March 4, 2026
FB_IMG_1772631794588.jpg

ಚಿತ್ರದುರ್ಗಮಾ.04:
ಇಂದಿನ ಕಾಲಘಟ್ಟದಲ್ಲಿ ಶೇ.50ರಷ್ಟು ಮಹಿಳೆಯರು ಹತ್ತಾರು ಆರೋಗ್ಯ ಸಮಸ್ಯೆಗಳಿಂದ ನರಳುತ್ತಿದ್ದಾರೆ. ಸಾಮಾಜಿಕ ಮತ್ತು ಆರ್ಥಿಕ ಸಮಸ್ಯೆಗಳ ಜೊತೆಗೆ ಅರಿವಿನ ಕೊರತೆಯಿಂದಾಗಿ ದೈಹಿಕ ಹಾಗೂ ಮಾನಸಿಕ ಒತ್ತಡಕ್ಕೆ ಒಳಗಾಗುತ್ತಿರುವುದು ವಿಷಾದನೀಯ ಎಂದು ಚಿತ್ರದುರ್ಗ ಸರ್ಕಾರಿ ಕಲಾ ಕಾಲೇಜಿನ ಪ್ರಾಂಶುಪಾಲ ಡಾ. ಜೆ. ಕರಿಯಪ್ಪ ಮಾಳಿಗೆ ತಿಳಿಸಿದರು.

ನಗರದ ಸರ್ಕಾರಿ ಕಲಾ ಕಾಲೇಜಿನ ಅಂಬೇಡ್ಕರ್ ಸಭಾಂಗಣದಲ್ಲಿ ಬುಧವಾರ ಕಾಲೇಜಿನ ಮಹಿಳಾ ಘಟಕ ಹಾಗೂ ಐಕ್ಯೂಎಸಿ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ‘ಮಹಿಳಾ ಆರೋಗ್ಯ ಜಾಗೃತಿ’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಮಹಿಳೆಯರ ಸಮಸ್ಯೆಗಳ ಕುರಿತು ಸಮರ್ಪಕ ಚರ್ಚೆಗಳಾಗಬೇಕಿದೆ. ಆರೋಗ್ಯದ ಬಗ್ಗೆ ಇರುವ ಅಜ್ಞಾನವೇ ಹಲವು ಕಾಯಿಲೆಗಳಿಗೆ ಮೂಲಕಾರಣ. ವಿದ್ಯಾರ್ಥಿನಿಯರು ತಮ್ಮ ಸಮಸ್ಯೆಗಳನ್ನು ಮುಚ್ಚಿಡದೆ, ವೈದ್ಯರೊಂದಿಗೆ ಮುಕ್ತವಾಗಿ ಚರ್ಚಿಸಿ ಸೂಕ್ತ ಸಲಹೆ ಪಡೆಯಬೇಕು ಎಂದು ಅವರು ಕಿವಿಮಾತು ಹೇಳಿದರು.
ಬಸವೇಶ್ವರ ಮೆಡಿಕಲ್ ಕಾಲೇಜಿನ ಸ್ತ್ರೀರೋಗ ತಜ್ಞೆ ಡಾ. ಸೌಮ್ಯ ಉಪನ್ಯಾಸ ನೀಡಿ, ಕ್ಯಾನ್ಸರ್ ಎನ್ನುವುದು ಜೀವನಶೈಲಿಯಿಂದ ಬರುವ ಕಾಯಿಲೆಯಾಗಿದೆ. ಗರ್ಭಕೋಶ ಮತ್ತು ಸ್ತನ ಕ್ಯಾನ್ಸರ್ ಬರದಂತೆ ತಡೆಗಟ್ಟಲು ಈಗ ಪೂರ್ವಭಾವಿ ಲಸಿಕೆಗಳು ಲಭ್ಯವಿದ್ದು, ವಿದ್ಯಾರ್ಥಿನಿಯರು ಹಾಗೂ ಉಪನ್ಯಾಸಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ದಿನಪ್ರತಿ ವ್ಯಾಯಾಮ, ನಡಿಗೆಯಂತಹ ಚಟುವಟಿಕೆಗಳನ್ನು ಅಳವಡಿಸಿಕೊಳ್ಳುವ ಮೂಲಕ ಕ್ಯಾನ್ಸರ್ ತಡೆಗಟ್ಟಬಹುದು ಎಂದು ಹೇಳಿದರು.
ಋತುಚಕ್ರದ ಅವಧಿಯಲ್ಲಿ ಅನುಸರಿಸಬೇಕಾದ ಸ್ವಚ್ಛತೆ, ಹಾರ್ಮೋನ್ ಸಮಸ್ಯೆಗಳು ಹಾಗೂ ಸ್ಯಾನಿಟರಿ ಪ್ಯಾಡ್‍ಗಳ ವೈಜ್ಞಾನಿಕ ಬಳಕೆಯ ಕುರಿತು ಅವರು ವಿದ್ಯಾರ್ಥಿನಿಯರಿಗೆ ಸವಿಸ್ತಾರ ಮಾಹಿತಿ ನೀಡಿದರು.
ಕಾರ್ಯಕ್ರಮದದಲ್ಲಿ ಸರ್ಕಾರಿ ಕಲಾ ಕಾಲೇಜಿನ ಐಕ್ಯೂಎಸಿ ಸಂಚಾಲಕಿ ಡಾ. ತಾರಿಣಿ ಶುಭದಾಯಿನಿ, ಮಹಿಳಾ ಸಬಲೀಕರಣ ಘಟಕದ ಸಂಚಾಲಕಿ ಸಲ್ಮಾ, ಚೇರ್ಮನ್ ಪೋಷ್ ಸಮಿತಿ ಸಂಚಾಲಕಿ ಪ್ರೊ.ಯಶೋದಾ, ಐಕ್ಯೂಎಸಿ ಸಹಸಂಚಾಲಕಿ ಡಾ.ಕೆ.ಲೀಲಾವತಿ, ಮಹಿಳಾ ಘಟಕದ ಸದಸ್ಯರಾದ ಪ್ರೊ.ಲತಾ, ಪ್ರೊ.ಸೌಮ್ಯ, ಪ್ರೊ.ಜಮುನಾರಾಣಿ, ಪ್ರೊ.ಶಕುಂತಲಾ ಇದ್ದರು. ನಂತರ ನಡೆದ ಸಂವಾದದಲ್ಲಿ ವಿದ್ಯಾರ್ಥಿನಿಯರು ಸಕ್ರಿಯವಾಗಿ ಪಾಲ್ಗೊಂಡು ತಮ್ಮ ಸಂಶಯ ಪರಿಹರಿಸಿಕೊಂಡರು.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading