB_IMG_1733319366763.jpg


ಹಿರಿಯೂರು :
ಪ್ರಸಕ್ತ ವರ್ಷದ ಅಕ್ಟೊಬರ್, ನವೆಂಬರ್, ಡಿಸೆಂಬರ್ ತಿಂಗಳಲ್ಲಿ ಏಕಾಏಕಿ ಬಾಳೆಹಣ್ಣಿನ ದರಗಳು ಅಪಾರ ಕುಸಿತ ಕಂಡಿದ್ದು, ಇದರಿಂದ ಬಾಳೆ ಬೆಳೆಗಾರ ಕೃಷಿಕರಿಗೆ ದಿಕ್ಕು ತೋಚದಂತೆ ಮಾಡಿದೆ. ಅದರಲ್ಲೂ ಪಚ್ಚೆ-ಏಲಕ್ಕಿ ಬಾಳೆಯ ಬೆಲೆಗಳು ಪಾತಾಳಕ್ಕೆ ಕುಸಿದು ಬಯಲುಸೀಮೆ ಬಾಳೆ ಬೆಳೆಗಾರ ಕೃಷಿಕರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಕಳೆದ ವರ್ಷ ವರುಣನ ಕೃಪೆಯಿಂದಾಗಿ ಭದ್ರಾ ನೀರು ವಿವಿ ಸಾಗರ ಜಲಾಶಯದ ಒಡಲು ಸೇರಿದ ನಂತರ ಜಿಲ್ಲೆಯಲ್ಲಿ ಕೃಷಿ ಚಟುವಟಿಕೆಗಳು ಅತ್ಯಂತ ಗರಿಕೆದರಿದ್ದು, ಜಿಲ್ಲೆಯ ಹೊಳಲ್ಕೆರೆ, ಹೊಸದುರ್ಗ, ಹಿರಿಯೂರು, ಚಳ್ಳಕೆರೆ ತಾಲೂಕಿನ ಪರಶುರಾಂಪುರ ಹೋಬಳಿ ವ್ಯಾಪ್ತಿಯಲ್ಲಿ, ಆಂಧ್ರದ ಗಡಿ ಭಾಗದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ರೈತರು ಬಾಳೆ ಬೆಳೆಯನ್ನು ಬೆಳೆದಿದ್ದಾರೆ.
ಅಲ್ಲದೆ ರಾಜ್ಯದ ಚಳ್ಳ ಕೆರೆ, ಚಿತ್ರದುರ್ಗ, ಶಿವಮೊಗ್ಗ, ದಾವಣಗೆರೆ, ಬೆಂಗಳೂರು, ತುಮಕೂರು, ಪಾವಗಡ, ಮಾರುಕಟ್ಟೆಗೆ ಹೊರರಾಜ್ಯಗಳಾದ ಆಂಧ್ರ, ತಮಿಳುನಾಡು ರಾಜ್ಯಗಳಿಂದ ಬಾಳೆ ಆಮದು ಮಾಡಿಕೊಳ್ಳುತ್ತಿರುವುದು ಸ್ಥಳೀಯ ಬಾಳೆಯ ದರ ಕುಸಿತಕ್ಕೆ ಪ್ರಮಖ ಕಾರಣವಾಗಿದೆ ಎಂಬುದಾಗಿ ರೈತರು ತಮ್ಮ ಕಷ್ಟವನ್ನು ತೋಡಿಕೊಂಡಿದ್ದಾರೆ.
ಶ್ರಾವಣ ಮಾಸದ ಆರಂಭದಲ್ಲಿ 80-100 ರೂ.ಗೆ ರೈತರ ಜಮೀನಿನಲ್ಲಿ ಕಟಾವು ಮಾಡಲಾಗುತ್ತಿದ್ದ ಏಲಕ್ಕಿ ಬಾಳೆಹಣ್ಣಿನ ಬೆಲೆ ಪ್ರಸ್ತುತ ಮಾರುಕಟ್ಟೆಯಲ್ಲಿ ಏಲಕ್ಕಿ ಬಾಳೆಹಣ್ಣಿನ ಬೆಲೆ ಕೆಜಿಗೆ. 50 ರೂ ಬೆಲೆಯಾಗಿದೆ, ಆದರೆ ಬಾಳೆಹಣ್ಣಿನ ವರ್ತಕರು, ಮಧ್ಯವರ್ತಿಗಳು ಮಾತ್ರ ರೈತರಿಂದ ಏಲಕ್ಕಿ ಬಾಳೆಯನ್ನು ಕೇವಲ ಕೆ.ಜಿಗೆ 10-15 ರೂ.ಗಳಿಗೆ ಖರೀದಿಸುತ್ತಿದ್ದು, ಅಸಲು ಕೂಡ ಸಿಗದೆ ಬೆಳೆಗಾರರು ಹತಾಶರಾಗಿದ್ದಾರೆ.
ಆದರೆ ರೈತರ ಜಮೀನಿಗೆ ಬಾಳೆಹಣ್ಣು ವ್ಯಾಪಾರಕ್ಕೆ ಬರುವ ಮಧ್ಯವರ್ತಿಗಳು ಮಾರುಕಟ್ಟೆಯಲ್ಲಿ ಬಾಳೆಹಣ್ಣಿನ ಬೆಲೆ ಕುಸಿದಿದೆ, ಹಣ್ಣಿಗೆ ಬೇಡಿಕೆ ಇಲ್ಲ ಎಂದು ಕಡಿಮೆ ಬೆಲೆಗೆ ಖರೀದಿಸಿ, ಮಾರುಕಟ್ಟೆಯಲ್ಲಿ ದುಪ್ಪಟ್ಟು ಬೆಲೆಗೆ ಮಾರಿ ಲಾಭ ಗಳಿಸುತ್ತಿದ್ದಾರೆ. ವರ್ಷ ಪೂರ್ತಿ ಬೆವರು ಸುರಿಸಿದ್ದಕ್ಕೂ ನ್ಯಾಯಯುತ ಬೆಲೆ ಸಿಗುತ್ತಿಲ್ಲ ಎಂದು ಬಾಳೆಹಣ್ಣು ಬೆಳೆಗಾರರು ಕಣ್ಣೀರು ಹಾಕುವಂತಾಗಿದೆ.
ವಾಣಿವಿಲಾಸಸಾಗರ ಅಚ್ಚುಕಟ್ಟು ಪ್ರದೇಶಕ್ಕೆ ಪ್ರತಿ ವರ್ಷ ನೀರು ಹರಿಯುವುದು ಖಚಿತವಾಗಿದ್ದರಿಂದ ಹಾಗೂ ವೇದಾವತಿ ನದಿಗೆ ನೀರು ಹರಿಸಿದ ಪರಿಣಾಮ ಅಂತರ್ಜಲ ವೃದ್ಧಿಸಿ ಬತ್ತಿ ಹೋಗಿದ್ದ ಕೊಳವೆ ಬಾವಿಗಳಲ್ಲಿ ನೀರು ಬರುತ್ತಿದೆ. ಇದೇ ಭರವಸೆ ಮೇಲೆ ಹೆಚ್ಚಾಗಿ ಬಾಳೆ ಬೆಳೆದಿದ್ದಾರೆ. ಜಿಲ್ಲೆಯಲ್ಲಿ ಅಡಿಕೆ ಬೆಳೆಯ ಜೊತೆಗೆ ಬಾಳೆ ಬೆಳೆಯುವವರು ಹೆಚ್ಚಾಗಿದ್ದು, ಹೆಚ್ಚು ಇಳುವರಿ ಬಂದಿದೆ.
ರಾಜ್ಯದಲ್ಲಿ ಆಗಸ್ಟ್–ಸೆಪ್ಟೆಂಬರ್ ನಲ್ಲಿ ಬಾಳೆ ನಾಟಿ ಮಾಡಿದರೆ, ತಮಿಳುನಾಡಿನಲ್ಲಿ ಅಕ್ಟೋಬರ್-ನವೆಂಬರ್ ತಿಂಗಳಲ್ಲಿ ನಾಟಿ ಮಾಡಲಾಗುತ್ತದೆ. ಹೀಗಾಗಿ ನವೆಂಬರ್-ಡಿಸೆಂಬರ್ ತಿಂಗಳಲ್ಲಿ ಅಲ್ಲಿನ ಬೆಳೆ ಫಸಲಿಗೆ ಬಂದು ರಾಜ್ಯದ ಮಾರುಕಟ್ಟೆಯನ್ನು ಪ್ರವೇಶಿಸುವುದರಿಂದ ಬೆಲೆ ಕುಸಿತಕ್ಕೆ ದಾರಿಯಾಗಿದೆ ಎನ್ನಲಾಗಿದೆ ಎಂಬುದಾಗಿ ತಾಲ್ಲೂಕಿನ ಬಾಳೆ ಬೆಳೆಗಾರರು ಮಾಧ್ಯಮಗಳೊಂದಿಗೆ ತಮ್ಮ ಸಂಕಷ್ಟ ಹಂಚಿಕೊಂಡಿದ್ದಾರೆ.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading