December 14, 2025
1741101771536.jpg


ಹಿರಿಯೂರು:
ತಾಲ್ಲೂಕಿನ ಜೆ.ಜಿ ಹಳ್ಳಿ ಹೋಬಳಿಯ ಸುಮಾರು 16 ಕೆರೆಗಳಿಗೆ ನೀರು ತಂಬಿಸುವಂತೆ ಕಲುವಳ್ಳಿ ಭಾಗದ ರೈತರು ಹೋರಾಟ ನಡೆಸುತ್ತಿದ್ದರೂ ಈ ಕ್ಷೇತ್ರದ ಶಾಸಕರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಡಿ.ಸುಧಾಕರ್ ರವರು ಈ ಬಗ್ಗೆ ಗಮನ ಹರಿಸದಿರುವುದು ನಿಜಕ್ಕೂ ವಿಷಾದನೀಯ ಸಂಗತಿ ಎಂಬುದಾಗಿ ಜೆ.ಡಿ.ಎಸ್.ತಾಲ್ಲೂಕು ಅಧ್ಯಕ್ಷರಾದ ಮಸ್ಕಲ್ ಹನುಮಂತರಾಯಪ್ಪ ಅವರು ಬೇಸರ ವ್ಯಕ್ತಪಡಿಸಿದರು.
ನಗರದ ತಾಲ್ಲೂಕು ಕಚೇರಿ ಮುಂಭಾಗದಲ್ಲಿ ತಾಲ್ಲೂಕಿನ ಜೆ.ಜಿ ಹಳ್ಳಿ ಹೋಬಳಿಯ 16 ಕೆರೆಗಳಿಗೆ ನೀರು ತಂಬಿಸುವಂತೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ನೇತೃತ್ವದಲ್ಲಿ ಆ ಭಾಗದ ರೈತರು ಸೇರಿ ಕಳೆದ 265 ದಿನಗಳಿಂದ ಧರಣಿ ಸತ್ಯಾಗ್ರಹ ನಡೆಸುತ್ತಿರುವ ಸ್ಥಳಕ್ಕೆ ಅವರು ಭೇಟಿ ನೀಡಿ ಸತ್ಯಾಗ್ರಹ ನಿರತರನ್ನು ಉದ್ದೇಶಿಸಿ ಮಾತನಾಡಿದರು.
ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಗೆಲುವು ಸಾಧಿಸಿ ಕರ್ನಾಟಕ ರಾಜ್ಯದ ಸಚಿವರು ಆಗಿರುವ ಇವರು ಮತದಾರರ ಹಾಗೂ ರೈತರ ಮೇಲೆ ಗೌರವ ಇದ್ರೆ ಜೆ.ಜಿ ಹಳ್ಳಿ ಹೋಬಳಿಯಲ್ಲಿ ಸುಮಾರು 16 ಕೆರೆಗಳಿಗೆ ನೀರು ತುಂಬಿಸುವಂತೆ ನಡೆಸುತ್ತಿರುವ ಬಜೆಟ್ ನಲ್ಲಿ ಧ್ವನಿ ಎತ್ತುವುದರ ಮೂಲಕ ಹೋಬಳಿಯ ಮತದಾರರ ಋಣ ತೀರಿಸಲಿ ಎಂಬುದಾಗಿ ಅವರು ಹೇಳಿದರು.
ಸರ್ಕಾರ ರೈತರ ಕೂಗು ಕೇಳಿಸದಿರುವುದನ್ನು ಖಂಡಿಸಿ ಹಿರಿಯೂರು ತಾಲ್ಲೂಕು ಕಚೇರಿ ಮುಂಭಾಗ ಅಮರಣಾಂತರ ಉಪವಾಸ ಸತ್ಯಾಗ್ರಹಕ್ಕೆ ಜೆ.ಡಿ.ಎಸ್. ಸಾಥ್ ನೀಡಿದೆ. ರೈತರ ಕೂಗನ್ನು ಕೇಳಿದ ಸರ್ಕಾರ ಹಾಗೂ ಸಚಿವರಿಗೆ ಈ ಕ್ಷೇತ್ರದ ಜನತೆ ಮುಂದಿನ ದಿನಗಳಲ್ಲಿ ಉತ್ತರ ನೀಡಲಿದೆ. ರೈತ ಸಂಘ ಹಾಗೂ ಜೆ.ಡಿ.ಎಸ್ ಪಕ್ಷದ ವತಿಯಿಂದ ಸಚಿವರಾದ ಡಿ.ಸುಧಾಕರ್ ಅವರ ಮನೆಮುಂದೆ ಧರಣಿ ನಡೆಸಬೇಕಾಗುತ್ತದೆ ಎಂಬುದಾಗಿ ಅವರು ಎಚ್ಚರಿಸಿದರು.
ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತಾಲ್ಲೂಕು ಅಧ್ಯಕ್ಷರಾದ ಕೆ.ಟಿ.ತಿಪ್ಪೇಸ್ವಾಮಿ ಮಾತನಾಡಿ ಜೆ.ಜಿ. ಹಳ್ಳಿ ಹೋಬಳಿಯ 16 ಕೆರೆಗಳಿಗೆ ಹಾಗೂ ಐಮಂಗಲ ಹೋಬಳಿಯ 6 ಕೆರೆಗಳಿಗೆ ವಾಣಿವಿಲಾಸಸಾಗರ ಜಲಾಶಯದಿಂದ ನೀರು ತುಂಬಿಸುವಂತೆ ಅಮರಣಾಂತ ಉಪವಾಸ ಧರಣಿ ಸತ್ಯಾಗ್ರಹ ಮಾಡುವುದರ ಮೂಲಕ ರೈತರಿಗೆ ನ್ಯಾಯ ಸಿಗೋವರೆಗೂ ನಮ್ಮ ಹೋರಾಟ ನಿಲ್ಲುವುದಿಲ್ಲ. ಎಂದರಲ್ಲದೆ,
ಸುಮಾರು 265 ದಿನಗಳ ಕಾಲ ಜೆ.ಜೆ.ಹಳ್ಳಿ ಹೋಬಳಿಯಲ್ಲಿ ಧರಣಿ ಸತ್ಯಾಗ್ರಹ ನಡೆಸಿದರೂ ಸಚಿವರಾಗಲಿ ಅಥವಾ ಅಧಿಕಾರಿಯಾಗಲಿ ರೈತರ ಸಮಸ್ಯೆಗೆ ಸ್ಪಂದಿಸಿದ ಇಂತಹ ಸಚಿವರು ಅಧಿಕಾರದಲ್ಲಿ ನಮಗೆ ಬೇಕಾ ಸಮಸ್ಯೆ ಏನೆಂಬುವುದು ತಿಳಿಯದೆ ಸರ್ಕಾರ ಗಮನಕ್ಕೆ ತರದೆ ರೈತರನ್ನು ಕಡೆಗಣಿಸುತ್ತಿರುವ ಇಂಥವರಿಗೆ ರೈತರ ನೋವು ಅವರಿಗೆ ತಟ್ಟಲಿದೆ. ರೈತರನ್ನು ನೋಯಿಸಿದರೆ ಮುಂದೇನಾಗಬಹುದು ಎಂಬುವುದು ಅವರಿಗೆ ಅರಿವಾಗಲಿ ಎಂಬುದಾಗಿ ಅವರು ಹೇಳಿದರು.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ, ಹಸಿರು ಸೇನೆ ತಾಲ್ಲೂಕು ಅಧ್ಯಕ್ಷ ಕೆ.ಟಿ.ತಿಪ್ಪೇಸ್ವಾಮಿ, ಜೆ.ಡಿ.ಎಸ್. ತಾಲ್ಲೂಕು ಕಾರ್ಯಾಧ್ಯಕ್ಷ ಜಲ್ದಪ್ಪ, ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಕೆ.ಮಂಜುನಾಥ್, ಮೇಟಿಕುರ್ಕೆ ಗ್ರಾಮಪಂಚಾಯಿತಿ ಮಾಜಿ ಅಧ್ಯಕ್ಷ ಹನುಮಂತಪ್ಪ, ಜೆ.ಡಿ.ಎಸ್. ತಾಲ್ಲೂಕು ಉಪಾಧ್ಯಕ್ಷ ಹನುಮಂತರಾಯ, ಮಾವಿನಮಡು ದ್ಯಾಮಣ್ಣ, ತಿಪ್ಪೇಸ್ವಾಮಿ, ತಳವಾರಹಟ್ಟಿ ತಿಮ್ಮಯ್ಯ, ಪಿಲಾಜನಹಳ್ಳಿರಾಜಣ್ಣ, ರೈತರು ಹಾಗೂ ಹಲವಾರು ರೈತ ಮುಖಂಡರುಗಳು ಉಪಸ್ಥಿತರಿದ್ದರು.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading