
ವರದಿ: ಕೆ.ಟಿ.ಮೋಹನ್ ಕುಮಾರ್
ಮೈಸೂರು ಜಿಲ್ಲೆಯ ಸಾಲಿಗ್ರಾಮ ತಾಲೂಕಿನ ರಾಂಪುರ ಬಡಾವಣೆಯ ಜೋಗಿ ಕಾಲೋನಿಯಲ್ಲಿರುವ ಅಲೆಮಾರಿ ಕುಟುಂಬದವರ ವಾಸಕ್ಕೆ ಅನುಕೂಲ ವಾಗುವಂತಹ ಜಾಗವನ್ನು ಗುರುತಿಸಬೇಕೆಂದು ಕರ್ಪೂರವಳ್ಳಿ ಗ್ರಾಮ ಪಂಚಾಯಿತಿ ಹಾಗೂ ಕಂದಾಯ ಇಲಾಖೆಯವರಿಗೆ ಕರ್ನಾಟಕ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಜಿ.ಪಲ್ಲವಿ ಸೂಚಿಸಿದರು.



ಅವರು ತಾಲೂಕಿನ ರಾಂಪುರ ಬಡಾವಣೆಯಲ್ಲಿರುವ ಹಂದಿ ಜೋಗಿ, ಜೇನು ಕುರುಬ ಅಲೆಮಾರಿ ಕುಟುಂಬಗಳ ಸ್ಥಳ ವೀಕ್ಷಣೆ ಮಾಡಿ ಸಾರ್ವಜನಿಕರಿಂದ ಮಾಹಿತಿ ಪಡೆದು ಮಾತನಾಡಿದರು.
ಈ ಭಾಗದಲ್ಲಿ ವಾಸಿಸುತ್ತಿರುವ ಕುಟುಂಬಗಳು ನಿವೇಶನವಿಲ್ಲದೆ ಇರುವ ವಿಷಯಗಳು ಜಿಲ್ಲಾ ಮಟ್ಟದ ಸಭೆಯಲ್ಲಿ ಪ್ರಸ್ತಾಪಗೊಂಡು ನಿಗಮಕ್ಕೆ ಬಂದಿದ್ದ ಹಿನ್ನೆಲೆಯಲ್ಲಿ ಅದಕ್ಕೆ ಸಂಬಂಧಿಸಿದ ಅಗತ್ಯ ಮಾಹಿತಿಗಳನ್ನು ನೀಡಿ ಎಂದು ತಹಶೀಲ್ದಾರ್, ತಾಲ್ಲೂಕು ಪಂಚಾಯತ್ ಇಓ, ಗ್ರಾಮ ಪಂಚಾಯತ್ ಪಿಡಿಓ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳನ್ನು ಪ್ರಶ್ನೆ ಮಾಡಿದರು. ಈ ಸಂದರ್ಭದಲ್ಲಿ ನಿಗಮದ ಅಧ್ಯಕ್ಷರ ಪ್ರಶ್ನೆಗಳಿಗೆ ನಿಖರವಾದ ಮಾಹಿತಿಯನ್ನು ನೀಡಲಾಗದ ಅಧಿಕಾರಿಗಳು ನೋಡುತ್ತೇವೆ, ಮಾಡುತ್ತೇವೆ, ಪರಿಶೀಲಿಸುತ್ತೇವೆ ಎನ್ನುತ್ತಿದ್ದಂತೆ ಅಧ್ಯಕ್ಷರು ಇಂತಹ ಹಾರಿಕೆ ಉತ್ತರವನ್ನು ನೀಡುತ್ತೀರಾ? ಅಲೆಮಾರಿ ಸಮುದಾಯದವರು ನಿಮಗೆ ಮನುಷ್ಯರಂತೆ ಕಾಣುತ್ತಿಲ್ಲವೇ? ಯಾಕೆ ಈ ಕೆಲಸದ ಬಗ್ಗೆ ಅಗತ್ಯ ಕ್ರಮ ವಹಿಸದೆ ನಿರ್ಲಕ್ಷ್ಯ ಮಾಡಿದ್ದೀರಾ? ಎಂದು ಅಧಿಕಾರಿಗಳನ್ನು ತರಾಟೆ ತೆಗೆದುಕೊಂಡ ಪ್ರಸಂಗ ನಡೆಯಿತು. ಇನ್ನು ಮುಂದಿನ 6ತಿಂಗಳ ಒಳಗೆ ಈ ಭಾಗದಲ್ಲಿನ ಅಲೆಮಾರಿ ಕುಟುಂಬದವರು ವಾಸಿಸಲು ಯೋಗ್ಯವಾದ ಜಾಗವನ್ನು ಗುರುತಿಸಿ ನಿವೇಶನಗಳನ್ನು ನೀಡಬೇಕೆಂದು ಅಧಿಕಾರಿಗಳಿಗೆ ತಾಕೀತು ಮಾಡಿದರು.
ಈ ಸಂದರ್ಭದಲ್ಲಿ ನಿಗಮದ ಅಧ್ಯಕ್ಷರ ಆಪ್ತ ಕಾರ್ಯದರ್ಶಿ ಆನಂದ್ ಕುಮಾರ್, ತಹಶೀಲ್ದಾರ್ ಎಸ್.ಎನ್.ನರಗುಂದ, ತಾಲೂಕು ಪಂಚಾಯಿತಿ ಇಓ ಕುಲದೀಪ್, ತಾಲ್ಲೂಕು ಸಮಾಜ ಕಲ್ಯಾಣ ಅಧಿಕಾರಿಗಳಾದ ಶಂಕರಮೂರ್ತಿ, ಅಶೋಕ್, ರಾಜಸ್ವ ನಿರೀಕ್ಷಕ ರಾಘವೇಂದ್ರ, ಗ್ರಾಮ ಆಡಳಿತ ಅಧಿಕಾರಿ ಅಶ್ವಿನಿ, ಪಿಡಿಓ ಪ್ರತಾಪ್, ಗ್ರಾಮ ಪಂಚಾಯಿತಿ ಸದಸ್ಯರಾದ ರಾಂಪುರ ಲೋಕೇಶ್, ಹರ್ಷವರ್ಧನ, ಮುಖಂಡರುಗಳಾದ ಗೋಬಿಶಂಕರ, ರಘು, ಯಲ್ಲಪ್ಪ, ಶಿವಣ್ಣಜೋಗಿ, ಮಂಜು, ಕೃಷ್ಣಪ್ಪ, ರಮೇಶ್, ರಾಜಾಜೋಗಿ, ಪುಟ್ಟಸ್ವಾಮಿ, ಚಿಕ್ಕಯಲ್ಲಪ್ಪ ಸೇರಿದಂತೆ ಹಲವರು ಇದ್ದರು.
About The Author
Discover more from JANADHWANI NEWS
Subscribe to get the latest posts sent to your email.