
ಚಿತ್ರದುರ್ಗ ಆಗಸ್ಟ್ 04:
ರಾಜ್ಯ ಸರ್ಕಾರ ಜನರ ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ರಾಜ್ಯಾದ್ಯಂತ ಜಾರಿಗೊಳಿಸಿರುವ “ಗೃಹ ಆರೋಗ್ಯ” ಯೋಜನೆಯು ಮಹತ್ವಪೂರ್ಣವಾಗಿದ್ದು, ರೋಗಗಳನ್ನು ಪ್ರಾಥಮಿಕ ಹಂತದಲ್ಲಿಯೇ ಗುರುತಿಸಿ, ಶೀಘ್ರ ಚಿಕಿತ್ಸೆ ಕೊಡಿಸುವಲ್ಲಿ ಆಶಾ ಕಾರ್ಯಕರ್ತೆಯರು ಪ್ರಮುಖ ಪಾತ್ರ ವಹಿಸಲಿದ್ದಾರೆ ಎಂದು ಯೋಜನೆ ಮತ್ತು ಸಾಂಖ್ಯಿಕ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಡಿ. ಸುಧಾಕರ್ ಹೇಳಿದರು.
ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಸೋಮವಾರ “ಗೃಹ ಆರೋಗ್ಯ” ಯೋಜನೆ ಕುರಿತಂತೆ ಆಶಾ ಕಾರ್ಯಕರ್ತೆಯರು ಮತ್ತು ಆರೋಗ್ಯ ಕೇಂದ್ರದ ಸಹಾಯಕಿಯರಿಗೆ ಏರ್ಪಡಿಸಿದ್ದ ತರಬೇತಿ ಕಾರ್ಯಗಾರ ಉದ್ಘಾಟಿಸಿ ಅವರು ಮಾತನಾಡಿದರು.
ಎಲ್ಲ ಸಂಪತ್ತಿಗಿಂತಲೂ ಆರೋಗ್ಯ ಸಂಪತ್ತು ಶ್ರೇಷ್ಠ, ಒತ್ತಡದ ಜೀವನದಲ್ಲಿ ಜನರು ನೂರಾರು ಕಾಯಿಲೆಗಳ ನಡುವೆ ಬದುಕು ಸಾಗಿಸುತ್ತಿದ್ದಾರೆ. ಕಾಯಿಲೆಗಳು ಬಂದಿದ್ದರೂ, ಪ್ರಾಥಮಿಕ ಹಂತದಲ್ಲಿ ಗುರುತಿಸದೆ, ಮಾರಣಾಂತಿಕವಾದ ಬಳಿಕ ಚಿಕಿತ್ಸೆಗೆ ಪರದಾಡುವುದನ್ನು ಗಮನಿಸುತ್ತಿದ್ದೇವೆ. ಇಂತಹ ಸ್ಥಿತಿಯಿಂದ ಜನಸಾಮಾನ್ಯರನ್ನು ಪಾರುಮಾಡುವ ಸಲುವಾಗಿ ಸರ್ಕಾರ ಉತ್ತಮ ಯೋಜನೆಯನ್ನು ಜಾರಿಗೊಳಿಸಿದ್ದು, ಆಶಾ ಕಾರ್ಯಕರ್ತೆಯರು ಮನೆ ಮನೆಗೆ ಭೇಟಿ ನೀಡಿ ವಿವಿಧ ರೋಗಗಳನ್ನು ಗುರುತಿಸುವಂತಹ “ಗೃಹ ಆರೋಗ್ಯ” ಯೋಜನೆಯನ್ನು ಕಳೆದ ವರ್ಷ ಪ್ರಾಯೋಗಿಕವಾಗಿ ಕೋಲಾರ ಜಿಲ್ಲೆಯಲ್ಲಿ ಜಾರಿಗೊಳಿಸಲಾಗಿತ್ತು. ಆ ಸಂದರ್ಭದಲ್ಲಿ 05 ಬಗೆಯ ರೋಗಗಳನ್ನು ಪತ್ತೆಹಚ್ಚಲು ತರಬೇತಿ ನೀಡಿ, ಅನುಷ್ಠಾನಗೊಳಿಸಲಾಗಿತ್ತು. ಈ ಯೋಜನೆ ಯಶಸ್ವಿಗೊಂಡಿದ್ದರಿಂದ, ಇದೀಗ ನಮ್ಮ ಸರ್ಕಾರ ಇಡೀ ರಾಜ್ಯಕ್ಕೆ ಗೃಹ ಆರೋಗ್ಯ ಯೋಜನೆಯನ್ನು ವಿಸ್ತರಿಸಿದ್ದು, ಇದರ ಜೊತೆಗೆ ಮಧುಮೇಹ, ರಕ್ತದೊತ್ತಡ, ವಿವಿಧ ಬಗೆಯ ಕ್ಯಾನ್ಸರ್ ಸೇರಿದಂತೆ 14 ಬಗೆಯ ರೋಗ ಪತ್ತೆಹಚ್ಚುವ ಕಾರ್ಯಕ್ರಮ ಜಾರಿಗೊಳಿಸಿದೆ. ಜನರಲ್ಲಿ ಸುಪ್ತವಾಗಿರುವ ರೋಗಗಳನ್ನು ಪ್ರಾಥಮಿಕ ಹಂತದಲ್ಲಿಯೇ ಗುರುತಿಸಿದರೆ, ತ್ವರಿತ ಚಿಕಿತ್ಸೆ ನೀಡಿ, ಗುಣಮುಖರನ್ನಾಗಿಸಲು ಸಾಧ್ಯವಿದೆ. ಜಿಲ್ಲೆಯಲ್ಲಿ ಈ ಕಾರ್ಯಕ್ರಮ ಅನುಷ್ಠಾನಗೊಳಿಸುವಲ್ಲಿ ಆಶಾ ಕಾರ್ಯಕರ್ತೆಯರ ಜವಾಬ್ದಾರಿ ಹೆಚ್ಚು ಇದೆ. ಆಶಾ ಕಾರ್ಯಕತೆರ್ಯರು ಮನೆ ಮನೆ ಭೇಟಿ ನೀಡಿ, ಆರೋಗ್ಯ ಇಲಾಖೆ ನಿಗದಿಪಡಿಸಿರುವ ಪ್ರಶ್ನಾವಳಿಗಳು, ರೋಗ ಲಕ್ಷಣಗಳ ಮೂಲಕ ರೋಗಗಳನ್ನು ಪತ್ತೆ ಹಚ್ಚಿ, ಹೆಚ್ಚಿನ ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲಿಸಲು ನೆರವಾಗುವಂತೆ ಸಚಿವರು ತಿಳಿಸಿದರು.
ವಿಧಾನಪರಿಷತ್ ಸದಸ್ಯ ಕೆ.ಎಸ್. ನವೀನ್ ಅವರು ಮಾತನಾಡಿ, ಕಾಯಿಲೆಯನ್ನು ಆರಂಭಕ್ಕೂ ಮುನ್ನ ಪ್ರಾಥಮಿಕವಾಗಿ ಗುರುತಿಸಿ, ಗುಣಪಡಿಸುವುದು ಮಹತ್ವದ್ದಾಗಿದೆ. ಕಾಯಿಲೆಗಳು ಸುಪ್ತವಾಗಿದ್ದು, ಮನುಷ್ಯನ ಜೀವಕ್ಕೆ ಕಂಟಕವಾಗುವ ಅನೇಕ ನಿದರ್ಶನಗಳಿವೆ. ಗ್ರಾಮಗಳಲ್ಲಿ ಆರೋಗ್ಯ ಸೇವೆ, ತಪಾಸಣೆ, ಚಿಕಿತ್ಸೆ ಪಡೆಯುವ ಬಗ್ಗೆ ಜಾಗೃತಿಯ ಕೊರತೆ ಇರುತ್ತದೆ. ಇಂತಹ ಸಂದರ್ಭದಲ್ಲಿ ಗೃಹ ಆರೋಗ್ಯ ಯೋಜನೆ ಜಾರಿಗೊಳಿಸಿದ್ದು, ಶ್ಲಾಘನೀಯವಾಗಿದೆ. ಆಶಾ ಕಾರ್ಯಕರ್ತೆಯರು ಮನೆ ಮನೆ ಭೇಟಿ ನೀಡಿ, ಆರೋಗ್ಯ ಇಲಾಖೆ ನಿಗದಿಪಡಿಸಿರುವ ಪ್ರಶ್ನಾವಳಿಗಳು, ಲಕ್ಷಣಗಳಿಂದ ರೋಗಗಳನ್ನು ಪ್ರಾಥಮಿಕ ಮಟ್ಟದಲ್ಲಿಯೇ ಗುರುತಿಸಿ, ತ್ವರಿತ ಚಿಕಿತ್ಸೆ ದೊರಕಿಸುವ ಮೂಲಕ ಗುಣಮುಖರನ್ನಾಗಿಸಲು ಸಾಧ್ಯವಾಗಲಿದೆ. ರಾಜ್ಯದಲ್ಲಿ ಗೃಹ ಆರೋಗ್ಯ ಯೋಜನೆ ಮೂಲಕ ಲಕ್ಷಾಂತರ ಜನರ ಜೀವ ಉಳಿಸುವ ಕಾರ್ಯ ಈ ಯೋಜನೆಯಿಂದ ಆಗಲಿದೆ. ಇದರ ಶ್ರೇಯಸ್ಸು ಸರ್ಕಾರಕ್ಕೆ ಮತ್ತು ಆಶಾ ಕಾರ್ಯಕರ್ತೆಯರಿಗೆ ಸಲ್ಲಲಿದೆ. ಈ ಯೋಜನೆಯನ್ನು ಕೇವಲ ಸಾಂಕೇತಿಕವಾಗಿ, ದಾಖಲೆಗಾಗಿ ಮಾತ್ರ ಮಾಡದೆ, ವೈದ್ಯರು ಆಶಾ ಕಾರ್ಯಕರ್ತೆಯರಿಗೆ ಸೂಕ್ತ ರೀತಿಯಲ್ಲಿ ತರಬೇತಿ ನೀಡಿ, ಸಂಪೂರ್ಣ ಸಹಕಾರ ನೀಡುವ ಮೂಲಕ ಯಶಸ್ವಿಗೊಳಿಸಬೇಕು ಎಂದರು.
ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಆರ್. ಶಿವಣ್ಣ ಮಾತನಾಡಿ, ಗೃಹ ಆರೋಗ್ಯ ಯೋಜನೆಯನ್ನು ಜಿಲ್ಲೆಯ ಎಲ್ಲ ಮನೆ ಮನೆಗಳಿಗೂ ತಲುಪಿಸಿ, ಯಶಸ್ವಿಗೊಳಿಸುವ ಕಾರ್ಯವನ್ನು ಆಶಾ ಕಾರ್ಯಕರ್ತೆಯರು ಪ್ರಾಮಾಣಿಕವಾಗಿ ಮಾಡಬೇಕು ಎಂದು ಮನವಿ ಮಾಡಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಡಿಹೆಚ್‍ಡಿ ಡಾ. ರೇಣುಪ್ರಸಾದ್, ಗೃಹ ಆರೋಗ್ಯ ಯೋಜನೆಯಡಿ ಆಶಾ ಕಾರ್ಯಕರ್ತೆಯರು ಮನೆ ಮನೆ ಭೇಟಿ ನೀಡಿ, 30 ವರ್ಷಕ್ಕೂ ಮೇಲ್ಪಟ್ಟವರಲ್ಲಿ ಅಧಿಕ ರಕ್ತದೊತ್ತಡ, ಮಧುಮೇಹ, ಮಧುಮೇಹ ಸಂಬಂಧಿತ ಪಾದದ ಸಮಸ್ಯೆ, ಕಣ್ಣಿನ ಸಮಸ್ಯೆ, ಮೂತ್ರಪಿಂಡ ಕಾಯಿಲೆ, ಲಿವರ್, ಯಕೃತ್ತಿನ ಕಾಯಿಲೆ, ಶ್ವಾಸಕೋಶ ಸಂಬಂಧಿತ ಕಾಯಿಲೆ, ನಿದ್ರೆಯಲ್ಲಿ ಉಸಿರುಗಟ್ಟುವಿಕೆ. ಬಾಯಿ, ಸ್ತನ, ಗರ್ಭ ಕಂಠದ ಕ್ಯಾನ್ಸರ್, ರಕ್ತಹೀನತೆ, ಮಾನಸಿಕ ಕಾಯಿಲೆ, ನರವೈಜ್ಞಾನಿಕ ಕಾಯಿಲೆ ಸೇರಿದಂತೆ ಒಟ್ಟು 14 ಬಗೆಯ ರೋಗಗಳನ್ನು ಪತ್ತೆಹಚ್ಚುವ ಕಾರ್ಯ ಮಾಡಲಿದ್ದಾರೆ. ಜಿಲ್ಲೆಯಲ್ಲಿ 30 ವರ್ಷ ಮೇಲ್ಪಟ್ಟ ಸುಮಾರು 6.59 ಲಕ್ಷ ಜನರ ಆರೋಗ್ಯ ತಪಾಸಣೆ ಮಾಡುವ ಗುರಿ ಹೊಂದಲಾಗಿದ್ದು, ರಾಜ್ಯದಲ್ಲಿ ಶೇ. 25 ರಷ್ಟು ಜನರಲ್ಲಿ ರಕ್ತದೊತ್ತಡ, ಶೇ. 14 ರಷ್ಟು ಜನರಲ್ಲಿ ಮಧುಮೇಹ ಇರುವುದು ಅಂಕಿ ಅಂಶಗಳಿಂದ ತಿಳಿದುಬಂದಿದೆ. ಜಿಲ್ಲೆಯಲ್ಲಿ ರೋಗಗಳ ಪತ್ತೆಗಾಗಿ ಆಶಾ ಕಾರ್ಯಕರ್ತೆಯರಿಗೆ ಸೂಕ್ತ ತರಬೇತಿ ನೀಡಲಾಗುತ್ತಿದೆ ಎಂದರು.
ಇದೇ ಸಂದರ್ಭದಲ್ಲಿ ಆಶಾ ಕಾರ್ಯಕರ್ತೆಯರಿಗಾಗಿ ಸಿದ್ಧಪಡಿಸಲಾಗಿರುವ ಗೃಹ ಆರೋಗ್ಯ ಯೋಜನೆಯ ಕೈಪಿಡಿಯನ್ನು ಬಿಡುಗಡೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಂ.ಕೆ. ತಾಜ್‍ಪೀರ್, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಜಿಲ್ಲಾ ಅಧ್ಯಕ್ಷ ಆರ್. ಶಿವಣ್ಣ, ಜಿ.ಪಂ. ಸಿಇಒ ಡಾ. ಎಸ್. ಆಕಾಶ್, ಜಿಲ್ಲಾ ಗ್ಯಾರಂಟಿ ಯೋಜನೆ ಅನುಷ್ಠಾನ ಪ್ರಾಧಿಕಾರದ ಉಪಾದ್ಯಕ್ಷ ಡಿ.ಎನ್. ಮೈಲಾರಪ್ಪ, ಜಿ.ಪಂ. ಉಪಕಾರ್ಯದರ್ಶಿ ರಂಗಸ್ವಾಮಿ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ಕಂಬಾಳಿಮಠ ಸೇರಿದಂತೆ ಆರೋಗ್ಯ ಇಲಾಖೆಯ ಅನುಷ್ಠಾನ ಅಧಿಕಾರಿಗಳು ಉಪಸ್ಥಿತರಿದ್ದರು. ಆಶಾ ಕಾರ್ಯಕರ್ತೆಯರು, ಆರೋಗ್ಯ ಕೇಂದ್ರದ ಸಹಾಯಕಿಯರು ಪಾಲ್ಗೊಂಡು ಗೃಹ ಆರೋಗ್ಯ ಯೋಜನೆ ಕಾರ್ಯಗಾರದಡಿ ತರಬೇತಿ ಪಡೆದುಕೊಂಡರು.


About The Author
Discover more from JANADHWANI NEWS
Subscribe to get the latest posts sent to your email.