
ಹಿರಿಯೂರು :
ಬಗರ್ ಹುಕುಂ ಸಾಗುವಳಿ ಪತ್ರ ಕೊಡುವಂತೆ ಸಚಿವರು ಆದೇಶ ಮಾಡಿದ್ದರೂ ಸಹ ಕಂದಾಯ ಇಲಾಖೆಯಲ್ಲಿ ನಿಜವಾದ ಫಲಾನುಭವಿಗಳಿಗೆ ಹಕ್ಕು ಪತ್ರ ಕೊಡದೆ ಇನ್ಫ್ಲೂಯನ್ಸ್ ಇದ್ದವರಿಗೆ, ಭೂಗಳ್ಳರಿಗೆ, ರಾಜಕಾರಣಿಗಳಿಗೆ ಇಲಾಖೆಯಲ್ಲಿ ಅಧಿಕಾರಿಗಳು ಮಣೆ ಹಾಕುತ್ತಿದ್ದಾರೆ ಎಂಬುದಾಗಿ ರೈತಸಂಘದ ತಾಲ್ಲೂಕು ಅಧ್ಯಕ್ಷರಾದ ಕೆ.ಟಿ.ತಿಪ್ಪೇಸ್ವಾಮಿ ಅವರು ಆರೋಪಿಸಿದ್ದಾರೆ.
ನಗರದ ರೈತ ಸಂಘದ ಕಚೇರಿಯಲ್ಲಿ ಸೋಮವಾರ ರೈತ ಮುಖಂಡರುಗಳೊಂದಿಗೆ ಹಮ್ಮಿಕೊಳ್ಳಲಾಗಿದ್ದ ಮಾಸಿಕ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.
ತಾಲ್ಲೂಕಿನಲ್ಲಿ ನಡೆಯುತ್ತಿರುವ ಎಲ್ಲಾ ಇಲಾಖೆಯ ಭ್ರಷ್ಟಾಚಾರ ಮಿತಿಮೀರಿರೋ ಬಗ್ಗೆ ರೈತರ ಹೆಸರಿನಲ್ಲಿ ಪಿ.ಎನ್.ಸಿ ಕಂಪನಿ ಹಾಗೂ ಉಪಗುತ್ತಿಗೆದಾರರು ನಿಯಮ ಉಲ್ಲಂಘನೆ ಮಾಡಿ ಸರ್ಕಾರಕ್ಕೆ ನೂರಾರು ಕೋಟಿ ತೆರಿಗೆ ಕಟ್ಟದೆ ವಂಚಿಸುತ್ತಿರುವ ಬಗ್ಗೆ ತಾಲ್ಲೂಕು ಮಟ್ಟದಿಂದ ಸರ್ಕಾರದ ಮುಖ್ಯ ಕಾರ್ಯದರ್ಶಿಗಳವರೆಗೂ ಪತ್ರ ಬರೆದಿದ್ದರೂ ಸಹ ಯಾವುದೇ ಕ್ರಮವಹಿಸಿರುವುದಿಲ್ಲ ಎಂದರಲ್ಲದೆ,
ಅಧಿಕಾರಿಗಳು ಕಂಪನಿಯೊಂದಿಗೆ ಶಾಮೀಲಾಗಿ ನಿರಂತರ ಅಕ್ರಮ ನಡೆಸುತ್ತಲೇ ಬಂದಿದ್ದು, ಸಂಬಂಧಪಟ್ಟ ಉನ್ನತ ಇಲಾಖೆಯ ಅಧಿಕಾರಿಗಳು ಧರಣಿ ಸ್ಥಳಕ್ಕೆ ಬಂದರೆ ಇವರು ಅನೇಕ ಇಲಾಖೆಗಳಲ್ಲಿ ಕಾಮಗಾರಿ ನಡೆಸದೆ ಅಕ್ರಮವಾಗಿ ಹಣ ಪಡೆದಿರುವ ಬಗ್ಗೆ ದಾಖಲೆಗಳನ್ನು ತನಿಖಾಧಿಕಾರಿಗಳಿಗೆ ಹಾಜರುಪಡಿಸುತ್ತೇವೆ ಎಂಬುದಾಗಿ ಅವರು ಹೇಳಿದರು.
ತಾಲ್ಲೂಕಿನ ವಿವಿಧ ಇಲಾಖೆಗಳಲ್ಲಿ ಭ್ರಷ್ಟಾಚಾರ ತಾಂಡವಾಡುತ್ತಿದ್ದು, ಸಂಬಂಧಪಟ್ಟ ಇಲಾಖೆಯ ಸಚಿವರು ಧರಣಿ ಸ್ಥಳಕ್ಕೆ ಬಂದು ತನಿಖೆ ನಡೆಸಿ ಅಧಿಕಾರಿಗಳನ್ನು ಅಮಾನತುಗೊಳಿಸುವಂತೆ ನವಂಬರ್ 13 ರ ಬುಧವಾರದಿಂದ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹವನ್ನು ಹಮ್ಮಿಕೊಳ್ಳವುದಾಗಿ ಸಭೆಯಲ್ಲಿ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳಲಾಯಿತು.
ಅಲ್ಲದೆ, ಜವನಗೊಂಡನಹಳ್ಳಿ ಹೋಬಳಿಯ 16 ಕೆರೆಗಳು ಹಾಗೂ ಕಸಬಾ ಐಮಂಗಳ ಹೋಬಳಿಯ 6 ಕೆರೆಗಳಿಗೆ ನೀರು ತುಂಬಿಸುವಂತೆ ಒತ್ತಾಯಿಸಿ ಡಿಸೆಂಬರ್ 9ರ ಸೋಮವಾರದಂದು ಹಿರಿಯೂರು ಬಂದ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂಬುದಾಗಿ ಸಭೆಯಲ್ಲಿ ತೀರ್ಮಾನಿಸಲಾಯಿತು.
ಈ ಸಭೆಯಲ್ಲಿ ರೈತಮುಖಂಡರುಗಳಾದ ಆಲೂರು ಸಿದ್ಧರಾಮಣ್ಣ, ಹಳ್ಳಿಕೆರೆ ತಿಪ್ಪೇಸ್ವಾಮಿ, ನಾಗರಾಜಪ್ಪ, ತಿಮ್ಮಾರೆಡ್ಡಿ, ರಂಗಸ್ವಾಮಿ, ಶಿವಣ್ಣ, ಹೊಸಕೆರೆ ಜಯಣ್ಣ, ಮೇಟಿಕುರ್ಕಿಭಾಷಾ, ರಾಮಕೃಷ್ಣ, ಬಾಲಕೃಷ್ಣ, ಆರ್.ಕೆ.ಗೌಡ, ಸತ್ಯವೇಲು, ರಾಮಣ್ಣ ತಿಪ್ಪೇಸ್ವಾಮಿ ಸೇರಿದಂತೆ ಅನೇಕ ರೈತಮುಖಂಡರು ಉಪಸ್ಥಿತರಿದ್ದರು.
About The Author
Discover more from JANADHWANI NEWS
Subscribe to get the latest posts sent to your email.