December 15, 2025
FB_IMG_1733316891596.jpg


ಚಿತ್ರದುರ್ಗ ಡಿ.04:
ಕನಿಷ್ಠ ನಾವಿದ್ದ ಊರನ್ನಾದರೂ ಬಯಲು ಮುಕ್ತ ಶೌಚಾಲಯ ಮಾಡುವ ಪ್ರಯತ್ನ ಮಾಡಬೇಕು. ಒಬ್ಬರು ಮಾಡಿದರೆ ಎಲ್ಲರೂ ಕೈಜೋಡಿಸುತ್ತಾರೆ ಎಂಬುದನ್ನು ಮರೆಯಬಾರದು ಎಂದು ಚಿತ್ರದುರ್ಗ ತಾಲ್ಲೂಕು ಆರೋಗ್ಯ ಶಿಕ್ಷಣಾಧಿಕಾರಿ ಎನ್.ಎಸ್.ಮಂಜುನಾಥ ಹೇಳಿದರು.
ಚಿತ್ರದುರ್ಗ ತಾಲ್ಲೂಕಿನ ಜೆ.ಎಸ್.ಕೋಟೆ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್ ಇಲಾಖೆ, ಆರೋಗ್ಯ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಹಯೋಗದೊಂದಿಗೆ ಗ್ರಾಮ ಪಂಚಾಯಿತಿ ಕಾರ್ಯಪಡೆ ತಂಡಕ್ಕೆ ಗ್ರಾಮ ಆರೋಗ್ಯ ತರಬೇತಿ ಕಾರ್ಯಾಗಾರ ಮತ್ತು ವಿಶ್ವ ಶೌಚಾಲಯ ದಿನ ಮಾಹಿತಿ ಶಿಕ್ಷಣ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.
ಪ್ರತಿ ವರ್ಷ ನವಂಬರ್ 19ರಂದು ವಿಶ್ವ ಶೌಚಾಲಯ ದಿನ ಆಚರಿಸಲಾಗುತ್ತದೆ. 2024ರ ವಿಶ್ವ ಶೌಚಾಲಯ ದಿನದ ಥೀಮ್ ‘ಶೌಚಾಲಯಗಳು – ಶಾಂತಿಗಾಗಿ ಒಂದು ಸ್ಥಳ’ ಎಂಬುದಾಗಿದೆ. ವಿಶ್ವದಾದ್ಯಂತ ಶತಕೋಟಿ ಜನರಿಗೆ ಶಾಂತಿ, ಘನತೆ ಮತ್ತು ರಕ್ಷಣೆ ಉತ್ತೇಜಿಸುವಲ್ಲಿ ಸುರಕ್ಷಿತ ನೈರ್ಮಲ್ಯದ ಪ್ರಾಮುಖ್ಯತೆಯನ್ನು ಈ ಥೀಮ್ ಒತ್ತಿ ಹೇಳುತ್ತದೆ ಎಂದರು.
ಗ್ರಾಮ ಪಂಚಾಯಿತಿ ಕಾರ್ಯಪಡೆ ಸುಸ್ಥಿರ ಅಭಿವೃದ್ಧಿ ಗುರಿಗಳನ್ನು ತಲುಪಲು ಒಗ್ಗೂಡಿ ಸಕ್ರಿಯವಾಗಿ ಕಾರ್ಯನಿರ್ವಹಣೆ ಮಾಡಬೇಕಾಗಿರುತ್ತದೆ. ಹಲವಾರು ಸಾರ್ವಜನಿಕ ಆರೋಗ್ಯ ಸಮಸ್ಯೆಗಳು, ತಾಯಿ-ಶಿಶು ಮರಣ ನಿಯಂತ್ರಣ, ಸಾಂಕ್ರಾಮಿಕವಲ್ಲದ ರೋಗಗಳ ನಿಯಂತ್ರಣ, ಕೀಟಜನ್ಯ ರೋಗಗಳ ನಿಯಂತ್ರಣ, ಕ್ಷಯ ರೋಗ ನಿಯಂತ್ರಣ, ಮಾನಸಿಕ ಆರೋಗ್ಯದ ಕಾಳಜಿ ಪಂಚಾಯಿತಿ ಮಟ್ಟದಲ್ಲೇ ನಿರ್ವಹಿಸುವ ಯೋಜನೆಗಳನ್ನು ರೂಪಿಸಿಕೊಳ್ಳಬೇಕಾಗಿದೆ ಎಂದರು.
ಜಿಲ್ಲಾ ಮಾನಸಿಕ ರೋಗಗಳ ಆಪ್ತ ಸಮಾಲೋಚಕ ಡಾ. ಶ್ರೀಧರ್ ಮಾತನಾಡಿ, ಮಾನಸಿಕ ರೋಗಗಳು ಪತ್ತೆ ಹಚ್ಚುವುದು, ಚಿಕಿತ್ಸೆ ನೀಡುವುದು ದುಬಾರಿ ಮತ್ತು ಕೌಟುಂಬಿಕ ಆರ್ಥಿಕ ಹೊರೆ ಉಂಟುಮಾಡುತ್ತದೆ. ದೀರ್ಘಕಾಲಿನ ಔಷಧೌಪಚಾರ ಅಗತ್ಯವಿರುತ್ತದೆ. ಶೀಘ್ರ ಮಾನಸಿಕ ರೋಗಗಳನ್ನು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಪತ್ತೆಹಚ್ಚಿ ಪಟ್ಟಿಮಾಡಿ, ಶಿಬಿರಗಳನ್ನು ಆಯೋಜಿಸುವ ಮೂಲಕ ಉಚಿತ ತಪಾಸಣೆ ಚಿಕಿತ್ಸೆ ನೀಡಲಾಗುತ್ತದೆ ಎಂದರು.
ಸಮುದಾಯ ಆರೋಗ್ಯ ಅಧಿಕಾರಿ ರಮೇಶ್ ಸಾಂಕ್ರಾಮಿಕವಲ್ಲದ ರೋಗಗಳ ಬಗ್ಗೆ ತಿಳಿಸಿದರು. ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಶ್ರೀಧರ್ ಅವರು ಕೀಟಜನ್ಯ ರೋಗಗಳು, ಕ್ಷಯ ರೋಗ, ಬಾಲ್ಯ ವಿವಾಹದ ಬಗ್ಗೆ ಮಾಹಿತಿ ನೀಡಿದರು. ತಾಲ್ಲೂಕು ಆಶಾ ಬೋಧಕಿ ತಬಿತ ಅವರು ಅನಿಮಿಯಾ ಮುಕ್ತ ಭಾರತ ಅಪೌಷ್ಟಿಕತೆಯ ಮೌಲ್ಯಮಾಪನದ ಕುರಿತು ತಿಳಿಸಿದರು.
ಪಿಡಿಓ ಮಂಜುಳಾ ಅವರು ಸ್ತ್ರೀ ಶಕ್ತಿ ಸಂಘಗಳ ಸಭೆಗಳಲ್ಲಿ ಶೌಚಾಲಯ ಬಳಕೆ ಕುರಿತು ಮಾಹಿತಿ ಶಿಕ್ಷಣ ನೀಡಿ ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಜೆ.ಎನ್.ಕೋಟೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಮಲ್ಲೇಶ್, ಉಪಾಧ್ಯಕ್ಷೆ ನಾಗಮ್ಮ, ಗ್ರಾಮ ಪಂಚಾಯಿತಿ ಸದಸ್ಯರು, ಯೋಗ ಶಿಕ್ಷಕ ರವಿ ಅಂಬೇಕರ್. ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು, ಪ್ರಾಥಮಿಕ ಆರೋಗ್ಯ ಸುರಕ್ಷತಾ ಅಧಿಕಾರಿಗಳು, ಸ್ತ್ರೀ ಶಕ್ತಿ ಸಂಘದ ಸದಸ್ಯರು ಇದ್ದರು.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading